Monday, 25th November 2024

Ramanand Sharma Column: ಬಿಗಡಾಯಿಸುತ್ತಿದೆ ಭಿನ್ನಮತ, ಕನಸಾಗುತ್ತಿದೆ ಸಹಮತ

ವಿಶ್ಲೇಷಣೆ

ರಮಾನಂದ ಶರ್ಮಾ

ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಕಳೆದೊಂದು ರ್ಷದಲ್ಲಿ ಇದು ತಾರಕಕ್ಕೇರಿ ಪಕ್ಷಕ್ಕೆ ಮರ್ಮಾಘಾತ ನೀಡುವ ಸಾಧ್ಯತೆಗಳು ಕಾಣುತ್ತಿವೆ. ವಿಚಿತ್ರವೆಂದರೆ, ಶಿಸ್ತು ಉಲ್ಲಂಘನೆ ಯಂಥ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಪಕ್ಷದ ವರಿಷ್ಠರು ಈ ಭಿನ್ನ ಮತಕ್ಕೆ ಮದ್ದು ಅರೆಯುವು ದನ್ನು ಆದ್ಯತಾ ವಿಷಯವಾಗಿ ಪರಿಗಣಿಸಿದಂತಿಲ್ಲ.

ಶಿಸ್ತಿನ ಪಕ್ಷ’ ಎಂಬ ಹಣೆಪಟ್ಟಿ ಲಗತ್ತಿಸಿಕೊಂಡಿರುವ ಮತ್ತು ಲಾಗಾಯ್ತಿನಿಂದ ಆರಂಭಿಸಿ ತೀರಾ ಇತ್ತೀಚಿನವರೆಗೆ ಅದನ್ನು ಜತನದಿಂದ ಕಾಯ್ದುಕೊಂಡು ಬಂದ ಪಕ್ಷವೆಂದೇ ಹೇಳಲಾಗುವ ಬಿಜೆಪಿಯ ರಾಜ್ಯ ಘಟಕದಲ್ಲಿ ಶಿಸ್ತು ಎಂಬುದು ಇಂಚಿಂಚಾಗಿ ಕಳೆದುಹೋಗುತ್ತಿದೆ, ‘ಶಿಸ್ತು ಎಂದರೇನು?’ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕರ್ನಾಟಕದ ಬಿಜೆಪಿ ಇತಿಹಾಸದಲ್ಲಿ ಯಡಿಯೂರಪ್ಪನವರ ‘ಕರ್ನಾಟಕ ಜನತಾಪಕ್ಷ’ (ಕೆಜೆಪಿ) ಎಂಬ ದುಸ್ಸಾಹಸ ವನ್ನು ಹೊರತು ಪಡಿಸಿದರೆ, ಇಂಥ ಭಿನ್ನಮತ ಕಂಡುಬಂದಿದ್ದು ವಿರಳ. ರಾಜ್ಯ ಬಿಜೆಪಿಯಲ್ಲಿನ ಭಿನ್ನಮತವು ವಾಸ್ತವದಲ್ಲಿ ಒಂದು ದಿಢೀರ್ ಬೆಳವಣಿಗೆಯಾಗಿರದೆ ಬಹುಕಾಲದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಅಪಸವ್ಯ ವಾಗಿದೆ. ಯಡಿಯೂರಪ್ಪನವರ ಪುತ್ರ ವಿಜಯೇಂದ್ರರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ ಮೇಲೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಅನ್ನು ಯಡಿಯೂರಪ್ಪರ ಮತ್ತೊಬ್ಬ ಪುತ್ರ ರಾಘವೇಂದ್ರರಿಗೆ ನೀಡಿದ ಮೇಲೆ ಸದರಿ ಭಿನ್ನಮತ ಹೆಚ್ಚಿದ್ದು, ದಿನದಿಂದ ದಿನಕ್ಕೆ ತಾರಕಕ್ಕೇರು ತ್ತಲೇ ಇದೆ.

