Monday, 6th January 2025

ವ್ಯಾಕ್ಸೀನ್ ಜನಕ ಎಡ್ವರ್ಡ್‌ ಜೆನ್ನರ್‌’ಗೆ ಒಂದು ಸಲಾಂ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

ಜಗತ್ತಿನಾದ್ಯಂತ ಕರೋನಾ ಅಟ್ಟಹಾಸ ಮೆರೆಯುತ್ತಿರುವ ಈ ದಿನಗಳಲ್ಲಿ ನಾವು ಕೋವಿಡ್ 19 ಕಾಯಿಲೆಗೆ ಬರಬಹುದಾದ
ವ್ಯಾಕ್ಸೀನ್ ನ ನಿರೀಕ್ಷೆಯಲ್ಲಿದ್ದೇವೆ. ಅದು ಯಾವಾಗ ಬರಬಹುದು, ಬಂದಾಗ ಅದರ ಸಫಲತೆ ಎಷ್ಟಿರಬಹುದು, ನಂತರದ  ದಿನಗಳಲ್ಲಿ ಕರೋನಾದ ಪರಿಸ್ಥಿತಿ ಹೇಗಿರಬಹುದು, ಇವೆ ಭವಿಷ್ಯದ ವಿಚಾರಗಳು ನಮ್ಮ ಊಹೆಗೂ ನಿಲುಕದ್ದು.

ಆದರೆ ಇತ್ತೀಚೆಗೆ ನಾನು ಸಾಮಾಜಿಕ ಜಾಲತಾಣದಲ್ಲಿ ಸಿಡುಬಿನ ವಿರುದ್ಧ ವ್ಯಾಕ್ಸೀನ್ ಕಂಡು ಹಿಡಿದ ಎಡ್ವರ್ಡ್ ಜೆನ್ನರ್ ಬಗ್ಗೆ ಒಂದು ಪೋಸ್ಟ್ ನೋಡಿದೆ. ಆಗ ಆತನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಮನಸ್ಸಾಯಿತು. ಸಿಡುಬಿನಂಥ ಮಾರಣಾಂತಿಕ ಕಾಯಿಲೆಗೆ ಲಸಿಕೆ ಕಂಡು ಹಿಡಿದು, ಎಡ್ವರ್ಡ್ ಜೆನ್ನರ್ ಕೋಟ್ಯಂತರ ಜನರ ಜೀವ ಉಳಿಸಿದ ಎನ್ನುತ್ತದೆ ಇತಿಹಾಸ. ಹೌದು
ಸಿಡುಬು ತುಂಬಾ ಅಪಾಯಕಾರಿ ಕಾಯಿಲೆ. ಈ ಕಾಯಿಲೆ 20ನೇ ಶತಮಾನದಲ್ಲಿಯೇ ಅರ್ಧ ಬಿಲಿಯನ್ ಜನರಿಗಿಂತಲೂ ಹೆಚ್ಚು ಜನರ ಮರಣಕ್ಕೆ ಕಾರಣವಾಗಿದೆ. ಈ ಸಂಖ್ಯೆ ಎಂದರೆ ಈ ಶತಮಾನದಲ್ಲಿ ಜರುಗಿದ ಎ ಯುದ್ಧಗಳಲ್ಲಿ ಮರಣ ಹೊಂದಿದವರಿ ಗಿಂತ 3 ಪಟ್ಟು ಜಾಸ್ತಿ ಎಂದು ಒಂದು ಅಂದಾಜು. ಎಡ್ವರ್ಡ್ ಜೆನ್ನರ್ ಸಿಡುಬಿಗೆ ಕಂಡು ಹಿಡಿದ ವ್ಯಾಕ್ಸೀನ್ ಪರಿಣಾಮವಾಗಿ 1980ರ ಹೊತ್ತಿಗೆ ವಿಶ್ವ ಆರೋಗ್ಯ ಸಂಸ್ಥೆ ಜಗತ್ತು ಈಗ ಸಿಡುಬು ಮುಕ್ತವಾಗಿದೆ ಎಂದು ಘೋಷಿಸಲು ಸಾಧ್ಯವಾಯಿತು.

ಕಾಯಿಲೆಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮನುಷ್ಯನಿಗೆ ಒಂದು ಕಾಯಿಲೆಯ ವಿರುದ್ಧ ಸಂಪೂರ್ಣ ಗೆಲುವು ಸಾಧಿಸಲು ಸಾಧ್ಯವಾಯಿತು. ಎಡ್ವರ್ಡ್ ಜೆನ್ನರ್ 1796ರಲ್ಲಿ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಲ್ಲಿ ಯಾರಿಗೆ ಹಸುವಿನ ಸಿಡುಬಿನ ಕಾಯಿಲೆ ಬಂದಿತ್ತು ಅಂತಹವರಲ್ಲಿ ಮನುಷ್ಯನ ಸಿಡುಬು ಕಾಯಿಲೆ ಬರದಿರುವುದನ್ನು ಗಮನಿಸಿದ. ಆ ತಳಹದಿಯ ಮೇಲೆ ಹಸುವಿನ ಸಿಡುಬಿನ ವೈರಸ್ ನಿಂದ ಸಿಡುಬಿನ ವ್ಯಾಕ್ಸೀನ್ ಕಂಡುಹಿಡಿದ. ವ್ಯಾಕ್ಸೀನ್ ಎಂಬ ಶಬ್ದ ಲ್ಯಾಟಿನ್
ಮೂಲದಿಂದ ಬಂದದ್ದು. ಪಶುಗಳ ಮೂಲದಿಂದ ಬಂದಿದ್ದು ಎಂದು ಇದರ ಅರ್ಥ.

ಆಗಿನ ಕಾಲದ ಸ್ಕಾಟಿಷ್ ಫಿಜಿಷಿಯನ್ ಸರ್ ವಾಲ್ಟರ್ ಫರ್ಕರ್ ಜೆನ್ನರ್‌ಗೆ ಈ ವ್ಯಾಕ್ಸೀನ್‌ನ ಗುಟ್ಟನ್ನು ರಹಸ್ಯವಾಗಿಟ್ಟರೆ ಆತ 100000ಕ್ಕೂ ಹೆಚ್ಚು ಪೌಂಡ್‌ಗಳನ್ನು ಗಳಿಸಬಹುದು ಎಂದು ಸಲಹೆ ಕೊಟ್ಟ. ಆದರೆ ಎಡ್ವರ್ಡ್ ಜೆನ್ನರ್ ಅದನ್ನು ತಿರಸ್ಕರಿಸಿ
ಮನುಕುಲಕ್ಕೆ ಒಳಿತಾಗುವುದೇ ತನ್ನ ಧ್ಯೇಯ ಎಂದು ಯಾವುದನ್ನೂ ರಹಸ್ಯವಾಗಿಡಲಿಲ್ಲ. 1798ರಲ್ಲಿ ತನ್ನ ಮನೆಯ ಎದುರಿನ ತೋಟದಲ್ಲಿ ಒಂದು ಗುಡಿಸಲು ಕಟ್ಟಿ ಅದಕ್ಕೆ ಟೆಂಪಲ್ ಆಫ್ ವ್ಯಾಕ್ಸೀನಿಯಾ ಎಂದು ಹೆಸರು ಕೊಟ್ಟ. ಅದು ಹಲವಾರು ಬಡ ಸಿಡುಬು ರೋಗಿಗಳಿಗೆ ಆಶ್ರಯ ಕೊಟ್ಟಿತು. ಹಾಗೆಯೇ ಇಂಗ್ಲೆಂಡಿನ ಸಮುದಾಯ ಆರೋಗ್ಯದ ಮೊದಲ ತಾಣ ಎನಿಸಿಕೊಂಡಿತು.

(ಈಗಲೂ ಅದನ್ನು ಆತನ ಹೆಸರಿನ ಸ್ಮಾರಕವಾಗಿ ಉಳಿಸಿಕೊಳ್ಳಲಾಗಿದೆ). ಜೆನ್ನರ್ ತನ್ನ ದೇಶ ಬಿಟ್ಟು ಹೊರ ಹೋಗದಿದ್ದರೂ ಆತ ಆನಂತರ ಜಗತ್ತಿನಾದ್ಯಂತ ಮನೆಮಾತಾದ ಎಂಬುದು ಆಗಿನ ವಸ್ತು ಸ್ಥಿತಿ. ಆಗಿನ ಪ್ರಸಿದ್ಧ ಚಿಂತಕ ಥಾಮಸ್ ಜೆಫರ್ಸನ್ ಅವರು ಎಡ್ವರ್ಡ್ ಜೆನ್ನರ್‌ಗೆ ಮಾನವ ಸಂಕುಲ ನೀವು ಬದುಕಿದ್ದಿರಿ ಎನ್ನುವುದನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಪತ್ರ ಬರೆದು
ಜೆನ್ನರ್‌ನ ಅಮೂಲ್ಯ ಕಾಣಿಕೆಯನ್ನು ಎತ್ತಿ ತೋರಿಸಿದ್ದರು.

