Saturday, 21st September 2024

Dr SadhanaShri column: ಶರತ್‌ ಋತುವಿನ ಆಹಾರದ ಷರತ್ತುಗಳು

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ಈ ಕಾಲದಲ್ಲಿ ಜೀರ್ಣಿಸಲು ಸುಲಭವಾದ ಆಹಾರವು ಉತ್ತಮ. ಏಕ ದಳಗಳಲ್ಲಿ ಹಿಂದಿನ ವರ್ಷದ ಧಾನ್ಯ ಗಳು ಹಿತಕರ. ಅಕ್ಕಿ ಗೋಧಿ, ಜವೆ ಗೋಧಿ, ಜೋಳ ಮತ್ತು ರಾಗಿಗಳನ್ನು ಆಯಾ ಪ್ರಾಂತ್ಯದ ಅಭ್ಯಾಸಕ್ಕೆ ತಕ್ಕಂತೆ ಬಳಸಬೇಕು. ಇವುಗಳನ್ನು ಅನ್ನ/ ರವೆ/ ನುಚ್ಚು/ ಹಿಟ್ಟಿನ ರೂಪದಲ್ಲಿ ಬಳಸಬಹುದು. ನೆನಪಿರಲಿ- ಅವಲಕ್ಕಿಯ ಉಪಯೋಗ ಶರತ್ ಋತುವಿನಲ್ಲಿ ಹೆಚ್ಚಾಗಿ ಬೇಡ.

ವಿನಾಯಕ ಚತುರ್ಥಿ ಈಗ ತಾನೇ ಮುಗಿಯಿತು ಅನ್ನುವಷ್ಟರಲ್ಲಿ ದಸರಾ ಹಬ್ಬಇನ್ನೇನು ಬಂದೇಬಿಡ್ತು. ನವರಾತ್ರಿ
ಅಂದರೆ ಎಡೆ ಸಂಭ್ರಮ. ಸ್ಕೂಲ್ – ಕಾಲೇಜುಗಳಿಗೆ, ಆಫೀಸು- ಕಚೇರಿಗಳಿಗೆ ರಜಾ ಮಜಾ. ಆದರೆ, ಈ ರಜೆ ದಿನ ಗಳಲ್ಲಿಯೂ ವೈದ್ಯರು ಮಾತ್ರ ಬಿಜಿ. ಯಾಕಂದರೆ, ಖಾಯಿಲೆಗಳಿಗೆ ರಜೆ ಇಲ್ಲ ನೋಡಿ! ಬೇರೆ ಬೇರೆ ಹಬ್ಬಗಳ ಸಮಯದಲ್ಲಿ ಕಾಯಿಲೆಗಳ ಸ್ವರೂಪವೂ ಸಹ ಬೇರೆ ಬೇರೆಯೇ ಆಗಿರುತ್ತದೆ ಹೊರತು ಕಾಯಿಲೆಗಳಿಗೆ ವಿರಾಮ ಮಾತ್ರ ಇಲ್ಲ. ಇತ್ತೀಚೆಗೆ ವೈದ್ಯರಿಗೆ ಸಾಮಾನ್ಯವಾಗಿ ಕಂಡು ಬರುತ್ತಿರುವ ಕಾಯಿಲೆಗಳು ಯಾವುದಪ್ಪ ಅಂದರೆ-
ತೀವ್ರ ಉಷ್ಣಾಂಶ ಇರುವಂತಹ ಜ್ವರ, ಉರಿಶೀತ, ಒಣ ಕೆಮ್ಮು, ಎದೆ ಉರಿ, ಹುಳಿತೇಗು, ಅಜೀರ್ಣ, ವಾಂತಿ, ಭೇದಿ, ಚರ್ಮದಲ್ಲಿ ಗಂಧೆಗಳು, ತಲೆನೋವು, ನಿದ್ದೆ ಕಡಿಮೆಯಾಗುವುದು, ಕೈಕಾಲು ಉರಿ, ಒಂದು ರೀತಿಯ ಸಂಕಟ, ತಲೆಸುತ್ತು ಇತ್ಯಾದಿ.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಈ ಕಾಯಿಲೆಗಳು ಕೆಲವು ತಿಂಗಳ ಹಿಂದೆ ಇಷ್ಟು ಸಾಮಾನ್ಯವಾಗಿ ಕಾಣು ವಂತಹದ್ದಾಗಿರಲಿಲ್ಲ. ಆಗ ಮಳೆಗಾಲವಿತ್ತು. ಮಳೆಗಾಲದ ಕಾಯಿಲೆಗಳ ಸ್ವರೂಪವೇ ಬೇರೆ. ಮಳೆಗಾಲ
ಮುಗಿದು, ಆಕಾಶ ತಿಳಿಯಾಗಿ, ಸೂರ್ಯನ ತಾಪ ಹೆಚ್ಚಾದಾಗ ಕಾಣಿಸಿಕೊಳ್ಳುವ ಕಾಯಿಲೆಗಳ ಸ್ವರೂಪವೇ