ಸದ್ಯೋಭವಿಷ್ಯದಲ್ಲಿ ಅದು ತಣ್ಣಗಾಗುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ರಾಜಕೀಯ ಪಕ್ಷಗಳಲ್ಲಿ ಭಿನ್ನಮತ ಸಹಜ. ಇದು ಬಹುತೇಕ ಸಂದರ್ಭಗಳಲ್ಲಿ ಸಿದ್ಧಾಂತದ ಆಧಾರದ ಮೇಲೆ ಹುಟ್ಟಿಕೊಳ್ಳುತ್ತದೆ; ಆದರೆ ಬಿಜೆಪಿಯ ಸದ್ಯದ ಬಿಕ್ಕಟ್ಟಿನಲ್ಲಿ ಭಿನ್ನಮತಕ್ಕೆ ಕಾರಣವಾಗಿರುವುದು ಸಿದ್ಧಾಂತವಲ್ಲ, ಬದಲಿಗೆ ವ್ಯಕ್ತಿಗತ ಮೇಲುಗೈ ವಿಷಯ. ಈ ವಿಷಯವೇ ತಾಂಡವ ನೃತ್ಯವನ್ನು ಆಡಿಸುತ್ತಿದ್ದು, ಅದಕ್ಕೆ ಒಂದಷ್ಟು ಪಕ್ಕವಾದ್ಯಗಳೂ ದೊರಕುತ್ತಿರುವುದು ವಿಶೇಷ. ಬಿಜೆಪಿಯು ಪೂರ್ಣ ಬಹುಮತದೊಂದಿಗೆ 2014ರಲ್ಲಿ ಕೇಂದ್ರದಲ್ಲಿ ಗದ್ದುಗೆಯೇರಿದ ನಂತರ, ಪ್ರಧಾನಿ ಮೋದಿಯವರಿಂದ ಮೊದಲ್ಗೊಂಡು ಪಕ್ಷದ ಬಹುತೇಕ ಧುರೀಣರು ವಿರೋಧ ಪಕ್ಷಗಳ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣವನ್ನು ಟೀಕಿಸುವುದು ಅವ್ಯಾಹತವಾಗಿ ನಡೆದಿದೆ.

ಆದರೆ ಇದೇ ಕುಟುಂಬ ರಾಜಕಾರಣಕ್ಕೆ ಕರ್ನಾಟಕದ ಬಿಜೆಪಿಯು ಬಲಿಯಾಗುತ್ತಿರುವುದು ವಿಪರ್ಯಾಸ. ಕಳೆದ ಕೆಲ ವರ್ಷಗಳಿಂದ ಇದು ಸಾಕಷ್ಟು ಸದ್ದು ಮಾಡುತ್ತಿದ್ದರೂ, ಕಳೆದೊಂದು ವರ್ಷದಲ್ಲಿ ಇದು ತಾರಕಕ್ಕೇರಿ ಪಕ್ಷಕ್ಕೆ
ಮರ್ಮಾಘಾತ ನೀಡುವ ಸಾಧ್ಯತೆಗಳು ಕಾಣುತ್ತಿವೆ. ವಿಚಿತ್ರವೆಂದರೆ, ಶಿಸ್ತು ಉಲ್ಲಂಘನೆಯಂಥ ವಿಚಾರವನ್ನು
ಗಂಭೀರವಾಗಿ ಪರಿಗಣಿಸುತ್ತಿದ್ದ ಪಕ್ಷದ ವರಿಷ್ಠರು ಕರ್ನಾಟಕದಲ್ಲಿ ಹೊಗೆಯಾಡುತ್ತಿರುವ ಭಿನ್ನಮತಕ್ಕೆ ಮದ್ದು ಅರೆಯುವುದನ್ನು ಆದ್ಯತಾ ವಿಷಯವಾಗಿ ಪರಿಗಣಿಸಿರುವಂತೆ ಕಾಣುತ್ತಿಲ್ಲ.

