ಬೆಂಗಳೂರು: ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL Score) ಬಹಳ ಮುಖ್ಯ. ಉತ್ತಮ ಸಿಬಿಲ್ ಸ್ಕೋರ್ ಅನ್ನು ನೀವು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಅದರಲ್ಲಿಯೂ ಸಿಬಿಲ್ ಸ್ಕೋರ್ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ಒಂದುವೇಳೆ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ದರೆ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಯಾವತ್ತೂ ಉತ್ತಮ ಸ್ಥಿತಿಯಲ್ಲಿಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಸಿಬಿಲ್ ಸ್ಕೋರ್ ಅನ್ನು ಹೇಗೆ ವೃದ್ಧಿಸಬೇಕು ಎನ್ನುವ ಸಲಹೆ ಇಂದಿನ ಮನಿಟಿಪ್ಸ್ (Money Tips)ನಲ್ಲಿದೆ.
ಹೇಗೆ ನಿರ್ಧರಿಸುತ್ತಾರೆ?
ನೀವು ಮೊದಲೇ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅದರ ಪಾವತಿ, ನಿಮ್ಮ ಬ್ಯಾಂಕ್ ಟ್ರಾನ್ಸಾಕ್ಷನ್ ಆಧಾರದ ಮೇಲೆ ಸಿಬಿಲ್ ಸ್ಕೋರ್ ಅನ್ನು ನಿರ್ಣಯಿಸಲಾಗುತ್ತದೆ. ಅಂದರೆ ಸಕಾಲಕ್ಕೆ ಸಾಲ ಮರುಪಾವತಿ, ಸಾಲ ಬಳಕೆಯ ಪ್ರಮಾಣ, ಯಾವೆಲ್ಲ ಉದ್ದೇಶಗಳಿಗೆ ಸಾಲ ಪಡೆಯಲಾಗಿದೆ ಎನ್ನುವುದನ್ನು ಪರಿಗಣಿಸಿ ಸಿಬಿಲ್ ಸ್ಕೋರ್ ಅನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ನೀವು ಹಿಂದಿನ ಸಾಲವನ್ನು ಸಮರ್ಪಕವಾಗಿ ಪಾವತಿಸದಿದ್ದರೆ ಸಿಬಿಲ್ ಸ್ಕೋರ್ ಕಡಿಮೆಯಾಗಿ ಹೊಸ ಸಾಲ ಮಂಜೂರಾತಿಗೆ ಅಡ್ಡಿಯಾಗುತ್ತದೆ.
ಹೀಗೆ ಸ್ಕೋರ್ ಹೆಚ್ಚಿಸಿ
ಮಿತಿಯನ್ನು ಹೆಚ್ಚು ಬಳಸಬೇಡಿ: ಆರೋಗ್ಯಕರ ಸಿಬಿಲ್ ಸ್ಕೋರ್ ಅನ್ನು ಕಾಪಾಡಿಕೊಳ್ಳಲು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚು ಬಳಸಬೇಡಿ ಮತ್ತು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಶೇ. 30ಕ್ಕಿಂತ ಕಡಿಮೆ ಇರಿಸಿ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಯತ್ನಿಸಬಹುದು.
ನಿಮ್ಮ ಬಿಲ್‌ಗಳನ್ನು ಸರಿಯಾಗಿ ಪಾವತಿಸಿ: ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧರಿಸುವಲ್ಲಿ ಪಾವತಿ ಇತಿಹಾಸ ಅತ್ಯಂತ ನಿರ್ಣಾಯಕ ಅಂಶ. ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸಿ. ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಮತ್ತು ವಿಳಂಬ ಮಾಡಬೇಡಿ.
ಪರಿಶೀಲಿಸಿ: ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆಗಾಗ ಪರಿಶೀಲಿಸಿ. ಇದರಿಂದ ನೀವು ಯಾವ ಮಟ್ಟದಲ್ಲಿದ್ದೀರಿ ಎಂಬುದು ತಿಳಿಯುತ್ತದೆ. ಯುಪಿಐ ಅಪ್ಲಿಕೇಷನ್‌ನಲ್ಲಿ ಸ್ಕೋರ್ ಅನ್ನು ಸುಲಭವಾಗಿ ಪರಿಶೀಲಿಸಬಹುದುದಾಗಿದೆ.
ನಿಮ್ಮ ಲೋನ್ ಪೋರ್ಟ್‌ಪೋಲಿಯೊವನ್ನು ವೈವಿಧ್ಯಗೊಳಿಸಿ: ಸುರಕ್ಷಿತ ಮತ್ತು ಅಸುರಕ್ಷಿತ ಸಾಲಗಳ ಸಮತೋಲಿತ ಮಿಶ್ರಣವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುತ್ತದೆ.
ಬೇರೆ ಬೇರೆ ಸಾಲಗಳಿಗೆ ಅರ್ಜಿ ಸಲ್ಲಿಸಬೇಡಿ: ಕಡಿಮೆ ಅವಧಿಯಲ್ಲಿ ಬೇರೆ ಬೇರೆ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬೇಡಿ. ಜತೆಗೆ ಯಾವುದೇ ಕಾರಣಕ್ಕೂ ನಿಮ್ಮ ಚೆಕ್ ಬೌನ್ಸ್ ಆಗದಂತೆ ನೋಡಿಕೊಳ್ಳಿ.
ಅನುಕೂಲಗಳು
ನೀವು ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿದ್ದರೆ ಈ ಕೆಳಗಿನ ಪ್ರಯೋಜನಗಳು ದೊರೆಯುತ್ತವೆ.
- ಸಾಲಗಳ ಮೇಲಿನ ಕಡಿಮೆ ಬಡ್ಡಿ ದರ
- ಸಾಲದ ಮೊತ್ತದಲ್ಲಿ ಹೆಚ್ಚಳ
- ದೀರ್ಘ ಅಥವಾ ಹೆಚ್ಚು ಹೊಂದಿಕೊಳ್ಳುವ ಮರುಪಾವತಿ ಅವಧಿ
- ತ್ವರಿತ ಸಾಲ ಮಂಜೂರಾತಿ
- ಸಾಲ ನೀಡುವ ಸಂಸ್ಥೆಗಳ ಹೆಚ್ಚಿನ ಆಯ್ಕೆ
ಈ ಸುದ್ದಿಯನ್ನೂ ಓದಿ: Money Tips: ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