ಇತಿಹಾಸ: ಎಡ್ವರ್ಡ್ ಜೆನ್ನರ್ 1796ರಲ್ಲಿ ಸಿಡುಬಿಗೆ ಲಸಿಕೆ ಕಂಡು ಹಿಡಿದರೂ ವ್ಯಾಕ್ಸೀನ್‌ನ ಇತಿಹಾಸ ಕೆದಕಿದರೆ ಅದು ಇನ್ನೂ ಹಿಂದಕ್ಕೆ ಹೋಗುತ್ತದೆ. ಹಾವಿನ ಕಡಿತಕ್ಕೆ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳಲು ಬೌದ್ಧ ಭಿಕ್ಷುಗಳು ಚೀನಾ ಮತ್ತು ಭಾರತದಲ್ಲಿ ೧೭ನೇ
ಶತಮಾನದ ಪೂರ್ವದಲ್ಲಿಯೇ ಹಾವಿನ ವಿಷ ಕುಡಿಯುತ್ತಿದ್ದರು ಎಂಬ ದಾಖಲೆಗಳಿವೆ.

ಅಲ್ಲದೆ ಸಿಡುಬಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳಲು ೧೭ನೇ ಶತಮಾನದಲ್ಲಿ ಚೀನಾದಲ್ಲಿ, ಮನುಷ್ಯನ ಚರ್ಮದಲ್ಲಿ ಒಂದು ಗಾಯ ಮಾಡಿ ಅದಕ್ಕೆ ಹಸುವಿನ ಸಿಡುಬನ್ನು ಸವರುತ್ತಿದ್ದರು ಎನ್ನಲಾಗಿದೆ. ಮೊದಲು ತಿಳಿಸಿದಂತೆ 1796ರಲ್ಲಿ ಇಂಗ್ಲೆಂಡಿನಲ್ಲಿ ಎಡ್ವರ್ಡ್ ಜೆನ್ನರ್ 13 ವರ್ಷದ ಬಾಲಕನಿಗೆ ಹಸುವಿನ ಸಿಡುಬಿನ ವೈರಸ್ ಚುಚ್ಚಿ ಸಿಡುಬು ಕಾಯಿಲೆಗೆ ವ್ಯಾಕ್ಸೀನ್ ಕಂಡು ಹಿಡಿದ.

1798ರಲ್ಲಿ ಸಿಡುಬಿನ ವ್ಯಾಕ್ಸೀನ್ ಬಳಕೆಗೆ ಬಂದಿತು. ೧೮-೧೯ನೇ ಶತಮಾನಗಳಲ್ಲಿ ಎ ಕಡೆ ವ್ಯಾಕ್ಸೀನ್ ಬಗ್ಗೆ ಜಾಗೃತಿ ಹುಟ್ಟಿಸಿ ಪ್ರಪಂಚದಾದ್ಯಂತ ಚಳುವಳಿಯ ರೀತಿಯಲ್ಲಿ ವ್ಯಾಕ್ಸೀನ್ ಕಾರ್ಯಕ್ರಮ ಕೈಗೊಂಡಿದ್ದರಿಂದ 1979ರ ಹೊತ್ತಿಗೆ ಸಿಡುಬು
ಜಗತ್ತಿನಿಂದಲೇ ಕಾಣೆಯಾಯಿತು. ಲೂಯಿಸ್ ಪಾಶ್ಚರ್ ಹಲವು ಪ್ರಯೋಗಗಳನ್ನು ಕೈಗೊಂಡಿದ್ದರಿಂದ 1897ರಲ್ಲಿ ಕಾಲರಾ ವ್ಯಾಕ್ಸೀನ್ ಮತ್ತು 1904ರಲ್ಲಿ ಆಂತ್ರಾಕ್ಸ್‌ಗೆ ಲಸಿಕೆ ಕಂಡುಹಿಡಿಯಲ್ಪಟ್ಟವು.

19ನೆ ಶತಮಾನದ ಅಂತಿಮ ಭಾಗದಲ್ಲಿ ಪ್ಲೇಗ್‌ಗೆ ಸಹಿತ ವ್ಯಾಕ್ಸೀನ್ ಕಂಡುಹಿಡಿಯಲಾಯಿತು. 1890 ಮತ್ತು 1950ರ ಮಧ್ಯೆ ಕ್ಷಯ ರೋಗಕ್ಕೆ ಬಿಸಿಜಿ ಮತ್ತು ಇನ್ನೂ ಹಲವಾರು ಕಾಯಿಲೆಗಳಿಗೆ ವ್ಯಾಕ್ಸೀನ್ ಗಳನ್ನು ಕಂಡುಹಿಡಿಯಲಾಯಿತು. 1923ರಲ್ಲಿ ಅಲೆಕ್ಸಾಂಡರ್ ಗ್ಲೆನ್ನಿ ಫರ್ಮಾಲ್ಡಿಹೈಡ್  ಉಪಯೋಗಿಸಿ ಟೆಟನಸ್ ಟಾಕ್ಸಾಯಿಡ್‌ನ್ನು ನಿಷ್ಕ್ರಿಯಗೊಳಿಸುವ ವಿಧಾನವನ್ನು ಕಂಡುಹಿಡಿದ.

