Saturday, 21st September 2024

PM Vishwakarma Scheme: ಪಿಎಂ ವಿಶ್ವಕರ್ಮ ಯೋಜನೆಗೆ ಯಾರು ಅರ್ಹರು, ಇದರಿಂದೇನು ಪ್ರಯೋಜನ? ಅರ್ಜಿ ಸಲ್ಲಿಕೆ ಹೇಗೆ?

PM Vishwakarma Scheme

ಸೂಕ್ಷ್ಮ, ಸಣ್ಣ, ಮಧ್ಯಮ ವರ್ಗದ ಕೆಲಸಗಳಲ್ಲಿ ತೊಡಗಿರುವ ಕುಶಲಕರ್ಮಿಗಳನ್ನು (artisans and crafts people) ಸಬಲೀಕರಣಗೊಳಿಸುವ (empowerment) ಗುರಿಯೊಂದಿಗೆ ಕೇಂದ್ರ ಸರ್ಕಾರ 2023ರಲ್ಲಿ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ಯ ಗೌರವ (PM VIKAS) ಅಥವಾ ಪಿಎಂ ವಿಶ್ವಕರ್ಮ ಯೋಜನೆಯು (PM Vishwakarma Scheme) ಹಲವಾರು ಉದ್ದೇಶಗಳನ್ನು ಹೊಂದಿದೆ.

ಕಮ್ಮಾರರು, ಕುಂಬಾರರು, ಬಡಗಿಗಳು, ನೇಕಾರರು ಸೇರಿದಂತೆ 18 ನಿಗದಿಪಡಿಸಿರುವ ಉದ್ಯೋಗಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಯೋಜನೆಯ ಉದ್ದೇಶ ಏನು?

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಲು ಬೆಂಬಲ ನೀಡುವ ಪ್ರಾಥಮಿಕ ಉದ್ದೇಶವನ್ನು ಹೊಂದಿದೆ.

ಈ ಯೋಜನೆಯಡಿಯಲ್ಲಿ ತರಬೇತಿ, ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸಲಾಗುತ್ತದೆ. ಇದು ಕುಶಲಕರ್ಮಿಗಳು ತಮ್ಮ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೆಚ್ಚಿಸಲು, ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಅವರು ಮಾರುಕಟ್ಟೆಯಲ್ಲಿ ಎದುರಾಗುವ ಪೈಪೋಟಿಯಲ್ಲಿ ಪ್ರಬಲ ಸ್ಪರ್ಧೆ ನೀಡಲು ಸಹಾಯ ಮಾಡುತ್ತದೆ.

ಆಧುನಿಕ ಉಪಕರಣಗಳ ಬಳಕೆಗೆ ಪ್ರೋತ್ಸಾಹಿಸಿ ಕೆಲಸದ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಮೂಲಕ ಅವರ ಆದಾಯವನ್ನು ಹೆಚ್ಚಿಸುವ ಸಹಾಯ ಮಾಡಲಾಗುತ್ತದೆ.
ಹಣಕಾಸು ಬೆಂಬಲ ನೀಡುವ ಮೂಲಕ ಕಚ್ಚಾ ವಸ್ತು, ಉಪಕರಣ ಖರೀದಿ, ಮಾರುಕಟ್ಟೆಯಲ್ಲಿ ಹೂಡಿಕೆಗೆ ಉತ್ತೇಜನ ನೀಡುತ್ತದೆ.

ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಆರ್ಥಿಕ ಸಾಕ್ಷರತೆಯನ್ನು ಮೂಡಿಸಲಾಗುತ್ತದೆ.
ಬ್ರ್ಯಾಂಡಿಂಗ್, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಬಳಕೆ ಮತ್ತು ವ್ಯಾಪಾರ ಮೇಳಗಳಲ್ಲಿ ಭಾಗವಹಿಸಲು ಅವಕಾಶ ನೀಡಿ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸುತ್ತದೆ.

ಕುಶಲಕರ್ಮಿಗಳ ಕೌಶಲ್ಯಗಳಿಗೆ ಬೆಂಬಲ ನೀಡುವ ಮೂಲಕ ಭಾರತದ ವೈವಿಧ್ಯಮಯ ಸಾಂಪ್ರದಾಯಿಕ ಕರಕುಶಲ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಈ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ.

