Monday, 25th November 2024

Milk Production: ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಣೆ

ತುಮಕೂರು: ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕ(Milk Production) ರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40 ಲಕ್ಷ ಲೀಟರ್ ಹಾಲನ್ನು ಶೇಖರಣೆಯಾಗುತ್ತಿದೆ ಎಂದು ತುಮಕೂರು ಹಾಲು ಒಕ್ಕೂಟಕದ ಆಡಳಿತಾಧಿಕಾರಿ ಡಾ. ಜಿ. ಉಮೇಶ್ ಹೇಳಿದರು.

ನಗರದ ಹೊರವಲಯದ ಸಿದ್ದಾರ್ಥ ನಗರದಲ್ಲಿರುವ ಡಾ. ಎಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ನಡೆದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಳೆದ ಜೂನ್ 28 ರಂದು ಜಿಲ್ಲೆಯಲ್ಲಿ 980836 ಲೀಟರ್ ಹಾಲು ಶೇಖರಣೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

2023-24ನೇ ಸಾಲಿನಲ್ಲಿ 1053.80 ಕೋಟಿ ರೂ.ಗಳನ್ನು ಹಾಲು ಉತ್ಪಾದಕರುಗಳಿಗೆ ಬಟವಾಡೆ ರೂಪದಲ್ಲಿ ಪಾವತಿಸ ಲಾಗಿದೆ. ಪ್ರತಿ ಕೆ.ಜಿ. ಹಾಲಿಗೆ ವಾರ್ಷಿಕ ಸರಾಸರಿ 35.20 ರಂತೆ ಹಾಲಿಗೆ ಖರೀದಿ ದರ ನೀಡಲಾಗಿದೆ ಎಂದು ಹೇಳಿದರು.

ತುಮುಲ್ ವ್ಯವಸ್ಥಾಪಕ ನಿರ್ದೇಶ ಜಿ. ಶ್ರೀನಿವಾಸನ್ ಮಾತನಾಡಿ, ಸಹಕಾರ ಸಚಿವ ಕೆ.ಎನ್. ರಾಜಣ್ಣ(K N Rajanna) ರವರ ಕನಸಿನ ಕೂಸಾದ ರೈತರಿಗೆ ಜಿಡ್ಡಿನ ಆಧಾರದ ಮೇಲೆ ಹಣವನ್ನು ಕೊಡುವ ಯೋಜನೆಯನ್ನು ಸಾಕಾರಗೊಳಿಸಲು ರಾಜ್ಯದ 14 ಒಕ್ಕೂಟಗಳ ಪೈಕಿ ತುಮಕೂರು ಹಾಲು ಒಕ್ಕೂಟವು ಮುಂಚೂಣಿ ಯಲ್ಲಿದೆ. ತಾಂತ್ರಿಕವಾಗಿ ಒಕ್ಕೂಟವು ಸದೃಢ ಗೊಳ್ಳುತ್ತಿದೆ ಎಂದರು.

ಒಕ್ಕೂಟದಿಂದ ಸಂಘದ ನಿರ್ವಹಣೆಗೆ ನೀಡುತ್ತಿದ್ದ ವಂತಿಕೆಯನ್ನು ಕಳೆದ ಜನವರಿ 16 ರಿಂದ 50 ಪೈಸೆಯಿಂದ 70 ಪೈಸೆಗೆ ಹೆಚ್ಚಿಸಲಾಗಿದೆ. 2024-25ನೇ ಸಾಲಿನಲ್ಲಿ ವಂತಿಕೆಯನ್ನು ಪುನಃ 20 ಪೈಸೆ ಹಾಗೂ ಂಒಅS ತಂತ್ರಾಂಶದ ನಿರ್ವಹಣೆಗೆ 10 ಪೈಸೆ ಹೆಚ್ಚಿಸಿ ಒಟ್ಟು 1 ರೂ. ಗಳನ್ನು ಸಂಘದ ನಿರ್ವಹಣೆಗೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ ರೈತರ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ತುಮಕೂರು ಜಿಲ್ಲಾ ರೈತರ ಮತ್ತು ಎಂ.ಪಿ.ಸಿ.ಎಸ್. ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಮಹಿಳಾ, ವಿದ್ಯಾರ್ಥಿನಿಯರ ವಸತಿ ನಿಲಯ ದಲ್ಲಿ 260 ವಿದ್ಯಾರ್ಥಿನಿಯರು ಇದರ ಅನುಕೂಲವನ್ನು ಪಡೆಯುತ್ತಿದ್ದಾರೆ. ಸರ್ಕಾರ ಹಾಗೂ ಕ.ಹಾ.ಮ ನೆರವಿ ನೊಂದಿಗೆ 400 ವಿದ್ಯಾರ್ಥಿನಿಯರ ವಸತಿ ನಿಲಯದ ನೂತನ ಕಟ್ಟಡವನ್ನು ನಿರ್ಮಿಸುವ ಸಲುವಾಗಿ ಶಂಕು ಸ್ಥಾಪನಾ ಕಾರ್ಯಕ್ರಮವನ್ನು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ (Dr G Parameshwar) ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ(K N Rajanna)ರವರು ನೆರವೇರಿಸಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ತಿಳಿಸಿದರು. 

