Sunday, 15th December 2024

Land for jobs case: ಲಾಲೂಗೆ ಮತ್ತೆ ಕಾನೂನು ಸಂಕಷ್ಟ; ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಮನ್ಸ್‌

land for jobs

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ(Land for jobs case) ಸಂಬಂಧಿಸಿದಂತೆ ಮಾಜಿ ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ಹಾಗೂ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್‌(Tejashwi Yadav) ಅವರಿಗೆ ದಿಲ್ಲಿ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ. ಲಾಲೂ ಪ್ರಸಾದ್‌ ಯಾದವ್‌ ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ಭೂಮಿಯನ್ನು ಪಡೆದು ಅದರ ಬದಲಾಗಿ ಉದ್ಯೋಗವನ್ನು ನೀಡಿದ್ದ ಆರೋಪ ಕೇಳಿ ಬಂದಿತ್ತು.

ಈ ಹಗರಣಕ್ಕೆ ಸಂಬಂಧಿಸಿದಂತೆ ಜೂನ್‌ನಲ್ಲಿ, ಕೇಂದ್ರೀಯ ತನಿಖಾ ದಳ (ಸಿಬಿಐ) 38 ಅಭ್ಯರ್ಥಿಗಳು ಸೇರಿದಂತೆ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ಇತರ 77 ಜನರ ವಿರುದ್ಧ ನಿರ್ಣಾಯಕ ಚಾರ್ಜ್‌ಶೀಟ್ ಸಲ್ಲಿಸಿತ್ತು. ಲಾಲು ಪ್ರಸಾದ್ ಯಾದವ್ ಅವರು 2004 ರಿಂದ 2009 ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಹಣಕಾಸು ಹಾಗೂ ಭೂಮಿಯನ್ನು ಪಡೆದು ಅದರ ಬದಲಾಗಿ ವಿವಿಧ ರೈಲ್ವೆ ವಲಯಗಳಲ್ಲಿ ಗ್ರೂಪ್ “ಡಿ” ಹುದ್ದೆಗಳಲ್ಲಿ ವ್ಯಕ್ತಿಗಳನ್ನು ನೇಮಿಸಿದ್ದರು ಎಂದು ದೂರಲಾಗಿದೆ.

ಉದ್ಯೋಗ ಕೊಡಿಸಲು ಲಾಲೂ ಮತ್ತು ಅವರ ಕುಟುಂಬದ ನಿಯಂತ್ರಣದಲ್ಲಿರುವ ಕಂಪನಿಗಳಿಗೆ ಪಾಟ್ನಾದ ಜನ ತಮ್ಮ ತಮ್ಮ ಭೂಮಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಎನ್ನಲಾಗಿದೆ. ಇನ್ನು ರೈಲ್ವೇಯಲ್ಲಿ ಉದ್ಯೋಗ ಖಾಲಿ ಇರುವ ಬಗ್ಗೆ ಯಾವುದೇ ಜಾಹೀರಾತು ಆಗಲೀ ಅಥವಾ ಯಾವುದೇ ಪ್ರಕಟಣೆಯಾಗಲೀ ಸರ್ಕಾರ ನೀಡಿಲ್ಲ. ಅದರ ಹೊರತಾಗಿಯೂ ಅಲ್ಲಿ ನೇಮಕಾತಿ ನಡೆದಿದೆ. ಪಾಟ್ನಾದ ಎಲ್ಲಾ ನಿವಾಸಿಗಳು, ಮುಂಬೈ, ಜಬಲ್‌ಪುರ್, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದಂತಹ ನಗರಗಳಲ್ಲಿ ನೆಲೆಗೊಂಡಿರುವ ವಿವಿಧ ವಲಯ ರೈಲ್ವೆಗಳಲ್ಲಿ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.

ಪ್ರಕರಣವೇನು?
2004 ಮತ್ತು 2009ರ ನಡುವೆ ಲಾಲು ಪ್ರಸಾದ್‌ ಯಾದವ್ ಅವರು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಆಡಳಿತದಲ್ಲಿ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿತ್ತು. ಕೇಂದ್ರೀಯ ತನಿಖಾ ದಳ (ಸಿಬಿಐ) ರೈಲ್ವೆಯಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಲಾಗಿತ್ತು. ನೇಮಕಾತಿಗಾಗಿ ಭಾರತೀಯ ರೈಲ್ವೇಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿತ್ತು. ರೈಲ್ವೆಯಲ್ಲಿ ಉದ್ಯೋಗಗಳನ್ನು ಪಡೆದವರು ನೇರವಾಗಿ ಅಥವಾ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಮೂಲಕ ಲಾಲು ಅವರ ಕುಟುಂಬ ಸದಸ್ಯರಿಗೆ ಹೆಚ್ಚು ಕಡಿಮೆ ಪುಕ್ಕಟೆಯಾಗಿ ತಮ್ಮ ಭೂಮಿಯನ್ನು ಮಾರಾಟ ಮಾಡಿಕೊಂಡಿದ್ದರು.

ಸಿಬಿಐ ಮೇ 18, 2022 ರಂದು ಆಗಿನ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದೆ. ಡಿಸೆಂಬರ್ 2023 ರಲ್ಲಿ, ಜಾರಿ ನಿರ್ದೇಶನಾಲಯವು (ED) ತೇಜಸ್ವಿ ಯಾದವ್ ಅವರಿಗೆ ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಿತು. ಆದರೆ ಲಾಲು ಯಾದವ್ ಕುಟುಂಬ ಈ ಆರೋಪಗಳನ್ನು ನಿರಾಕರಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ.

ಈ ಸುದ್ದಿಯನ್ನೂ ಓದಿ: ಪ್ರಧಾನಿ ಮೋದಿ ಸೋಲನ್ನಪ್ಪುವುದು ಖಚಿತ: ಲಾಲೂ ಪ್ರಸಾದ್‌ ಯಾದವ್‌