Sunday, 24th November 2024

Chikkaballapur News: ವಿಶ್ವ ಶಾಂತಿ ಕಾಪಾಡಿದಾಗ ಮಾತ್ರ ಮನುಜಮತ ವಿಶ್ವಪಥವಾಗಲಿದೆ-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಇಂದು ವಿಶ್ವ ನಾಶದ ಅಂಚಿಗೆ ಬಂದು ತಲುಪಿದೆ ಎಂದರೆ ತಪ್ಪಾಗಲಾರದು. ಬಲಾಢ್ಯ ರಾಷ್ಟ್ರ ಗಳಿಗೆ ಇಂದು ಭೂದಾಹ, ಸಂಪತ್ತಿನ ದಾಹ, ಪ್ರತಿಷ್ಠೆಯ ವ್ಯಾಮೋಹ, ತಾನೇ ಈ ವಿಶ್ವದಲ್ಲಿ ಸೂಪರ್ ಪವರ್ ಆಗಬೇಕೆಂಬ ಹುಚ್ಚು ಹಂಬಲ. ಸರ್ವರ ಏಳಿಗೆಗಾಗಿ ಮನುಜಮತ ವಿಶ್ವಪಥವಾಗಬೇಕಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು.

ನಗರದ ಎಂ.ಜಿ.ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ  “ವಿಶ್ವ ಶಾಂತಿ ದಿನ”ದ ಅಂಗವಾಗಿ ಎರ್ಪಡಿಸಿದ್ದ ‘ಮಾನವೀಯತೆಯೆಡೆಗೆ ನಡೆ’ ಎಂಬ ಘೋಷವಾಕ್ಯದೊಂದಿಗೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವದ ಅನಾಹುತಗಳಿಗೆ ದೊಡ್ಡರಾಷ್ಟ್ರಗಳ ಕೊಡುಗೆ ಅಪಾರವಾಗಿದೆ.ಜಾಗತಿಕ ತಾಪಮಾನ ಮೊದಲಾಗಿ, ಮಹಾ ಯುದ್ಧಗಳ ಸೃಷ್ಟಿಗೆ ನೀರೆರೆದು ಪೋಷಣೆ ಮಾಡುತ್ತಾ ಬಲಹೀನ ರಾಷ್ಟ್ರಗಳ ಬೆಳವಣಿಗೆಗೆ ಅಡ್ಡಗಾಲು ಆಗಿವೆ. ನಾನು ವಿಶ್ವದ ಅಧಿನಾಯಕ ಆಗಬೇಕು, ಎನ್ನುವಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟು ದೊಡ್ಡ ದೊಡ್ಡ ದೇಶಗಳೇ ಬಣಗಳಾಗಿ ಒಬ್ಬರನ್ನು ತುಳಿಯಲು ಇನ್ನೊಬ್ಬರು ಹೊಂಚು ಹಾಕುತ್ತಲೇ ಇದ್ದಾರೆ. ಇದರ ನಡುವೆ ಯಾವಾಗ ವಿಶ್ವ ಯುದ್ಧದ ಕಾರ್ಮೋಡ ಕವಿಯುವುದೋ ಎಂಬ ಆತಂಕವಿದೆ. ಏಕೆಂದರೆ ಎಲ್ಲಾ ರಾಷ್ಟ್ರ ಪರಮಾಣು ಬಾಂಬುಗಳನ್ನು ಹೊಂದಿವೆ. ಈ ಬಾಂಬುಗಳು ಕ್ಷಣಾರ್ಧದಲ್ಲೇ ಭೂಮಿಯನ್ನು ಸರ್ವನಾಶ ಮಾಡಬಲ್ಲವು ಎಂದು ತಿಳಿಸಿದರು.

