Friday, 20th September 2024

Esha Deol: ಪಿರಿಯಡ್ಸ್ ಅವಧಿಯಲ್ಲಿ ನಮ್ಮ ಮನೆಯಲ್ಲೂ ಹಲವು ಕಟ್ಟುಪಾಡುಗಳಿದ್ದವು ಎಂದ ಇಶಾ ಡಿಯೋಲ್!

Esha Deol

ಪ್ರಪಂಚ ಎಷ್ಟೇ ಮುಂದುವರಿದರೂ ಕೆಲವೊಂದು ಸುಧಾರಣೆಗಳು ನಡೆಯುವುದು ಇನ್ನೂ ಬಾಕಿ ಇದೆ. ಉದಾಹರಣೆಗೆ ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಹೇರುವ ನಿರ್ಬಂಧಗಳು. ಮುಟ್ಟಿನ ದಿನಗಳಲ್ಲಿ (periods time) ಮಹಿಳೆಯರು ಅಡುಗೆ ಮನೆ, ದೇವರ ಕೋಣೆಗಳಿಗೆ ಹೋಗಬಾರದು ಎನ್ನುವ ನಿಯಮಗಳು ಇಂದಿಗೂ ಕೆಲವು ಮನೆಗಳಲ್ಲಿ ಇದೆ. ಈ ಸಂಪ್ರದಾಯ ತಮ್ಮ ಮನೆಯಲ್ಲೂ ಇತ್ತು ಎನ್ನುತ್ತಾರೆ ನಟಿ (bollywood actress) ಇಶಾ ಡಿಯೋಲ್ (Esha Deol).

ಮುಟ್ಟಿನ ಸಂದರ್ಭದಲ್ಲಿ ಕುಟುಂಬ ತಮಗೆ ಹಲವಾರು ನಿರ್ಬಂಧಗಳನ್ನು ವಿಧಿಸಿತ್ತು ಎಂದು ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪುತ್ರಿಯಾಗಿರುವ ಇಶಾ ಡಿಯೋಲ್ ಹೇಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿರುವ ಅವರು, ಮುಟ್ಟಿನ ಅವಧಿಯಲ್ಲಿ ತಮ್ಮ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಬಹಿರಂಗಪಡಿಸಿ, ತಮ್ಮ ಮನೆಯನ್ನು ಮಹಿಳೆಯರೇ ನಡೆಸುತ್ತಿದ್ದರು ಮತ್ತು ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ನಾನು ತಾಯಿ ಹೇಮಾ, ಅಜ್ಜಿ ಜಯ ಚಕ್ರವರ್ತಿ ಅವರ ನಡುವೆ ಬೆಳೆದಿದ್ದೇನೆ. ನಾವು ಬೆಳೆಯುತ್ತಿದ್ದಾಗ ಮನೆಯಲ್ಲಿ ಪಿರಿಯೇಡ್ಸ್ ಬಗ್ಗೆ ಯಾವುದೇ ಮುಕ್ತ ಸಂಭಾಷಣೆ ನಡೆಸಲಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಮಗೆ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡಲು ಅವಕಾಶವಿರಲಿಲ್ಲ. ಪಿರಿಯಡ್ಸ್ ಅವಧಿ ಮುಗಿದ ಬಳಿಕವಷ್ಟೇ ತಲೆಸ್ನಾನ ಮಾಡಿದ ಬಳಿಕ ಮನೆಯೊಳಗೆ ಎಲ್ಲರಂತೆ ಓಡಾಡಬಹುದಿತ್ತು. ದೇವಸ್ಥಾನಗಳಿಗೆ ಹೋಗಬಹುದಿತ್ತು. ಅದು ಕೇವಲ ಸಂಪ್ರದಾಯವಾಗಿತ್ತು. ನಾನು ಅದನ್ನು ಅನುಸರಿಸಿದ್ದೇನೆ. ನಾನು ಅದನ್ನು ಗೌರವಿಸುತ್ತೇನೆ. ಇವತ್ತಿಗೂ ಭಾರತದ ಬಹುತೇಕ ಮನೆಗಳಲ್ಲಿ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ ಎಂದು ಇಶಾ ಹೇಳಿದ್ದಾರೆ.

ಶಾಲೆಯಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಕಲಿತದ್ದನ್ನು ಹಂಚಿಕೊಂಡ ಇಶಾ, ನಾನು ಶಾಲೆಯಲ್ಲಿ ಅದರ ಬಗ್ಗೆ ಕಲಿತಿದ್ದೇನೆ. ನಮ್ಮ ಶಾಲೆಯು ಲೈಂಗಿಕ ಶಿಕ್ಷಣವನ್ನು ನೀಡಿತ್ತು. ಅವರು ನಮಗೆ ಚೆನ್ನಾಗಿ ಮತ್ತು ಸರಿಯಾದ ಸಮಯದಲ್ಲಿ ಈ ಬಗ್ಗೆ ಕಲಿಸಿದರು. ಇದು ಮುಖ್ಯವಾಗಿದೆ. ಆದರೆ ಕೆಲವು ಪೋಷಕರು ಈ ಬಗ್ಗೆ ಹೇಳಲು ಹಿಂಜರಿಯುತ್ತಾರೆ. ಅಜ್ಜಿ ನಮ್ಮನ್ನು ಶಿಸ್ತಿನಿಂದ ಬೆಳೆಸಿದ್ದಾರೆ. ಮನೆಯೊಳಗೆ ನಡೆಯುವ ಪ್ರತಿಯೊಂದು ಚಟುವಟಿಕೆ, ನಡವಳಿಕೆ ಮೇಲೆ ಕಣ್ಣಿಟ್ಟಿದ್ದರು. ಶಾರ್ಟ್ ಸ್ಕರ್ಟ್ ಧರಿಸಿ ಹೊರಗೆ ಹೋಗಬಾರದು ಎನ್ನುವ ನಿಯಮವಿತ್ತು. ಅಜ್ಜಿ ಮನೆಯ ಸಿಸಿಟಿವಿ ಕೆಮೆರಾದಂತಿದ್ದರು. ನಾನು ಮತ್ತು ನನ್ನ ಸ್ನೇಹಿತರು ಮನೆಗೆ ಕಾಲಿಟ್ಟ ತಕ್ಷಣ ಅಜ್ಜಿ ನಮ್ಮ ಮೇಲೆ ನಿಗಾ ಇರಿಸುತ್ತಿದ್ದರು. ಸ್ನೇಹಿತರು ಯಾವುದೇ ರೀತಿಯ ಉಡುಗೆ ಧರಿಸಿ ಬಂದರೂ ಏನೂ ಹೇಳುತ್ತಿರಲಿಲ್ಲ. ಆದರೆ ಅವರು ತುಂಬಾ ರಾತ್ರಿಯವರೆಗೆ ಮನೆಯಲ್ಲಿ ಇರಲು ಅನುಮತಿ ನೀಡುತ್ತಿರಲಿಲ್ಲ ಎಂದು ಇಶಾ ಹೇಳಿದ್ದಾರೆ.

ಸುಳ್ಳು ಹೇಳಿ ಮನೆಯಿಂದ ಹೊರಗೆ ಹೋಗುತ್ತಿದ್ದೆ. ಹೀಗಾಗಿ ನಾವು ಥಿಯೇಟರ್‌ಗೆ ಹೋದಾಗಲೂ ನನ್ನ ಅಜ್ಜಿಯನ್ನು ತಾಯಿ ನಮ್ಮೊಂದಿಗೆ ಕಳುಹಿಸುತ್ತಿದ್ದರು. ಆದರೆ ಅದು ತುಂಬಾ ಖುಷಿಯಾಗಿತ್ತು. ನಾವು ಅವರಿಂದ ಮರೆಯಾಗಿ ಅಲ್ಲಿ, ಇಲ್ಲಿ ಓಡಾಡುತ್ತಿದ್ದೆವು ಎಂದು ಇಶಾ ತಿಳಿಸಿದ್ದಾರೆ.

2004ರಲ್ಲಿ ತೆರೆಕಂಡ ಧೂಮ್‌ ಚಿತ್ರದ ಹಿಟ್ ಸಾಂಗ್ ಧೂಮ್ ಮಚಾಲೆ ಇಶಾಗೆ ಹೆಚ್ಚು ಪ್ರಚಾರ ತಂದುಕೊಟ್ಟಿತು ಬಳಿಕ ಅವರು ದಸ್, ನೋ ಎಂಟ್ರಿ ಚಿತ್ರಗಳಲ್ಲಿ ನಟಿಸಿದರು.

Kiccha Sudeep: ದುಬೈನಲ್ಲಿ ‘ಕನ್ನಡ್’ ಎಂದ ಪರಭಾಷಿಕರ ಬಾಯಲ್ಲಿ ‘ಕನ್ನಡ’ ಎಂದು ಹೇಳಿಸಿದ ಕಿಚ್ಚ ಸುದೀಪ್!

ಖ್ಯಾತ ಸಿನಿಮಾ ತಾರೆಯರ ಮಗಳಾದರೂ ಚಿತ್ರೋದ್ಯಮದಲ್ಲಿ ಇಶಾ ತಮ್ಮ ಛಾಪು ಬೀರುವಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇತ್ತೀಚೆಗೆ ʼಹಂಟರ್: ಟೂಟೇಗಾ ನಹಿ ತೊಡೆಗಾʼದಲ್ಲಿ ಸುನೀಲ್ ಶೆಟ್ಟಿ, ಬರ್ಖಾ ಬಿಶ್ತ್, ರಾಹುಲ್ ದೇವ್ ಜೊತೆಯಲ್ಲಿ ಇಶಾ ಕಾಣಿಸಿಕೊಂಡಿದ್ದರು.