Friday, 22nd November 2024

80 ಶಿಕ್ಷಕರಿಗೆ ಕೋವಿಡ್ ದೃಢ: ಉತ್ತರಾಖಂಡದ 84 ಶಾಲೆಗಳು ಮತ್ತೆ ಬಂದ್

ಡೆಹ್ರಾಡೂನ್: 80 ಶಿಕ್ಷಕರಿಗೆ ಕೋವಿಡ್-19 ದೃಢಪಟ್ಟ ಕಾರಣ ಉತ್ತರಾಖಂಡದ ಪೌರಿ ಜಿಲ್ಲೆಯ 84 ಶಾಲೆಗಳನ್ನು ಮತ್ತೆ ಮುಚ್ಚ ಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್ 2ರಂದು ಶಾಲೆಗಳನ್ನು ಪುನರಾರಂಭಿಸಲಾಗಿತ್ತು.

ಸೋಂಕಿಗೀಡಾದ ಶಿಕ್ಷಕರು ಪೌರಿ ಜಿಲ್ಲೆಯ ಖಿರ್ಸು, ಪೌರಿ, ಕೋಟ್, ಪಬು ಹಾಗೂ ಕಲ್ಜಿಖಲ್‌ನ ಶಾಲೆಗಳಲ್ಲಿ ಕಾರ್ಯನಿರ್ವಹಿ ಸುತ್ತಿದ್ದರು.

ಎಲ್ಲ ಶಿಕ್ಷಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಎಲ್ಲ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವಿಚಾರ ವಾಗಿ ಶಿಕ್ಷಣ ಇಲಾಖೆಯು ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ (ಎಸ್‌ಒಪಿ) ಬಿಡುಗಡೆ ಮಾಡಿದೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ಹರಡುವಿಕೆ ತಡೆಯವ ನಿಟ್ಟಿನಲ್ಲಿ ಮಾರ್ಚ್‌ನಿಂದ ಮುಚ್ಚಲಾಗಿದ್ದ ಶಾಲೆಗಳನ್ನು ಕೆಲವು ರಾಜ್ಯಗಳು ಇತ್ತೀಚೆಗೆ ಆರಂಭಿಸಿವೆ. ಅಸ್ಸಾಂನಲ್ಲಿಯೂ ಕೆಲ ದಿನಗಳ ಹಿಂದೆ ಶಾಲೆಗಳು ಪುನರಾರಂಭಗೊಂಡಿವೆ.