Thursday, 12th December 2024

R Ashok: ಶಾಸಕ ಮುನಿರತ್ನ ಬಂಧನ ದ್ವೇಷದ ರಾಜಕಾರಣ ಎಂದ ಆರ್.ಅಶೋಕ್‌

R Ashok

ಬೆಂಗಳೂರು: ಶಾಸಕ ಮುನಿರತ್ನ (MLA Munirathna) ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣ. ಆ ಧ್ವನಿ ಮುದ್ರಣ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ (R Ashok) ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ವನಿ ಮುದ್ರಣ ಶಾಸಕರದ್ದೇ ಎಂದು ಸಾಬೀತಾದ ಬಳಿಕ ಬಂಧಿಸಬೇಕಿತ್ತು. ಕಾನೂನಿಗೆ ಯಾರೂ ಅತೀತರಲ್ಲ ಎಂದರು.

ಟಿ.ಜೆ. ಅಬ್ರಹಾಂ ದೂರಿನ ಆಧಾರದ ಮೇಲೆ ರಾಜ್ಯಪಾಲರು ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದರು.‌ ಆದರೂ ಅದು ಈಗ ನ್ಯಾಯಾಲಯದಲ್ಲಿದ್ದು, ಅದಕ್ಕೆ ನಾವ್ಯಾರೂ ಆಕ್ಷೇಪ ಮಾಡಿಲ್ಲ. ಆದರೆ ಇಲ್ಲಿ ದೂರು ನೀಡಿದ ಕೂಡಲೇ ವಿಚಾರಣೆ ಮಾಡದೇ‌ ನೋಟಿಸ್‌ ನೀಡದೆ ಬಂಧಿಸಲಾಗಿದೆ. ಇಲ್ಲಿ ಆತುರದ‌ ಕ್ರಮವಾಗಿದ್ದು, ಏಕಾಏಕಿ ಬಂಧನವಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಲೀಡ್ ಬಂದಿರುವುದು ಕೂಡ ಇದಕ್ಕೆ ಕಾರಣ. ಧ್ವನಿ ಮುದ್ರಣವನ್ನು ಎಫ್ಎಸ್ಎಲ್ ಗೆ ಕಳುಹಿಸಿ,‌ ತನಿಖೆ ಮಾಡಿ ಬಳಿಕ ಕ್ರಮ ಕೈಗೊಂಡಿದ್ದರೆ ನಾವ್ಯಾರೂ ಮಾತಾಡುತ್ತಿರಲಿಲ್ಲ. ಯಾವುದೇ ಪ್ರಕರಣದಲ್ಲಿ ಸತ್ಯವನ್ನು ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಸರ್ಕಾರದ ಹಗರಣ ಮುಚ್ಚಿಹಾಕಲು ನಾಗಮಂಗಲ ಗಲಭೆ ಸೃಷ್ಟಿ: ಎಚ್‌ಡಿಕೆ ಆರೋಪ

ಇದು ಪೂರ್ವ ಯೋಜಿತ

ಇದು ಪೂರ್ವ ಯೋಜಿತ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಜಾತಿ ನಿಂದನೆ ಮಾಡಿಲ್ಲ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ. ಇದು ಸಾಬೀತು ಕೂಡ ಆಗಿಲ್ಲ. ಈ ರೀತಿ ಪ್ರಕರಣ ದಾಖಲಾದಾಗ ಪರಿಶೀಲಿಸಿಯೇ ಕ್ರಮ ಕೈಗೊಳ್ಳಬೇಕು. ರಾಯಚೂರಿನಲ್ಲಿ ಪೊಲೀಸ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಶಾಸಕನನ್ನು ಸಿಎಂ ಮನೆಗೆ ಕರೆಸಿಕೊಂಡು ಕಾಫಿ ಕೊಟ್ಟಿದ್ದರು‌. ಕೃಷಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಸರ್ಕಾರ ಎಷ್ಟೇ ಪ್ರಕರಣ‌ ದಾಖಲಿಸಿದರೂ ಬಿಜೆಪಿ ಹೆದರುವುದಿಲ್ಲ. ಸರ್ಕಾರಕ್ಕೆ ಈಗ ಭಯ ಬಂದಿದೆ. ಪ್ರತಿ ದಿನ ವಸೂಲಿ, ಭ್ರಷ್ಟಾಚಾರ ‌ನಡೆಯುತ್ತಿರುವುದು ಮಾಧ್ಯಮಗಳಲ್ಲಿ ಬರುತ್ತಿದೆ. ಆದ್ದರಿಂದ ಹೀಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರ್‌. ಅಶೋಕ್‌ ದೂರಿದರು.

ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ

ಮಂಡ್ಯದ ನಾಗಮಂಗಲದಲ್ಲಿ ಗಣಪತಿಗೂ ನಿರ್ಬಂಧ ವಿಧಿಸಲಾಗಿದೆ. ಮತಾಂಧರು ಬಾಂಬ್, ಮಚ್ಚು ಬಳಸಿ, ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಕಾಂಗ್ರೆಸ್‌ನ ಮುಸ್ಲಿಮ್ ಓಲೈಕೆ ರಾಜಕಾಣದಿಂದಲೇ ಹೀಗಾಗಿದೆ. ಹಿಂದೂಗಳು ಮುಂದೊಂದು ದಿನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಈ ಸುದ್ದಿಯನ್ನೂ ಓದಿ | Pralhad Joshi: ಪಾಕಿಸ್ತಾನ ಮಾದರಿ ಆಡಳಿತ, ಈ ಸರ್ಕಾರ ಬಹಳ ದಿನ ಇರಲ್ಲ: ಪ್ರಲ್ಹಾದ್‌ ಜೋಶಿ ಕಿಡಿ

ಭ್ರಷ್ಟಾಚಾರ ಮತ್ತು ಕೋಮುಗಲಭೆ ಪ್ರಕರಣವನ್ನು ಬೇರೆಡೆ ತಿರುಗಿಸಲು ಈ ರೀತಿ ಮಾಡಿದ್ದಾರೆ. ಡಾ.ಜಿ. ಪರಮೇಶ್ವರ್ ಅವರಂತಹ ಹಿರಿಯ ನಾಯಕರು ಗೃಹ ಸಚಿವರಾಗಿ ಇಂತಹ ಕೆಲಸ ಮಾಡುವುದು ಶೋಭೆ ತರುವುದಿಲ್ಲ. ಇದು ಬಹಳ ಹಳೆಯ ಪ್ರಕರಣ ಎನ್ನಲಾದರೂ, ದಿಢೀರನೆ ಈಗ ಬಂಧಿಸಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ನೇರವಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಇದು ಪೂರ್ವ ಯೋಜಿತ ಎಂದು ಇದರಿಂದಲೇ ತಿಳಿಯುತ್ತದೆ ಎಂದು ಆರ್‌. ಅಶೋಕ್‌ ತಿಳಿಸಿದರು.