Friday, 22nd November 2024

Adarsh Shetty Column: ಸಂಚುಕೋರರ ಹೆಡೆಮುರಿ ಕಟ್ಟಿ

ಅಭಿಮತ

ಆದರ್ಶ್‌ ಶೆಟ್ಟಿ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಇತ್ತೀಚೆಗೆ ಗಣೇಶನ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಕೇರಳದ ನಿಷೇಧಿತ ಸಂಘಟನೆಯೊಂದರ ಪಾತ್ರವಿರುವುದರ ಬಗ್ಗೆ ಅನುಮಾನಗಳು ಮೂಡಿವೆ. ಪೆಟ್ರೋಲ್ ಬಾಂಬ್
ಎಸೆದು ಸಿಕ್ಕ ಸಿಕ್ಕ ಅಂಗಡಿಯ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡಿರುವುದು, ಹಿಂದೂಗಳ ಮೇಲೆ ಹಲ್ಲೆ ನಡೆಸಿರು ವುದು ಇವೆಲ್ಲವೂ ಪೂರ್ವನಿಯೋಜಿತ ಕೃತ್ಯಗಳೆಂದೇ ಮೇಲ್ನೋಟಕ್ಕೆ ಹೇಳಬಹುದು.

ಗಣೇಶನ ಮೆರವಣಿಗೆಗೆ ಹತ್ತಾರು ಷರತ್ತು/ನಿಬಂಧನೆಗಳನ್ನು ವಿಧಿಸುವುದರ ಜತೆಗೆ ಬಾಂಡ್ ಪಡೆಯುವ ಸರಕಾರ/
ಇಲಾಖೆಗಳು, ಶಾಂತಿಯುತ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ಮಾಡಬೇಕಲ್ಲವೇ? ಅದು ಅವುಗಳ ಹೊಣೆಗಾರಿಕೆ ಯಲ್ಲವೇ? ಇಷ್ಟೆಲ್ಲ ಘಟನೆಗಳು ಪೂರ್ವತಯಾರಿಯೊಂದಿಗೆ ನಡೆದಿರಬೇಕಾದರೆ ಜಿಲ್ಲೆಯ ಗುಪ್ತಚರ ಇಲಾಖೆ ಗಾಢನಿದ್ರೆಯಲ್ಲಿತ್ತೇ? ಮಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ಸಿಎಎ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಗಲಭೆ ಸೃಷ್ಟಿಸಿ, ಪೊಲೀಸ್ ಇಲಾಖೆಯ ವಿರುದ್ಧ ಬಲ ಪ್ರಯೋಗಿಸಲು ಕೆಲ ವರ್ಷಗಳ ಹಿಂದೆ ಕೇಂದ್ರ ಸರಕಾರ ನಿಷೇಧಿಸಿದ ಪಿಎಫ್ಐ ಸಂಘಟನೆ ಹೊಂಚುಹಾಕಿತ್ತು.

ಪುಂಡರ‌ ಗುಂಪು ಅಂದು ಕೈಗೆ ಸಿಕ್ಕ ವಸ್ತುಗಳನ್ನು ಬಳಸಿ ಬೀದಿಕಾಳಗಕ್ಕೆ ನಿಂತು, ಮಂಗಳೂರು ಬಂದರು ಬಳಿ ಯಿರುವ ಶಸ್ತ್ರಾಸ್ತ್ರ ಮಳಿಗೆಯ ಬೀಗ ಮುರಿದು, ಪೊಲೀಸ್ ಇಲಾಖೆಯ ಮೇಲೆ ಪ್ರಯೋಗಿಸಲು ಮುಂದಾಗಿತ್ತು.
ಆದರೆ ಮಂಗಳೂರಿನ ಅಂದಿನ ಕಮಿಷನರ್ ರವರ ಸಮಯಪ್ರಜ್ಞೆಯಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿತ್ತು.

ಇದಾದ ಬಳಿಕ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಗಲಭೆಯ ಹಿಂದೆ ಕೂಡ ಇದೇ ಪಿಎಫ್‌ ಐ ಘಟನೆಯ ಕರಿನೆರಳು ಬಿದ್ದಿದೆ. ಅಂದು ಪೊಲೀಸ್ ಠಾಣೆಗೆ ಮತ್ತು ಸ್ಥಳೀಯ ಶಾಸಕರ ಮನೆಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಗಲಭೆಯ ಸ್ವರೂಪ ತೀವ್ರಗೊಂಡು, ಅದೆಷ್ಟೋ ವಾಹನಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ಪುಂಡರ ಆಟಾ ಟೋಪಕ್ಕೆ, ಬೆಂಕಿಗೆ ಆಹುತಿಯಾಗಿದ್ದವು.

