Friday, 20th September 2024

ಬಹುರಾಷ್ಟ್ರಗಳ ಬೆಂಬಲ ಭಾರತಕ್ಕೆ ಬಲ

ಇದೀಗ ಜಗತ್ತಿನೆಲ್ಲೆಡೆ ಕೇಳಿ ಬರುತ್ತಿರುವ ಕೂಗು ಉಗ್ರವಾದ ನಿರ್ಮೂಲನೆ. ಮೊದಲಿನಿಂದಲೂ ಭಾರತ ಉಳಿದೆಲ್ಲ ದೇಶಗಳಿ ಗಿಂತಲೂ ಉಗ್ರವಾದವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನ ನಡೆಸುತ್ತಿದೆ.

ಮೊದಲೆಲ್ಲ ಕೆಲವೇ ರಾಷ್ಟ್ರಗಳಲ್ಲಿ ಬಾಂಬ್ ಸ್ಫೋಟಗಳ ಮೂಲಕ ಕಂಡುಬರುತ್ತಿದ್ದ ಉಗ್ರಗಾಮಿ ಚಟುವಟಿಕೆಗಳು ಇದೀಗ ಹಲವು ರಾಷ್ಟ್ರಗಳ ಜನನಿಬಿಡ ಪ್ರದೇಶ ಗಳಲ್ಲಿ ಬಂದೂಕು ಹಿಡಿದು ನೇರವಾಗಿ ಜನಸಾಮಾನ್ಯರನ್ನು ಹತ್ಯೆಗೈಯ್ಯುವ ಪೈಶಾಚಿಕ ಕೃತ್ಯಗಳು ಮರುಕಳಿಸುತ್ತಿವೆ. ಜತೆಗೆ ಉಗ್ರವಾದ ಬಹಳಷ್ಟು ರಾಷ್ಟ್ರಗಳಿಗೆ ಹರಡುತ್ತಿದ್ದು, ಇಸ್ಲಾಮಿಕ್ ಉಗ್ರವಾದಿಗಳ ದಾಳಿ ನಾನಾ ದೇಶಗಳಿಗೆ ವ್ಯಾಪಿಸುತ್ತಿದೆ.

ಈ ಬೆಳವಣಿಗೆಯಿಂದ ಉಗ್ರವಾದ ನಿರ್ಮೂಲನೆ ಎಂಬುದು ಯಾವುದೇ ಒಂದು ರಾಷ್ಟ್ರದ ಸಮಸ್ಯೆಯಾಗಿ ಉಳಿದಿಲ್ಲ. ಇಡೀ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಭಯೋತ್ಪಾದನೆಯನ್ನು ಮೊದಲಿನಿಂದಲೂ ಖಂಡಿಸುತ್ತಲೇ ಇರುವ ಭಾರತದ ಮಾತನ್ನು ಇತರ ದೇಶಗಳು ಸಹ ಒಪ್ಪಲೇ ಬೇಕಿರುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಉಗ್ರ ನಿಗ್ರಹ ಕುರಿತು ಭಾರತದ ವಾರ್ಷಿಕ
ನಿರ್ಣಯವನ್ನು ವಿಶ್ವಸಂಸ್ಥೆಯ ಫಸ್ಟ್‌ ಕಮಿಟಿ ಒಮ್ಮತದಿಂದ ಅಂಗೀಕರಿಸಿದೆ.

ಭಾರಿ ಪ್ರಮಾಣದ ವಿಧ್ವಂಸಕಾರಿ ಕೃತ್ಯಗಳಿಗೆ ಶಸ್ತ್ರಾಸ್ತ್ರಗಳು ಉಗ್ರರಿಗೆ ತಲುಪುವುದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕೆಂಬ ವಾರ್ಷಿಕ ನಿರ್ಣಯವನ್ನು ಭಾರತ ವಿಶ್ವಸಂಸ್ಥೆಗೆ ಮಂಡಿಸಿತ್ತು. ಈ ನಿರ್ಣಯವನ್ನು ಫಸ್ಟ್‌ ಕಮಿಟಿ ಒಮ್ಮತದಿಂದ ಅಂಗೀಕರಿಸಿದೆ. ಈ ನಿರ್ಣಯವನ್ನು 75ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲಿಸಿದ್ದು, ಭಾರತದ ಅಭಿಪ್ರಾಯಕ್ಕೆ ಬಹುದೇಶಗಳಿಂದ ಬೆಂಬಲ ವ್ಯಕ್ತವಾಗಿರುವುದು ಉತ್ತಮ ಬೆಳವಣಿಗೆ. ಉಗ್ರವಾದ ನಿರ್ಮೂಲನೆಯ ನಿಟ್ಟಿನಲ್ಲಿ ಭಾರತ ಉಳಿದೆಲ್ಲ ದೇಶಗಳಿಗಿಂತ ಮಹತ್ವದ್ದನ್ನು ಸಾಧಿಸಿದೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.