ಬೇರೆ. ಹಾಗಾದರೆ, ಈ ರೀತಿಯ ವ್ಯತ್ಯಾಸಗಳು ಯಾಕೆ ಆಗುತ್ತದೆ? ಹೊರಗಿನ ವಾತಾವರಣಕ್ಕೂ ನಮ್ಮ ದೇಹದ
ಸ್ಥಿತಿಗೂ ಮತ್ತು ಆರೋಗ್ಯಕ್ಕೂ ಏನಾದರೂ ಸಂಬಂಧವಿದೆಯಾ? ಪ್ರತಿ ಋತುವಿನಲ್ಲಿಯೂ ಹೊರಗಿನ
ವಾತಾವರಣದಲ್ಲಿ ಎಷ್ಟೇ ಏರುಪೇರು ಆದರೂ ಸಹ ಅದನ್ನು ಗಮನಿಸದೆ ವರ್ಷವಿಡಿ ಒಂದೇ ರೀತಿಯ
ಜೀವನ ಶೈಲಿಯನ್ನು ನಡೆಸಿಕೊಂಡು ಹೋಗುವುದು ಸರಿಯೇ? ಇದು ವೈಜ್ಞಾನಿಕವೇ? ವರ್ಷ ಪೂರ್ತಿ
ಕಾಯಿಲೆ ತಪ್ಪದೆ ಇರುವುದಕ್ಕೆ ಸಾಧ್ಯವಿದೆಯಾ? ಋತುವಿಗೆ ತಕ್ಕಂತೆ ನಮ್ಮ ಆಹಾರ-ವಿಹಾರಗಳನ್ನು
ಬದಲಾಯಿಸಿಕೊಳ್ಳಬೇಕಾ? ವೈಜ್ಞಾನಿಕವಾಗಿ ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು?… ಹೀಗೆ ಹಲವಾರು
ಪ್ರಶ್ನೆಗಳು ಈಗಾಗಲೇ ನಿಮ್ಮೆಲ್ಲರ ಮನಸ್ಸಿನಲ್ಲಿ ಬಂದಿರಬಹುದು, ಅಲ್ಲವೇ? ಹಾಗಾದರೆ ಈ ಎಲ್ಲ ಪ್ರಶ್ನೆಗಳಿಗೆ ಆಯುರ್ವೇದ ಶಾಸದಲ್ಲಿ ಉತ್ತರಗಳನ್ನು ಹುಡುಕೋಣ.

ಸ್ನೇಹಿತರೆ, ಒಂದು ವರ್ಷದಲ್ಲಿ ಆರು ಋತುಗಳನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಹೇಮಂತ
ಮತ್ತು ಶಿಶಿರ ಋತುಗಳು ಚಳಿಗಾಲವಾದರೆ, ವಸಂತ ಮತ್ತು ಗ್ರೀಷ್ಮ ಋತುಗಳು ಬೇಸಿಗೆಕಾಲ. ವರ್ಷ ಋತುವು ಮಳೆಗಾಲವಾದರೆ, ಶರತ್ ಋತುವು ಮಳೆಗಾಲದ ನಂತರದ ಬಿಸಿಲು ಕಾಲ. ಪ್ರತಿಯೊಂದು ಋತುವಿಗೂ ಅದರದ್ದೇ ಆದ ಋತುಚರ್ಯವಿದೆ. ಆ ಋತುವಿನಲ್ಲಿ ಶರೀರದಲ್ಲಿ ಆಗುವ ಏರುಪೇರುಗಳನ್ನು ಸರಿ ಮಾಡುವಂತಹ, ದೇಹದಲ್ಲಿ ಹೆಚ್ಚು ಕಡಿಮೆಯಾಗಿರುವ ದೋಷಗಳನ್ನು ಸಮ ಅವಸ್ಥೆಗೆ ತರುವ, ಶಾರೀರಿಕ ಮತ್ತು ಅಗ್ನಿಯ ಬಲಗಳನ್ನು ಸರಿದೂಗಿಸುವಂತಹ ಆಹಾರ-ವಿಹಾರಗಳನ್ನು ಈ ಋತುಚರ್ಯೆಗಳಲ್ಲಿ ನೋಡಬಹುದು. ಪ್ರಸ್ತುತ ನಡೆಯು ತ್ತಿರುವುದು ಮಳೆಗಾಲ ನಿಂತ ಮೇಲೆ ಬರುವ ಬಿಸಿಲು ಕಾಲ. ಹಾಗಾದರೆ, ಆಯುರ್ವೇದದ ‘ಶರದ ಋತು’ ವಿನ ಚರ್ಯೆಯನ್ನು ಸಂಕ್ಷಿಪ್ತವಾಗಿ ಅರ್ಥೈಸಿಕೊಳ್ಳೋಣ.

