Saturday, 14th December 2024

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಮೋಹನ್‌ ನಾಯಕ್‌ಗೆ ಜಾಮೀನು ಮಂಜೂರು

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ ಆರೋಪಕ್ಕೆ ಗುರಿಯಾಗಿರುವ ಎನ್‌.ಮೋಹನ್‌ ನಾಯಕ್‌ ಅಲಿಯಾಸ್‌ ಸಂಪಾಜೆಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಇಡೀ ಪ್ರಕರಣದಲ್ಲಿ 18 ಆರೋಪಿಗಳಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಲಿರುವ ಮೊದಲ ಆರೋಪಿ ಮೋಹನ್‌ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಂಪಾಜೆಯ ಎನ್‌.ಮೋಹನ್‌ ನಾಯಕ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಕರಣದಲ್ಲಿ 11ನೇ ಆರೋಪಿ ಎನ್‌.ಮೋಹನ್‌ ನಾಯಕ್‌ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತಾ ಖಾತರಿ ನೀಡಬೇಕು, ವಿಚಾರ ಣಾಧೀನ ನ್ಯಾಯಾಲಯ ಅನುಮತಿಸದ ಹೊರತು ಪ್ರತೀ ವಿಚಾರಣೆಗೂ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಮತ್ತು ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗುವಂತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗುವಂತಿಲ್ಲ ಎಂಬ ಷರತ್ತು ಗಳನ್ನು ಹೈಕೋರ್ಟ್‌ ವಿಧಿಸಿದೆ.