ಈ ಯೋಜನೆಗೆ ಯಾರು ಅರ್ಹರು?

ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನ ಪಡೆಯಬೇಕಾದರೆ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ಅಸಂಘಟಿತ ವಲಯದಲ್ಲಿ ಕುಶಲಕರ್ಮಿ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು. ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು. ಹಾಗಿದ್ದರೆ ಮಾತ್ರ ವಿಶ್ವಕರ್ಮ ಯೋಜನೆಯ ಮೂಲಕ ಸಹಾಯಕ್ಕಾಗಿ ಅರ್ಹರಾಗಿರುತ್ತಾರೆ. ಪ್ರಸ್ತುತ ಈ ಯೋಜನೆಯಡಿಯಲ್ಲಿ ಮರಗೆಲಸ, ಕಮ್ಮಾರ, ಕುಂಬಾರಿಕೆ, ನೇಯ್ಗೆ ಸೇರಿದಂತೆ 18 ವಿಭಿನ್ನ ವ್ಯಾಪಾರ ಚಟುವಟಿಕೆಯನ್ನು ಒಳಪಡಿಸಲಾಗಿದೆ.

PM Vishwakarma Scheme

ಯಾವೆಲ್ಲ ದಾಖಲೆಗಳು ಬೇಕು?

ಈ ಯೋಜನೆ ಪಡೆಯಲು ಇಚ್ಛಿಸುವವರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಉದ್ಯೋಗದ ಪುರಾವೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು.

ಏನು ಪ್ರಯೋಜನ?

ಈ ಯೋಜನೆಯು ಕುಶಲಕರ್ಮಿಗಳ ಉತ್ಪನ್ನ ಮತ್ತು ಸೇವೆಗಳ ಗುಣಮಟ್ಟ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ, ಟೂಲ್‌ಕಿಟ್‌ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸ್ಥಳೀಯ ಮತ್ತು ಜಾಗತಿಕ ಮಟ್ಟದ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸಲಾಗುತ್ತದೆ.

ಕುಶಲಕರ್ಮಿಗಳನ್ನು ದೊಡ್ಡ ವ್ಯವಹಾರ, ಸರ್ಕಾರಿ ಯೋಜನೆಗಳು ಮತ್ತು ರಫ್ತು ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವಂತೆ ಮಾಡಲಾಗುತ್ತದೆ. ಇದು ಅವರಿಗೆ ಹೆಚ್ಚಿನ ಆದಾಯವನ್ನು ಗಳಿಸಲು ಮತ್ತು ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ.

ಇದರ ನೋಂದಣಿ ಹೇಗೆ?

ಬಯೋಮೆಟ್ರಿಕ್ ಆಧಾರಿತ ಪಿಎಂ ವಿಶ್ವಕರ್ಮ ಪೋರ್ಟಲ್ ಅನ್ನು ಬಳಸಿಕೊಂಡು ಎಲ್ಲಾ ಕುಶಲಕರ್ಮಿಗಳು ಸಾಮಾನ್ಯ ಸೇವಾ ಕೇಂದ್ರಗಳ (CSC) ಮೂಲಕ ಯಾವುದೇ ವೆಚ್ಚವಿಲ್ಲದೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಫಲಾನುಭವಿಗಳನ್ನು ಗುರುತಿಸುವುದು ಹೇಗೆ?

ನೋಂದಾಯಿಸಿಕೊಂಡ ಅರ್ಹ ಫಲಾನುಭಾವಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದು ಜನೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿರುತ್ತದೆ.

ಪಿಎಂ ವಿಶ್ವಕರ್ಮ ಐಡಿ ಕಾರ್ಡ್ ಕುಶಲಕರ್ಮಿಗಳ ಕೌಶಲ್ಯಗಳ ಮೌಲ್ಯಮಾಪನ ನಡೆಸುತ್ತದೆ. ಯೋಜನೆಯ ವೈವಿಧ್ಯಮಯ ಪ್ರಯೋಜನ ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.

