Monday, 23rd September 2024

Ravi Hunj Column: ಶರಣರು ಸನಾತನ ಧರ್ಮದ ವಿರುದ್ದ ಹೋರಾಡಿದ್ದರೇ ?

ಬಸವ ಮಂಟಪ

ರವಿ ಹಂಜ್

‌ʼವಚನ ದರ್ಶನ’ ಕೃತಿಯಲ್ಲಿ ವಚನಗಳ ಅರ್ಥವನ್ನು ಸನಾತನ ಸಂಸ್ಕೃತಿಗೆ ಜೋಡಿಸಿ ಬಸವಣ್ಣನ ಆಶಯಕ್ಕೆ ಧಕ್ಕೆ ತರಲಾಗಿದೆ ಎಂದು ಬಸವಣ್ಣನನ್ನು ‘ಗುತ್ತಿಗೆ’ ಹಿಡಿದ ಒಂದು ತಂಡ ವಿರೋಧ ತೋರುತ್ತಿದೆ.

“ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ. ಭಾಗವೆಂದು ಹೇಳುವವರ ಖಂಡನೆ, ವಚನ ಸಾಹಿತ್ಯ ವಿಕೃತಿ ಗೊಳಿಸುವುದಕ್ಕೆ ಖಂಡನೆ, ಸಾಣೇಹಳ್ಳಿ ಶ್ರೀಗಳ ಮೇಲಿನ ದಾಳಿಗೆ ಖಂಡನೆ…” ಇತ್ಯಾದಿ ಮತೀಯ ಮೂಲಭೂತವಾದಿ ಎನಿಸುವ ನಿರ್ಣಯ ಗಳನ್ನು ಕೈಗೊಂಡು ಈ ತಂಡವು ಬಸವಣ್ಣನ ಮೇಲಿನ ತನ್ನ ಹಕ್ಕೊತ್ತಾಯವನ್ನು ಮಂಡಿಸಿ ಪತ್ರಿಕಾ ಹೇಳಿಕೆ ಕೊಟ್ಟಿದೆ.

ಬಸವಣ್ಣನ ಜಾತ್ಯತೀತ ನಿಲುವನ್ನು ಗಾಳಿಗೆ ತೂರಿ ಒಂದು ಜಾತಿಪೀಠದ ಅಧಿಪತಿಯಾದವರು ತಮ್ಮ
ಜಾತಿ ವ್ಯಸನಿ ಭಕ್ತರ ಗೋಷ್ಠಿ ಸೇರಿಸಿ ಬಸವಣ್ಣನನ್ನು ಗುರಾಣಿ ಮಾಡಿಕೊಂಡು ಹಕ್ಕೊತ್ತಾಯ ಮಂಡಿಸುತ್ತಿರುವ ಮತೀಯ ನಡೆಯು ಈ ವಚನದಂತಿದೆ: “ಹಲವು ಕಾಲ ಹಂಸೆಯ ಸಂಗದಲ್ಲಿದ್ದರೆ ಬಕನು ಶುಚಿಯಾಗಬಲ್ಲುದೆ?
ನಿಧಿನಿಧಾನದೊಳಗಿದ್ದರೇನು ಪಾಷಾಣ ಹೊನ್ನಾಗಬಲ್ಲುದೆ? ಕಲ್ಪತರುಗಳ ಸಂಗದಲ್ಲಿದ್ದರೇನು ಕೊರಡು
ಫಲವಾಗಬಲ್ಲುದೆ? ಕಾಶೀಕ್ಷೇತ್ರದಲ್ಲಿ ಶುನಕನಿದ್ದರೇನು ಅದರ ಕ್ಷೀರ ಪಂಚಾಮೃತವಾಗಬಲ್ಲುದೆ? ಖಂಡುಗ
ಹಾಲೊಳಗೆ ಇದ್ದಿಲ ಹಾಕಿದರೇನು ಬಿಳಿದಾಗಬಲ್ಲುದೆ? ಇದು ಕಾರಣ ಕೂಡಲಚೆನ್ನಸಂಗನ ಶರಣರ ಸನ್ನಿಧಿ ಯಲ್ಲಿದ್ದರೇನು ಅಸಜ್ಜನ ಸದ್ಭಕ್ತನಾಗಬಲ್ಲನೆ?”.

ಇರಲಿ, ಈ ಹಿನ್ನೆಲೆಯಲ್ಲಿ ‘ವಚನ ದರ್ಶನ’ ಕೃತಿಯಲ್ಲಿ ಏನಿದೆ ಎನ್ನುವುದಕ್ಕಿಂತ ಇವರು ಪ್ರತಿಪಾದಿಸುವಂತೆ ಬಸವಣ್ಣ ಮತ್ತು ಶರಣರ ಸಂಘವು ನಿಜಕ್ಕೂ ಸನಾತನ ಧರ್ಮದ ವಿರುದ್ಧ ಹೋರಾಡಿತ್ತೆ? ಬೋಧಿಸಿತ್ತೆ? ಇದರ ಅನ್ವೇಷಣೆಯ ಆರಂಭವನ್ನು ಕ್ರಿ.ಶ. ೫ನೇ ಶತಮಾನದ ಚೀನಿ ಯಾತ್ರಿಕ ಹಿಯಾನನಿಂದ ಆರಂಭಿಸೋಣ.

