ಮಾರ್ಗದರ್ಶನ
ಪ್ರೊ.ಸಿ.ಶಿವರಾಜು
ಆಕಾಶಕ್ಕೆ ಏಣಿ ಹಾಕಿದವರಿಗೆ ಪಾತಾಳಕ್ಕೆ ಬಿದ್ದಾಗಲೂ ಏಳುವ ಸಾಮರ್ಥ್ಯವಿರಬೇಕು. ಗುರಿಯನ್ನು ಮುಟ್ಟುವ ಮಾರ್ಗದಲ್ಲಿ ಅವಮಾನ, ಜನಗಳು ಕೀಳಾಗಿ ಕಾಣುವುದು, ಬೆಳಕು ಹೋಗಿ ಹಠಾತ್ತನೆ ಕತ್ತಲೆ ಕವಿಯುವುದು ಸಹಜ. ಅಂತಹ ಸಂದರ್ಭದಲ್ಲಿ ಯೋಚಿಸಿ, ನಿರ್ಧರಿಸಿ ಕತ್ತಲಿನ ಜಗತ್ತಿನಿಂದ ಬೆಳಕಿನ ಕಡೆಗೆ ನಡೆದೇ ತೀರುತ್ತೇ ನೆಂದು ತೀರ್ಮಾನಿಸಿ. ಆಗ ಮಾತ್ರ ವಿಶ್ವದಲ್ಲಿ ನಮ್ಮನ್ನು ಸೋಲಿಸುವ ಧೈರ್ಯ ಯಾರಿಗೂ ಇರುವುದಿಲ್ಲ.
ನಿಶ್ಚಲವಾದ ಮನಸ್ಸು ಮನುಷ್ಯನನ್ನು ಬಹುದೂರ ಕರೆದೊಯ್ಯುತ್ತದೆ. ಚಂಚಲ ಮನಸ್ಸು ನಿಂತಲ್ಲೇ ನಿಲ್ಲಿಸುತ್ತದೆ. ದೃಢ ಸಂಕಲ್ಪದ ಮನಸ್ಸು ಬಾನೆತ್ತರಕ್ಕೆ ಬೆಳೆಸುತ್ತದೆ. ಮನಸ್ಸಿದ್ದರೆ ಮಾರ್ಗ. ನಿಖರ, ನಿಶ್ಚಿತ, ಸ್ಪಷ್ಟತೆಯಿಂದ ಕೂಡಿದ ಮನಸ್ಸು ಗುರಿ ಸಾಧಿಸುವ ಕಡೆ ಕರೆದೊಯ್ಯುತ್ತದೆ. ಎಲ್ಲದಕ್ಕೂ ಮನಸ್ಸೇ ಕಾರಣ. ಹಾಗೆ ಪ್ರಶಾಂತತೆ, ನಿರ್ಮಲತೆಯಿಂದ ಕೂಡಿದ ಮನಸ್ಸನ್ನು ಸುರಕ್ಷಿತಗೊಳಿಸುವುದು ಅಷ್ಟೇ ಮುಖ್ಯವಾಗಿರುತ್ತದೆ.
ಯಶಸ್ಸನ್ನು ಗಳಿಸಲು, ಸಾಧಕರ ಸಾಲಿನಲ್ಲಿ ನಿಲ್ಲಬೇಕೆಂಬ ಜೀವನದ ಬಯಕೆಯ ಹೆಜ್ಜೆಯ ಗುರುತುಗಳನ್ನು ಇಟ್ಟು, ತನ್ನ ತನವನ್ನು ಪ್ರದರ್ಶಿಸುವ ಮನೋಭಾವನೆ, ನಾನು ನಾನಾಗಬೇಕೆನ್ನುವ ಮನಸ್ಸನ್ನಿಟ್ಟು ಎಲ್ಲರಲ್ಲೊಬ್ಬ ವಿಶೇಷ ವ್ಯಕ್ತಿಯಾಗಬೇಕು ಎನ್ನುವ ಮಹದಾಸೆ ಕಟ್ಟಿಕೊಂಡು ಗುರಿಯನ್ನು ಸಾಧಿಸುವ ಮಾರ್ಗ ಹೇಗಿರಬೇಕೆಂದರೆ, ದೃಢವಾದ ಛಲ, ನಿರ್ದಿಷ್ಟ ಗುರಿ, ಗುರಿಯನ್ನು ತಲುಪಲು ಶಿಸ್ತು, ತ್ಯಾಗ, ಆತ್ಮವಿಶ್ವಾಸ, ಧೈರ್ಯ, ನಂಬಿಕೆ, ಸಹನೆ, ತಾಳ್ಮೆ, ಗೆಲುವಿನ ಗುಣ, ಕನಸನ್ನು ಸಾಕಾರಗೊಳಿಸುವ ಶಕ್ತಿ, ಬಯಕೆ, ನಿರೀಕ್ಷೆ, ಒಳ್ಳೆಯ ಧ್ಯೇಯ, ಸಾಮರ್ಥ್ಯ, ದೃಢಸಂಕಲ್ಪ, ಸಮಯಪ್ರಜ್ಞೆ, ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಎದೆಗಾರಿಕೆ, ಸತತಪ್ರಯತ್ನ, ನಿರಂತರ ಹೋರಾಟ, ಭಯ ಪಡದಿರುವುದು, ಕಷ್ಟಗಳನ್ನು ನಿಗ್ರಹಿಸುವ ಆತ್ಮಸ್ಥೈರ್ಯ, ಜಾಗರೂಕತೆ, ಸಕಾರಾತ್ಮಕ ಚಿಂತನೆ, ಅವಿರತಶ್ರಮ, ಉತ್ಸಾಹ, ತಾನಿಟ್ಟಿರುವ ಗುರಿಯನ್ನು ಪ್ರೀತಿಸುವುದು, ಸೃಜನಶೀಲತೆ, ಉತ್ತಮ ಯೋಜನೆ, ಕಾಲದ ಮಿತಿ, ವಿನಯ, ವಿವೇಕ, ಸಮತೋಲನಚಿತ್ತ, ಸ್ಥಿರತೆ, ಆದ್ಯತೆ, ಪ್ರಾಮಾಣಿಕತೆ, ದಿಟ್ಟತನ, ಏಕಾಗ್ರತೆ, ಕೆಲಸವನ್ನು ಮುಂದೆ ಹಾಕದಿರುವ ಭರವಸೆ, ತನ್ನ ಸಾಧನೆಯ ಬಗ್ಗೆ ಸ್ಪೂರ್ತಿ ಹೊಂದುವುದು, ಮುಂತಾದುವುಗಳನ್ನು ಅಳವಡಿಸಿಕೊಂಡು ತನ್ನ ಕಾರ್ಯ ಸಾಧನೆಗೆ ಹತಾಶರಾಗದೆ, ಏಕಾಗ್ರತೆಯಿಂದ, ನಿರಂತರವಾಗಿ, ಪರಿಶ್ರಮ ಪಟ್ಟರೆ, ತಮ್ಮ ಉದ್ದೇಶಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ.
ವಿಶ್ವದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹಾಸಾಧನೆ ಮಾಡಿರುವ ಹಾಗೂ ಸಾಧನೆ ಮಾಡಿ ಇಡೀ ಸಮಾಜಕ್ಕೆ ಅಷ್ಟೇಏಕೆ ವಿಶ್ವಕ್ಕೆ ಮಾದರಿಯಾಗಿ, ಸಮಾಜ ಸುಧಾರಣೆ ಮಾಡಿ ಸಮಾಜದ ದಿಕ್ಕನ್ನೇ ಬದಲಾಯಿಸಿರುವ, ನಮಗೆಲ್ಲಾ ಸ್ಪೂರ್ತಿ ದಾಯಕರಾಗಿರುವ, ಮಹಾಸಾಧಕರು ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ಅದರಲ್ಲಿ ಮೊದಲಿಗೆ ಮಹಾಪರಿ ತ್ಯಾಗಿಯಾಗಿ ಅರಮನೆಯನ್ನು ತೊರೆದು, ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಏಕಾಗ್ರತೆ
ಮತ್ತು ಕಠಿಣಪರಿಶ್ರಮದಿಂದ ತಪಸ್ಸನ್ನು ಮಾಡಿ ಜ್ಞಾನೋದಯವನ್ನು ಪಡೆದು, ವಿಶ್ವದ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿದ ಮಹಾಜ್ಞಾನಿ, ಬುದ್ಧನೇ ಜಗತ್ತಿನ ಸತ್ಯ.
ಬಸವಣ್ಣ, ಬಾಬಾಸಾಹೇಬ್‌ಅಂಬೇಡ್ಕರ್, ಗಾಂಧೀಜಿ ಹಾಗೂ ಇನ್ನು ಅನೇಕ ಮಹಾಸಾಧಕರನ್ನು ನಾವು ತಿಳಿದಿದ್ದೇವೆ. ಪ್ರಸ್ತುತ ವರ್ತಮಾನ ಕಾಲದ ಯುವ ಸಮೂಹ ಸಾಧಕರಾಗಲು ಯಾವ ದಿಕ್ಕಿನಲ್ಲಿ ಸಾಗಿದರೆ ಸಾಧನೆಯ ದಡವನ್ನು ಸೇರಬಹುದು ಎಂಬುದರ ಬಗ್ಗೆ ಅಂಕಣ ಬರೆಯುವುದು ಸೂಕ್ತವೆಂದು ನನ್ನ ಬರವಣಿಗೆ ಯನ್ನು ಮುಂದುವರೆಸಿದ್ದೇನೆ. ಸಾಧಕರ ಸಾಲಿನಲ್ಲಿ ನಿಲ್ಲಬೇಕಾದರೆ ಮೊದಲಿಗೆ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು.