ಶರತ್ ಋತುವಿನಲ್ಲಿ ಎರಡು ಮಾಸಗಳು

  • ಆಶ್ವೀಜ ಮತ್ತು ಕಾರ್ತಿಕ. ಶರತ್ ಋತುವು ಮಧ್ಯಮ ಬಲದ ಋತು. ಅಂದರೆ ಈ ಋತುವಿನಲ್ಲಿ ನಮ್ಮ
    ಶಾರೀರಿಕ ಬಲ ಮತ್ತು ವ್ಯಾಧಿಕ್ಷಮತ್ವವು/ immunity ಮಧ್ಯಮ ಬಲದ (medium strength) ಅವಸ್ಥೆಯಲ್ಲಿ ಇರುತ್ತದೆ. ಈ ಕಾಲದಲ್ಲಿ, ಹಿಂದಿನ ಮಳೆಗಾಲದ ರೀತಿ ನಮ್ಮ ಬಲವು ಅತಿ ಕಡಿಮೆಯೂ ಇರುವುದಿಲ್ಲ, ಅಥವಾ ಮುಂದೆ ಬರುವ ಚಳಿಗಾಲದ ಹಾಗೆ ನಮ್ಮ ಬಲವು ಅತಿ ಹೆಚ್ಚು ಕೂಡ ಇರುವುದಿಲ್ಲ.
    ಈ ಋತುವಿನ ಲಕ್ಷಣಗಳು ಏನು? ವಾತಾವರಣವು ಹೇಗಿರುತ್ತದೆ? ಶರತ್ ಋತುವಿನಲ್ಲಿ ಶುಭ್ರವಾದ
    ಆಕಾಶ ಮತ್ತು ತಿಳಿಯಾದ ಬಿಳಿ ಮೋಡಗಳನ್ನು ಕಾಣಬಹುದು. ಈ ಕಾಲದಲ್ಲಿ ಸೂರ್ಯನ ರಶ್ಮಿ ತೀಕ್ಷ್ಣ
    ಹಾಗೂ ಸುಟವಾಗಿರುತ್ತದೆ. ಇದೊಂದು ಸಮಶೀತೋಷ್ಣದ ಕಾಲ.
  • ಈ ರೀತಿಯ ಹೊರಗಿನ ವಾತಾವರಣವು ನಮ್ಮ ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ? ಶರತ್ ಋತುವಿನ ಹಿಂದಿನ ಋತು- ಅಂದರೆ ಮಳೆಗಾಲದ ಆರ್ದ್ರ ಹಾಗೂ ದ್ರವಾಂಶದ ವಾತಾವರಣದಿಂದ ಎಲ್ಲ ಜೀವಿಗಳಲ್ಲಿಯೂ ದ್ರವತ್ವ ಮತ್ತು ಆಮ್ಲತ್ವವು ಹೆಚ್ಚಾಗಿರುತ್ತದೆ. ದೇಹದಲ್ಲಿ ಪಿತ್ತ ದೋಷದ ಶೇಖರಣೆ ಯಾಗುತ್ತಾ ಹೋಗಿರುತ್ತದೆ.
  • ರಕ್ತದಲ್ಲಿ ಉಷ್ಣತೆ ಮತ್ತು ಅಮ್ಲತೆ ಜಾಸ್ತಿ ಆಗಿರುತ್ತದೆ. ನಂತರ ಬರುವ ಶರತ್ ಋತುವಿನ ಬಿಸಿಲುಗಾಲದಲ್ಲಿ,
    ಮಳೆಗಾಲದ ಶೇಖರಣೆಯಾಗಿರುವ ಪಿತ್ತವು ಪ್ರಕುಪಿತವಾಗುತ್ತದೆ. ಇದು ಕಾಲದ ಪ್ರಭಾವದಿಂದ ದೇಹದಲ್ಲಾ ಗುವ ಸಹಜವಾದ ಏರುಪೇರು. ಈ ಪಿತ್ತ ವೃದ್ಧಿಯಿಂದ ಸುಮಾರು ನವರಾತ್ರಿಯ ಆಸುಪಾಸಿನಲ್ಲಿ ಜ್ವರ, ಹುಳಿತೇಗು, ಹಸ್ತಪಾದ ಉರಿ, ಕಣ್ಣಿನ ತೊಂದರೆ, ಅರ್ಧ ತಲೆನೋವು, ಗಂಟುಗಳ ಊತ, ಸರ್ಪಸುತ್ತು,
    ಚರ್ಮದ ತೊಂದರೆಗಳು ಹೆಚ್ಚಾಗುತ್ತವೆ. ಈ ಋತುವಿನಲ್ಲಿ ನಮ್ಮ ಜೀವನಶೈಲಿಯು ಹೇಗಿರಬೇಕು? ಸ್ನೇಹಿತರೆ,
  • ಒಂದು ವಿಷಯವನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳೋಣ. ನಮ್ಮ ಜೀವನಶೈಲಿ ಸದಾ ಋತುವನ್ನು ಅನುಸರಿಸಿ ಇರಬೇಕೇ ಹೊರತು ಯಾವುದೋ ಟ್ರೆಂಡಿಂಗ್ ರೀಲ್ ಅಥವಾ ಯೂಟ್ಯೂಬ್ ವಿಡಿಯೋಗಳನ್ನು ಅನುಸರಿಸಿ ಅಲ್ಲ.
