Friday, 20th September 2024

Yuzvendra Chahal: ಕೌಂಟಿಯಲ್ಲಿ ಮತ್ತೆ ಮಿಂಚಿದ ಚಹಲ್‌; ಸತತ 2ನೇ ಬಾರಿ 5 ವಿಕೆಟ್‌ ಬೇಟೆ

Yuzvendra Chahal

ಲಂಡನ್‌: ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್(Yuzvendra Chahal) ಅವರು ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಬೌಲಿಂಗ್‌ ಪ್ರತಾಪ ಮತ್ತೆ ಮುಂದುವರಿಸಿದ್ದಾರೆ. ಲೀಸೆಸ್ಟರ್‌ಶೈರ್(Leicestershire) ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 9 ವಿಕೆಟ್‌ ಕಿತ್ತು ಮಿಂಚಿದ್ದಾರೆ. ಇವರ ಈ ಸ್ಪಿನ್‌ ಜಾದುವಿನಿಂದ ನಾರ್ಥಾಂಪ್ಟನ್‌ಶೈರ್‌(Northamptonshire) ತಂಡ ಒಂಬತ್ತು ವಿಕೆಟ್‌ ಅಂತರದ ಗೆಲುವು ಸಾಧಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಚಹಲ್‌ 82 ರನ್‌ಗೆ 4 ವಿಕೆಟ್‌ ಕಿತ್ತರೆ, ದ್ವಿತೀಯ ಇನಿಂಗ್ಸ್‌ನಲ್ಲಿ 134 ರನ್‌ಗೆ 5 ವಿಕೆಟ್‌ ಕಡೆವಿ ಒಟ್ಟು ಪಂದ್ಯದಲ್ಲಿ 9 ವಿಕೆಟ್‌ ಕಿತ್ತ ಸಾಧನೆ ತೋರಿದರು. ಇದಕ್ಕೂ ಮುನ್ನ ನಡೆದಿದ್ದ ಡರ್ಬಿಶೇರ್‌ ವಿರುದ್ಧದ ಪಂದ್ಯದಲ್ಲಿಯೂ ಚಹಲ್‌ 9 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಒಟ್ಟಾರೆ ಚಹಲ್‌ ಸತತ 2 ಪಂದ್ಯಗಳಿಂದ 18 ವಿಕೆಟ್‌ ಕಲೆ ಹಾಕಿದ್ದಾರೆ. ಜತೆಗೆ ಸತತ 2 ಪಂದ್ಯಗಳಲ್ಲಿ 5 ವಿಕೆಟ್‌ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.

ಕಳೆದ ವರ್ಷ ನಡೆದಿದ್ದ ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿಯೂ ಯಜುವೇಂದ್ರ ಚಾಹಲ್‌ಗೆ ಅವಕಾಶ ಸಿಕ್ಕಿರಲಿಲ್ಲ. ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದರೂ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ. ಚಹಲ್‌ ಭಾರತ ಪರ ಕೊನೆಯ ಬಾರಿಗೆ 2023ರಲ್ಲ. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ. ಇವರ ಸ್ಥಾನದಲ್ಲಿ ಕುಲ್‌ದೀಪ್‌ ಯಾದವ್‌ ಮಿಂಚತೊಡಗಿದರು. ಇನ್ನೊಂದೆಡೆ ಅಕ್ಷರ್‌ ಪಟೇಲ್‌ ಕೂಡ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ ನಿರೀಕ್ಷತ ಪ್ರದರ್ಶನ ತೋರುತ್ತಿರುವುದು ಕೂಡ ಚಹಲ್‌ಗೆ ಅವಕಾಶ ಸಿಗದಂತಾಯಿತು. ಇದೀಗ ಕೌಂಟಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಮತ್ತೆ ಬಿಸಿಸಿಐ ಗಮನಸೆಳೆದಿದ್ದಾರೆ.

ಇದನ್ನೂ ಓದಿ IND vs BAN: 376 ರನ್‌ಗೆ ಭಾರತ ಆಲೌಟ್‌

ಸಂಕ್ಷಿಪ್ತ ಸ್ಕೋರ್‌: ಲೀಸೆಸ್ಟರ್‌ಶೈರ್ ಮೊದಲ ಇನಿಂಗ್ಸ್‌ನಲ್ಲಿ 203. ದ್ವಿತೀಯ ಇನಿಂಗ್ಸ್‌ನಲ್ಲಿ316 (ಸ್ಕಾಟ್ ಕ್ಯೂರಿ 120, ಸ್ಯಾಮ್ ವುಡ್ 57, ಟಾಮ್ ಸ್ಕ್ರಿವೆನ್ 48, ಯುಜ್ವೇಂದ್ರ ಚಾಹಲ್ 5/134). ನಾರ್ಥಾಂಪ್ಟನ್‌ಶೈರ್‌ ಮೊದಲ ಇನಿಂಗ್ಸ್‌ 383. ದ್ವಿತೀಯ ಇನಿಂಗ್ಸ್‌ 137/.