Friday, 20th September 2024

Longest Bus Route: 1957ರಲ್ಲೇ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಸ್‌ ಸರ್ವಿಸ್‌ ಇತ್ತು! ಇಲ್ಲಿದೆ ಆ ಬಸ್‌ನ ಐತಿಹ್ಯ..

Longest Bus Route

ಈಗಿನ ಕಾಲದಲ್ಲಿ ನಾವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಬೇಕಾದರೆ ವಾಯುಯಾನ (Aviation) ಇಲ್ಲವೇ ನೌಕಾಯಾನವನ್ನು (sailing) ಅವಲಂಬಿಸಬೇಕಿದೆ. ಆದರೆ ಒಂದು ಕಾಲದಲ್ಲಿ ಬಸ್‌ನಲ್ಲಿ ಭಾರತದಿಂದ ಲಂಡನ್‌ಗೆ (London To India) ಹೋಗಬಹುದಿತ್ತು ಎಂದು ಕೇಳಿದರೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ. ಇದು ಒಂದು ಕಾಲದ ವಿಶ್ವದ ಅತೀ ಉದ್ದದ ಬಸ್ ಮಾರ್ಗ (Longest Bus Route) ಎಂಬ ಖ್ಯಾತಿ ಪಡೆದಿತ್ತು.

ಲಂಡನ್‌ ಈಗಿನ ಸಾರ್ವಜನಿಕ ಸಾರಿಗೆಯನ್ನು ಗಮನಿಸಿದರೆ ಇದು ಖಂಡಿತಾ ಸಾಧ್ಯವಿಲ್ಲ. ಆದರೆ 1957 ರಲ್ಲಿ ಇದು ಸಾಧ್ಯವಾಗಿತ್ತು. ‘ಹಿಪ್ಪಿ ರೂಟ್’ ಎಂದೂ ಕರೆಯಲ್ಪಡುವ ಬಸ್ ಸೇವೆಯಲ್ಲಿ ಒಂದು ಬಾರಿಯ ಪ್ರಯಾಣಕ್ಕೆ ಸರಿಸುಮಾರು 145 ಡಾಲರ್ ವೆಚ್ಚ ಮಾಡಬೇಕಿತ್ತು. ಈ ಬಸ್ ಸೇವೆಯು ಲಂಡನ್‌ನಿಂದ ಬೆಲ್ಜಿಯಂ, ಯುಗೊಸ್ಲಾವಿಯಾ ಮೂಲಕ ಭಾರತದ ಕೋಲ್ಕತ್ತಾಗೆ ಬಂದು ತಲುಪುತ್ತಿತ್ತು. ಬಸ್ ಲಂಡನ್‌ನಿಂದ ಕೋಲ್ಕತ್ತಾ ತಲುಪಲು ಸುಮಾರು 50 ದಿನಗಳು ಬೇಕಾಗಿತ್ತು.

1957ರ ಏಪ್ರಿಲ್ 15ರಂದು ಲಂಡನ್‌ನಿಂದ ಕೋಲ್ಕತ್ತಾಗೆ ಮೊದಲ ಬಾರಿ ಬಸ್ ಪ್ರಯಾಣ ಆರಂಭವಾಗಿತ್ತು. ಈ ಬಸ್ ಸುಮಾರು 16,093 ಕಿ.ಮೀ. ಪ್ರಯಾಣಿಸಿ 11 ದೇಶಗಳನ್ನು ದಾಟಿ ಜೂನ್ 5ರಂದು ಕೋಲ್ಕತ್ತಾಗೆ ಬಂದು ತಲುಪಿತ್ತು.

Longest Bus Route

ವಿಶ್ವದ ಅತೀ ಉದ್ದದ ಬಸ್ ಮಾರ್ಗ

ಎಇಸಿ ರೀಗಲ್ 3 ಮಾಡೆಲ್ ಆಗಿದ್ದ ಈ ಬಸ್ ನಲ್ಲಿ ‘ಲಂಡನ್ ಟು ಕಲ್ಕತ್ತಾ’ ಎಂಬುದಾಗಿ ಪ್ರದರ್ಶಿಸಲಾಗುತ್ತಿತ್ತು. ಓಸ್ವಾಲ್ಡ್ ಜೋಸೆಫ್ ಗ್ಯಾರೋ ಫಿಶರ್ ಎಂಬಾತ ಈ ಬಸ್ ಅನ್ನು ಓಡಿಸುತ್ತಿದ್ದ. ಈ ಬಸ್ ಸೇವೆಯನ್ನು ವಿಶ್ವದ ಅತಿ ಉದ್ದದ ಬಸ್ ಮಾರ್ಗವೆಂದು ಪರಿಗಣಿಸಲಾಗಿದೆ.

50 ದಿನಗಳ ಪ್ರಯಾಣದಲ್ಲಿ ಬಸ್ ಇಂಗ್ಲೆಂಡ್‌ನಿಂದ ಬೆಲ್ಜಿಯಂಗೆ ಮತ್ತು ಅನಂತರ ಜರ್ಮನಿ, ಆಸ್ಟ್ರಿಯಾ, ಯುಗೊಸ್ಲಾವಿಯಾ, ಬಲ್ಗೇರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ್, ಪಾಕಿಸ್ತಾನ ಮೂಲಕ ಭಾರತಕ್ಕೆ ಆಗಮಿಸುತ್ತಿತ್ತು.