  • ನಾವು ಯಾವುದು ತಿಂದರೆ ಒಳ್ಳೆಯದು ಯಾವುದು ಒಳ್ಳೆಯದಲ್ಲ ಎಂಬುದನ್ನು ನಿರ್ಧಾರ ಮಾಡಲು ಮುಖ್ಯ ವಾದ reference point- ‘ಋತು’. ಉದಾಹರಣೆಗೆ: ಮಳೆಗಾಲದಲ್ಲಿ ಜೇನುತುಪ್ಪವನ್ನು ಬಳಸುವುದು ಆರೋಗ್ಯ ವರ್ಧಕ, ಅದೇ ಜೇನುತುಪ್ಪವನ್ನು ನಾವು ಶರತ್ ಋತುವಿನಲ್ಲಿ ಸೇವಿಸಿದರೆ ಮಾರಕ. ವ್ಯಾಯಾಮವು ಹೇಮಂತ- ಶಿಶಿರಗಳಲ್ಲಿ ಸ್ವಾಸ್ಥ್ಯವರ್ಧಕವಾದರೆ, ಗ್ರೀಷ್ಮ ಋತುವಿನಲ್ಲಿ ಹಾನಿಕಾರಕ. ಹಾಗಾಗಿಯೇ, ನಮಗೆ ಸೂಕ್ತ ವಾದ ಆಹಾರ-ವಿಹಾರಗಳನ್ನು ಆಯ್ಕೆ ಮಾಡಲು ನಾವು ಬಳಸಬೇಕಾದ ಕೈಪಿಡಿ ಯೆಂದರೆ – ಆಯುರ್ವೇದೋಕ್ತ ಋತುಚರ್ಯೆ !
  • ಶರತ್ ಋತುವಿನ ಶಮನಚರ್ಯೆ ಹೇಗೆ? ಋತುವಿಗೆ ತಕ್ಕಂತೆ ನಮ್ಮ ಆಹಾರಗಳ ಯುಕ್ತಿ ಪೂರ್ವ ಅನುಸರಣೆ ಯನ್ನು ಮಾಡಬೇಕು. ಪ್ರಧಾನವಾಗಿ ನಾವು ಈ ಋತುವಿನಲ್ಲಿ ಸೇವಿಸುವ ಆಹಾರವು ಕಹಿ, ಒಗರು ಮತ್ತು ಸಿಹಿ ಪ್ರಧಾನವಾಗಿರಬೇಕು. ಏಕೆಂದರೆ ಈ ರಸಗಳು ಪಿತ್ತವನ್ನು ಶಮನ ಮಾಡಿ, ದೇಹದಲ್ಲಿ ತಂಪನ್ನು ಉಂಟುಮಾಡುತ್ತದೆ. ಈ ಕಾಲದಲ್ಲಿ ಜೀರ್ಣಿಸಲು ಸುಲಭವಾದ ಆಹಾರವು ಉತ್ತಮ. ಏಕ ದಳಗಳಲ್ಲಿ ಹಿಂದಿನ ವರ್ಷದ ಧಾನ್ಯಗಳು ಹಿತಕರ. ಅಕ್ಕಿ ಗೋಧಿ, ಜವೆ ಗೋಧಿ, ಜೋಳ ಮತ್ತು ರಾಗಿಗಳನ್ನು ಆಯಾ ಪ್ರಾಂತ್ಯದ ಅಭ್ಯಾಸಕ್ಕೆ ತಕ್ಕಂತೆ ಬಳಸಬೇಕು.