ಅದೇ ಕ್ರಮವನ್ನು ಉಪಯೋಗಿಸಿ 1926ರಲ್ಲಿ ಡಿಫ್ತೀರಿಯಾ ಕಾಯಿಲೆಗೆ ವ್ಯಾಕ್ಸೀನ್ ಕಂಡುಹಿಡಿಯಲಾಯಿತು. ನಾಯಿಕೆಮ್ಮು ಕಾಯಿಲೆಗೆ ವ್ಯಾಕ್ಸೀನ್ ತಯಾರಾಗುವುದು ಸ್ವಲ್ಪ ತಡವಾಯಿತು. ಅದು 1948ರ ಹೊತ್ತಿಗೆ ಉಪಯೋಗಕ್ಕೆ ಬಂದಿತು. 19501985ರ ಮಧ್ಯೆ ವೈರಸ್‌ನ ಟಿಷ್ಯೂ ಕಲ್ಚರ್ ವಿಧಾನಗಳನ್ನು ಉಪಯೋಗಿಸಿ ಪೋಲಿಯೋದ ಸಾಕ್ ವ್ಯಾಕ್ಸೀನ್ (ಇಂಜೆಕ್ಷನ್ ರೂಪದ) ಹಾಗೂ ಬಾಯಿಯಿಂದ ಕೊಡುವ ಹನಿ ರೂಪದ ಸೇಬಿನ್ ವ್ಯಾಕ್ಸೀನ್‌ಗಳು ಶೋಧಿಸಲ್ಪಟ್ಟವು.

ಇಡೀ ಜನಾಂಗದ ಮಕ್ಕಳಲ್ಲಿ ಪೋಲಿಯೋ ವ್ಯಾಕ್ಸೀನ್ ಪದೇ ಪದೆ ಕೊಟ್ಟದ್ದರಿಂದ ಜಗತ್ತಿನ ಹಲವಾರು ಭಾಗಗಳಲ್ಲಿ ಈ
ಕಾಯಿಲೆ ಈಗ ಕಾಣೆಯಾಗಿದೆ. ನಂತರ ದಢಾರ, ಮಂಪ್ಸ್ ಮತ್ತು ರುಬೆ ಕಾಯಿಲೆಗಳಿಗೆ ವ್ಯಾಕ್ಸೀನ್ ಗಳು ಬಂದವು. ಹೀಗೆ ವ್ಯಾಕ್ಸೀನ್‌ಗಳು ಬಂದಾಗಿನಿಂದ ಜನಾಂಗದ ಆರೋಗ್ಯ ಸುಧಾರಿಸಿದ ಬಗ್ಗೆ ಮೇಲ್ನೋಟಕ್ಕೆ ಕಾಣುತ್ತಿದ್ದರೂ ಈ ಲಸಿಕೆಗಳ ಬಗ್ಗೆ ಜನತೆಯ ಒಂದು ವರ್ಗದಲ್ಲಿ ಯಾವ ಕಾಲದಲ್ಲೂ ವಿರೋಧವಿತ್ತು.

ಹಾಗಾಗಿ 1970 – 1980ರ ದಶಕಗಳಲ್ಲಿ ಈ ವ್ಯಾಕ್ಸೀನ್ ಗಳ ವಿರುದ್ಧ ಹಲವಾರು ಕೋರ್ಟ್ ಕೇಸ್‌ಗಳು ತೊಡಗಿ ವ್ಯಾಕ್ಸೀನ್ ಉತ್ಪಾದಿಸುವ ಔಷಧ ಕಂಪನಿಗಳಿಗೆ ಲಾಭಾಂಶ ತುಂಬಾ ಕಡಿಮೆಯಾಯಿತು. ಹಾಗಾಗಿ ಹಲವಾರು ಕಂಪನಿಗಳು ವ್ಯಾಕ್ಸೀನ್
ಉತ್ಪಾದಿಸುವುದನ್ನೇ ನಿಲ್ಲಿಸಿಬಿಟ್ಟವು. ಇದಕ್ಕೆ ಪರಿಹಾರವೆಂಬಂತೆ 1986ರಲ್ಲಿ ಅಮೆರಿಕದಲ್ಲಿ ನ್ಯಾಷನಲ್ ವ್ಯಾಕ್ಸೀನ್ ಇಂಜುರಿ ಕಂಪನ್ಸೇಷನ್ ಕಾರ್ಯಕ್ರಮ ಜಾರಿಗೊಳಿಸಿದ ಮೇಲೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.

