Tuesday, 26th November 2024

Archana Ashok Column: ವಿದ್ಯೆಗೆ ವಿನಯವೇ ಭೂಷಣ

ಪ್ರತಿಸ್ಪಂದನ

ಅರ್ಚನಾ ಅಶೋಕ್

ಸೆಲೆಬ್ರಿಟಿಗಳ ಸರಳತೆ ಮತ್ತು ಸಜ್ಜನಿಕೆ ಬಗ್ಗೆ ಶ್ರೀವತ್ಸ ಜೋಶಿಯವರು ‘ತಿಳಿರು ತೋರಣ’ ಅಂಕಣದಲ್ಲಿ (ವಿಶ್ವವಾಣಿ ಸೆ.೧೫) ಸೋದಾಹರಣವಾಗಿ ಬರೆದಿರುವುದು ಹೃದಯಸ್ಪರ್ಶಿಯಾಗಿದೆ. ಇದೇ ರೀತಿಯ ಒಂದು ಅನುಭವ ಇತ್ತೀಚೆಗೆ ನಮಗೂ ಆಗಿದ್ದು, ಅದನ್ನು ಇಲ್ಲಿ ಹಂಚಿಕೊಳ್ಳಲು ಬಯಸುವೆ.

ಬೆಂಗಳೂರಿನ ಶ್ರೀ ರಾಧಾಮಾಧವ ಕಲಾವೇದಿಕೆಯವರು ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ, ನಮ್ಮ ಪುಟ್ಟ ಮಕ್ಕಳಾದ ಅದಿತಿ ಮತ್ತು ಅನೀಶಾ ಸಂಸ್ಕೃತದಲ್ಲಿ ನಡೆಸಿಕೊಡುವ ಚಿಕ್ಕದೊಂದು ಹರಿಕಥಾ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕಾರ್ಯಕ್ರಮಕ್ಕೆ ಎರಡು ದಿನಗಳೀರುವಾಗ, ಅವರೊಡನೆ ಮೃದಂಗ ನುಡಿಸಲಿಕ್ಕೆ ನಿಯೋಜಿಸಲ್ಪಟ್ಟಿದ್ದವರು ತಮಗೆ ಬರಲಿಕ್ಕಾಗುವುದಿಲ್ಲ ಎಂದು ಹೇಳಿದರು. ಅವರು ಬೇರೆ ಯಾರನ್ನಾದರೂ ವ್ಯವಸ್ಥೆ ಕೂಡ ಮಾಡಿಕೊಡದ ಕಾರಣ ನಮಗೆ ಆತಂಕವಾಗಿತ್ತು. ಗಣಪತಿ ಹಬ್ಬದ ಸಮಯವಾಗಿದ್ದರಿಂದ ನಮಗೆ ಗೊತ್ತಿದ್ದ ಕಲಾವಿದರೆಲ್ಲರೂ ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದರು.

ಆಗ, ಅದಿತಿಯ ಸಂಗೀತಗುರು ಶಿಲ್ಪಾ ಶಶಿಧರ್ ಅವರು ಗಾನಕಲಾಶ್ರೀ ವಿದ್ವಾನ್ ಎ.ಎಸ್.ಎನ್. ಸ್ವಾಮಿಯವರಿಗೆ ಕರೆಮಾಡಿ ವಿಷಯ ತಿಳಿಸಿ, ‘ನಿಮ್ಮ ಶಿಷ್ಯರು ಯಾರಾದರೂ ಇದ್ದರೆ ಕಳುಹಿಸಿ ಸಹಾಯ ಮಾಡಬಹುದೇ?’ ಎಂದು ಕೇಳಿಕೊಂಡರು. ಕಾರ್ಯಕ್ರಮದ ವಿವರ ಕೇಳಿದ ಸ್ವಾಮಿಯವರು ಸ್ವತಃ ತಾವೇ ಬರುವುದಾಗಿ ತಿಳಿಸಿದರು. ಅದರಂತೆಯೇ ಬಂದರು. ಅದಿತಿ ಮತ್ತು ಅನೀಶಾ ಇಬ್ಬರೂ ಪಕ್ಕವಾದ್ಯಗಳೊಂದಿಗೆ ಹಾಡಿ ಪಳಗಿದವರಲ್ಲ; ಒಂದೂ
ರಿಹರ್ಸಲ್ ಇಲ್ಲದೆಯೇ ವೇದಿಕೆಯ ಮೇಲೆ ಅವರು ಕೂರಬೇಕಾಯ್ತು.