  • ಇವುಗಳನ್ನು ಅನ್ನ/ ರವೆ/ ನುಚ್ಚು/ ಹಿಟ್ಟಿನ ರೂಪದಲ್ಲಿ ಬಳಸಬಹುದು. ನೆನಪಿರಲಿ- ಅವಲಕ್ಕಿಯ ಉಪಯೋಗ ಶರತ್ ಋತುವಿನಲ್ಲಿ ಹೆಚ್ಚಾಗಿ ಬೇಡ. ಹುಳಿ ಒಗ್ಗರಣೆ ಮಾಡಿದ ಅವಲಕ್ಕಿ, ಗೊಜ್ಜು ಅವಲಕ್ಕಿ,
    ಅವಲಕ್ಕಿ-ಮೊಸರುಗಳು ಮತ್ತಷ್ಟು ಪಿತ್ತವನ್ನು ಕೆರಳಿಸುವಂತಹ ಆಹಾರಗಳು. ಇವುಗಳನ್ನು ಉಪವಾಸ
    ಅಥವಾ ಒಪ್ಪತ್ತಿನ ಹೆಸರಿನಲ್ಲಿ ಸೇವಿಸಿದರೆ ತೊಂದರೆ ಹೆಚ್ಚಾಗುವುದು ಖಂಡಿತ! ಮೊಸರಿನ ಬಳಕೆಯೂ ಸಹ
    ಶರತ್ ಋತುವಿನಲ್ಲಿ ನಿಷಿದ್ಧ. ಏಕೆಂದರೆ, ಮೊಸರು ಸ್ಪರ್ಶದಲ್ಲಿ ತಂಪೆನಿಸಿದರೂ ಸಹ ದೇಹದಲ್ಲಿ
    ಉಷ್ಣತೆಯನ್ನು ಹೆಚ್ಚಿಸಿ ಪಿತ್ತ ರಕ್ತಗಳನ್ನು ಕೆಡಿಸುತ್ತದೆ.
  • ಆದ್ದರಿಂದ, ಶರತ್ ಋತುವಿನಲ್ಲಿ ಮೊಸರಿನಿಂದ ದೂರವಿದ್ದರೆ ಒಳ್ಳೆಯದು. ಇನ್ನು, ದ್ವಿದಳಗಳಲ್ಲಿ
    ಹೆಸರುಬೇಳೆ, ತೊಗರಿಬೇಳೆ, ಚೆನ್ನಂಗಿ ಬೇಳೆ ಮತ್ತು ಮೆಂತ್ಯೆಗಳ ಬಳಕೆ ಹಿತ. ಆದರೆ, ನೆನಪಿಡಿ ಸ್ನೇಹಿತರೇ,
    ಸಿಪ್ಪೆ ಸಹಿತವಾದ ಕಾಳುಗಳು ರಕ್ತವನ್ನು ಕೆಡಿಸಿ ಪಿತ್ತವನ್ನು ಹೆಚ್ಚು ಮಾಡುವುದರಿಂದ ಶರತ್ ಋತುವಿನಲ್ಲಿ
    ಕಾಳುಗಳು, ಮೊಳಕೆ ಕಾಳುಗಳು, ಅವರೆ, ಉದ್ದು, ಹುರಳಿ, ಅಲಸಂದೆ, ಬಟಾಣಿ, ರಾಜ್ಮಾಗಳ ಬಳಕೆ
    ಸತತವಾಗಿ ಬೇಡ. ಸೋಯಾಬೀನ್ ನಂತಹ ದ್ವಿದಳಗಳಂತು ನಮ್ಮ ಪ್ರಾಂತ್ಯಕ್ಕೆ ಒಗ್ಗದು. ಇನ್ನು,
    ಉದ್ದನ್ನು ವಾರಕ್ಕೊಮ್ಮೆ ಬಳಕೆ ಮಾಡಿದರೆ ತೊಂದರೆಯಾಗದು. ಆದರೆ, ನಿಗಾ ವಹಿಸಬೇಕಾದ
    ವಿಷಯವೇನೆಂದರೆ ಹುಳಿಯಾದ ಫ್ರಿqನಲ್ಲಿ ದಿನಗಳ ಗಟ್ಟಲೆ ಇಟ್ಟು ಉಪಯೋಗಿಸುವ ದೋಸೆ ಹಿಟ್ಟಾಗಲಿ
    ಅಥವಾ ಇಡ್ಲಿ ಹಿಟ್ಟುಗಳು ಅತಿಯಾಗಿ ಪಿತ್ತಕಾರಕ. ಇದು ರಕ್ತವನ್ನು ದೂಷಣೆ ಮಾಡುತ್ತದೆ. ಹಿಟ್ಟುಗಳನ್ನು
    ಒಂದೇ ದಿನದಲ್ಲಿ ಮುಗಿಸುವುದು ಉತ್ತಮ. ಇದು ಚಪಾತಿ ಹಿಟ್ಟಿಗೂ ಸಹ ಅನ್ವಯ!
