ಬೆಂಗಳೂರು: ಹಲವು ದಿನಗಳಿಂದ ಕನ್ನಡ ಕಿರುತೆರೆ ವೀಕ್ಷಕರಿಗೆ ಕಾಡುತ್ತಿದ್ದ ಗೊಂದಲ ಕೊನೆಗೂ ಬಗೆಹರಿದಿದೆ. ಜನಪ್ರಿಯ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಕಿಚ್ಚ ಸುದೀಪ್ (Sudeepa) ನಿರೂಪಣೆ ಶೈಲಿ ಅನೇಕರಿಗೆ ಅಚ್ಚುಮೆಚ್ಚು. ಶೋ ಜನಪ್ರಿಯವಾಗಲೂ ಇದೂ ಒಂದು ಕಾರಣ. ಆದರೆ ಕೆಲವು ದಿನಗಳಿಂದ ಸುದೀಪ್ ಬಿಗ್‌ಬಾಸ್ ಕನ್ನಡ ಸೀಸನ್ 11 (Bigg Boss Kannada 11)ರ ನಿರೂಪಣೆ ಮಾಡುತ್ತಿಲ್ಲ ಎನ್ನುವ ಸುದ್ದಿ ಹಬ್ಬಿತ್ತು. ಇದಕ್ಕಾಗಿ ಅಭಿಮಾನಿಗಳು ತಮ್ಮ ಬೇಸರ ಹೊರ ಹಾಕಿದ್ದರು. ಜೊತೆಗೆ ಶೋ ಯಾವಾಗ ಆರಂಭವಾಗುತ್ತದೆ ಎಂದು ಅನೇಕರು ಪ್ರಶ್ನಿಸಿದ್ದರು. ಇದೀಗ ಕಲರ್ಸ್ ವಾಹಿನಿ ಹೊಸ ಪ್ರೋಮೊ ಹೊರಬಿಟ್ಟಿದ್ದು, ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.
ಸುದೀಪ್ ಸದ್ಯ ವಿವಿಧ ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಿಲ್ಲ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ರಿಲೀಸ್ ಆದ ಪ್ರೋಮೊದಲ್ಲಿ ಅವರ ಹ್ಯಾಷ್‌ಟ್ಯಾಗ್ ಮಾಯವಾಗಿತ್ತು. ಜತೆಗೆ ತಮಿಳಿನಲ್ಲಿ ಕಮಲ್ ಹಾಸನ್ ಬದಲು ನಿರೂಪಕರಾಗಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಈ ಎಲ್ಲ ಕಾರಣಗಳಿಂದ ಕನ್ನಡದಲ್ಲಿಯೂ ನಿರೂಪಕರು ಬದಲಾಗಲಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು.
ಹೊಸ ಪ್ರೋಮೊದಲ್ಲಿ ಏನಿದೆ?
ಸದ್ಯ ರಿಲೀಸ್ ಆಗಿರುವ ಪ್ರೋಮೊದಲ್ಲಿ ಸುದೀಪ್ ಕಂಡುಬಂದಿದ್ದು, ನಿರೂಪಕರಾಗಿ ಅವರೇ ಮುಂದುವರಿಯುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ಸತತ 10 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಸುದೀಪ್ 11ನೇ ಸೀಸನ್‌ಗೂ ಸಾರಥ್ಯ ವಹಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳ ಮೊಗದಲ್ಲಿ ನಗು ಅರಳಿದೆ. ಅನೇಕರು ಕಮೆಂಟ್ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಹೊಸ ಅಧ್ಯಾಯ
ʼಬದಲಾವಣೆ ಜಗದ ನಿಯಮ; ಅದಕ್ಕೆ ಬಿಗ್ ಬಾಸ್ ಕೂಡಾ ಹೇಳೋದು ‘ಹೌದು ಸ್ವಾಮಿ’. ಆದ್ರೆ ಇವರ ವಿಚಾರದಲ್ಲಿ ಬದಲಾವಣೆ ‘ನೋ ವೇ, ಛಾನ್ಸೇ ಇಲ್ಲ’!ʼ ಎಂದು ಕಲರ್ಸ್ ಕನ್ನಡ ವಾಹಿನಿ ಕ್ಯಾಪ್ಶನ್‌ನಲ್ಲಿ ನಮೂದಿಸುವ ಮೂಲಕ ಗುಡ್‌ನ್ಯೂಸ್ ನೀಡಿದೆ. ಬರೋಬ್ಬರಿ 10 ದಶಕವನ್ನು ಪೂರೈಸಿರುವ ಶೋ 11ನೇ ಸೀಸನ್ ಅನ್ನು ವಿಶೇಷವಾಗಿಯೇ ಕಟ್ಟಿಕೊಡಲಿದೆ. ಈ ಕುರಿತಾದ ಸೂಚನೆಯನ್ನೂ ಪ್ರೋಮೊ ನೀಡಿದೆ. ಅದ್ಧೂರಿಯಾಗಿ, ಸಿನಿಮಾ ಶೈಲಿಯಲ್ಲಿ ಮೂಡಿಬಂದಿರುವ ಪ್ರೋಮೊದಲ್ಲಿ ಇದು ಹೊಸ ಅಧ್ಯಾಯ ಎನ್ನುವುದನ್ನೂ ಉಲ್ಲೇಖಿಸಲಾಗಿದ್ದು ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.
ಯಾವಾಗ ಆರಂಭ?
ಬಿಗ್‌ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29ರಂದು ಆರಂಭವಾಗಲಿದೆ. ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸುಷ್ಮಿತಾ, ಜಗ್ಗಪ್ಪ, ನಿರೂಪಕಿ ಜಾಹ್ನವಿ, ಅಮಿತಾ ಕುಲಾಲ್, ಮಾನಸ, ವರುಣ್ ಆರಾಧ್ಯ, ಭೂಮಿಕಾ ಬಸವರಾಜ್, ಮೋಕ್ಷಿತಾ ಪೈ ಮತ್ತಿತರರು ಸ್ಪರ್ದಿಗಳಾಗಲಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದೆ. ಅಧಿಕೃತ ಪಟ್ಟಿ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಒಟ್ಟಿನಲ್ಲಿ ಬಿಗ್‌ಬಾಸ್ ಹೊಸ ಸೀಸನ್ ಆರಂಭಕ್ಕೂ ಮುನ್ನವೇ ಪ್ರೇಕ್ಷಕರ ಗಮನ ಸೆಳೆದಿದೆ.
ಈ ಸುದ್ದಿಯನ್ನೂ ಓದಿ: Kiccha Sudeep: ದುಬೈನಲ್ಲಿ ‘ಕನ್ನಡ್’ ಎಂದ ಪರಭಾಷಿಕರ ಬಾಯಲ್ಲಿ ‘ಕನ್ನಡ’ ಎಂದು ಹೇಳಿಸಿದ ಕಿಚ್ಚ ಸುದೀಪ್!