ಚೆನ್ನೈ: ಬಾಂಗ್ಲಾದೇಶದ(IND vs BAN) ಮೇಲೆ ರಿವರ್ಸ್ ಸ್ವಿಂಗ್, ಯಾರ್ಕರ್ ಎಸೆತಗಳನ್ನು ಛೂಬಿಟ್ಟ ಜಸ್‌ಪ್ರೀತ್ ಬುಮ್ರಾ(Jasprit Bumrah) ಚೆನ್ನೈ ಟೆಸ್ಟ್‌ನಲ್ಲಿ 50 ರನ್ನಿಗೆ 4 ವಿಕೆಟ್ ಉಡಾಯಿಸಿ ದ್ವಿತೀಯ ದಿನದಾಟದ ಹೀರೋ ಆಗಿ ಮೂಡಿಬಂದರು. 6 ವಿಕೆಟಿಗೆ 339 ರನ್ ಮಾಡಿ ಮೊದಲ ದಿನದಾಟ ಮುಗಿಸಿದ್ದ ಭಾರತ, ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿ 376ಕ್ಕೆ ಆಲೌಟ್ ಆಯಿತು. ಜವಾಬಿತ್ತ ಬಾಂಗ್ಲಾದೇಶ 47.1 ಓವರ್‌ಗಳಲ್ಲಿ ಕೇವಲ 149 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿತು. ರೋಹಿತ್ ಪಡೆಗೆ ಲಭಿಸಿದ ಮುನ್ನಡೆ 227 ರನ್. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಭಾರತ 23 ಓವರ್‌ಗಳನ್ನು ನಿಭಾಯಿಸಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಲಭಿಸಿರುವ ಒಟ್ಟು ಲೀಡ್ 308 ರನ್. ಈ ಮುನ್ನಡೆಯನ್ನು ಕನಿಷ್ಠ 400 ರನ್ ತನಕವಾದರೂ ಏರಿಸಬೇಕಾದ ಅಗತ್ಯವೀಗ ಟೀಮ್ ಇಂಡಿಯಾ ಮುಂದಿದೆ. ಶುಭಮನ್ ಗಿಲ್(33) ಮತ್ತು ರಿಷಭ್ ಪಂತ್(12) ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಬುಮ್ರಾ ಮಾರಕ ದಾಳಿ
ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ʼಬ್ರಿಲಿಯಂಟ್ ಬೌಲಿಂಗ್ʼ ಮೂಲಕ ಬಾಂಗ್ಲಾ ಪಾಳೆಯವನ್ನು ಕಂಪಿಸುವಂತೆ ಮಾಡಿದರು. ತಾವೆಸೆದ ಮೊದಲ ಓವರ್‌ನಲ್ಲಿಯೇ ಆರಂಭಕಾರ ಶಾದ್ಮನ್ ಇಸ್ಲಾಂ(2) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಒಟ್ಟು 11 ಓವರ್‌ಗಳಲ್ಲಿ ಒಂದು ಮಡನ್ ಸಹಿತ 4 ವಿಕೆಟ್ ಕಿತ್ತರು. 3 ವಿಕೆಟ್ ಪೂರ್ತಿಗೊಳಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್ ಮೈಲುಗಲ್ಲು ತಲುಪಿದರು. ಈ ಸಾಧನೆಗೈದ ಭಾರತದ 6 ನೇ ಬೌಲರ್ ಎನಿಸಿಕೊಂಡರು. ಉಳಿದಂತೆ ಸಿರಾಜ್ ಮತ್ತು ಆಕಾಶ್ ದೀಪ್ ತಲಾ 2 ವಿಕೆಟ್ ಕಿತ್ತರು. ಆಕಾಶ್ ದೀಪ್ ಸತತವಾಗಿ 2 ವಿಕೆಟ್ ಕಿತ್ತು ಹ್ಯಾಟ್ರಿಕ್ ಅವಕಾಶ ಪಡೆದರೂ ಇದನ್ನು ಸಾಧಿಸುವಲ್ಲಿ ಯಶಸ್ಸು ಕಾಣಲಿಲ್ಲ. ಅನುಭವಿ ಮುಶ್ಫಿಕರ್ ರಹೀಮ್ ಡಿಫೆನ್ಸ್ ಮಾಡುವ ಮೂಲಕ ಇದನ್ನು ತೆಡೆದರು.
