ತುಮಕೂರು: ವಿಶ್ವದ ಶೇ. ೨ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ತುಮಕೂರು ವಿವಿಯ ನಾಲ್ವರು ಪ್ರಾಧ್ಯಾಪಕರನ್ನು ಗೌರವಿಸಿದ ಕ್ಷಣಕ್ಕೆ ಶನಿವಾರ ನಡೆದ ವಿವಿ ಸಿಂಡಿಕೇಟ್ ಸಭೆ ಸಾಕ್ಷಿಯಾಯಿತು.
ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್.ನಾಗಭೂಷಣ, ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಗಿರೀಶ್ ಕೆ. ಎಸ್., ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ.ಚಂದ್ರಾಲಿ ಬೈಶ್ಯ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್ ಡಿ. ಅವರು ಈ ಗೌರವಕ್ಕೆ ಪಾತ್ರರಾದವರು.
ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಜಾಗತಿಕ ಪಟ್ಟಿಯಲ್ಲಿ ಈ ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.
ಪ್ರಾಧ್ಯಾಪಕರ ವಿಶಿಷ್ಟ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಬಿದರೆಕಟ್ಟೆ ಯಲ್ಲಿರುವ ವಿವಿಯ ಹೊಸ ಕ್ಯಾಂಪಸ್ನಲ್ಲಿ ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಸಂಶೋಧನ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಪ್ರಾಧ್ಯಾಪಕರನ್ನು ಪ್ರೇರೇಪಿಸಲು ಸಂಶೋಧನೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಪ್ರಾಧ್ಯಾಪಕರ ಈ ಸಾಧನೆಗೆ ತುಮಕೂರು ವಿವಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ವಿವಿಯ ವಿದ್ಯಾರ್ಥಿಗಳೂ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿದರೆ ವಿಶ್ವವಿದ್ಯಾನಿಲಯದ ಘನತೆ ವೃದ್ಧಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನಿತ ಪ್ರಾಧ್ಯಾಪಕರು ಈ ಸಂದರ್ಭ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರೊ.ಎಚ್.ನಾಗಭೂಷಣ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳ ಸಂಶೋಧನ ಕ್ಷೇತ್ರದಲ್ಲಿನ ಅವಿರತ ಪ್ರಯತ್ನಗಳ ಫಲಿತಾಂಶಕ್ಕೆ ಈ ಸಾಧನೆ ಕನ್ನಡಿಯಾಗಿದೆ. ಪರಿಸರ ಸ್ನೇಹಿ, ಕಡಿಮೆ ವೆಚ್ಚದ ಡೋಪ್ಡ್ ನ್ಯಾನೊಫಾಸ್ಫರ್ ಅಭಿವೃದ್ಧಿ, ಲೋಹಗಳ ಮಾರ್ಪಾಡು ವಿಕೆಯಿಂದ ಎಲ್ಇಡಿಗಳಲ್ಲಿ ಹೊಸ ತಂತ್ರಜ್ಞಾನ, ಫೋರೆನ್ಸಿಕ್ ಅಪ್ಲಿಕೇಶನ್ಸ್, ನಕಲಿ ಕರೆನ್ಸಿ ಶೋಧಕ ಅಪ್ಲಿಕೇಶನ್ ಗಳ ಅಭಿವೃದ್ಧಿಯತ್ತ ನನ್ನ ಸಂಶೋಧನೆ ಹೆಚ್ಚು ಗಮನ ಹರಿಸಿದೆ ಎಂದು ತಿಳಿಸಿದರು.
ಪ್ರೊ.ಗಿರೀಶ್ ಕೆ.ಎಸ್., ಈ ಸಾಧನೆಯು ಸಂಶೋಧಕನಾಗಿ ನನ್ನ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ.
ಜಾಗತಿಕ ಮಟ್ಟದಲ್ಲಿ ಜೀವಕ್ಕೆ ಅಪಾಯಕಾರಿಯಾದಂತಹ ಆರೋಗ್ಯ ಸವಾಲುಗಳನ್ನು ಎದುರಿಸುವ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವ ಗುರಿ ಹೊಂದಿದ್ದೇನೆ. ಆರೋಗ್ಯ ರಕ್ಷಣೆಯ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ಮಾರ್ಗದರ್ಶನ ನೀಡುವತ್ತ ಗಮನಹರಿಸುತ್ತಿದ್ದೇನೆ ಎಂದರು.