ಕಳೆದ 2 ದಶಕಗಳಿಂದ ಮಾಲಿಕ್ಯುಲಾರ್ ಜೆನೆಟಿಕ್ಸ್ ತಾಂತ್ರಿಕತೆಯನ್ನು ಇಮ್ಯುನಾಲಜಿ, ಮೈಕ್ರೋ ಬಯಾಲಜಿ ಮತ್ತು ಜೆನೋಮಿಕ್ಸ್ ಗಳನ್ನು ವ್ಯಾಕ್ಸೀನ್ ಗಳ ವಿಜ್ಞಾನಕ್ಕೆ ಅನ್ವಯಿಸಿ ಸಂಶೋಧನೆಗಳಾದ ನಂತರ ವ್ಯಾಕ್ಸೀನ್‌ಗಳ ರಂಗ ತುಂಬಾ ಆಧುನಿಕವಾಗಿದೆ, ಸುಧಾರಿಸಿದೆ. ಈ ಎ ಶಾಸಗಳ ಒಳಗೊಳ್ಳುವಿಕೆಯಿಂದ ಹೆಪಟೈಟಿಸ್ ಬಿ ವ್ಯಾಕ್ಸೀನ್, ನಾಯಿಕೆಮ್ಮುವಿಗೆ ಲಸಿಕೆ, ಇಂಫ್ಲುಯೆಂಜಾ ವ್ಯಾಕ್ಸೀನ್ ಗಳಲ್ಲಿ ಹೊಸ ತಾಂತ್ರಿಕತೆ ಉಪಯೋಗಿಸಲಾಗಿದೆ.

ಮಾಲಿಕ್ಯುಲಾರ್ ಜೆನೆಟಿಕ್ಸ್‌ನ ಪ್ರಗತಿ ವ್ಯಾಕ್ಸೀನ್‌ಗಳ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಅದರಲ್ಲೂ ವ್ಯಾಕ್ಸೀನ್‌ಗಳ ಡೆಲಿವರಿ ವ್ಯವಸ್ಥೆಗೆ, ಕೆಲವು ಹೊಸ ವಸ್ತುಗಳನ್ನು ಅದರಲ್ಲಿ ಅಳವಡಿಸಲು, ಕ್ಷಯರೋಗಕ್ಕೆ ಪರಿಣಾಮಕಾರಿಯಾದ ವ್ಯಾಕ್ಸೀನ್ ಬೆಳವಣಿಗೆ ಮಾಡಲು, ಹಾಗೆಯೇ ವೈರಸ್ ಕಾಯಿಲೆಗಳಾದ ಸೈಟೋಮೆಗಲೋ ವೈರಸ್, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ರೆಸ್ಪಿರೇಟರಿ ಸಿನ್ ಸಿಟಿಯಲ್ ವೈರಸ್, ಸ್ಟ್ರೆಪ್ಟೊಕಾಕಲ, ಸ್ಟಫೈಲೋಕಾಕಲ್ ಕಾಯಿಲೆಗಳು, ಎಚ್‌ಐವಿ, ಶೈಸ್ಟೋಸೋಮಿಯಾಸಿಸ್ – ಮೊದಲಾ
ದವುಗಳಿಗೆ ವ್ಯಾಕ್ಸೀನ್ ಕಂಡು ಹಿಡಿಯಲು ಸಹಾಯಕವಾಗಿದೆ. ಇದೇ ತಂತ್ರಜ್ಞಾನವನ್ನು ಉಪಯೋಗಿಸಿ ಅಲರ್ಜಿ, ಆಟೋ ಇಮ್ಯೂನ್ ಕಾಯಿಲೆ ಮತ್ತು ಡ್ರಗ್ ಅಡಿಕ್ಷನ್‌ಗಳಿಗೆ ಚಿಕಿತ್ಸೆಯನ್ನು ಹುಟ್ಟು ಹಾಕುವ ಸಂಶೋಧನೆಗಳು ನಡೆಯುತ್ತಿವೆ.