ಸ್ವಾಮಿಯವರು ಬಹಳ ಚೆನ್ನಾಗಿ ಕಾರ್ಯಕ್ರಮವನ್ನು ತೂಗಿಸಿಕೊಟ್ಟರು. ಲಾಲ್‌ಗುಡಿ ಜಯರಾಮನ್, ಮ್ಯಾಂಡೊ ಲಿನ್ ಶ್ರೀನಿವಾಸ್, ಡಾ. ಟಿ.ಎಲ್.ಸತ್ಯವತಿ, ಡಾ. ಎನ್.ರಮಣಿ ಮುಂತಾದ ಬಹುದೊಡ್ಡ ಕಲಾವಿದರಿಗೆ ಮೃದಂಗ, ಖಂಜೀರ ವಾದ್ಯಗಳ ಸಹಕಾರ ಕೊಟ್ಟಿರುವ ಸ್ವಾಮಿಯವರು, ಎಂದೂ ನೋಡಿರದ, ಕೇಳಿರದ, ಅದಿತಿ-ಅನೀಶಾರ ಕಾರ್ಯಕ್ರಮಕ್ಕೆ ಪಕ್ಕವಾದ್ಯ ನುಡಿಸಿದರು.

೨-೩ ಸಂಗೀತ ಕಛೇರಿಗಳನ್ನು ಮಾಡಿದ ವರು ಕೂಡ ತಮ್ಮದೊಂದು ‘ಸ್ಟ್ಯಾಂಡರ್ಡ್’ ಸೆಟ್ ಮಾಡಿಕೊಂಡು, ಸಣ್ಣ ಪುಟ್ಟದು ಅನಿಸುವ ಕಾರ್ಯಕ್ರಮಕ್ಕೆ ಒಪ್ಪದ ಈ ಕಾಲದಲ್ಲಿ, ಪುಟ್ಟ ಮಕ್ಕಳ ಕಾರ್ಯಕ್ರಮಕ್ಕೆ ಬಂದು, ಅವರ ಮಟ್ಟಕ್ಕೇ ನುಡಿಸಿ, ಪ್ರೋತ್ಸಾಹಿಸಿ ಆಶೀರ್ವದಿಸಿದ್ದು ಎಂದಿಗೂ ಮರೆಯಲಾಗದು. ‘ವಿದ್ಯೆಯು ವಿನಯದಿಂದ ಶೋಭಿಸುತ್ತದೆ’ ಎಂಬ ನುಡಿಯನ್ನು ಬದುಕಿ ತೋರುವ ಈ ಎಲ್ಲ ವ್ಯಕ್ತಿತ್ವಗಳನ್ನು ನಾವು ಅನುಸರಿ ಸುವಂತಾಗುವ ಸದ್ಬುದ್ಧಿಯನ್ನು ಭಗವಂತ ನಮಗೆ ಕರುಣಿಸಲಿ ಎಂದಷ್ಟೇ ಬೇಡಿಕೊಂಡೆವು.

(ಲೇಖಕಿ ಹವ್ಯಾಸಿ ಬರಹಗಾರ್ತಿ)

ಇದನ್ನೂ ಓದಿ: Srivathsajoshi Column: ಸೆಲೆಬ್ರಿಟಿಗಳ ಸರಳತನ, ಸಜ್ಜನಿಕೆ ಅರಿವಾದಾಗಿನ ಆನಂದ