ತುಮಕೂರು: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡುವ ಹಿನ್ನಲೆಯಲ್ಲಿ ಚೆನ್ನೈ ಮತ್ತು ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಮಾದರಿಯಲ್ಲಿ ತುಮಕೂರು ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಸದ್ಯದಲ್ಲಿಯೇ ಕೈಗಾರಿಕಾ ವೆಬ್ ತಲೆ ಎತ್ತಲಿದೆ. ಇದರಿಂದ 5ಲಕ್ಷ ಉದ್ಯೋಗ ಸೃಷ್ಠಿ ಗುರಿ ಹೊಂದಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ 46ನೇ ಬ್ಯಾಚ್‌ನ ಪ್ರಥಮ ವರ್ಷದ ಎಂಜಿನಿಯರ್ ನಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ತುಮಕೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಕೈಗಾರಿಕಾ ಕೇಂದ್ರ ಎಂದು ಹೇಳಲು ಹೆಮ್ಮೆಯಾಗುತ್ತದೆ. ಇನ್ನು ಹತ್ತು ವರ್ಷದಲ್ಲಿ ಕೈಗಾರಿಕೆಗಳು ಹೊಂದಿರುವ ತುಮಕೂರು ನೋಡಲು ಸಾಧ್ಯವಾಗುತ್ತದೆ. ಕೈಗಾರಿಕಾ ವೆಬ್ ತಲೆ ಎತ್ತುವುದರಿಂದ ಸುಮಾರು 5 ಲಕ್ಷ ಪದವೀಧರರಿಗೆ ಉದ್ಯೋಗದ ಅವಕಾಶ ಸಿಗುತ್ತದೆ ಎಂದು ಹೇಳಿದರು.
ತುಮಕೂರು ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಈಗಾಗಲೇ 150 ವಿವಿಧ ಕಂಪನಿಗಳಿದ್ದು, ಇನ್ನು 15ರಿಂದ 20 ಎಕರೆ ವಿಸ್ತರಣೆಯಾಗಲಿದೆ. ಸದ್ಯದಲ್ಲಿಯೆ ಜಪಾನಿಸ್ ಟೈನ್‌ಷಿಪ್ ನಿರ್ಮಾಣವಾಗಲಿದೆ. ಟಯೋಟಾ ಕಂಪನಿ ಕೂಡ ತಲೆಎತ್ತಲಿದೆ. ಎಚ್ ಎ ಎಲ್ ಕಂಪನಿ ಕೆಲಸ ನಡೆಯುತ್ತಿದೆ ಎಂದು ನುಡಿದರು.
ಜಿಲ್ಲೆಯಲ್ಲಿರುವ ಕಾಲೇಜುಗಳು ವಿದ್ಯಾರ್ಥಿಗಳಿಗೆ ತಾಂತ್ರಿಕ ಬೋಧನೆ ಹಾಗೂ ತರಬೇತಿ ಕಾರ್ಯದಲ್ಲಿ ನಿರತವಾಗಿವೆ. ಇವುಗಳೇ ಅಲ್ಲದೇ ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ಕುಶಲ ಕಾರ್ಮಿಕರ ತರಬೇತಿ ಸಂಸ್ಥೆಗಳು ಸಾಕಷ್ಟು ಕುಶಲಕರ್ಮಿಗಳನ್ನು ಸೃಷ್ಟಿ ಮಾಡುತ್ತಿವೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಪ್ರಾರಂಭಗೊಳ್ಳುತ್ತಿರುವ ಕೈಗಾರಿಕೆಗಳು ಇದರ ಸೇವೆಯನ್ನು ಪಡೆದುಕೊಳ್ಳುವುದರ ಮೂಲಕ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಅವಕಾಶವಿರುತ್ತದೆ ಎಂದರು.
ಸಮಾರಂಭದಲ್ಲಿ ಬೆಂಗಳೂರಿನ ಲಕ್ಷ್ಮೀ ವ್ಯಾಕ್ಯೂಂ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾದ ಎಲ್ ಎನ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಮಾತನಾಡಿ, “ಕಲಿಕೆ ಎಂಬುದು ತುಂಬಾ ಮುಖ್ಯ, ಕಲಿಯುವುದರ ಜೊತೆಗೆ ಆತ್ಮಜ್ಞಾನ, ವ್ಯವಹಾರಿಕ ಜ್ಞಾನ, ಲೋಕಜ್ಞಾನ ಬೆಳಸಿಕೊಳ್ಳಬೇಕು ಎಂದರು.
ಸಾಹೇ ವಿವಿಯ ಉಪಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಬಗ್ಗೆ ಅತಿಹೆಚ್ಚು ಕಾಳಜಿಯನ್ನು ಪೋಷಕರು ಇಟ್ಟುಕೊಳ್ಳಬೇಕು. ಅವರ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಾಲೇಜು ಪ್ರಾಧ್ಯಾಪಕರೊಂದಿಗೆ ಸಂಪರ್ಕದಲ್ಲಿದ್ದು ನಿಗಾ ವಹಿಸುವುದನ್ನು ಮರೆಯಬೇಡಿ ಎಂದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಪ್ರಗತಿನೋಟವನ್ನು ವಿವರಿಸಿ, ಸ್ವಾಗತಿಸಿದರು. ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಪರೀಕ್ಷಾಂಗ ನಿಯಂತ್ರಕರು ಡಾ. ಜಿ. ಗುರುಶಂಕರ್, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಡೀನ್ ಡಾ.ರೇಣುಕಾಲತಾ, ವಿವಿಧ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ 46ನೇ ಬ್ಯಾಚ್‌ನ ಪ್ರಥಮ ವರ್ಷದ ಎಂಜಿನಿಯರ್‌ನಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Tumkur News: ಸಾಲ ಮರುಪಾವತಿಯಾದಾಗ ಸಹಕಾರಿ ಸಂಘಗಳು ಅಭಿವೃದ್ಧಿ-ಶ್ರೀನಿವಾಸ್