ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯೊಂದಿಗೆ ಒಡನಾಟವಿರಿಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಽಸಲಾಗಿದೆ. ಈ ಘಟನೆ ರಾಜ್ಯದಲ್ಲಿ ಉಗ್ರವಾದ ಜೀವಂತವಾಗಿರುವುದಕ್ಕೆ ದೊರೆತ ಸಾಕ್ಷಿ. ಕೇವಲ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ಇಡೀ ಜಗತ್ತನ್ನು ಕಾಡಲುತೊಡಗಿದೆ ಉಗ್ರವಾದ.
ಇಸ್ಲಾಮಿಕ್ ಸ್ಟೇಟ್ ಮತ್ತು ಆಲ್‌ಖೈದಾ ಉಗ್ರ ಸಂಘಟನೆಗಳು ಪ್ರಮುಖ ವಾಣಿಜ್ಯ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಸೂಚನೆ ನೀಡಿರುವುದರಿಂದ ವಿಶ್ವ ಸಂಸ್ಥೆಯ ಎಲ್ಲ ಸಿಬ್ಬಂದಿ ಎಚ್ಚರಿಕೆವಹಿಸಬೇಕೆಂದು ವಿಶ್ವಸಂಸ್ಥೆಯ ಭದ್ರತಾ ವಿಭಾಗ ತಿಳಿಸಿದೆ.
ಫ್ರಾನ್ಸ್‌ನಲ್ಲಿ ಕಳೆದ ಎರಡು ತಿಂಗಳಿನಲ್ಲಿ ಮೂರು ಭಯೋತ್ಪಾದನೆ ಘಟನೆಗಳು ನಡೆದಿವೆ. ಈ ಉಗ್ರವಾದದ ಸಮಸ್ಯೆ ಭಾರತ ವನ್ನು ಸಹ ಕಾಡುತ್ತಿದೆ. ಇಂದು ಜಗತ್ತಿನಾದ್ಯಂತ ವ್ಯಾಪಿಸಿರುವ ಈ ಉಗ್ರವಾದ ಒಂದು ದೊಡ್ಡ ಸಮಸ್ಯೆಯಲ್ಲ. ಏಕೆಂದರೆ ನಾನಾ ದೇಶಗಳ ಸೇನೆಗಳು ಬಲಿಷ್ಠವಾಗಿವೆ, ತಾಂತ್ರಿಕವಾಗಿಯೂ ಮುಂದುವರಿದಿವೆ. ಅಫಘಾನಿಸ್ತಾನದ ಭದ್ರತಾ ಸಿಬ್ಬಂದಿಗಳಿಗೆ ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರಿ ಮುನ್ನಡೆ ದೊರೆತಿದೆ. ಈ ವರ್ಷ ಕಂದಹಾರ್ ಪ್ರಾಂತ್ಯವೊಂದರಲ್ಲೇ ತಾಲಿಬಾನ್‌ನ
೧೭೫ ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ವಿಚಾರದಲ್ಲಿ ಭಾರತವೂ ಸಹ ಹಿಂದೆ ಬಿದ್ದಿಲ್ಲ.
ಜಮ್ಮು – ಕಾಶ್ಮೀರದಲ್ಲಿ ಉಗ್ರ ನಿಗ್ರಹದ ನಿಟ್ಟಿನಲ್ಲಿ ಅಕ್ಟೋಬರ್ ವೇಳೆಗೆ ೨೦೦ ಉಗ್ರರನ್ನು ಹತ್ಯೆಮಾಡಲಾಗಿದೆ. ಕಳೆದ ವರ್ಷ ೧೫೭ ಉಗ್ರರನ್ನು ಸಂಹಾರಗೊಳಿಸಿದ್ದ ಸೇನೆ ಈ ಬಾರಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪ್ರಸ್ತುತದ ಈ ಎಲ್ಲ
ಬೆಳವಣಿಗೆಗಳನ್ನು ಗಮನಿಸಿದಾಗ ಯಾವುದೇ ದೇಶದ ಪಾಲಿಗೆ ಉಗ್ರಗಾಮಿಗಳ ಸರ್ವನಾಶ ದೊಡ್ಡ ಸಂಗತಿಯಲ್ಲ. ಆದರೆ ಯಾವುದನ್ನೇ ಆದರೂ ಕಾನೂನು ಮಾರ್ಗದ ಪಾಲನೆ ಮುಖ್ಯ.