ಶಿಸ್ತಿಲ್ಲದೆ ಮುಂದಿನ ಮಾರ್ಗ ಸಾಗುವುದಿಲ್ಲ. ತಾಳ್ಮೆಯಿರಬೇಕು ತಾಳ್ಮೆ ಇದ್ದವರು ಮಾತ್ರ ಸಾಧನೆ ಮಾಡಲು ಅರ್ಹ ರೆನಿಸುತ್ತಾರೆ. ಶ್ರದ್ಧೆ ಇರಬೇಕು, ಶ್ರದ್ಧೆ ನಮಗೆ ಕಲಿಯುವ ಉತ್ಸಾಹವನ್ನು ತುಂಬುತ್ತದೆ. ‘ಶ್ರದ್ಧಾವಾನ್ ಲಭತೇ ಜ್ಞಾನಮ್’ ಎಂಬ ಆತ್ಮವಿಶ್ವಾಸವಿದ್ದವರು ಸಾಧಕರಾಗುವುದರಲ್ಲಿ ಎರಡು ಮಾತಿಲ್ಲ. ಉದ್ದೇಶ ಚೆನ್ನಾಗಿಬೇಕು,
ಉದ್ದೇಶ ಚೆನ್ನಾಗಿದ್ದರೆ ಗುರಿಯ ಸನಿಹಕ್ಕೆ ಸಮೀಪಿಸಿದಂತೆ, ಸಮಯಕ್ಕೆ ಬೆಲೆ ತೆತ್ತಬೇಕು. ಯಾರು ಸಮಯಕ್ಕೆ ಬೆಲೆ ಕೊಡುತ್ತಾರೋ ಅವರಿಗೆ ಸಾಧನೆ ಕಟ್ಟಿಟ್ಟ ಬುತ್ತಿ. ಅಹಂ ಅನ್ನು ತ್ಯಜಿಸಿ ಪುಸ್ತಕದ ಹುಳುವಾಗಬೇಕು, ನಾನು ಗೆದ್ದೇಗೆಲ್ಲುತ್ತೇನೆ ಎನ್ನುವ ದೃಢಸಂಕಲ್ಪ ಮಾಡಬೇಕು, ನಿಮ್ಮ ಶಕ್ತಿಯ ಬಗ್ಗೆ ನಿಮಗೆ ನಂಬಿಕೆ ಇರಬೇಕು. ಕನಸಿರಬೇಕು. ದೊಡ್ಡ ಗುರಿಯನ್ನು ಇಟ್ಟುಕೊಂಡು ಸಾಧಿಸುವ ಕನಸು ಕಟ್ಟಿಕೊಳ್ಳಬೇಕು, ಸಾಧಿಸುವ ಛಲ ಮತ್ತು
ಧೈರ್ಯವಿದ್ದರೆ ಸಾಗರವನ್ನೇ ಈಜಬಹುದು. ‘ಧೈರ್ಯಂ ಸರ್ವತ್ರ ಸಾಧನಮ್’ ಎಂಬುದು ನಿತ್ಯಸತ್ಯ ಭಯ ಮತ್ತು ಅಭದ್ರತೆಯನ್ನು ತನ್ನಿಂದ ತೊಲಗಿಸಿದಾಗ ಮಾತ್ರ ಭರವಸೆ ತಾನಾಗಿಯೇ ಮೂಡುತ್ತದೆ.
ಹತಾಶೆ, ಒಂಟಿತನ, ಬೇಸರ, ನಿರುತ್ಸಾಹ ವನ್ನು ಕಿತ್ತೆಸೆಯಬೇಕು. ಸೋಲಿನ ಹೊಸಲನ್ನು ದಾಟಿದ ಮೇಲೆಯೇ ಗೆಲುವಿನ ಅರಮನೆ ತಲುಪಲು ಸಾಧ್ಯವಾಗುವುದು. ಕಷ್ಟ, ದುಃಖ, ಅಡಚಣೆ, ಇವು ಯಾವುದು ಸಾಧಕನಿಗೆ ಅಡ್ಡಿಯಾಗುವುದಿಲ್ಲ. ಹಳ್ಳಿಕಡೆ ಒಂದು ಗಾದೆ ಇದೆ. ಕುಣಿಯಲು ಬಾರದವರಿಗೆ ನೆಲಡೊಂಕು ಎಂದು. ಇದನ್ನೇ ಕಬೀರರು ತಮ್ಮ ದೋಹೆಯಲ್ಲಿ, ಕುಣಿಯಲು ಬಾರದ ನರ್ತಕನು ನೆಲವೇ ಡೊಂಕೆಂದು ವರ್ಣಿಸಿದ್ದಾರೆ.