ಒಕ್ಕೂಟದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ತುಮಕೂರು ಮತ್ತು ಬೆಂಗಳೂರು ಮಾರುಕಟ್ಟೆ ವ್ಯಾಪ್ತಿಯಲ್ಲಿ ವರದಿ ಸಾಲಿನಲ್ಲಿ ದಿನವಹಿ ಸರಾಸರಿ 313130 ಲೀಟರ್ ಹಾಲು ಮತ್ತು 86,759 ಕೆ.ಜಿ. ಮೊಸರು ಮಾರಾಟ ಮಾಡಲಾಗಿದೆ. ಅಲ್ಲದೆ ಮುಂಬೈ ಮಾರುಕಟ್ಟೆಯಲ್ಲಿ ದಿನವಹಿ ಸರಾಸರಿ 199600 ಲೀಟರ್ ಹಾಲು ಮಾರಾಟವಾಗುತ್ತಿದ್ದು, ಇದನ್ನು 2.50 ಲಕ್ಷ ಲೀಟರ್‌ಗಳಿಗೆ ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. 

ಶೇಖರಣೆಗೆ ತಕ್ಕಂತೆ ಮಾರಾಟ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ರಾಜ್ಯದ ನೂತನ ಮಾರುಕಟ್ಟೆ ಪ್ರದೇಶ ಗಳಾದ ನಾಸಿಕ್, ಔರಂಗಾಬಾದ್, ಅಹ್ಮದ್‌ನಗರ, ಶಿರಡಿ ಪ್ರದೇಶಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲವನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಹಾಲು ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಸಾಮಾನ್ಯ ಸಂಘ, ಜಿಲ್ಲಾ ಮಟ್ಟದ ಅತ್ಯುತ್ತಮ ಮಹಿಳಾ ಸಂಘ, ಅತಿ ಹೆಚ್ಚು ಹಾಲು ಶೇಖರಿಸಿದ ತಾಲ್ಲೂಕು, ಅತಿ ಹೆಚ್ಚು ಗುಣಮಟ್ಟದ ಹಾಲು ಶೇಖರಿಸಿದ ತಾಲ್ಲೂಕು, ಅತಿ ಹೆಚ್ಚು ಹಾಲು ಶೇಖರಿಸಿದ ಹಾಲು ಉತ್ಪಾದಕರ ಸಹಕಾರ ಸಂಘ, ಅತಿ ಹೆಚ್ಚು ಗುಣಮಟ್ಟದ ಹಾಲು ಶೇಖರಿಸಿದ ಹಾಲು ಉತ್ಪಾದಕರ ಸಹಕಾರ ಸಂಘ, ತಾಲ್ಲೂಕು ಮಟ್ಟದ ಅತ್ಯುತ್ತಮ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಮಹಿಳಾ ಸದಸ್ಯ, ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಪುರುಷ ಸದಸ್ಯ ಹಾಗೂ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಕ್ಕೂಟದ ಅಧಿಕಾರಿ, ಸಿಬ್ಬಂದಿ ಹಾಗೂ ಸದಸ್ಯರ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಎ.ಎಂ.ಸಿ.ಎಸ್ ತಂತ್ರಾ0ಶವನ್ನು ತಾಲ್ಲೂಕುಗಳಲ್ಲಿ ಸಾಕಾರಗೊಳಿಸಿದ್ದಕ್ಕಾಗಿ ಕ್ಷೇತ್ರ ವಿಸ್ತರಣಾಧಿಕಾರಿಗಳು ಹಾಗೂ ಕೋರ್ ಕಮಿಟಿ ಮುಖ್ಯಸ್ಥರುಗಳಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಹೈನುಗಾರ ರೈತರ ಆರೋಗ್ಯ ತಪಾಸಣೆ ಮಾಡಲಾಯಿತು.

ಸಭೆಯಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕರುಗಳಾದ ತಿಮ್ಮನಾಯಕ್, ವಿದ್ಯಾನಂದ್ ಎಚ್.ಎಂ., ಗಿರೀಶ್, ರಾಜು, ಚಂದ್ರಶೇಖರ್, ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಟಗಳ ಅಧ್ಯಕ್ಷರು, ಸದಸ್ಯರು ಹಾಗೂ ಒಕ್ಕೂಟದ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

ಇದನ್ನೂ ಓದಿ: Milk Price Hike: ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್‌; ಹಾಲಿನ ದರ ಹೆಚ್ಚಳ ಸುಳಿವು ಕೊಟ್ಟ ಸಿಎಂ!