ಭಿನ್ನಮತೀಯ ಚಟುವಟಿಕೆಗಳು ಮತ್ತು ಪಕ್ಷದ ಭವಿಷ್ಯಕ್ಕೆ ಮಾರಕವಾಗಿರುವ ಕೆಲ ಧುರೀಣರ ಹೇಳಿಕೆಗಳು ರಾಷ್ಟ್ರೀಯ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದ್ದಂತೆ, ಕೆಲವರನ್ನು ವರಿಷ್ಠರು ದೆಹಲಿಗೆ ಕರೆಸಿಕೊಂಡು ಮಾತನಾಡು ತ್ತಾರೆ. ಬಿಕ್ಕಟ್ಟು ಬಗೆಹರಿಯಲಿದೆ ಎಂಬ ಗ್ರಹಿಕೆಯಲ್ಲಿ ಭಿನ್ನಮತೀಯರ ದನಿ ಮತ್ತು ಕೆಲ ನಾಯಕರ ವಿವಾದಾತ್ಮಕ ಹೇಳಿಕೆಗಳು ಒಂದೆರಡು ದಿನ ಬಂದ್ ಆಗುತ್ತವೆ; ‘ಶಿಸ್ತಿನ ಪಕ್ಷದ ಸಿಪಾಯಿಗಳು ಸರಿದಾರಿಗೆ ಬಂದರು’ ಎಂದು ಜನರು
ನಿಟ್ಟುಸಿರು ಬಿಡುತ್ತಿರುವಂತೆ, ‘ಹೋದೆಯಾ ಪಿಶಾಚಿ ಅಂದರೆ, ಬಂದೆ ಗವಾಕ್ಷೀಲಿ’ ಎನ್ನುವಂತೆ ಒಂದೆರಡು
ದಿನದಲ್ಲಿ ಭಿನ್ನದನಿ ಮತ್ತೆ ಭುಗಿಲೇಳುತ್ತದೆ!

ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಅದೆಷ್ಟು ತಾರಕಕ್ಕೇರಿದೆಯೆಂದರೆ, ಅದರ ‘ಮಾತೃಸಮಾನ’ ಸಂಘಟನೆಯಾದ
ಆರ್‌ಎಸ್‌ಎಸ್‌ನ ರಾಜ್ಯ ನಾಯಕರು ಎಲ್ಲರನ್ನೂ ಕರೆದು ಕೂರಿಸಿ ಸಂಧಾನ ನಡೆಸಿ ತೇಪೆ ಹಚ್ಚುವ ಕೆಲಸ ಮಾಡಿ
ದರೂ ಗಿಟ್ಟಲಿಲ್ಲ. ಈ ಸಂಧಾನ ನಡೆದ 24 ಗಂಟೆಯೊಳಗಾಗಿ, ಬಸನಗೌಡ ಪಾಟೀಲ್ ಯತ್ನಾಳರ ಗುಂಪು ಪ್ರತ್ಯೇಕ ವಾಗಿ ರಾಜ್ಯಪಾಲರನ್ನು ಭೇಟಿಯಾಗಿ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಮನವಿ ಸಲ್ಲಿಸಿದೆ ಮತ್ತು ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಸಿದ್ಧವಾಗುತ್ತಿದೆ.

ಇದನ್ನು ಅಶಿಸ್ತು ಎಂದು ಪರಿಗಣಿಸಬೇಕೇ ಎಂದು ಪಕ್ಷ ಚಿಂತನ-ಮಂಥನ ನಡೆಸುತ್ತಿರುವಾಗಲೇ ಹಿರಿಯ
ಶಾಸಕರೊಬ್ಬರು, “ಬಿಜೆಪಿಗೆ ’ಭ್ರಷ್ಟ’ ಎಂಬ ಲೇಬಲ್ ಅಂಟಿಕೊಳ್ಳುವಂತೆ ಮಾಡಿದವರು ಬಿ.ವೈ.ವಿಜಯೇಂದ್ರ,
ಅವರಿಗೆ ಪಕ್ಷದ ಸಿದ್ಧಾಂತಗಳೇ ಗೊತ್ತಿಲ್ಲ. ಅವರನ್ನು ನಮ್ಮ ನಾಯಕ ಎಂದು ಒಪ್ಪಲು ಸಾಧ್ಯವೇ ಇಲ್ಲ. ಬಿಜೆಪಿ ಯಲ್ಲಿ ಒಬ್ಬರ ಕೈಯಲ್ಲಿ/ಕಪಿಮುಷ್ಟಿಯಲ್ಲಿ ಆಡಳಿತ ಇರಬಾರದು, ಸಾಮೂಹಿಕ ನಾಯಕತ್ವ ಬರಬೇಕು” ಎಂದು ಗುಡುಗಿದ್ದಾರೆ.