ಆಕಾಶಕ್ಕೆ ಏಣಿ ಹಾಕಿದವರಿಗೆ ಪಾತಾಳಕ್ಕೆ ಬಿದ್ದಾಗಲೂ ಏಳುವ ಸಾಮರ್ಥ್ಯವಿರಬೇಕು. ಗುರಿಯನ್ನು ಮುಟ್ಟುವ ಮಾರ್ಗದಲ್ಲಿ ಅವಮಾನ, ಜನಗಳು ಕೀಳಾಗಿ ಕಾಣುವುದು, ಬೆಳಕು ಹೋಗಿ ಹಠಾತ್ತನೆ ಕತ್ತಲೆ ಕವಿಯುವುದು ಸಹಜ. ಅಂತಹ ಸಂದರ್ಭದಲ್ಲಿ ಯೋಚಿಸಿ, ನಿರ್ಧರಿಸಿ ಕತ್ತಲಿನ ಜಗತ್ತಿನಿಂದ ಬೆಳಕಿನ ಕಡೆಗೆ ನಡೆದೇ ತೀರುತ್ತೇನೆಂದು ತೀರ್ಮಾನಿಸಿ. ಆಗ ಮಾತ್ರ ವಿಶ್ವದಲ್ಲಿ ನಮ್ಮನ್ನು ಸೋಲಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಸಣ್ಣ ಸಣ್ಣ ಸೋಲಿಗೆ ಹೆದರಿದರೆ ದೊಡ್ಡ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವಿಲ್ಲ. ನಿರಂತರ ಪ್ರಯತ್ನ ಎಷ್ಟು ಮುಖ್ಯವೋ ಬುದ್ಧಿವಂತಿಕೆ ಅಷ್ಟೇ ಮುಖ್ಯ. ಟೀಕೆಗಳನ್ನು ಸಮರ್ಥವಾಗಿ ಹೆದುರಿಸಬೇಕು, ‘ಸಾಧಿಸುವ ತನಕ ಕಿವುಡುನಾಗು, ಸಾಽಸಿದ ಮೇಲೆ ಮೂಕನಾಗು’ ಎಂಬ ಮಾತಿದೆ.
ನಮಲ್ಲಿ ಸ್ವಯಂ ಕಾರ್ಯಸಾಧಕ ಶಕ್ತಿ ಹಾಗೂ ಆತ್ಮಗೌರವ ಮನೆ ಮಾಡಬೇಕು. ದೃಢ ಸಂಕಲ್ಪವೆಂಬುದು
ಎಲ್ಲ ಹತಾಶೆ, ಕ, ನೋವು ಮತ್ತು ದುಃಖವನ್ನು ಜೀರ್ಣಿಸಿಕೊಂಡು ಮುನ್ನಡೆಸುವ ಶಕ್ತಿಯಾಗಿರುತ್ತದೆ. ಸಮಯವು
ಹಣವಿದ್ದಂತೆ, ಆ ಸಮಯವನ್ನು ಸದುಪಯೋಗಪಡಿಸದಿದ್ದರೆ, ಒಂದು ನಿಮಿಷವೂ ನಷ್ಟವಾಗುತ್ತದೆ. ಕಬ್ಬಿಣವನ್ನು ಕಾದಿರುವಾಗಲೇ ಬಡಿಯಬೇಕು. ಏಕೆಂದರೆ ಆ ಕ್ಷಣ ಮತ್ತೆ ಬರಲಾರದು. ನೀವು ಸಮಯವನ್ನು ಪೋಲು ಮಾಡಿದರೆ ಅದು ನಿಮ್ಮನ್ನು ಪೋಲು ಮಾಡುತ್ತದೆ. ಸೋಲಿಲ್ಲದೇ ಗೆಲುವಿಲ್ಲ. ಯಶಸ್ಸು ಎಂಬುದು ಕೊನೆಯ ತಾಣ. ಸೋಲು ಗಳ ಮಧ್ಯೆ ಬರುವ ಅಡಚಣೆಗಳನ್ನು ಧೈರ್ಯದಿಂದ ಹಾಗೂ ದೃಢತೆಯಿಂದ ದಾಟಿದರೆ ಸೋಲುಗಳನ್ನು ಮೆಟ್ಟಿ ನಿಲ್ಲಬಹುದು. ನಿಮಗೆ ಸಂಕಷ್ಟಗಳು ಬಂದಾಗ ಅವುಗಳ ಎದುರು ಭಯದಿಂದ ನಿಲ್ಲುವ ಬದಲು, ಧೈರ್ಯ ಮಾಡಿ ಸಂಕಷ್ಟಗಳೆಂಬ ಅಪಾಯದಿಂದ ಪಾರಾಗಬಹುದು. ಯಾವುದೇ ಯಶಸ್ಸನ್ನು ಸಾಧಿಸಬೇಕಾದರೆ ಮೊದಲು
ಇಂದ್ರಿಯಗಳನ್ನು ಹತೋಟಿಗೆ ತೆಗೆದುಕೊಳಬೇಕು.