ಮಾತ್ರವಲ್ಲದೆ. ಮೈಸೂರಿನ ಕ್ಯಾತಮಾರನಹಳ್ಳಿ, ಉದಯಗಿರಿಯಲ್ಲಿ ನಡೆದ ಪುಂಡಾಟಗಳು, ಶಿವಮೊಗ್ಗ ಮತ್ತು ಗಂಗೊಳ್ಳಿ ಯಲ್ಲಿನ ಗಲಭೆಗಳು ಇವೆಲ್ಲವೂ ಸಮಾಜದಲ್ಲಿ ಅಶಾಂತಿ, ಹಿಂಸೆ, ಭಯದ ವಾತಾವರಣ ಸೃಷ್ಟಿಸುವಂಥ ಕೃತ್ಯಗಳಾಗಿದ್ದು ಒಂದಕ್ಕೊಂದು ಸಾಮ್ಯತೆಯನ್ನು ಪಡೆದುಕೊಳ್ಳುತ್ತಿವೆ. ಮಂಗಳೂರಿನಲ್ಲಿ ಐಸಿಸ್ ಉಗ್ರವಾದ
ಬೆಂಬಲಿಸಿ ಪತ್ತೆಯಾದ ವಿವಾದಿತ ಗೋಡೆಬರಹ, ಕರಾವಳಿಯ ಪ್ರಮುಖ ದೇಗುಲಗಳನ್ನು ಸೋಟಿಸಲು ಕುಕ್ಕರ್‌ನಲ್ಲಿ
ಬಾಂಬ್ ಹೊತ್ತು ತಂದಿದ್ದು, ಆ ಸಂಚು ಕೈತಪ್ಪಿ ಬೇರೊಂದು ಸ್ಥಳದಲ್ಲಿ ಸೋಟಗೊಂಡಿದ್ದು, ಕೃತ್ಯದಲ್ಲಿ ಭಾಗಿ ಯಾದ ಆರೋಪಿಗೆ ಉಗ್ರ ಸಂಘಟನೆಗಳೊಂದಿಗೆ ನಂಟು ಇದ್ದ ವಿಷಯ ತನಿಖೆಯ ವೇಳೆ ಬಯಲಾಗಿದ್ದು,
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟದ ಜತೆಗೆ ರಾಜ್ಯ ಬಿಜೆಪಿ ಕಾರ್ಯಾಲಯವನ್ನೂ ಸ್ಪೋಟಿಸುವ ಗುರಿ ಬಂಧಿತ ಉಗ್ರರಿಗೆ ಇದ್ದುದು ಇತ್ಯಾದಿ ಘಟನೆಗಳನ್ನು ತಾಳೆಹಾಕಿದಾಗ ದೇಶದ ಮೂಲೆಮೂಲೆಗಳಲ್ಲಿ ಇಂಥ ಉಗ್ರ ಸಂಘಟನೆಗಳು ಬೇರೂರಿರುವ ಸಂಗತಿ ಅರಿವಾಗುತ್ತದೆ.

ದೇಶದ ವಿವಿಧೆಡೆ ನಡೆದ ಕೋಮುಗಲಭೆ ಹಾಗೂ ಅದರ ಸೃಷ್ಟಿಯ ಹಿಂದೆ ‘ಪಿಎಫ್‌ ಐ’ ಮತ್ತು ಸಮಾಜಸೇವೆಯ ಹೆಸರಿನಲ್ಲಿ ಜನ್ಮತಳೆದ ‘ಕೆಎಫ್‌ ಡಿ’ ಸಂಘಟನೆಗಳ ಪಾತ್ರವಿರುವುದು ತಿಳಿದುಬಂದಿದೆ. ದೇಶದಲ್ಲಿ ಮತೀಯ
ಭಾವನೆಗಳನ್ನು ಕೆರಳಿಸಿ, ಗಲಭೆ ಸೃಷ್ಟಿಸಿ, ಅರಾಜಕತೆ ಉಂಟುಮಾಡುವುದು ಈ ಸಂಘಟನೆಗಳ ಅಜೆಂಡಾ ಆಗಿದ್ದುದು ಬಯಲಾಗಿದೆ.

ಹೀಗಾಗಿ, ನಮ್ಮ ಆಳುಗ ವ್ಯವಸ್ಥೆ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಸಮಾಜದ ಶಾಂತಿ-ನೆಮ್ಮದಿಗಳಿಗೆ ಭಂಗ ತರುವವರನ್ನು ಅದು ಹೆಡೆಮುರಿ ಕಟ್ಟಲು ಇದು ಸಕಾಲ.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Mandya violence: ನಾಗಮಂಗಲ ಗಲಭೆಯ ನಷ್ಟದ ಪ್ರಮಾಣ 2.66 ಕೋಟಿ ರೂ.; ವ್ಯಾಪಾರಿಗಳು ಅತಂತ್ರ