ಅವರಿಗೆ ವಿಜಯೇಂದ್ರರ ಬಗ್ಗೆ ಒಲವು ಇಲ್ಲದಿರುವುದು ಎಲ್ಲರಿಗೂ ತಿಳಿದ ವಿಷಯ; ಆದರೆ ಅವರಿಬ್ಬರ ಸಂಬಂಧ ಇಷ್ಟೊಂದು ಹಳಸಿದೆ ಎಂಬುದು ಗೊತ್ತಾಗಿದ್ದು ಈ ಹೇಳಿಕೆಯಿಂದಲೇ. ಸದರಿ ಹಿರಿಯ ಶಾಸಕರ ಹೇಳಿಕೆಯಿಂದ ವರಿಷ್ಠರು ಚಕಿತಗೊಂಡಿದ್ದಾರಂತೆ. ಈ ನೇರ-ನಿಷ್ಠುರ ಮಾತಿನ ವೈಖರಿ ನೋಡಿದರೆ ವಿಜಯೇಂದ್ರರನ್ನು ಬದಲಾ ಯಿಸುವುದನ್ನು ಬಿಟ್ಟು ಪಕ್ಷಕ್ಕೆ ಬೇರೆ ದಾರಿಯಿಲ್ಲ ಎಂಬ ಖಡಕ್ ಸಂದೇಶ ವರಿಷ್ಠರಿಗೆ ರವಾನೆಯಾದಂತೆ ತೋರುತ್ತದೆ. ಈ ಬಿಕ್ಕಟ್ಟನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ಅದು ಮತ್ತಷ್ಟು ಬಿಗಡಾಯಿಸಿ ಒಬ್ಬ ನಾಯಕನಿಗಾಗಿ ಇಡೀ ಪಕ್ಷಕ್ಕೇ ಲಕ್ವ ಬಡಿಯುವುದನ್ನು ನೋಡಬೇಕಾಗುತ್ತದೇನೋ ಎಂಬ ಆತಂಕ ಹಲವರಲ್ಲಿ ಮನೆಮಾಡಿದೆ.

ಕರ್ನಾಟಕದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಆರಂಭಿಸಿದಾಗ ಯತ್ನಾಳರು ಒಬ್ಬಂಟಿಯಾಗಿ
ದ್ದರು, ಆದರೆ ಅವರ ಏಕಾಂಗಿತನವೀಗ ದೂರವಾಗಿದೆ.

ಕಾರಣ, ಅವರ ಬೆನ್ನಿಗೆ ಪ್ರತಾಪ ಸಿಂಹ, ಜೊಲ್ಲೆ, ಸಿದ್ದೇಶ್ವರ್, ಲಿಂಬಾವಳಿ, ಕುಮಾರ್ ಬಂಗಾರಪ್ಪ ಬಿ.ಪಿ.ಹರೀಶ್
ಮುಂತಾದವರಿದ್ದಾರೆ. ಅವರೆಂದೂ ತಮ್ಮ ಹಿಂದಿರುವ ಸಂಖ್ಯಾಬಲಕ್ಕೆ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ.
ಇನ್ನು ಕೆಲವರು ಪರದೆಯ ಹಿಂದಿನಿಂದ ಇಣುಕುತ್ತಿದ್ದು, ಕಾಲ ಪಕ್ವವಾದಾಗ ಹೊರಬರಬಹುದು. ‘ನೀವು ಮುಂದೆ
ಹೋಗಿ, ನಾವು ಹಿಂದಿನಿಂದ ಬರುತ್ತೇವೆ’ ಎನ್ನುವವರೂ ಇಲ್ಲದಿಲ್ಲ. ಮತ್ತೆ ಕೆಲವರು, ರಾಜಕೀಯದಲ್ಲಿ ತೀರಾ
ಮಾಮೂಲಾಗಿರುವ ‘ಕಾದುನೋಡುವ ತಂತ್ರ’ಕ್ಕೆ ಶರಣಾಗಿರಬಹುದು.