ಇದನ್ನೇ ಜಿತೇಂದ್ರಿಯ ಎಂಬ ಶಬ್ದದಿಂದ ವರ್ಣಿಸಲಾಗುತ್ತದೆ. ಜೊತೆಗೆ ನಮ್ಮೊಳಗಿನ ಶಕ್ತಿಯನ್ನು ಶೋಧಿಸಿ ತೆಗೆದರೆ ಅದರಿಂದ ನೋವು, ಕಷ್ಟಗಳು ನಿವಾರಣೆಯಾಗಿ ಗುರಿಸಾಧನೆ ಸಾಧ್ಯವಾಗುತ್ತದೆ. ನಾವು ಬಡವರು, ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದಿದ್ದೇವೆ, ನಮಗೆ ಏನೂ ತಿಳಿಯದು, ನಾವು ದಡ್ಡರು ಎಂಬ ಕೀಳರಿಮೆಯನ್ನು ಬದಿಗೊತ್ತಿ ಗುರಿಯ ಕಡೆಗೆ ಮುಖ ಮಾಡಿ. ನಮ್ಮಲ್ಲಿ ಕನ್ನಡಬಾಷೆಯನ್ನೇ ಕಲಿತು ಯಶಸ್ಸಿನ ಹಾದಿಯಲ್ಲಿ ಗುರಿತಲುಪಿ
ಸಾಧಕರಾಗಿರುವ ಆನೇಕಮಂದಿ ನಮ್ಮ ಮುಂದೆಇದ್ದಾರೆ.
ಕರ್ನಾಟಕದಲ್ಲೇ ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಐಎಎಸ್ ಪಾಸು ಮಾಡಿದ ಪ್ರಥಮ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿರುವ ಕೆ.ಶಿವರಾಮು ರವರು ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ನನ್ನ ಸ್ನೇಹಿತರೂ, ಆತ್ಮೀಯರಲ್ಲೊಬ್ಬರು ಪ್ರಾಥಮಿಕ ಶಾಲೆಯಿಂದ, ಸ್ನಾತಕೋತ್ತರ ಪದವಿಯವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ ಮಾಡಿ, ತನ್ನ ವಯುಕ್ತಿಕ ಹಲವಾರು ಅಡಚಣೆ, ಕಷ್ಟ ಬಡತನದ, ನೋವು, ದುಃಖದ ನಡೆವೆಯೂ ಯು.ಪಿ.ಎಸ್
.ಸಿ. ಪರೀಕ್ಷೆ ತೆಗೆದುಕೊಳ್ಳಲು ತರಬೇತಿಯನ್ನು ಪಡೆಯದೇ ಸ್ವತಃ ಗ್ರಂಥಾಲಯಗಳ ಪುಸ್ತಕಗಳ ಸಹಾಯದಿಂದಲೇ ಹಗಲು ರಾತ್ರಿ ಎನ್ನದೇ ದಿನದ ೧೮ ಗಂಟೆಗಳ ಕಾಲ ಸತತವಾಗಿ, ಪರಿಶ್ರಮದಿಂದ ಅಭ್ಯಾಸ ಮಾಡಿ, ಹಸಿವಿನ ತಾಪಕ್ಕೆ ಕುಗ್ಗದೆ, ಅಧ್ಯಯನ ಮಾಡಿ ವಿದ್ಯಾರ್ಥಿ ನಿಲಯದ ಸಹಪಾಠಿಗಳ ಅಡಚಣೆಯ ನಡುವೆಯೂ ಏಕಾಗ್ರತೆ ಮತ್ತು ಛಲದಿಂದ ಗುರಿಸಾಧಿಸಬೇಕೆಂದು ನಿಶ್ಚಿಯಿಸಿ ಯಾವುದಕ್ಕೂ ಎದೆಗುಂದದೆ ಅವಮಾನಗಳನ್ನು ತನ್ನಲ್ಲೇ ಅಡಗಿಟ್ಟಿಸಿ ಕೊಂಡು, ಕನಸಿನದಾರಿಯಲ್ಲಿ ಸಾಗಿ, ಸತತ ಓದುವ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಐಪಿಎಸ್‌ಗೆ ಆಯ್ಕೆಯಾಗಿ ಪ್ರಸ್ತುತ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಾಗಾಗಿ ಕನ್ನಡ ಶಾಲೆಯಲ್ಲಿ, ಕನ್ನಡ ಮೀಡಿಯಂನಲ್ಲಿ ಓದಿರುವುದು ಎಂಬ ಕಾರಣಗಳು ನಮ್ಮ ಸಾಧನೆಗೆ ಅಡಚಣೆಯಾಗಬಾರದು ಎನ್ನುವುದಕ್ಕೆ ಇವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಹಾಗು ಇವರ ಸಾಧನೆ ನಮಗೆ ಆದರ್ಶ ವಾಗಬೇಕಾಗಿದೆ. ಬಡತನ, ಹಣದಕೊರತೆ, ಮನೆಯ ಜವಬ್ದಾರಿ, ನನ್ನ ಮೇಲಿದೆ ಎನ್ನುವ ಕುಂಟು ನೆಪ ಗಳನ್ನು ಬಿಟ್ಟು ಜೀವನದಲ್ಲಿ ಗುರಿಸಾಧಿಸಲೇಬೇಕೆಂಬ ಛಲವಿದ್ದರೆ ಯಾವುದು ಅಡಚಣೆಯಾಗುವುದಿಲ್ಲ. ನನ್ನ ಗೆಳೆಯ ರಾದಂತಹ ದಿ.