  • ಶರತ್ ಋತುವಿನಲ್ಲಿ ಹಿತಕರವಾದ ಕೆಲವು ಆಹಾರಗಳು: ಸಿಹಿ ತಿನಿಸುಗಳಲ್ಲಿ ಧಾನ್ಯಗಳ ಹಾಲ್ಬಾಯಿ/
    ಹಲ್ವಾ – ಅಕ್ಕಿ /ಗೋಧಿ/ ರಾಗಿ ಹಾಲ್ಬಾಯಿ ಮತ್ತು ಕುಂಬಳಕಾಯಿ ಹಲ್ವಾ ಉತ್ತಮ. ಹಾಗೆಯೇ, ಕಾಯಿ
    ಹೋಳಿಗೆ , ಹೆಸರುಬೇಳೆ ಹೋಳಿಗೆ, ಹೆಸರು ಬೇಳೆಯಿಂದ ಮಾಡಿದ ಸಿಹಿತಿನಿಸುಗಳು, ಪೊಂಗಲ, ಸಜ್ಜಿಗೆ ಆರೋಗ್ಯಕರ. ಹಾಲಿನಿಂದ ತಯಾರಿಸಿದ ಪಾಯಸಗಳು, ಕಬ್ಬಿನ ಹಾಲಿನಿಂದ ತಯಾರಿಸಿದ ಪದಾರ್ಥಗಳು ಸಹ ಒಳ್ಳೆಯದು. ದಿನನಿತ್ಯದ ಬಳಕೆಗೆ ಹೆಸರುಬೇಳೆ, ಹಳೇ ಅಕ್ಕಿ ಮತ್ತು ಮೆಂತ್ಯದಿಂದ ಮಾಡಿದ ಇಡ್ಲಿ/ ದೋಸೆಗಳನ್ನು ಬಳಸಬಹುದು.
  • ನೀರು ದೋಸೆ, ಮೆಂತ್ಯ ಅಕ್ಕಿ ದೋಸೆ, ಮಜ್ಜಿಗೆ ಹುಳಿ, ತೊವ್ವೆ, ನೆಲ್ಲಿಕಾಯಿ ಸಾರು ಒಳ್ಳೆಯದು. ಜೊತೆಗೆ
    ಗುಲ್ಕಂದ್, ದ್ರಾಕ್ಷಿ ಗೊಜ್ಜು, ಆಮ್ಲ ಮೊರಬ್ಬ ಇವೆಲ್ಲ ಹಿತಕರ. ಇನ್ನು ತರಕಾರಿ ವಿಷಯಕ್ಕೆ ಬರೋಣ. ಸ್ವಲ್ಪ
    ಕಹಿ-ಒಗರು ರುಚಿ ಇರುವ ತರಕಾರಿಗಳು ಒಳ್ಳೆಯದು.
  • ಈ ಕಾಲದಲ್ಲಿ ಬಳ್ಳಿಯಲ್ಲಿ ಬೆಳೆಯುವ ತರಕಾರಿಗಳು ಸದಾ ಹಿತ. ಹೀರೆಕಾಯಿ, ಪಡವಲಕಾಯಿ, ಬಣ್ಣದ
    ಸೌತೆಕಾಯಿ, ಹಾಗಲಕಾಯಿ, ಹಾಲು ಕುಂಬಳ, ಬೂದುಗುಂಬಳ, ಚೌಳಿಕಾಯಿ ಒಳ್ಳೆಯದು. ಹರಿವೆ,
    ಪಾಲಕ್, ಮೆಂತ್ಯ, ಚಕೋತ ಮತ್ತು ಕೊತ್ತಂಬರಿ ಸೊಪ್ಪುಗಳು ಒಳ್ಳೆಯದು.
  • ಸ್ನೇಹಿತರೆ, ಪಿತ್ತ ಹೆಚ್ಚಿರುವ ಈ ಕಾಲದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಪುದಿನ, ಚಕ್ಕೆ, ಮೆಣಸು ಶುಂಠಿಯಂತಹ
    ಮಸಾಲೆಗಳುಗಳು ಶರೀರದ ಉಷ್ಣತೆಯನ್ನು ಮತ್ತಷ್ಟು ಹೆಚ್ಚಿಸುವುದರಿಂದ ದಿನನಿತ್ಯದ ಅಡುಗೆಗೆ ಬೇಡ. ಶರತ್
    ಋತುವಿನಲ್ಲಿ ತೆಂಗಿನಕಾಯಿಯ ತುರಿ, ಎಳನೀರು, ತೆಂಗಿನ ಹಾಲಿನ ಅಡುಗೆಗಳು ಹಿತಕರ. ಇವುಗಳು ಪಿತ್ತ
    ರಕ್ತಗಳನ್ನು ಶಮನಗೊಳಿಸುತ್ತದೆ. ಆದರೆ ಸಬ್ಸಿಗೆ, ಕ್ಯಾರೆಟ, ಟೊಮೆಟೊ, ಅಣಬೆ, ಆಲೂಗಡ್ಡೆ,
    ಕ್ಯಾಪ್ಸಿಕಂಗಳ ನಿತ್ಯ ಬಳಕೆ ತೊಂದರೆ ತರುತ್ತದೆ.