ವಿಜಯೇಂದ್ರರ ನಾಯಕತ್ವಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ ಎನ್ನಲಾಗದು; ಪರಿಸ್ಥಿತಿಯ ಒತ್ತಡದಿಂದಾಗಿ ಕೆಲವರು
ಹಾಗೆ ಗೋಣುಹಾಕಿರಬಹುದು, ಪಕ್ಷದ ಶಿಸ್ತಿನ ಹೆಸರಲ್ಲಿ ತಲೆಬಾಗಿರಬಹುದು. ತಮ್ಮ ಹೇಳಿಕೆಗೆ ಬದ್ಧರಾಗಿರುವ
ಭಿನ್ನಮತೀಯರು ಇದಕ್ಕೆ ಹೊರತಾಗಿ ಬೇರಾವುದೇ ಸೂತ್ರಕ್ಕೆ ಒಪ್ಪುವ ಸಾಧ್ಯತೆ ಕಾಣುತ್ತಿಲ್ಲ. ಯತ್ನಾಳರ
ಹೋರಾಟಕ್ಕೆ ಈಗಾಗಲೇ ವರ್ಷಗಳು ಸಂದಿವೆ. ಅವರ ಹೋರಾಟವಿನ್ನೂ ನಿರೀಕ್ಷಿತ ಯಶಸ್ಸನ್ನು ಕಂಡಿಲ್ಲವಾ
ದರೂ, ಛಲಬಿಡದ ತ್ರಿವಿಕ್ರಮನಂತೆ ತಮ್ಮ ಹೋರಾಟವನ್ನು ಅವರು ಏಕಾಗ್ರತೆಯಿಂದ ಮುಂದುವರಿಸಿದ್ದಾರೆ.
ಪಕ್ಷದ ವರಿಷ್ಠರ ಎಚ್ಚರಿಕೆ, ರಾಜ್ಯ ನಾಯಕರ ದೂರುಗಳು ಮತ್ತು ಸಂಭಾವ್ಯ ಶಿಸ್ತುಕ್ರಮಗಳೂ ಅವರನ್ನು ವಿಚಲಿತರ
ನ್ನಾಗಿ ಮಾಡದಿರುವುದು ಆಶ್ಚರ್ಯಕರ (ಅದರ ಬಗೆಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನಿ!). ವಿಪರ್ಯಾಸ ವೆಂದರೆ, ಅವರಿಗೆ ಈವರೆಗೂ ಒಂದೇ ಒಂದು ನೋಟಿಸ್ ಜಾರಿಯಾಗಿಲ್ಲವಂತೆ.

ತಮ್ಮ ನೇರಾನೇರ ಮಾತು ಹಾಗೂ ಖಡಕ್ ವರ್ತನೆಯ ಹೊರತಾಗಿಯೂ ಯತ್ನಾಳರು ಪಕ್ಷದ ವರಿಷ್ಠರಿಂದ ಶಿಸ್ತು ಕ್ರಮಕ್ಕೆ ಒಳಗಾಗದಿರುವುದನ್ನು ಕಂಡು ರಾಜ್ಯದ ಕೆಲ ನಾಯಕರು ಚಕಿತಗೊಂಡಿದ್ದಾರೆ ಎನ್ನಲಾಗುತ್ತದೆ. ಬಹುಶಃ ಇದೇ ಕಾರಣಕ್ಕೋ ಏನೋ ಯತ್ನಾಳರ ವಿರುದ್ಧ ಯಾವ ನಾಯಕರೂ ಬಾಯಿ ಬಿಡುತ್ತಿಲ್ಲ; ‘ಸಮಯ ಬಂದಾಗ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ’ ಎಂದು ಹೇಳಿ ಅವರು ವಿಷಯವನ್ನು ಅಲ್ಲಿಗೇ ಮೊಟಕುಗೊಳಿಸುತ್ತಾರೆ.