ಮರಿದೇವರು ವಿಶ್ವವಿದ್ಯಾಲಯದ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುತ್ತಾ, ನನಗೆ ಬಡತನವಿತ್ತು ಆದರೆ ವಿದ್ಯಾಭ್ಯಾಸ ಮಾಡಲೇಬೇಕೆಂಬ ಹಂಬಲ, ಛಲ ಹಾಗೂ ಗುರಿ ಸಾಧಿಸಬೇಕೆಂಬ ಕನಸು ನನ್ನನ್ನು ಯಾವಾಗಲೂ ಕಾಡುತ್ತಿತ್ತು. ನನಗೆ ಓದಲಿಕ್ಕೆ ಪುಸ್ತಕಗಳನ್ನು ಖರೀದಿಸಲು ಹಣವಿಲ್ಲದೆ ನನ್ನ ಗೆಳೆಯರ ಬಳಿ ಇದ್ದಂತಹ ಪುಸ್ತಕಗಳಲ್ಲಿ ಅಭ್ಯಾಸಮಾಡಿ ಹಾಗೂ ಅವರು ಬರೆದು ಬಿಸಾಡಿದ ನೋಟ್‌ಪುಸ್ತಕಗಳ ಕೊನೆಯ ಕೆಲವು ಹಾಳೆಗಳನ್ನು ಹರಿದುಕೊಂಡು ಒಂದೊಂದಾಗಿ ಜೋಡಿಸಿ, ಸೂಜಿದಾರದಿಂದ ಹೊಲೆದು ನೋಟ್‌ಪುಸ್ತಕ ಮಾಡಿಕೊಂಡು ಅದರ ಮೂಲಕ ನೋಟ್‌ಪುಸ್ತಕಗಳಲ್ಲಿ ಬರೆದು ವಿದ್ಯಾಭ್ಯಾಸಮಾಡಿ, ಸರಕಾರಿ ಸೇವೆಯನ್ನು ಪಡೆದು ನಿಮ್ಮ ಮುಂದೆ ರವಿನ್ಯೂ ಇನ್ಸ್‌ಪೆಕ್ಟರಾಗಿ ನಿಂತಿದ್ದೇನೆ ಎಂಬ ಮಾತು ಕೇಳಿದಾಗ, ಸಾಧಕರು ಎಂದರೆ ಇವರೇ ಸಾಧನೆಗೆ ಕನ್ನಡ ಭಾಷೆ, ಬಡತನ, ಕಷ್ಟ, ನೋವು ಎಂಬ ಯಾವ ಅಡ್ಡಿಯೂ ಬರುವುದಿಲ್ಲ. ಓದುವ ಮನಸ್ಸಿರಬೇಕು ಆ ಮನಸ್ಸು ನಮ್ಮನ್ನು ಸಾಧಕರಸಾಲಿನಲ್ಲಿ ನಿಲ್ಲಿಸಿ ಬಿಡುತ್ತದೆ ಎಂಬುದು ನಮಗೆ ಸ್ಪೂರ್ತಿ ಯಾಗುತ್ತದೆ.
ರಾಷ್ಟ್ರಕವಿ ಕುವೆಂಪುರವರು ಕನ್ನಡದಲ್ಲೇ ವಿದ್ಯಾಭ್ಯಾಸ ಮಾಡಿ ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ವಿಶ್ವಕ್ಕೆ ಜ್ಞಾನದ ಧಾರೆಯೆರೆದಿದ್ದಾರೆ. ಇವರು ಜ್ಞಾನಪೀಠ ಪ್ರಶಸ್ತಿಯನ್ನು ತನ್ನ ಮುಡುಗೇರಿಸಿ ಕೊಂಡವರಲ್ಲಿ ಪ್ರಥಮ ವ್ಯಕ್ತಿಯಾಗಿ ದ್ದಾರೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಇವರ ಕೊಡುಗೆ ಅಪಾರವಾದದ್ದು. ಇವರ ನಂತರ ಹಲವಾರು ಕನ್ನಡ ವಿದ್ವಾಂಸರು, ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರೆಲ್ಲರೂ ಕನ್ನಡದಲ್ಲೇ ಅಧ್ಯಯನ ಮಾಡಿರುವಂತಹ ಮಹಾಮೇಧಾವಿಗಳು, ರಾಷ್ಟ್ರ, ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕನ್ನಡ ಭಾಷೆಯೇ ಕಾರಣ. ಆದ್ದರಿಂದ ಕನ್ನಡ ಮೀಡಿಯಂ ಹಾಗೂ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂಬ ಕೀಳರಿಮೆಯನ್ನು ಇಟ್ಟುಕೊಳ್ಳದೇ ಮಹಾ ಕನಸು ಕಟ್ಟಿಕೊಂಡು ಅದನ್ನು ನನಸು ಮಾಡುವ ದಿಕ್ಕಿನಲ್ಲಿ ನಿರಂತರ ಕಾರ್ಯಮಗ್ನರಾಗಬೇಕಾಗಿರುವುದೇ ನಮ್ಮ ಗುರಿಯಾಗಬೇಕು. ಅಂಧತ್ವ ಬದುಕಿನ ಬಹುದೊಡ್ಡ ಸಮಸ್ಯೆ. ಎರಡೂ ದೃಷ್ಟಿಯನ್ನು ಕಳೆದುಕೊಂಡು ಬದುಕುವ ರೀತಿ ನಿಜಕ್ಕೂ ಅದೊಂದು ಹೋರಾಟದ ಬದುಕೇ ಸರಿ ಎನ್ನಬಹುದು.
