ಹಿಂದುಗಳ ಭಾವನೆಗೆ ನೋವು ಉಂಟು ಮಾಡಿದ ಆರೋಪ
ಮುಂಬೈ: ‘ಕೌನ್ ಬನೇಗಾ ಕರೋಡ್ ಪತಿ’ 12ನೇ ಸೀಸನ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಿರೂಪಕ, ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅ.30ರ ಎಪಿಸೋಡ್ನಲ್ಲಿ ಅಮಿತಾಭ್ ಮನುಸ್ಮೃತಿಯ ಬಗ್ಗೆ ಕೇಳಿದ ಪ್ರಶ್ನೆಯೇ ಇದಕ್ಕೆ ಕಾರಣ. ಎಪಿಸೋಡ್ನಲ್ಲಿ ಸಾಮಾಜಿಕ ಹೋರಾಟಗಾರ ವಿಲ್ಸನ್ ಮತ್ತು ನಟ ಅನುಪ್ ಸೋನಿ ಅತಿಥಿಗಳಾಗಿದ್ದರು. ಅವರಿಗೆ, 1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಬೆಂಬಲಿಗರು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿದರು? ಎಂಬ 6.40 ಲಕ್ಷ ರೂಪಾಯಿಯ ಪ್ರಶ್ನೆಯನ್ನು ಬಚ್ಚನ್ ಕೇಳಿದ್ದರು. ಹಾಗೇ ಅದಕ್ಕೆ, ವಿಷ್ಣುಪುರಾಣ, ಭಗವದ್ಗೀತೆ, ಋಗ್ವೇದ ಮತ್ತು ಮನುಸ್ಮೃತಿ ಎಂಬ ನಾಲ್ಕು ಆಯ್ಕೆಗಳನ್ನು ಕೊಡಲಾಗಿತ್ತು.
ಅದಾದ ಬಳಿಕ ಅಮಿತಾಭ್ 1927ರಲ್ಲಿ ನಡೆದ ಘಟನೆಯನ್ನು ವಿವರಿಸುತ್ತ, ಅಂಬೇಡ್ಕರ್ ಅವರು ಪುರಾತನ ಹಿಂದು ಗ್ರಂಥ ಮನು ಸ್ಮೃತಿಯನ್ನು ವಿರೋಧಿಸುತ್ತಿದ್ದರು. ಮನುಸ್ಮೃತಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ ಎಂಬ ಕಾರಣಕ್ಕೆ ಅದರ ಪ್ರತಿಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದರು.
ಆದರೆ ಬಚ್ಚನ್ ಅವರ ಈ ವಿವರಣೆ ಅನೇಕರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ಲಾತೂರ್ ಜಿಲ್ಲೆಯ ಆಸಾದ ಬಿಜೆಪಿ ಶಾಸಕ ಅಭಿಮನ್ಯು ಪವಾರ್ ಅವರು ಅಮಿತಾಭ್ಬಚ್ಚನ್ ಮತ್ತು ಸೋನಿ ಚಾನಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಶ್ನೆಯ ಹಿಂದಿನ ಉದ್ದೇಶ ಹಿಂದುಗಳ ಭಾವನೆಗೆ ನೋವು ಉಂಟು ಮಾಡುವುದೇ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.