  • ಕಡಲೆಕಾಯಿ ಅಥವಾ ಕಡಲೆ ಬೀಜದ ಬಳಕೆಯು ಮಿತಿಯಲ್ಲಿರಲಿ. ಹಣ್ಣುಗಳಲ್ಲಿ ಸಿಹಿ ಮತ್ತು ತಂಪಾದ ಹಣ್ಣು ಗಳು ಒಳ್ಳೆಯದು. ದಾಳಿಂಬೆ, ಸಪೋಟ, ಸೀತಾಫಲ, ಅಂಜೂರ, ಖರ್ಜೂರ ಇರಲಿ. ಪ್ರತಿನಿತ್ಯದ
    ಆಹಾರದಲ್ಲಿ ತುಪ್ಪವನ್ನು ಬಳಸುವುದು ಬಹಳ ಮುಖ್ಯ. ಹಾಲಿನ ಬೇರೆ ಉತ್ಪನ್ನಗಳ ಬಗ್ಗೆ ಹೇಳ
    ಬೇಕಾದರೆ, ಹಾಲು ಮತ್ತು ಬೆಣ್ಣೆಗಳು ಒಳ್ಳೆಯದು.
  • ಆದರೆ ಹುಳಿ ಮಜ್ಜಿಗೆ, ಮೊಸರು, ಚೀಸ್ ಪನ್ನೀರ್‌ಗಳ ನಿತ್ಯ ಬಳಕೆಯಿಂದ ರಕ್ತ-ಪಿತ್ತಗಳ ದುಷ್ಟಿಯಾಗಬಹುದು. ಆದರೆ, ದಿನನಿತ್ಯದ ಬಳಕೆಗೆ ಕಹಿ-ಒಗರು ಪದಾರ್ಥಗಳಿಂದ ಮಾಡಿದ ಮಜ್ಜಿಗೆ ಅಥವಾ ತಂಬುಳಿಗಳು ಅತ್ಯಂತ ಆರೋಗ್ಯಕರ. ಮೆಂತ್ಯ ತಂಬುಳಿ, ಹೀರೆಕಾಯಿ ತಂಬುಳಿ, ಪಡವಲಕಾಯಿ ತಂಬುಳಿ, ಅಮೃತ ಬಳ್ಳಿಯ ಚಿಗುರಿನ ತಂಬುಳಿ ಒಳ್ಳೆಯದು.
  • ಕರಿದ ತಿಂಡಿಗಳನ್ನು ಮಾಡುವಾಗ ತುಪ್ಪ- ಬೆಣ್ಣೆಯಿಂದ ಕರಿದ ತಿನಿಸುಗಳು ರಕ್ತದುಷ್ಟಿಯನ್ನು ಮಾಡದು ಅಥವಾ ಪಿತ್ತವನ್ನು ಕೆರಳಿಸದು. ಅಥವಾ ತುಪ್ಪ ಮತ್ತು ಫಿಲ್ಟರ್ಡ್ ಎಣ್ಣೆಯನ್ನು ಸೇರಿಸಿಯೂ
    ಕರಿಯಬಹುದು. ಇದು ಹೆಚ್ಚು ತೊಂದರೆ ಮಾಡದು. ಆದರೆ ನೆನಪಿಡಿ, ತಿಂಡಿಗಳನ್ನು ತಯಾರಿಸಿ, ಸಂಗ್ರಹಿಸಿ,
    ತಿಂಗಳುಗಳ ಕಾಲ ಇಟ್ಟು ತಿನ್ನುವುದು ಹಾನಿಕರ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಶರತ್ ಋತುವಿನಲ್ಲಿ ಆಹಾರದಲ್ಲಿ ಉಪ್ಪು, ಹುಳಿ, ಖಾರಗಳ ಬಳಕೆ ಮಿತಿಯ ಇರಲಿ .ಇವುಗಳು ರಕ್ತ ಪಿತ್ತ ದುಷ್ಟಿಗೆ ನೇರವಾದ ಕಾರಣವಾಗಬಹುದು. ಖಾರಕ್ಕೆ ಒಣ ಶುಂಠಿ, ಒಣ ಮೆಣಸು ಉತ್ತಮ. ಕಾಳು ಮೆಣಸು, ಬೆಳ್ಳುಳ್ಳಿ, ಹಸಿಮೆಣಸು ಹಿಪ್ಪಲಿ, ಹಸಿ ಶುಂಠಿ ಒಳ್ಳೆಯದಲ್ಲ.