ಈ ವ್ಯಾಕ್ಸೀನ್‌ಗಳ ಹಿನ್ನೆಲೆ ಸ್ವಲ್ಪ ತಿಳಿಯೋಣ. ವ್ಯಾಕ್ಸೀನ್‌ಗಳು ಅಪಾಯಕಾರಿ ಮತ್ತು ಮರಣಾಂತಿಕ ಕಾಯಿಲೆಗಳು ಮನುಷ್ಯನಿಗೆ ಬರದಂತೆ ತಡೆಯುತ್ತವೆ. ದೇಹದ ಸಾಮಾನ್ಯ ಪ್ರತಿರೋಧ ಶಕ್ತಿಯ ಜತೆ ಕೆಲಸ ಮಾಡಿ ವ್ಯಾಕ್ಸೀನ್‌ಗಳು ನಿರ್ದಿಷ್ಟ ಕಾಯಿಲೆಗೆ ಶಾಶ್ವತ ಪ್ರತಿರೋಧ ಶಕ್ತಿಯನ್ನು ಹುಟ್ಟು ಹಾಕುತ್ತವೆ. ಈ ವ್ಯಾಕ್ಸೀನ್‌ಗಳ ಬಗ್ಗೆ ವಿವರವಾಗಿ ತಿಳಿಯಲು ನಾವು ದೇಹದ ಸಾಮಾನ್ಯ ಪ್ರತಿರೋಧ ಶಕ್ತಿಯ ಬಗ್ಗೆ ತಿಳಿಯಬೇಕಾಗುತ್ತದೆ.

ದೇಹದ ಪ್ರತಿರೋಧ ಶಕ್ತಿ: ದೇಹದ ಹೊರಗಿನ ಜೀವಿಗಳಾದ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ದೇಹವನ್ನು ಆಕ್ರಮಿಸಿ
ದೇಹದೊಳಗೆ ತಮ್ಮ ಸಂತತಿಯನ್ನು ಜಾಸ್ತಿ ಮಾಡಲು ಯತ್ನಿಸುತ್ತವೆ. ಇದನ್ನೇ ನಾವು ಸೋಂಕು ಅಥವಾ ಇನೆಕ್ಷನ್ ಎನ್ನುತ್ತೇವೆ.
ಈ ಕಾರಣದಿಂದ ಆ ದೇಹಕ್ಕೆ ಕಾಯಿಲೆ ಬರುತ್ತದೆ. ಈ ಸಂದರ್ಭದಲ್ಲಿ ದೇಹದ ಸಾಮಾನ್ಯ ಪ್ರತಿರೋಧ ಶಕ್ತಿ ತನ್ನ ಕೆಲಸ ಆರಂಭಿ ಸುತ್ತದೆ. ಎಲ್ಲರಿಗೂ ಗೊತ್ತಿರುವಂತೆ ನಮ್ಮ ದೇಹದ ರಕ್ತದಲ್ಲಿ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ ಲೆಟ್ ಗಳು ಇರುತ್ತವೆ. ಕೆಂಪು ರಕ್ತ ಕಣಗಳು ಆಮ್ಲಜನಕವನ್ನು ದೇಹದ ವಿವಿಧೆಡೆ ಸಾಗಿಸುತ್ತವೆ.

ಬಿಳಿ ರಕ್ತ ಕಣಗಳು ಸೋಂಕಿನ ವಿರುದ್ಧ ಹೋರಾಡುತ್ತವೆ. ಬಿಳಿ ರಕ್ತ ಕಣಗಳಲ್ಲಿ ಮುಖ್ಯವಾಗಿ ಮ್ಯಾಕ್ರೋಫೇಜಸ್, ಬಿ ಲಿಂಫೋ ಸೈಟ್ಸ್ ಮತ್ತು ಟಿ ಲಿಂಫೋಸೈಟ್ಸ್‌ಗಳಿವೆ. ಈ ಮ್ಯಾಕ್ರೋಫೇಜಸ್‌ಗಳು ಕ್ರಿಮಿಗಳನ್ನು ನುಂಗುತ್ತವೆ, ಜೀರ್ಣಿಸಿಕೊಳ್ಳುತ್ತವೆ. ಹಾಗೆಯೇ ಇವು ಸತ್ತ ಮತ್ತು ಸಾಯುವ ಜೀವಕೋಶಗಳನ್ನು ನುಂಗಿ ಜೀರ್ಣಿಸಿಕೊಳ್ಳುತ್ತವೆ. ಈ ಮ್ಯಾಕ್ರೋಫೇಜ್‌ಗಳು ಹೊರಗಿನ
ಕ್ರಿಮಿಗಳ ಸ್ವಲ್ಪ ಭಾಗಗಳನ್ನು ಬಿಡುತ್ತವೆ. ಇವೇ ನಂತರ ಆಂಟಿಜನ್‌ಗಳಾಗಿ ಪರಿವರ್ತಿತವಾಗುತ್ತವೆ. ಈ ಆಂಟಿಜೆನ್‌ಗಳನ್ನು ಅಪಾಯಕಾರಿ ಎಂದು ಗುರುತಿಸಿ ಅವುಗಳ ಜೊತೆ ಹೋರಾಡಲು ಆಂಟಿಬಾಡಿಗಳನ್ನು ಸೃಷ್ಟಿಸುತ್ತವೆ.

