Monday, 25th November 2024

ಚಂದನವನದ ಚೆಂದದ ಬಜಾರಿ

ಸ್ಮರಣೆ

ಕೆ.ಶ್ರೀನಿವಾಸರಾವ್

ಅದು 70ರ ದಶಕ. ಚಂದನವನದಲ್ಲಿ ಜಯಂತಿ, ಕಲ್ಪನಾ, ಭಾರತಿ, ಆರತಿ, ಲೀಲಾವತಿಯಂತಹ ಸೌಮ್ಯ ನಾಯಕಿಯರ ಜಮಾನಾ. ಆಗ ಬಂದಿತ್ತು ಅಣ್ಣಾವ್ರ ಚಿತ್ರ ಸಂಪತ್ತಿಗೆ ಸವಾಲ್.

ಅದ್ಭುತ ಅಭಿನಯ, ಗೀತೆ, ಸಂಗೀತ, ಸಂಭಾಷಣೆ, ನಿರ್ದೇಶನಗಳಿಂದ ಚಿತ್ರ ಕರ್ನಾಟಕದಾದ್ಯಂತ ಬಾಕ್ಸ್ ಆಫೀಸನ್ನು ಚಿಂದಿ ಮಾಡಿತ್ತು. ಎಲ್ಲಕ್ಕೂ ಮಿಗಿಲಾಗಿ ನಾಯಕನಿಗೆ ಬೇವರ್ಸಿ, ಹಳೆ ಬೇವರ್ಸಿ ಎಂದು ಅರಳು ಹುರಿದಂತೆ ಚಟಚಟ ಮಾತು ಸಿಡಿಸುವ ಘಟವಾಣಿ, ದುರ್ಗಿಪಾತ್ರದಲ್ಲಿ ಕನ್ನಡಕ್ಕೊಬ್ಬ ಭರವಸೆಯ ನಾಯಕಿ ಸಿಕ್ಕಿದ್ದಳು. ಅವರೇ ದಿ.ಮಂಜುಳ. ಕೊಂಚಕುಳ್ಳಿ, ಬೆಣ್ಣೆ ಬಿಸ್ಕತ್ ಕೆನ್ನೆಯ ಈ ಸುಂದರಿ 1951ರ ನವೆಂಬರ್ 8ರಂದು ತುಮಕೂರಿನ ಹೊನ್ನೇನಹಳ್ಳಿಯಲ್ಲಿ ಜನಿಸಿದರು.

ಬಾಲ್ಯದಿಂದಲೂ ಅತಿಚೂಟಿ. ಭರತನಾಟ್ಯ, ನಾಟಕ, ನಂತರ ಸಬ್ ಇನ್ ಪೆಕ್ಟರ್ ತಂದೆಯ ಒಪ್ಪಿಗೆ ಪಡೆದು ಪ್ರಸಿದ್ಧ ಪ್ರಭಾತ್ ಕಲಾವಿದರು ತಂಡಕ್ಕೆ ಸೇರ್ಪಡೆ. ಒಮ್ಮೆ ಇವರ ಅಭಿನಯ ಕಂಡ ನಿರ್ದೇಶಕ ಸಿ.ವಿ.ಶಿವಶಂಕರ್ ತಮ್ಮ ಮನೆ ಕಟ್ಟಿ ನೋಡು (1966) ಚಿತ್ರದಲ್ಲಿ ಮಂಜುಳಾ ಮತ್ತು ಅವರ ತಂಗಿ ಉಮಾರಿಗೆ ಕಿರುಪಾತ್ರ ಕೊಟ್ಟರು. ಕೊಂಚ ಗ್ಯಾಪ್‌ನಲ್ಲಿ ಉದಯಕುಮಾರ್ ನಾಯಕತ್ವದ ಪದವೀಧರ (1967)ರಲ್ಲಿ ಬಾಲನಟಿ. ನಂತರ ಎಂ.ಆರ್. ವಿಠ್ಠಲ್‌ರವರ ಯಾರ ಸಾಕ್ಷಿ (1972)ರಲ್ಲಿ ಮೊದಲ ನಾಯಕಿ ಪಾತ್ರ.

ಇವರ ಅಭಿನಯ ನೋಡಿ ಮೂರುವರೆ ವಜ್ರಗಳು ಚಿತ್ರದಲ್ಲಿ ರಾಜ್‌ರಿಗೆ ನಾಯಕಿಯಾಗಿ ಕೆಲವೇ ನಿಮಿಷಗಳ ಅವಕಾಶ ಸಿಕ್ಕಿತ್ತು. ಆಗಲೇ ರಾಜ್‌ರ ಪತ್ನಿ ಪಾರ್ವತಮ್ಮ ಇವರೆಡೆಗೆ ಅಚ್ಚರಿಯ ನೋಟ ಬೀರಿದ್ದರು. ಮುಂದೆ ಅದೇ ಸಂಪತ್ತಿಗೆ ಸವಾಲ್‌ಗೆ ನಾಯಕಿ ಯಾಗಿ ಜಾಕ್‌ಪಾಟ್ ಹೊಡೆಯಲು ದಾರಿಯಾಯಿತು. ನಂತರ ನಡೆದದ್ದು ಇತಿಹಾಸ. ಸಾಲು ಸಾಲು ಚಿತ್ರಗಳಲ್ಲಿ ಮಂಜುಳಾ ರವರೇ ನಾಯಕಿ.

