ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ (BAPS Swaminarayan Temple)ದ ಮೇಲೆ ಸೆಪ್ಟೆಂಬರ್ 16ರಂದು ದಾಳಿ ನಡೆಸಿ ವಿರೂಪಗೊಳಿಸಲಾಗಿದ್ದು, ಇದರ ಹಿಂದೆ ಖಲಿಸ್ತಾನಿ (Khalistani)ಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮುಂದಿನ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra modi) ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ಈ ಕೃತ್ಯ ನಡೆದಿದೆ. ಭಾರತ ಈ ಘಟನೆಯನ್ನು ಕಟುವಾದ ಶಬ್ದಗಳಿಂದ ಖಂಡಿಸಿದೆ.
ದೇವಾಲಯದ ಒಳಗೆ ಆಕ್ಷೇಪಾರ್ಹ ಪದಗಳ ಸಂದೇಶಗಳೂ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಲಾಂಗ್ ಐಲ್ಯಾಂಡ್ ಪ್ರದೇಶದಲ್ಲಿ ದ್ವೇಷ ತುಂಬಿದ ಪೋಸ್ಟರ್‌ಗಳು ಕಂಡುಬರುತ್ತಿವೆ ಭಾರತೀಯ ಮೂಲದವರು ಮಾಹಿತಿ ನೀಡಿದ್ದಾರೆ. ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವು ಸೆಪ್ಟೆಂಬರ್ 22ರಂದು ಮೋದಿ ಭೇಟಿ ನೀಡಲಿರುವ ಲಾಂಗ್ ಐಲ್ಯಾಂಡ್‌ನ ನಸ್ಸಾವು ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಿಂದ ಕೇವಲ 26 ಕಿ.ಮೀ ದೂರದಲ್ಲಿದೆ.
The vandalism of the BAPS Swaminarayan Temple in Melville, New York, is unacceptable ; The Consulate @IndiainNewYork is in touch with the community and has raised the matter with U.S. law enforcement authorities for prompt action against the perpetrators of this heinous act.…
— India in New York (@IndiainNewYork) September 16, 2024
ಭಾರತ ಖಂಡನೆ
“ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯದ ಮೇಲಿನ ವಿಧ್ವಂಸಕ ಕೃತ್ಯ ಸ್ವೀಕಾರಾರ್ಹವಲ್ಲ. ಭಾರತೀಯ ಕಾನ್ಸುಲೇಟ್ ಅಲ್ಲಿನ ಹಿಂದೂ ಸಮುದಾಯದೊಂದಿಗೆ ಸಂಪರ್ಕದಲ್ಲಿದೆ ಮತ್ತು ಈ ಹೇಯ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ತ್ವರಿತ ಕ್ರಮಕ್ಕಾಗಿ ಅಮೆರಿಕ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ” ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ತಿಳಿಸಿದೆ. ಜತೆಗೆ ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.
“ಕಳೆದ ರಾತ್ರಿ ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸಲಾಗಿದೆ. ಇದು ಹೊಸ ಪ್ರಕರಣವಲ್ಲ. ಉತ್ತರ ಅಮೆರಿಕಾದಾದ್ಯಂತ ವಿವಿಧ ಹಿಂದೂ ಮಂದಿರಗಳನ್ನು ಇದೇ ರೀತಿ ಅಪವಿತ್ರಗೊಳಿಸುವ ಕೃತ್ಯಗಳು ಈ ಹಿಂದೆಯೂ ನಡೆದಿವೆ. ನಾವು ಈ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಎಲ್ಲಾ ಸಮುದಾಯಗಳ ನಡುವೆ ಶಾಂತಿ ನೆಲೆಸಲು ಪ್ರಾರ್ಥಿಸುತ್ತೇವೆ” ಎಂದು ದೇವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ ನ್ಯೂಯಾರ್ಕ್‌ನ ಬಿಎಪಿಎಸ್ ಹಿಂದೂ ದೇವಾಲಯದ ಮೇಲಿನ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಹಿಂದೂ ಅಮೆರಿಕನ್ ಫೌಂಡೇಶನ್ (Hindu American Foundation) ಕೂಡ ಅಮೆರಿಕ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ. ಜತೆಗೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಇತ್ತೀಚೆಗೆ ಹಿಂದೂ ಮತ್ತು ಭಾರತೀಯ ಸಂಸ್ಥೆಗಳಿಗೆ ಬೆದರಿಕೆ ಹಾಕಿರುವುದನ್ನು ಉಲ್ಲೇಖಿಸಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಈ ವಿಧ್ವಂಸಕ ಘಟನೆಯು ಕ್ಯಾಲಿಫೋರ್ನಿಯಾ ಮತ್ತು ಕೆನಡಾದಲ್ಲಿ ನಡೆದ ದೇವಾಲಯಗಳ ಮೇಲಿನ ದಾಳಿಯನ್ನು ಹೋಲುತ್ತದೆ ಎಂದು ಅದು ಹೇಳಿದೆ.
ಈ ವರ್ಷದ ಜುಲೈಯಲ್ಲಿ ಕೆನಡಾದ ಎಡ್ಮಂಟನ್‌ನಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಇದೇ ರೀತಿಯ ಕೃತ್ಯ ನಡೆದಿತ್ತು. ಇದನ್ನು ಕೆನಡಾದ ಸಂಸದ ಚಂದ್ರ ಆರ್ಯ ಖಂಡಿಸಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಗ್ರೇಟರ್ ಟೊರೊಂಟೊ ಪ್ರದೇಶ, ಬ್ರಿಟಿಷ್ ಕೊಲಂಬಿಯಾ ಮತ್ತು ಕೆನಡಾದ ಇತರ ಸ್ಥಳಗಳಲ್ಲಿನ ಹಿಂದೂ ದೇವಾಲಯಗಳನ್ನು ದ್ವೇಷಪೂರಿತ ಗೀಚುಬರಹಗಳಿಂದ ವಿರೂಪಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Pro-Khalistan elements: ಗೋ ಬ್ಯಾಕ್ ಇಂಡಿಯಾ ಘೋಷಣೆ ಕೂಗಿದ ಖಲಿಸ್ತಾನಿಗಳು; ಕೆನಡಾ ವಿಪಕ್ಷ ನಾಯಕ ಖಂಡನೆ