ಬಿ ಲಿಂಫೋಸೈಟ್‌ಗಳು: ರಕ್ಷಣಾತ್ಮಕ ಬಿಳಿ ರಕ್ತ ಕಣಗಳು. ಇವು ಮ್ಯಾಕ್ರೋಫೇಜ್‌ಗಳಿಂದ ಬಿಟ್ಟು ಹೋದ ಆಂಟಿಜೆನ” ಗಳ ಜೊತೆ ಹೋರಾಡಲು ಆಂಟಿಬಾಡಿಗಳನ್ನು ಉತ್ಪನ್ನ ಮಾಡುತ್ತವೆ.

ಟಿ ಲಿಂಫೋಸೈಟ್ಸ್‌ಗಳು: ಮತ್ತೊಂದು ರೀತಿಯ ರಕ್ಷಣಾತ್ಮಕ ಬಿಳಿ ರಕ್ತ ಕಣಗಳು. ದೇಹದಲ್ಲಿ ಸೋಂಕಿಗೆ ಒಳಗಾದ ಜೀವಕೋಶ ಗಳ ಜೊತೆ ಇವು ಹೋರಾಡುತ್ತವೆ. ದೇಹವು ಮೊದಲ ಬಾರಿಗೆ ಯಾವುದೇ ಕ್ರಿಮಿ ಅಥವಾ ಜೀವಿಯ ಆಕ್ರಮಣಕ್ಕೆ ಒಳಗಾದಾಗ ಅದು ಸೋಂಕಿನ ಜೊತೆ ಹೋರಾಡಲು ತನ್ನೆ ಪ್ರತಿರೋಧ ಶಕ್ತಿಗಳನ್ನು ಒಟ್ಟುಗೂಡಿಸಿ ಹೋರಾಡಲು ಹಲವಾರು ದಿವಸಗಳನ್ನೇ ತೆಗೆದುಕೊಳ್ಳುತ್ತದೆ.

ಸೋಂಕಿನ ನಂತರ ದೇಹವನ್ನು ಕಾಯಿಲೆಯಿಂದ ಹೇಗೆ ರಕ್ಷಿಸಬೇಕು ಎಂದು ದೇಹದ ಪ್ರತಿರೋಧ ಶಕ್ತಿಯು ನೆನಪಿಟ್ಟು ಕೊಳ್ಳುತ್ತದೆ. ದೇಹವು ಅದೇ ಕ್ರಿಮಿಯಿಂದ ಪುನಃ ಆಕ್ರಮಣಕ್ಕೆ ಒಳಗಾದರೆ ದೇಹವು ಕೆಲವು ಟಿ ಲಿಂಫೋಸೈಟ್ಸ್‌ಗಳನ್ನು ನೆನಪಿನ ಜೀವಕೋಶಗಳಾಗಿ ಪರಿವರ್ತಿಸಿ ಕಾಯ್ದಿಟ್ಟುಕೊಳ್ಳುತ್ತದೆ. ಪರಿಚಿತ ಆಂಟಿಜೆನ್‌ಗಳು ಕಂಡು ಬಂದಾಗ ಬಿ ಲಿಂಫೋಸೈಟ್ಸ್‌ಗಳು ಆಂಟಿಬಾಡಿಗಳನ್ನು ಉತ್ಪಾದಿಸಿ ಆಂಟಿಜೆನ್ ಗಳ ವಿರುದ್ಧ ಹೋರಾಡುತ್ತವೆ.

ವ್ಯಾಕ್ಸೀನ್‌ಗಳು ಹೇಗೆ ಕೆಲಸ ಮಾಡುತ್ತವೆ? ವ್ಯಾಕ್ಸೀನ್‌ಗಳು ಸೋಂಕಿನ ರೀತಿಯೇ ವರ್ತಿಸಿ ದೇಹಕ್ಕೆ ಪ್ರತಿರೋಧ ಶಕ್ತಿ ಬರುವಂತೆ ಮಾಡುತ್ತವೆ. ಈ ಸೋಂಕು ಕಾಯಿಲೆ ಉಂಟು ಮಾಡುವುದಿಲ್ಲ. ಆದರೆ ಅದು ದೇಹದಲ್ಲಿ ಟಿ ಲಿಂಫೋಸೈಟ್ಸ್‌ಗಳು ಮತ್ತು ಆಂಟಿ ಬಾಡಿಗಳನ್ನು ಹುಟ್ಟು ಹಾಕುತ್ತವೆ. ದೇಹಕ್ಕೆ ವ್ಯಾಕ್ಸೀನ್ ಗಳನ್ನು ಇಂಜೆಕ್ಟ್ ಮಾಡಿದಾಗ ಉಂಟಾಗುವ ಸೋಂಕಿನ ರೀತಿಯ ಪರಿಣಾಮ ಕೆಲವೊಮ್ಮೆ ಸಣ್ಣ ಪ್ರಮಾಣದ ಜ್ವರವನ್ನು ಉಂಟು ಮಾಡಬಹುದು. ಇದು ದೇಹದ ಸಹಜ ಪ್ರಕ್ರಿಯೆ.