ಕೌಶಲ್ಯ ವರ್ಧನೆಗೆ ಅವಕಾಶ

ಕುಶಲಕರ್ಮಿಗಳ ಕೌಶಲ್ಯ ವರ್ಧನೆಗೆ ಐದರಿಂದ ಏಳು ದಿನಗಳ ತರಬೇತಿಯಲ್ಲಿ ಗುಣಮಟ್ಟ, ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಕಲಿಸಲಾಗುತ್ತದೆ. 15 ದಿನಗಾಲ ತರಬೇತಿಯಲ್ಲಿ ತಮ್ಮ ಕೌಶಲ್ಯಗಳನ್ನು ಪರಿಷ್ಕರಿಸಲು ಮತ್ತು ನವೀನ ತಂತ್ರಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತರಬೇತಿ ಅವಧಿಯುದ್ದಕ್ಕೂ ಭಾಗವಹಿಸುವವರಿಗೆ 500 ರೂ. ಭತ್ಯೆ ನೀಡಲಾಗುತ್ತದೆ.

PM Vishwakarma Scheme

ಹಲವು ಅವಕಾಶ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಅರ್ಹ ಕುಶಲಕರ್ಮಿಗಳು ಹಲವಾರು ಅನುಕೂಲತೆಗಳನ್ನು ಪಡೆಯಬಹುದು. ಮುಖ್ಯವಾಗಿ ವಹಿವಾಟಿಗೆ ಅಗತ್ಯವಾದ ಅಗತ್ಯ ಉಪಕರಣ ಖರೀದಿಗೆ 15,000 ರೂ.ವರೆಗಿನ ಇ-ವೋಚರ್‌, ಶೇ. 5ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಒಟ್ಟು 3 ಲಕ್ಷ ರೂ. ವರೆಗೆ ಉದ್ಯಮ ಅಭಿವೃದ್ಧಿ ಸಾಲಗಳನ್ನು ಪಡೆಯಬಹುದು.

ನಗದು ರಹಿತ ವಹಿವಾಟಿಗೆ ತಿಂಗಳಿಗೆ ಗರಿಷ್ಠ 100 ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ 1 ರೂ. ಗಳಿಸಲು ಅವಕಾಶವಿದೆ.

ಗುಣಮಟ್ಟದ ಪ್ರಮಾಣೀಕರಣ, ಬ್ರ್ಯಾಂಡಿಂಗ್, ಪ್ರಚಾರ, ಇ-ಕಾಮರ್ಸ್ ಸಂಪರ್ಕ, ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವಿಕೆ, ಜಾಹೀರಾತು ಮತ್ತು ಪ್ರಚಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮಾರುಕಟ್ಟೆ ಸಮಿತಿಯಿಂದ (NCM) ನೆರವು ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಸರಳವಾಗಿದೆ. ಅಧಿಕೃತ ವೆಬ್ ಸೈಟ್ ಅನ್ನು ಪ್ರವೇಶಿಸಿ “ರಿಜಿಸ್ಟರ್” ಆಯ್ಕೆಯನ್ನು ಆರಿಸಿ. ಮೊಬೈಲ್ ಸಂಖ್ಯೆಯನ್ನು ನೀಡಿ ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

Forex Reserves : ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ 689.458 ಬಿಲಿಯನ್ ಡಾಲರ್‌ಗೆ ಏರಿಕೆ

ನೋಂದಣಿಯ ಅನಂತರ ಕುಶಲಕರ್ಮಿಗಳ ನೋಂದಣಿ ನಮೂನೆ ಪಡೆದು ಇದರಲ್ಲಿ ಹೆಸರು, ಕೌಶಲ್ಯ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಗಳನ್ನು ಒದಗಿಸಿ ಅರ್ಜಿ ನಮೂನೆಯನ್ನು ಪೂರ್ತಿಯಾಗಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ. ಅರ್ಜಿ ಸಲ್ಲಿಸುವ ಮೊದಲು ಅರ್ಜಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಸಲ್ಲಿಸಿದ ಬಳಿಕ ಟ್ರ್ಯಾಕಿಂಗ್ ಉದ್ದೇಶಗಳಿಗಾಗಿ ಅಪ್ಲಿಕೇಶನ್ ಐಡಿಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವೀಕರಿಸುತ್ತೀರಿ.