ತೆಲುಗು, ತುಳು ಸೇರಿ 54 ಚಿತ್ರಗಳಲ್ಲಿ ಅಭಿನಯ. ಶೇಕಡಾ 80 ಯಶಸ್ವಿ ಚಿತ್ರಗಳೇ!. ಡಾ ರಾಜ್‌ರೊಂದಿಗೆ ಎರಡು ಕನಸು, ನೀ ನನ್ನ ಗೆಲ್ಲಲಾರೆ, ಭಕ್ತ ಕುಂಬಾರ, ಮಯೂರ, ಶ್ರೀನಿವಾಸ ಕಲ್ಯಾಣ ಹಾಗೂ ಡಾ. ವಿಷ್ಣುವರ್ಧನ್‌ರೊಂದಿಗೆ ಸೊಸೆ ತಂದ ಸೌಭಾಗ್ಯ, ಕಿಟ್ಟು ಪುಟ್ಟು, ಪ್ರೋ. ಹುಚ್ಚುರಾಯ, ಸಿಂಗಾಪೂರ್‌ನಲ್ಲಿ ರಾಜಾಕುಳ್ಳ, ಸಿಂಹಜೋಡಿ, ಗಲಾಟೆ ಸಂಸಾರ ಇವು ಯಶಸ್ವಿ ಚಿತ್ರಗಳಲ್ಲಿ ಕೆಲವು. ಆದರೆ ಶ್ರೀನಾಥ್ – ಮಂಜುಳಾರ ಜೋಡಿ ಆಗ ಹಿಟ್ ಜೋಡಿಯೆನಿಸಿತ್ತು.

ನಿನಗಾಗಿ ನಾನು ಎಂದು ಜೊತೆಗೂಡಿದ ಪಕ್ಕಾಕಳ್ಳನಂಥ ಹಳ್ಳಿಹೈದ ಶ್ರೀನಾಥ್‌ರಿಗೆ ಈ ಹುಡುಗಾಟದ ಹುಡುಗಿ ನಿರೀಕ್ಷೆಯಂತೆ ಧನಲಕ್ಷ್ಮಿಯಾಗಿ ಬೆಸುಗೆಯಾದಳು. ವಿಚಿತ್ರವೆಂದರೆ ನಿಜ ಜೀವನದಲ್ಲಿ ಇವರು ಅಣ್ಣ – ತಂಗಿಯಂತಿದ್ದರು. ನಿರ್ದೇಶಕ ಅಮೃತ ರೊಂದಿಗೆ ವಿವಾಹವಾಗಿ ಪುತ್ರ ಅಭಿಷೇಕ್ ಜನಿಸಿದರೂ ಹೆಣ್ಣು ಸಂತಾನವಿಲ್ಲದೇ ಅಭಿನಯಳನ್ನು ದತ್ತು ಪಡೆದರು. ಕೊನೆ ಕೊನೆಗೆ ಸ್ಥೂಲದೇಹಿಯಾಗಿದ್ದರಿಂದ ಅವಕಾಶ ಕಡಿಮೆಯಾದಾಗ ಚಿತ್ರರಂಗದಿಂದ ದೂರವಾಗಿ ಹಳೆಯ ಅಭಿಮಾನದಿಂದ ನಾಟಕಗಳಲ್ಲಿ ಅಭಿನಯಿಸಿದರು. ಕೊನೆಯ ಚಿತ್ರ ಮನೆ ಗೆದ್ದ ಮಗ.

ಅದೊಂದು ದುರ್ದಿನ ಗ್ಯಾಸ್ ಸ್ಟೌವ್ ಸಿಡಿದು ಬಜಾರಿಯಂಥ ದುರ್ಗಿ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದರು. ಜೊತೆಗಿದ್ದ ಶ್ರೀನಾಥ್‌ರಿಗೆ ಶ್ರೀನಾಥಣ್ಣ ನಾನು ವಾಪಸ್ ಬರ್ತೀನಾ? ಎಂದು ಯಾತನೆಯಿಂದ ನುಡಿದಿದ್ದರು. ಖಂಡಿತ ಬರ್ತೀಯಾ? ಎಂದಿ ದ್ದರು ಶ್ರೀನಾಥ್. ಆದರೆ ವಿಧಿಗೆ ಅದು ಬೇಕಿರಲಿಲ್ಲ. ಅಪಾರ ಅಭಿಮಾನಿಗಳು ಕಾಯುತ್ತಿರುವಾಗಲೇ 1986ರ ಸೆಪ್ಟಂಬರ್ 12 ರಂದು ಮಂಜುಳಾ ವಿಧಿವಶರಾದರು. ಇತ್ತೀಚೆಗೆ ಪ್ರವೀಣ್ ಜಯಣ್ಣರವರ ನಿರ್ದೇಶನದಲ್ಲಿ ಈ ತಾರೆಯ ಕುರಿತು ಮಿಸ್ಟರಿ ಆಫ್ ಮಂಜುಳಾ ಎಂಬ ಚಿತ್ರ ತಯಾರಾಗಿದ್ದು ಸದ್ಯದಲ್ಲಿಯೇ ತೆರೆ ಕಾಣಲಿದೆ.

ಇಂದು ಮಂಜುಳಾ ಭೌತಿಕವಾಗಿ ನಮ್ಮೊಂದಿಗೆ ಇಲ್ಲ, ಆದರೆ ನಮ್ಮ ಹೃದಯಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇದೇ ನವೆಂಬರ್ ೮ರಂದು ಈ ಸೋದರಿಯ ಜನ್ಮ ದಿನ. ಅವರನ್ನು ನೆನೆದು ಶಾಂತಿಗಾಗಿ ಹರಸೋಣ.