ಈ ಬಸ್ ನಲ್ಲಿ ಸ್ಲೀಪಿಂಗ್ ಕಂಪಾರ್ಟ್‌ಮೆಂಟ್‌ಗಳು ಇದ್ದವು. ಸಂಗೀತ ಸೇರಿದಂತೆ ದೀರ್ಘ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಆರಾಮದಾಯಕವಾಗಿರಲು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗಿತ್ತು ಈ ಬಸ್ ಪ್ರಯಾಣವು ಕೇವಲ ಒಂದು ಪ್ರಯಾಣಕ್ಕಿಂತ ಹೆಚ್ಚಾಗಿ ಪ್ರವಾಸದಂತಿತ್ತು. ಪ್ರಯಾಣದ ವೇಳೆ ರಾತ್ರಿ ವಿಶ್ರಾಂತಿ, ಕೆಲವು ಪ್ರವಾಸದ ಸ್ಥಳಗಳಲ್ಲಿ ನಿಲುಗಡೆ, ಖರೀದಿಗೆ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು.

ಪ್ರಯಾಣ ನಿಲ್ಲಿಸಿದ್ದು ಯಾಕೆ?

ಸುದೀರ್ಘ ಕಾಲ ಪ್ರಯಾಣ ನಡೆಸಿದ ಬಸ್ ಕೆಲವು ವರ್ಷಗಳ ಬಳಿಕ ಅಪಘಾತಕ್ಕೀಡಾಯಿತು. ಅನಂತರ ಇದನ್ನು ಬ್ರಿಟಿಷ್ ಟ್ರಾವೆಲರ್ ಆ್ಯಂಡಿ ಸ್ಟುವರ್ಟ್ ಖರೀದಿಸಿದರು. ಅವರು ಬಸ್ ಅನ್ನು ‘ಮೊಬೈಲ್ ಹೋಮ್’ ಮತ್ತು ಡಬಲ್ ಡೆಕ್ಕರ್ ಆಗಿ ಪರಿವರ್ತಿಸಿದರು. ಅದಕ್ಕೆ ‘ಅಲ್ಬರ್ಟ್ ಟ್ರಾವೆಲ್ಸ್’ ಎಂದು ಹೆಸರು ನೀಡಿದರು. 1968 ರಲ್ಲಿ ಸಿಡ್ನಿಯಿಂದ ಮತ್ತೆ ಈ ಬಸ್ ಭಾರತದ ಮೂಲಕ ಲಂಡನ್‌ಗೆ ಪ್ರಯಾಣಿಸಿತು.

ಇರಾನ್ ಮೂಲಕ ಭಾರತಕ್ಕೆ ಬಂದ ಬಸ್ ಈಗಿನ ಮ್ಯಾನ್ಮಾರ್, ಥೈಲ್ಯಾಂಡ್ ಮತ್ತು ಮಲೇಷ್ಯಾ ಮೂಲಕ ಸಿಂಗಾಪುರಕ್ಕೆ ಪ್ರಯಾಣವನ್ನು ಮುಂದುವರೆಸಿತು. ಬಸ್ ಅನ್ನು ಸಿಂಗಾಪುರದ ಬಂದರುಗಳಿಂದ ಹಡಗಿನ ಮೂಲಕ ಪರ್ತ್‌ಗೆ ಸಾಗಿಸಲಾಯಿತು. ಅಲ್ಲಿ ಅದು ರಸ್ತೆಯ ಮೂಲಕ ಸಿಡ್ನಿಗೆ ಪ್ರಯಾಣಿಸಿತು. ಮೊದಲಿನಂತೆ ಅದೇ ಸೌಲಭ್ಯಗಳೊಂದಿಗೆ ಈ ಬಸ್ ಸೇವೆ ನೀಡುತ್ತಿತ್ತು.

Unique Tradition: ಸಮಾಧಿಯಿಂದ ಶವ ಹೊರತೆಗೆದು ಸತ್ತವರಿಗೆ ಗೌರವ; ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯ!

ಇರಾನ್, ಭಾರತ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿದ ರಾಜಕೀಯ ಉದ್ವಿಗ್ನತೆ, ಅಶಾಂತಿಯ ವಾತಾವರಣದಿಂದ ಮಾರ್ಗವು ಈ ಬಸ್ ಪ್ರಯಾಣಕ್ಕೆ ಅಸುರಕ್ಷಿತವಾಯಿತು. ಹೀಗಾಗಿ ಆಲ್ಬರ್ಟ್ ಟೂರ್ಸ್ ಕಂಪೆನಿಯು 1976 ರಲ್ಲಿ ತನ್ನ 15ನೇ ಟ್ರಿಪ್ ಅನ್ನು ಪೂರ್ಣಗೊಳಿಸಿ ಬಸ್ ಸಂಚಾರವನ್ನು ನಿಲ್ಲಿಸಿತ್ತು.