ಮನುಷ್ಯನಿಗೆ ಎಲ್ಲ ಅಂಗಗಳು ಸರಿಯಿದ್ದೂ ಸಮಾಜಕ್ಕೆ ಹೊರೆಯಾಗಿ ಬದುಕುವವರ ನಡುವೆ ಅಂಧರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೇ ಸಹಜ ರೀತಿಯಿಂದ ಬದುಕು ನಡೆಸುತ್ತಿರುವವರು, ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಹಾಗೂ ಮಾಡುತ್ತಿರುವವರ ಬದುಕು ಅವರಿಗೆ ಯಾವತ್ತಿಗೂ ಹೊರೆಯಾಗಲ್ಲಿಲ್ಲ. ಅವರಲ್ಲಿ ಲೂಯಿಬ್ರೈಲ್ ಎಂಬುವವರು ಅಂಧಮಕ್ಕಳಿಗಾಗಿ ಉಪಯುಕ್ತ ಲಿಪಿಯನ್ನು ಆವಿಷ್ಕರಿಸಿ, ವಿಶ್ವದ ಅಂಧರಿಗಾಗಿ ಲಿಪಿಯ ಮೂಲಕ ವಿದ್ಯಾಭ್ಯಾಸ ಮಾಡಲು ಅನುವಾಗುವ ರೀತಿ
ಮಾರ್ಗದರ್ಶಕರಾಗಿ ಅಂಧರಿಗೆ ದಾರಿದೀಪವಾಗಿದ್ದಾರೆ. ಸಂಗೀತ ಲೋಕದಲ್ಲಿ ಪುಟ್ಟರಾಜ ಗವಾಯಿರವರು ಮಹಾಸಾಧನೆ ಮಾಡಿದ್ದಾರೆ. ಇವರ ಅಂಧತ್ವ ಎಂದಿಗೂ ಸಾಧನೆಗೆ ಅಡಚಣೆಯಾಗಲಿಲ್ಲ.
ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಅವರು ಮಾಡಿದ ಸಾಧನೆ ಅನೇಕ ದೃಷ್ಟಿ ಹೀನರ ಬದುಕಿಗೆ ಸ್ಪೂರ್ತಿಯಾಗಿದೆ. ಹಾಗೆ ಇನ್ನೂ ಅನೇಕ ಅಂಧರು ಅಂಗವೈಕಲ್ಯವುಳ್ಳವರು ವಿಶ್ವವನ್ನು ಬೆಚ್ಚಿಬೀಳಿಸುವಷ್ಟು ಸಾಧನೆ ಮಾಡಿರುವುದನ್ನು ನಾವು ಕಾಣುತ್ತೇವೆ. ಉತ್ತರ ಪ್ರದೇಶದಲ್ಲಿ ವಾಸಿಸಲು ಯಾವುದೇ ಮನೆ ಇಲ್ಲದೆ ಟೆಂಟ್ ಹಾಕಿಕೊಂಡು ವಾಸಿಸುವ, ಕೂಲಿಕಾರ್ಮಿಕರ ಕುಟಂಬದ ಅವಳಿ ಗಂಡು ಮಕ್ಕಳು ಮದ್ರಾಸ್‌ನ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿ ಐಐಟಿಯಲ್ಲೇ ಟಾಪರ್ ಆಗಿ ತೇರ್ಗಡೆಗೊಂಡು ಪ್ರಸ್ತುತ ಅಮೆರಿಕದ ಪ್ರತಿಷ್ಠಿತ ಕಂಪನಿ ಯೊಂದರಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ, ಇವರ ಸಾದನೆ ನಮಗೆಲ್ಲ ಮಾರ್ಗದರ್ಶನ ವಾಗಬೇಕಾಗಿದೆ. ನಾವು ಸೋಲಿನಿಂದ ಗೆಲುವಿನ ಕಡೆಗೆ, ನೋವಿನಿಂದ ಸಂಭ್ರಮದ ಕಡೆಗೆ, ದುಃಖದಿಂದ ಧ್ಯೆರ್ಯದ ಕಡೆಗೆ, ನಡೆಯು ವುದರಿಂದ ಜೀವನದಲ್ಲಿ ಗೆಲುವನ್ನು ಕಾಣಬಹುದು,
