ಮುಂಬೈ: ʼಮೈ ನೇಮ್ ಈಸ್ ಖಾನ್ʼ, ʼರಾಗಿಣಿ ಎಂಎಂಎಸ್ 2ʼ ಮತ್ತು ʼಖೋಸ್ಲಾ ಕಾ ಘೋಸ್ಲಾʼ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ಪರ್ವಿನ್ ದಾಬಸ್ (Actor Parvin Dabas) ಸಂಚರಿಸುತ್ತಿದ್ದ ಕಾರು ಇಂದು (ಸೆಪ್ಟೆಂಬರ್ 21) ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಮುಂಬೈಯ ಬಾಂದ್ರದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪರ್ವಿನ್ ದಾಬಸ್ ಅವರು ಪ್ರೊ ಪಂಜಾ ಲೀಗ್ನ ಸಹ ಸಂಸ್ಥಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅಪಘಾತದ ಬಗ್ಗೆ ಪ್ರೋ ಪಂಜಾ ಲೀಗ್ ಮಾಹಿತಿ ಹಂಚಿಕೊಂಡಿದೆ. “ಪ್ರೊ ಪಂಜಾ ಲೀಗ್ನ ಸಹ ಸಂಸ್ಥಾಪಕ ಪರ್ವಿನ್ ದಾಬಸ್ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅವರನ್ನು ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ವಿವರ ಹೊರ ಬರಬೇಕಿದೆʼʼ ಎಂದು ತಿಳಿಸಿದೆ.
According to a media statement issued by the Pro Panja League,
— Shayan Acharya (@ShayanAcharya) September 21, 2024
actor and the league's co-founder Parvin Dabas has been hospitalised and is in the ICU at Holy family hospital Bandra following an unfortunate car accident in the early hours of Saturday. pic.twitter.com/rIzwnGb1iq
“ಈ ಸವಾಲಿನ ಸಮಯದಲ್ಲಿ ನಾವು ಪರ್ವಿನ್ ಮತ್ತು ಅವರ ಕುಟುಂಬದೊಂದಿಗೆ ಇದ್ದೇವೆ. ಪ್ರೊ ಪಂಜಾ ಲೀಗ್ ಮ್ಯಾನೇಜ್ಮೆಂಟ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಗತ್ಯವಾದ ಸಹಕಾರ ನೀಡುತ್ತಿದೆ. ಈ ವೇಳೆ ಗೌಪ್ಯತೆ ಕಾಪಾಡುವಂತೆ ಮನವಿ ಮಾಡುತ್ತಿದ್ದೇವೆ. ಪರ್ವಿನ್ ಶೀಘ್ರ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿʼʼ ಎಂದು ಹೇಳಿದೆ.
2020ರ ಫೆಬ್ರವರಿಯಲ್ಲಿ ಸಚಿವ ಕಿರಣ್ ರಿಜುಜು ಮತ್ತು ಒಲಿಂಪಿಕ್ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ಅವರೊಂದಿಗೆ ಸೇರಿ ಪರ್ವಿನ್ ದಾಬಸ್ ಪ್ರೊ ಪಂಜಾ ಲೀಗ್ ಪಂದ್ಯಾವಳಿಯನ್ನು ಪ್ರಾರಂಭಿಸಿದ್ದರು. ಪ್ರೊ ಪಂಜಾ ಲೀಗ್ 6 ತಂಡಗಳೊಂದಿಗೆ 2023ರ ಜುಲೈ 28ರಿಂದ ಆಗಸ್ಟ್ 13ರವರೆಗೆ ತನ್ನ ಮೊದಲ ಪೂರ್ಣ ಪಂದ್ಯಾವಳಿಯನ್ನು ನಡೆಸಿತು. ನಟ ಸುನೀಲ್ ಶೆಟ್ಟಿ 2023ರ ಆಗಸ್ಟ್ನಲ್ಲಿ ಪ್ರೊ ಪಂಜಾ ಲೀಗ್ನ ಪಾಲುದಾರರಾದರು.
ಕನ್ನಡದಲ್ಲಿಯೂ ನಟನೆ
ಬಹುಭಾಷಾ ನಟ ಪರ್ವಿನ್ ದಾಬಸ್ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ. 2004ರಲ್ಲಿ ತೆರೆಕಂಡ ʼಕಾಂಜನ ಗಂಗಾʼ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. 1999ರಲ್ಲಿ ಬಿಡುಗಡೆಯಾದ ʼದಿಲ್ಲಗಿʼ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದ ಅವರು ಕನ್ನಡ ಸೇರಿ ಮಲಯಾಳಂ, ಇಂಗ್ಲಿಷ್ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.
2006ರಲ್ಲಿ ರಿಲೀಸ್ ಆದ ರಾಷ್ಟ್ರ ಚಲಚಚಿತ್ರ ಪ್ರಶಸ್ತಿ ಪುರಸ್ಕೃತ ʼಘೋಸ್ಲಾ ಕಾ ಘೋಸ್ಲಾʼ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. 2010ರಲ್ಲಿ ತೆರೆಕಂಡ ಶಾರುಖ್ ಖಾನ್ ಅಭಿನಯದ ʼಮೈ ನೇಮ್ ಈಸ್ ಖಾನ್ʼ ಸಿನಿಮಾ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಇತ್ತೀಚೆಗೆ ತೆರೆಕಂಡ ʼಶರ್ಮಾಜಿ ಕಿ ಬೇಟಿʼ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008ರಲ್ಲಿ ಪರ್ವಿನ್ ದಾಬಸ್ ಅವರು ನಟಿ ಪ್ರೀತಿ ಜಿಂಗಾನಿಯಾ ಅವರನ್ನು ವರಿಸಿದ್ದರು.
ಈ ಸುದ್ದಿಯನ್ನೂ ಓದಿ: Salman-Aishwarya: ಸಲ್ಲು-ಐಶ್ವರ್ಯ ಪ್ರೇಮ್ ಕಹಾನಿ ಶುರುವಾಗಿದ್ದು ಹೇಗೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