ನಾಯಕ ನಜ್ಮುಲ್ ಹೊಸೈನ್ ಶಾಂತೋ(20), ಶಕೀಬ್ ಅಲ್ ಹಸನ್(32), ಲಿಟ್ಟನ್ ದಾಸ್(22) ಮತ್ತು ಮೆಹದಿ ಹಸನ್(27*) ರನ್ ಬಾರಿಸಿ ಬಾಂಗ್ಲಾ ಪರ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ತೋರಿದರು. ಮೆಹದಿ ಹಸನ್ ಕೆಳ ಕ್ರಮಾಂಕದಲ್ಲಿ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರೂ ಕೂಡ ಅವರಿಗೆ ಮತ್ತೊಂದು ಬದಿಯಲ್ಲಿ ಸರಿಯಾದ ಸಾಥ್ ಸಿಗಲಿಲ್ಲ.
ಇದನ್ನೂ ಓದಿ IND vs BAN: ಮೈದಾನದಲ್ಲೇ ಸಿರಾಜ್‌ಗೆ ಕ್ಷಮೆ ಕೇಳಿದ ಪಂತ್; ಕಾರಣವೇನು?
ಮೊದಲ ದಿನದಾಟದಲ್ಲಿ ಶತಕ ಗಳಿಸಿದ್ದ ಅಶ್ವಿನ್ ದ್ವಿತೀಯ ದಿನದಾಟದಲ್ಲಿ 11 ರನ್ ಗಳಿಸಿ ಒಟ್ಟು 113 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. 86 ರನ್ ಗಳಿಸಿದ್ದ ಜಡೇಜಾ ಇದೇ ಮೊತ್ತಕ್ಕೆ ವಿಕೆಟ್ ಕೈಚೆಲ್ಲಿದರು. ಆಕಾಶ್ ದೀಪ್ 17 ರನ್ ಬಾರಿಸಿದರೆ, ಜಸ್‌ಪ್ರೀತ್ ಬುಮ್ರಾ 7 ರನ್ ಗಳಿಸಿದರು. ಘಾತಕ ವೇಗಿ ಹಸನ್ ಮಹಮೂದ್ 5 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ಭಾರತ ವಿರುದ್ಧ ಟೆಸ್ಟ್‌ನಲ್ಲಿ 5 ವಿಕೆಟ್ ಕಿತ್ತ ಬಾಂಗ್ಲಾದ ಮೊದಲ ಬೌಲರ್ ಎನಿಸಿಕೊಂಡರು. ಟಸ್ಕಿನ್ ಅಹ್ಮದ್ 3 ವಿಕೆಟ್ ಕಿತ್ತರು.
ರೋಹಿತ್ ಮತ್ತೆ ವಿಫಲ
ಮೊದಲ ಇನಿಂಗ್ಸ್‌ನಲ್ಲಿ 6 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದ ನಾಯಕ ರೋಹಿತ್ ಶರ್ಮ ದ್ವಿತೀಯ ಇನಿಂಗ್ಸ್‌ನಲ್ಲಿಯೂ ವಿಫಲರಾದರು. ಕೇವಲ 5ರನ್ ಬಾರಿಸಿ ಆಟ ಮುಗಿಸಿದರು. ಮೊದಲ ಇನಿಂಗ್ಸ್‌ನ ಅರ್ಧಶಕತ ವೀರ ಜೈಸ್ವಾಲ್ 10 ಬಾರಿಸಿದರು. ಚೆಂಡು ಬ್ಯಾಟ್‌ಗೆ ಬಡಿದರೂ ಪ್ಯಾಡ್‌ಗೆ ಬಡಿದಿರಬಹುದೆಂದು ಊಹಿಸಿ ರಿವ್ಯೂ ಪಡೆಯದೆ ಕೊಹ್ಲಿ ಅನಗತ್ಯವಾಗಿ ಎಲ್‌ಬಿಬ್ಲ್ಯು ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ಅವರ ಗಳಿಕೆ 17 ರನ್. ದ್ವಿತೀಯ ಇನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಮೆಹದಿ ಹಸನ್, ಟಸ್ಕಿನ್ ಅಹ್ಮದ್ ಮತ್ತು ನಹಿದ್ ರಾಣಾ ತಲಾ ಒಂದೊಂದು ವಿಕೆಟ್ ಕೆಡವಿದ್ದಾರೆ. ಒಟ್ಟಾರೆ ಒಂದೇ ದಿನ 17 ವಿಕೆಟ್ ಪತನಗೊಂಡಿತು. 1979ರಲ್ಲಿ ಭಾರತ ಮತ್ತು ವಿಂಡೀಸ್ ನಡುವಣ ಟೆಸ್ಟ್‌ನಲ್ಲಿ ಒಂದೇ ದಿನ 15 ವಿಕೆಟ್ ಬಿದ್ದಿತ್ತು. ಈ ದಾಖಲೆ ಈಗ ಪತನಗೊಂಡಿತು.