  • ಈ ಕಾಲದಲ್ಲಿ ಹುಳಿ ರುಚಿಗೆ ಟೊಮ್ಯಾಟೋ ಬದಲು ನೆಲ್ಲಿ ಪುಡಿ, ಹಳೆ ಹುಣಸೆಹಣ್ಣು, ದಾಳಿಂಬೆ ಹುಳಿಯ ಬಳಕೆ ಉತ್ತಮ. ಉಪ್ಪಿಗೆ ಸೈಂಧವ ಲವಣ /ಹಿಮಾಲಯನ್ ಪಿಂಕ್ ಸಾಲ್ಟ ಒಳ್ಳೆಯದು. ಮಾಂಸಾಹಾರಿಗಳಿಗೆ ನೀರು ಬಾತುಕೋಳಿಯ ಮೊಟ್ಟೆ, ಕೋಳಿ ಮೊಟ್ಟೆಯ ಬಿಳಿ ಭಾಗ, ಆಡಿನ ಮಾಂಸ, ಸಿಹಿ ನೀರಿನ
    ಚಿಕ್ಕ ಮೀನುಗಳು ಒಳ್ಳೆಯದು. ಸಮುದ್ರದ ಜೀವಿಗಳ ಸೇವನೆಯು ರಕ್ತವನ್ನು ಕೆರಳಿಸುತ್ತದೆ. ಮಾಂಸಾಹಾರದ
    ಜೊತೆಗೆ ಮೊಸರು- ಹಾಲಿನ ಬಳಕೆ ಬೇಡ. ಶರತ್ ಋತುವಿನಲ್ಲಿ ಆಗುವ ಪಿತ್ತ ರಕ್ತಗಳ ದುಷ್ಟಿಯನ್ನು ಶಮನ ಮಾಡಲು ನಾವು ಸೇವಿಸುವ ನೀರಿಗೂ ಸಹ ಒಂದು ಸಂಸ್ಕಾರವನ್ನು ನೀಡಿದರೆ ಒಳ್ಳೆಯದು.
  • ನೀರಿನ ಜೊತೆ ಕೊತ್ತಂಬರಿ ಬೀಜದ ಪುಡಿ ಅಥವಾ ಒಣ ಶುಂಠಿಯ ಪುಡಿಯನ್ನು ಹಾಕಿ ಒಮ್ಮೆ ಕುದಿಸಿ, ಪೂರ್ತಿ ದಿನ ಇದನ್ನೇ ಬಾಯಾರಿಕೆಯಾದಾಗ ಸೇವಿಸುವುದು ಒಳ್ಳೆಯದು. ಹಬ್ಬದ ಸಂದರ್ಭದಲ್ಲಿ ಕರಿದ ತಿನಿಸುಗಳನ್ನು ತಿಂದಾಗ , ಭೂರಿ ಭೋಜನದಿಂದ ಆದ ಅಜೀರ್ಣ, ಹುಳಿತೇಗು, ಎದೆ ಉರಿ ಇದ್ದಾಗ ಇದು ಉತ್ತಮ ಪಾನೀಯವಾಗುತ್ತದೆ. ಹಾಗೆಯೇ, ಒಣದ್ರಾಕ್ಷಿ ನೀರು, ಲಾವಂಚ ನೀರು, ಭದ್ರಮುಷ್ಟಿಯ
    ನೀರನ್ನು ಸಹ ಸೇವಿಸಬಹುದು. ನಿತ್ಯ ಎಳನೀರಿನ ಸೇವನೆಯೂ ಹಿತಕರ. ಈ ಕಾಲದಲ್ಲಿ ಹಾಲು ಮತ್ತು
    ಸಕ್ಕರೆಯೂ ಸಹ ಅತ್ಯುತ್ತಮವಾದ ಪಾನೀಯವಾಗುತ್ತದೆ. ನೀರನ್ನು ಸೇವಿಸುವಾಗ ನೆನಪಿರಬೇಕಾದ
    ವಿಚಾರವೇನೆಂದರೆ- ಸದಾ ಬಾಯಾರಿಕೆಯನ್ನು ಅನುಸರಿಸಿಯೇ ನೀರನ್ನು ಸೇವಿಸಬೇಕು, ಹಾಗೆಯೇ
    ಊಟದ ಜೊತೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಹೀರಬೇಕು.
  • ಸ್ನೇಹಿತರೆ, ಒಟ್ಟಾರೆ ಇದು ಶರತ್ ಋತುವಿನಲ್ಲಿ ನಾವು ಅನುಸರಿಸಬೇಕಾದ ಆಹಾರ ಪದ್ಧತಿಯ ಒಂದು
    ಪುಟ್ಟ ಸಂಗ್ರಹ. ಇದೇ ರೀತಿ, ಈ ಋತುವಿನಲ್ಲಿ ನಾವು ಪಾಲಿಸಬೇಕಾದ ವಿಹಾರಗಳನ್ನು ಸಹ ಮತ್ತೊಂದು
    ಸಂಕಲನದಲ್ಲಿ ಚರ್ಚಿಸೋಣ. ಅಲ್ಲಿಯವರೆಗೆ, ‘ಸರ್ವೇ ಜನಾಃ ಸುಖಿನೋ ಭವಂತು’ ಎಂದು ಪ್ರಾರ್ಥಿಸುತ್ತಾ ಈ ಲೇಖನವನ್ನು ಇಲ್ಲೇ ಸಮಾಪ್ತಗೊಳಿಸುತ್ತೇನೆ.

ಇದನ್ನೂ ಓದಿ: Dr SadhanaShree Column: ಇಲ್ಲಿದೆ ನೋಡಿ ಪರಸ್ಪರ ಹೊಂದಿಕೆಯಾಗದ ಆಹಾರಗಳ ಪಟ್ಟಿ