ಡಾ.ಚಂದ್ರಾಲಿ ಬೈಶ್ಯ ಮಾತನಾಡಿ, ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಬದುಕಿನ ಬಹುದೊಡ್ಡ ಸಾಧನೆ. ಪ್ರಸ್ತುತ ಸಂಶೋಧನೆಯು ಗಣ ತದ ಜೀವಶಾಸ್ತ್ರ, ಪರಿಸರ ವಿಜ್ಞಾನ, ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ಭಿನ್ನರಾಶಿ ಉತ್ಪನ್ನಗಳನ್ನು ಬಳಸಿಕೊಂಡು ಅವ್ಯವಸ್ಥೆ ನಿಯಂತ್ರಣ ತಂತ್ರಗಳನ್ನು ವ್ಯಾಪಿಸಿದೆ. ಈ ಕುರಿತ ಸಂಶೋಧನೆಗಳನ್ನು ನೈಜ ಸಮಯದ ಡೇಟಾ ಸ್ಟ್ರೀಮಿಂಗ್ ಮತ್ತು ಯಂತ್ರ ಕಲಿಕೆಯೊಂದಿಗೆ ಸಂಯೋಜಿ ಸುವ ಗುರಿಯನ್ನು ಹೊಂದಿದ್ದೇನೆ ಎಂದು ತಿಳಿಸಿದರು.
ಡಾ.ಸುರೇಶ್ ಡಿ. ಮಾತನಾಡಿ, ಕೆಮಿಸ್ಟ್ರಿ ಆಫ್ ಮೆಟೀರಿಯಲ್ಸ್ನಲ್ಲಿ ನನ್ನ ಸಂಶೋಧನಾ ತಂಡದ ಅನೇಕ ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಇದು ದೊಡ್ಡ ಪ್ರೋತ್ಸಾಹವಾಗಿದೆ. ತುಮಕೂರು ವಿಶ್ವವಿದ್ಯಾನಿಲಯ ನೀಡಿರುವ ಪೂರಕ ಸಂಶೋಧನಾ ವಾತಾವರಣದಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ವಿಜ್ಞಾನ ನಿಕಾಯದ ಡೀನ್ ಪ್ರೊ. ಮನೋಹರ್ ಶಿಂಧೆ, ಕಲಾ ನಿಕಾಯದ ಡೀನ್ ಪ್ರೊ. ಕೊಟ್ರೇಶ್ ಎಂ., ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ. ರಾಜೀವಲೋಚನ, ದೇವರಾಜು ಕೆ. ಆರ್., ಕುಮಾರಸ್ವಾಮಿ ಎಚ್. ಬಿ., ಪ್ರೊ. ರೇವಣ ಸಿದ್ದೇಶ್ವರ ಡಿ. ಆರ್., ಡಾ. ಚಿತ್ತರಂಜನ್ ರೈ ಉಪಸ್ಥಿತರಿದ್ದರು.
ಪ್ರಸ್ತುತ, ಪ್ರಪಂಚವು ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಸರಿಯಾದ ಪ್ರಶ್ನೆಗಳನ್ನು ಕೇಳುವುದು, ಸಂಶೋಧನೆಯ ಮೂಲಕ ಸೂಕ್ತವಾದ ಉತ್ತರಗಳನ್ನು ಕಂಡುಹಿಡಿಯುವುದು ಮತ್ತು ಈ ಜಗತ್ತನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡುವುದು ಬಹಳ ಮುಖ್ಯ. ವ್ಯಾಪಕವಾದ ಸಹಯೋಗದ ಪ್ರಯತ್ನ ಗಳ ಮೂಲಕ ಟ್ರಾನ್ಸ್-ಶಿಸ್ತಿನ ಸಂಶೋಧನೆಯ ಮೂಲಕ ಶಕ್ತಿ ಮತ್ತು ಪರಿಸರ ಬಿಕ್ಕಟ್ಟಿನಂತಹ ಸಮಸ್ಯೆಗಳ ಮೇಲೆ ವರ್ಧಿತ ಕೇಂದ್ರೀಕೃತವಾಗಿ ಕೆಲಸ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ.
ಅಂತಾರಾಷ್ಟ್ರೀಯವಾಗಿ ಪ್ರಕಟವಾದ ಸ್ಕೋಪಸ್-ಸೂಚ್ಯಂಕ ಹೊಂದಿರುವ ಸಂಶೋಧನ ಪ್ರಕಟಣೆಗಳು, ಉಲ್ಲೇಖ ಗಳು, ಸಹ-ಲೇಖಕ ಸಂಶೋಧನ ಪ್ರಕಟಣೆಗಳು ಮತ್ತು ಎಚ್-ಇಂಡೆಕ್ಸ್ಗಳು ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣ ಸಿದ ನಂತರ ವಿಶ್ವದ ಶೇ. ೨ ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಸಿದ್ಧಪಡಿಸಲಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಪಟ್ಟಿಯು ವಿಜ್ಞಾನಿಗಳನ್ನು ೨೨ ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪಕ್ಷೇತ್ರಗಳಾಗಿ ವರ್ಗೀಕರಿಸುತ್ತದೆ. ವಿಶ್ವದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ತಮ್ಮ ಸಂಶೋಧನ ಸಾಧನೆಗಳ ಆಧಾರದಲ್ಲಿ ಇದರಲ್ಲಿ ಗುರುತಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Tumkur News: ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಪೊಲೀಸರ ನಡೆ