ಪ್ರಸ್ತುತ ಪರಿಸ್ಥಿತಿಯು ಬಹಳಷ್ಟು ಸೂಕ್ಷ್ಮ ಎನಿಸಿದೆ. ವಿಶ್ವದ ರಾಷ್ಟ್ರಗಳು ಎಚ್ಚೆತ್ತುಕೊಳ್ಳುವ ಸಮಯ ಇದಾಗಿದೆ. ಬಹಳಷ್ಟು ರಾಷ್ಟ್ರಗಳ ಮಧ್ಯೆ ಪರಸ್ಪರ ವೈರತ್ವ ಹದ್ದು ಮೀರಿ ನಡೆಯುತ್ತಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿಯಿದೆ. ಇಂದು ಭಾರತದ ಮೇಲೆ ನೆರೆ ರಾಷ್ಟ್ರ ಚೀನಾ ಗಡಿ ಆಕ್ರಮಣ ಮಾಡಿ ಯುದ್ಧ ವೇರ್ಪಡುವ ಸ್ಥಿತಿ ನಿರ್ಮಾಣ ಮಾಡಿದೆ. ಭಾರತ ಮತ್ತು ಚೀನಾ ಎರಡೂ ಶಕ್ತಿಶಾಲಿ ರಾಷ್ಟ್ರಗಳೇ. ಹಾಗೇನಾದರೂ ಯುದ್ಧ ನಡೆದರೆ ಅದು ವಿಶ್ವ ಯುದ್ಧವೇ ಆಗಿ ಬಿಡುವ ಸಂಭವವಿದೆ. ಏಷ್ಯಾದ ಈ ಎರಡು ಪ್ರಬಲ ರಾಷ್ಟçಗಳು ಈಗಾಗಲೇ ಯುದ್ಧ ತಯಾರಿ ನಡೆಸಿವೆ. ಸೂಪರ್ ಪವರ್ ಪಟ್ಟಕ್ಕಾಗಿ ಇಂದು ಅಮೇರಿಕಾ, ಚೀನಾ, ರಷ್ಯಾ ನಡುವೆ ಭಾರೀ ಪೈಪೋಟಿಯೇ ನಡೆದಿದೆ. ಇಂದು ಯುದ್ಧದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಸಂಭವವಿದ್ದು, ಅದು ಮಾನವಕುಲ ನಾಶವಾಗಲು ಪ್ರಮುಖ ಕಾರಣವಾಗಲಿದೆ ಎಂದು ಆತಂಕ ವ್ಯೆಕ್ತ ಪಡಿಸಿದರು.

ಮನಕುಲದ ನಾಶಕ್ಕೆ ಕಾರಣವಾಗುವ ವಿಶ್ವ ಮಹಾಯುದ್ದಗಳು ನಡೆಯಬಾರದೆಂದು ಭಾವಿಸಿ ವಿಶ್ವ ಸಂಸ್ಥೆಯು 2001 ಸೆಪ್ಟಂಬರ್ 21 ನ್ನು  ವಿಶ್ವ ಶಾಂತಿದಿನವನ್ನಾಗಿ ಘೋಷಿಸಿದೆ. ಈ ಭಾರಿಯ ಘೋಷವಾಕ್ಯ  ಮಾನವೀಯತೆ ಕಡೆ ನಮ್ಮ ನಡಿಗೆ ಎಂಬುದರ ಬಗ್ಗೆ ತಿಳಿಸಿ, ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ರಕ್ತದಾನ ಮಾಡಿ ಎಂದು ಯುವಕರಲ್ಲಿ ಮನವಿ ಮಾಡಿದರು. ರಕ್ತದಾನ ಕುರಿತು ಜಾಗೃತಿ ಮೂಡಿಸುತ್ತಾ ರೆಡ್ ಕ್ರಾಸ್ ಸಂಸ್ಥೆಯು ಸಮಾಜಕ್ಕೆ ಮಾಡಿರುವ ಉಪಕಾರ ಕುರಿತು ತಿಳಿಸಿದರು.

ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜುಗಳ ೧೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದ ಕಾಲ್ನಡಿಗೆ ಜಾಥಾ, ಎಂ.ಜಿ. ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಿಂದ ಆರಂಭವಾಗಿ ಅಂಬೇಡ್ಕರ್ ಭವನ, ಅಂಬೇಡ್ಕರ್ ವೃತ್ತ, ಬಿ.ಬಿ. ರಸ್ತೆ ಮಾರ್ಗವಾಗಿ ನಂದಿರಂಗ ಮಂದಿರದ ವರೆಗೆ ಸಾಗಿತು.
ಈ ವೇಳೆ ಜಿಲ್ಲಾಧಿಕಾರಿ ರವೀಂದ್ರರವರು ಶಾಂತಿ ತತ್ವ ಪಾಲಿಸುವ ಪ್ರತಿಜ್ಞಾವಿಧಿ ಬೋಧಿಸಿದರು.

ಜಾಥಾದಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ , ಉಪಾಧ್ಯಕ್ಷ, ಜೆ.ನಾಗರಾಜ್, ತಹಶೀಲ್ದಾರ್ ಅನಿಲ್, ಡಿವೈಎಸ್ ಪಿ ಎಸ್.ಶಿವಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ಕೋಡಿರಂಗಪ್ಪ, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಎಂ.ಜಯರಾಮ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜುನ ಪ್ರಾಂಶುಪಾಲ ಡಾ.ಮುನಿರಾಜು, ಕಾಲೇಜುಗಳ ವಿದ್ಯಾರ್ಥಿಗಳು,  ಮತ್ತಿತರರು ಇದ್ದರು.