ದೇಹವು ಪ್ರತಿರೋಧ ಶಕ್ತಿಯನ್ನು ವೃದ್ಧಿಸುವ ಒಂದು ಪ್ರಕ್ರಿಯೆ ಎಂದು ತಿಳಿದುಕೊಳ್ಳಬೇಕು. ಒಮ್ಮೆ ಸೋಂಕಿನ ರೀತಿಯ ಪರಿಣಾಮ ಇಲ್ಲವಾದಾಗ ಅಥವಾ ಕಡಿಮೆಯಾದಾಗ ಆಗ ದೇಹದಲ್ಲಿ ನೆನಪಿನ ಟಿ ಲಿಂಫೋಸೈಟ್ಸ್‌ಗಳು ಉಳಿದುಕೊಳ್ಳುತ್ತವೆ. ಹಾಗೆಯೇ ಮುಂದೆ ಭವಿಷ್ಯದಲ್ಲಿ ಈ ಕಾಯಿಲೆಯ ಜೊತೆ ಹೇಗೆ ಹೋರಾಡಬೇಕು ಎಂದು ನೆನಪಿಟ್ಟುಕೊಳ್ಳುವ ಬಿ ಲಿಂಫೋ ಸೈಟ್ಸ್‌ಗಳೂ ಇರುತ್ತವೆ.

ವ್ಯಾಕ್ಸಿನೇಷನ್ ನಂತರ ದೇಹಕ್ಕೆ ಬಿ ಲಿಂಫೋಸೈಟ್ಸ್ ಮತ್ತು ಟಿ ಲಿಂಫೋಸೈಟ್ಸ್‌ಗಳನ್ನು ಹುಟ್ಟು ಹಾಕಲು ಕೆಲವು ವಾರಗಳು ಬೇಕಾಗುತ್ತವೆ. ಹಾಗಾಗಿ ಒಬ್ಬ ಮನುಷ್ಯನಿಗೆ ವ್ಯಾಕ್ಸೀನ್ ಕೊಟ್ಟ ಕೆಲವೇ ದಿನಗಳಲ್ಲಿ ಅದೇ ಕಾಯಿಲೆ ಬಂದರೆ ವ್ಯಾಕ್ಸೀನ್ ಇನ್ನೂ ಕೆಲಸ ಆರಂಭಿಸಿ ದೇಹವನ್ನು ರಕ್ಷಿಸಲು ಸಂಪೂರ್ಣವಾಗಿ ಸಾಧ್ಯವಾಗಿಲ್ಲ ಎಂದರ್ಥ. ಕೆಲವೊಮ್ಮೆ ಈ ವ್ಯಾಕ್ಸೀನ್‌ಗಳನ್ನು ಒಂದ ಕ್ಕಿಂತ ಹೆಚ್ಚು ಬಾರಿ ಕೊಡುವ ಅವಶ್ಯಕತೆ ಇದೆ. ಕೆಲವು ವ್ಯಾಕ್ಸೀನ್‌ಗಳ ಮೊದಲ ಡೋಸ್ ದೇಹಕ್ಕೆ ಬೇಕಾದ ರಕ್ಷಣೆಯನ್ನು ಸಂಪೂರ್ಣವಾಗಿ ಕೊಡಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಎರಡನೇ ಡೋಸ್‌ನ ಅವಶ್ಯಕತೆ ಬೀಳುತ್ತದೆ. ಉದಾ: ಗೆ ಮೆನಿಂಜೈಟಿಸ್ ಕಾಯಿಲೆಯಲ್ಲಿ ಕೊಡುವ ಹಿಬ್ ವ್ಯಾಕ್ಸೀನ್.
ಕೆಲವೊಮ್ಮೆ ವ್ಯಾಕ್ಸೀನ್ ಕೊಟ್ಟು ಕೆಲವು ದಿನಗಳ ನಂತರ ಅದರ ಪರಿಣಾಮ ಕಡಿಮೆಯಾಗುತ್ತಾ ಬರುತ್ತದೆ. ಹಾಗಾಗಿ ಕೆಲವು ವರ್ಷಗಳ ನಂತರ ಬೂಸ್ಟರ್ ಡೋಸ್ ಕೊಡುವ ಅವಶ್ಯಕತೆ ಬೀಳುತ್ತದೆ.

Leave a Reply

Your email address will not be published. Required fields are marked *