ಯತ್ನಾಳರ ಹೋರಾಟದ ಬಗ್ಗೆ ವರಿಷ್ಠರಲ್ಲಿ ಹಲವರಿಗೆ ಸಹಾನುಭೂತಿ ಇರುವುದರಿಂದಲೇ ಅವರ ಮೇಲೆ ಕ್ರಮ
ಕೈಗೊಳ್ಳಲು ಮೀನ-ಮೇಷ ಎಣಿಸುತ್ತಾರೆ ಎನ್ನುವವರೂ ಇದ್ದಾರೆ. ತಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸುವ
ಯತ್ನಾಳರ ದೃಢನಿಲುವಿನ ಬಗೆಗೆ ಹಲವರಲ್ಲಿ ಮೆಚ್ಚುಗೆ/ ಅಚ್ಚರಿ ಇದ್ದರೂ, ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳು ವುದಕ್ಕೆ ವರಿಷ್ಠರು ಮಾಡುತ್ತಿರುವ ವಿಳಂಬದಿಂದಾಗಿ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಮರ್ಮಾಘಾತ ವಾಗಬಹುದು ಎಂಬ ಆತಂಕವೂ ಅವರಲ್ಲಿ ಮನೆಮಾಡಿದೆ.

ವಿಳಂಬಿಸಿದಷ್ಟೂ ಭಿನ್ನಮತೀಯರ ಸಂಖ್ಯೆ ಹೆಚ್ಚುತ್ತದೆ, ಅದರಿಂದಾಗಿ ಪಕ್ಷದ ತಳಹದಿ ಅಲುಗಾಡಬಹುದು ಎಂಬ
ಗ್ರಹಿಕೆ ಅವರ ಈ ಆತಂಕಕ್ಕೆ ಕಾರಣ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಗಳಾಗಿದ್ದ ಕಾಲಘಟ್ಟದಲ್ಲಿ, ಸಂಪುಟ ವಿಸ್ತರಣೆ/ ಪುನಾರಚನೆಯ ವಿಷಯದಲ್ಲಿ ಸುದೀರ್ಘವಾಗಿ ನಡೆದ ‘ಇಂದಲ್ಲ ನಾಳೆ’ ಎಂಬ ಪ್ರಹಸನದಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿ ಅಧಿಕಾರ ಕೈತಪ್ಪಿತು; ಇದನ್ನು ಮನದಲ್ಲಿಟ್ಟು ಕೊಂಡು ವರಿಷ್ಠರು ಈ ಬಿಕ್ಕಟ್ಟಿಗೆ ಶೀಘ್ರವಾಗಿ ಅಂತ್ಯಹಾಡಬೇಕು ಎಂಬುದು ಇಂಥವರ ಆಗ್ರಹ.

ಯತ್ನಾಳರಂತೂ ತಾವು ಮುಂದಿಟ್ಟ ಕಾಲನ್ನು ಯಾವುದೇ ಸಂದರ್ಭದಲ್ಲಿ ಹಿಂತೆಗೆದುಕೊಳ್ಳುವ ಸಾಧ್ಯತೆ ಕಮ್ಮಿ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಆತಂಕ ಎದುರಾದರೆ ಅದಕ್ಕೆ ಕಾರಣರಾಗುವುದು ಬಹುಶಃ ವರಿಷ್ಠರೇ ಹೊರತು ರಾಜ್ಯದ ನಾಯಕರಲ್ಲ. ‘ನಾಳೆ ಮಾಡುವುದನ್ನು ಇಂದು ಮಾಡು, ಇಂದು
ಮಾಡುವುದನ್ನು ಈ ಕ್ಷಣ ಮಾಡು’ ಎಂಬ ಗಾಂಧಿ ತತ್ವವನ್ನು ಮರೆತರೆ ಅದು ಪಕ್ಷಕ್ಕೆ ದುಬಾರಿಯಾಗಬಹುದು.

ಲೇಖಕರು ಅರ್ಥಿಕ ಮತ್ತು ರಾಜಕೀಯ
ವಿಶ್ಲೇಷಕರು)

ಇದನ್ನೂ ಓದಿ: ಕರುನಾಡಿನಲ್ಲಿ ’ಕಾಂತಾರಾ’ ಬೆನ್ನಲ್ಲೇ ಕಿರುತೆರೆಯ ’ಕನ್ನಡತಿ’ ಹವಾ