ಗೆಲವು, ಸೋಲು, ಹತಾಶೆ, ಒಂಟಿತನ, ದುಃಖ, ನಿರಾಶೆ, ನಿರುತ್ಸಾಹ, ಸೋಮಾರಿತನ, ಜಿಗುಪ್ಪೆ, ಭಯ, ಆತಂಕದಿಂದ
ಹೊರಬನ್ನಿ. ನಿಮ್ಮಲ್ಲಿ ಅದಮ್ಯವಾದ ಶಕ್ತಿ ಇದೆ. ಅದನ್ನು ಬಳಿಸಿ ಗುರಿಯ ಕಡೆಗೆ ಮುನ್ನುಗ್ಗಿ ಸಾಗಬೇಕಾಗಿದೆ. ಹಸಿವಿದ್ದಾಗಲೇ ಊಟದ ರುಚಿ, ಬಿಸಿಲಿನ ಬೇಗೆಯಿಂದ ದಣಿದಾಗಲೇ ನೆರಳಿನ ಸುಖ, ಗೊತ್ತಾಗುವುದು ಗುರಿಸಾಧನೆ ಹಾದಿಯಲ್ಲಿರುವಾಗಲೇ ಶತೃಗಳ ಸಂಖ್ಯೆ ಹೆಚ್ಚಾಗುವುದು. ಅವರ ಉಪಟಳವನ್ನು ದಾಟಿ ಬರುವುದೇ ಒಂದು ದೊಡ್ಡ ಸಾಹಸ. ಅದೆಲ್ಲವನ್ನು ನಿಭಾಯಿಸಿದಾಗಲೇ ಯಶಸ್ಸು ಎಂಬ ಗುಟ್ಟು ಅರ್ಥವಾಗುವುದು.
ಜೀವನದಲ್ಲಿ ನೀವು ಏನಾದರೂ ಸಾಧಿಸಬೇಕಾದರೆ ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು, ನಿಮ್ಮ ಮನಸ್ಸು ದೃಢ ವಾಗಿರಬೇಕು. ನಿಮ್ಮ ನಿರ್ಧಾರ ಬಲಶಾಲಿಯಾಗಿರಬೇಕು. ಆಗ ಮಾತ್ರ ಸಾಧನೆಯ ಮಾರ್ಗ ಸುಗಮವಾಗಿರುತ್ತದೆ. ಗುರಿಯ ಸಾಧಕನಿಗೆ ಯಾವುದೂ ಅಡಚಣೆಯಾಗುವುದಿಲ್ಲ. ಏಕೆಂದರೆ ನಿಮ್ಮ ದೃಢತೆ, ನಂಬಿಕೆ ಧೈರ್ಯ, ವಿಶ್ವಾಸ, ಭರವಸೆಯ ಮೆಟ್ಟಿಲನ್ನು ಏರುವ ಕಡೆ ನಡೆಯುವಂತೆ ಮಾಡುತ್ತದೆ. ಕಷ್ಟವೋ, ಸುಖವೋ, ದುಃಖವೋ, ದುಮ್ಮಾನವೋ, ಹೊಗಳಿಕೆಯೋ, ತೆಗಳಿಕೆಯೋ, ಏಕಾಂತವೋ, ಒಂಟಿತನವೋ ಪ್ರತಿಯೊಬ್ಬರು ಗೆಲ್ಲಲೇಬೇಕು.
ಸಾಧಕರನ್ನಾಗಿ ಯಾರು ಸೃಷ್ಟಿಮಾಡುವುದಿಲ್ಲ ಬದಲಾಗಿ ಸಾಧಕರಾಗಿ ನಾವೇ ಸೃಷ್ಟಿಮಾಡಿಕೊಳ್ಳಬೇಕು. ಸೋಲಿಗೆ ಕುಗ್ಗದೇ ಧೈರ್ಯದಿಂದ ಮುಂದೆ ಸಾಗಿದ್ದಲ್ಲಿ ಮಾತ್ರ ಗೆಲುವಿಗೆ ಹತ್ತಿರವಾಗಿ ಗುರಿಯ ಮೆಟ್ಟಿಲನ್ನು ಏರಿ ಸಾಧಕರ ಸಾಲಿನಲ್ಲಿ ನೀವು ಒಬ್ಬರಾಗ ಬೇಕೆಂಬುದು ನಮ್ಮ ಆಶಯವಾಗಿದೆ.
(ಲೇಖಕರು: ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ
ವಿಭಾಗದ ಅಧ್ಯಕ್ಷರು)
ಇದನ್ನೂ ಓದಿ: Prof C Shivaraju Column: ಆಸೆಯ ಮಿತಿಯೇ ಸುಖಕ್ಕೆ ಮೂಲ