Monday, 25th November 2024

Gauri Lankesh: ಗೌರಿ ಲಂಕೇಶ್‌ ಕೊಲೆ ಪ್ರಕರಣ; ಮತ್ತೆ 4 ಆರೋಪಿಗಳಿಗೆ ಜಾಮೀನು

gauri lankesh

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ (Gauri Lankesh Murder Case) ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು (Bail) ಮಂಜೂರು ಆಗಿದೆ. ಇದರೊಂದಿಗೆ ಪ್ರಕರಣದ 18 ಆರೋಪಿಗಳಲ್ಲಿ ಎಂಟು ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ. ಈ ಹಿಂದೆ ನಾಲ್ವರು ಆರೋಪಿಗಳು ಜಾಮೀನು ಪಡೆದಿದ್ದರು.

ಆರೋಪಿಗಳಾದ ಹುಕ್ಕೇರಿಯ ಭರತ್​ ಭರತ್ ಜಯವಂತ ಕುರಾನೆ (42), ಮಹಾರಾಷ್ಟ್ರದ ಶ್ರೀಕಾಂತ್ ಪಂಗರ್ಕರ್ (48), ಶಿಕಾರಿಪುರದ ಸುಜಿತ್ ಕುಮಾರ್ (42), ಮಹಾರಾಷ್ಟ್ರದ ಸತಾರದ ಸುಧನ್ವ ಗೊಂಧಲೇಕರ್ (43) ಇವರಿಗೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.

ಆರೋಪಿಗಳ ವಿರುದ್ಧ 2017ರಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು 2018 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲಾ ದಿನ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು. ಅರ್ಜಿದಾರರು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಇಂಥಹದ್ದೇ ಆರೋಪದಲ್ಲಿ ಮತ್ತೆ ಭಾಗಿಯಾಗುವಂತಿಲ್ಲ. ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ಅನುಮತಿಸದ ಹೊರತು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ಈ ಪೈಕಿ ಯಾವುದೇ ಷರತ್ತು ಉಲ್ಲಂಘಿಸಿದರೂ ಪ್ರಾಸಿಕ್ಯೂಷನ್ ಜಾಮೀನು ರದ್ದತಿಗೆ ಕೋರಬಹುದು ಎಂದು ನ್ಯಾಯಾಲಯ ಹೇಳಿದೆ.

ಇದರೊಂದಿಗೆ ಪ್ರಕರಣದ 18 ಆರೋಪಿಗಳ ಪೈಕಿ 8 ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ. ಈ ಹಿಂದೆ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶೂಟರ್ ಪರಶುರಾಮ್ ವಾಗ್ಮೊರೆ, ಅಮೋಲ್ ಕಾಳೆ, ಸುಜಿತ್ ಕುಮಾರ್ ಆಲಿಯಾಸ್ ಪ್ರವೀಣ್, ಅಮಿತ್ ದಿಗ್ವೇಕರ್ ಸೇರಿದಂತೆ ನೇರ ಹಾಗೂ ಪರೋಕ್ಷ ಭಾಗಿಯಾಗಿದ್ದ 18 ಮಂದಿಯನ್ನು ಬಂಧನಕ್ಕೆ ಒಳಪಡಿಸಿತ್ತು. ಇವರನ್ನು ಸುದೀರ್ಘ ತನಿಖೆ ನಡೆಸಿದ ಬಳಿಕ ಹತ್ಯೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲಾಗಿತ್ತು. 2018ರ ನವೆಂಬರ್ 23 ರಂದು ಈ ಸಂಬಂಧಿಸಿದಂತೆ ಎಸ್ಐಟಿ ಜಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.

ಗೌರಿ ಹತ್ಯೆ ನಡೆದು ಏಳು ವರ್ಷ ಆದರೂ ವಿಚಾರಣೆ ಕುಂಟುತ್ತಾ ಸಾಗುತ್ತಿದೆ. ಎಸ್ ಐಟಿ 9000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. 400ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಪುರಾವೆಗಳು ವಿಚಾರಣೆ ವಿಳಂಬದಿಂದ ಧೂಳು ಹಿಡಿಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

ಇದನ್ನೂ ಓದಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಮೋಹನ್‌ ನಾಯಕ್‌ಗೆ ಜಾಮೀನು ಮಂಜೂರು