ಏಕೆಂದರೆ ದಲಿತ ಇತಿಹಾಸವು, ‘ಸನಾತನ ಧರ್ಮದ ಸಾಮಾಜಿಕ ತಾರತಮ್ಯವನ್ನು ಮೊತ್ತ ಮೊದಲಿಗೆ ಫಾಹಿಯಾನನು ದಾಖಲಿಸಿದ್ದಾನೆ’ ಎನ್ನುತ್ತದೆ.

ಅದಲ್ಲದೇ ಇದು ಐತಿಹಾಸಿಕ ದಾಖಲೆ ಕೂಡ. ಫಾಹಿಯಾನನು ತನ್ನ ದಾಖಲೆಯಲ್ಲಿ ಅಂದಿನ ಸಾಮಾಜಿಕ
ವ್ಯವಸ್ಥೆಯಲ್ಲಿ ಮಾಂಸವನ್ನು ಮಾರಾಟ ಮಾಡಲು ‘ಚಾಂಡಾಲ’, ‘ಬೆಸ್ತ’ ಮತ್ತು ‘ಬೇಟೆಗಾರ’ರು ಮಾತ್ರ ಅರ್ಹರಾಗಿದ್ದರು ಎನ್ನುತ್ತಾನೆ. ಅಂದರೆ ಅಲ್ಲಿಗೆ ಚಾಂಡಾಲರನ್ನು ಅಂದಿನ ಮಾಂಸೋದ್ಯಮಿಗಳು ಎಂದು ಪರಿಗಣಿಸಬಹುದು!

ಫಾಹಿಯಾನನು ಮುಂದುವರಿದು “ಮಾಂಸ ಮತ್ತು ಮದಿರೆಯ ಅಂಗಡಿಗಳು ಊರಿನ ಹೊರವಲಯದಲ್ಲಿ ಇರುತ್ತಿ
ದ್ದವು. ಚಾಂಡಾಲರು ತಮ್ಮ ರಕ್ತಸಿಕ್ತ ವಸಗಳಿಂದ ವಿಕಾರವಾಗಿಯೂ ಬೀಭತ್ಸರಾಗಿಯೂ ಕಾಣುವುದಲ್ಲದೇ
ಪ್ರಾಣಿವಧೆಯ ’ಪಾಪಿಗಳು’, ’ಕಟುಕರು’ ಎಂದು ಕರೆಸಿಕೊಳ್ಳುತ್ತಾ ಊರಿನ ಹೊರಗೆ ವಾಸಿಸಬೇಕಿದ್ದಿತು” ಎಂದು
ದಾಖಲಿಸಿzನೆ. “ಮಾಂಸ ಮಾರಾಟದೊಂದಿಗೆ ಶವಸಂಸ್ಕಾರವನ್ನು ಕೂಡ ಚಾಂಡಾಲರು ನಿಭಾಯಿಸುತ್ತಿದ್ದರು.
ಇವರು ಜನವಸತಿ ಪ್ರದೇಶಗಳನ್ನು ಪ್ರವೇಶಿಸುವಾಗ ತಮ್ಮ ಆಗಮನವನ್ನು ಸೂಚಿಸಲು ಮರದ ಹಲಗೆಯಿಂದ ಶಬ್ದ
ಮಾಡುತ್ತ ಸಂಚರಿಸಬೇಕಿದ್ದಿತು. ಈ ಶಬ್ದ ಕೇಳಿದ ಜನ ಇವರಿಗೆ ದಾರಿಯನ್ನು ಬಿಟ್ಟು ಮನೆ ಸೇರಿಕೊಳ್ಳುತ್ತಿದ್ದರು” ಎಂದು ಫಾಹಿಯಾನ್ ದಾಖಲಿಸಿದ್ದಾನೆ.

ಫಾಹಿಯಾನ್ ತನ್ನ ಟಿಪ್ಪಣಿಯನ್ನು ಮುಂದುವರಿಸುತ್ತಾ “ಚಾಂಡಾಲರು ತಮ್ಮ ಕಟುಕ ವೃತ್ತಿಯನ್ನು ಬಿಟ್ಟು ಪರಿವರ್ತನೆಗೊಂಡಲ್ಲಿ (ವೃತ್ತ್ಯಾಂತರಗೊಂಡಲ್ಲಿ) ಪುರೋಹಿತರಾಗುವ ವ್ಯವಸ್ಥೆ ಕೂಡಾ ಇರುವುದು. ಹಾಗೆ ಪರಿವರ್ತನೆಗೊಂಡ ಸಂಸ್ಕಾರವಂತರನ್ನು ಬ್ರಾಹ್ಮಣರೆಂದು ಪೂಜಿಸುವ ವ್ಯವಸ್ಥೆ ಸಹ ಇರುವುದು” ಎಂದು ಸ್ಪಷ್ಟವಾಗಿ ದಾಖಲಿಸಿದ್ದಾನೆ. ಅಂದರೆ ೫ನೇ ಶತಮಾನದಲ್ಲಿ ಹುಟ್ಟು ಮನುಷ್ಯನ ಜಾತಿಯನ್ನು ನಿರ್ಧರಿಸು ತ್ತಿರಲಿಲ್ಲ.

ಕ್ರಿ.ಶ. ೭ನೇ ಶತಮಾನದಲ್ಲಿ ಭೇಟಿ ಕೊಟ್ಟ ಇನ್ನೋರ್ವ ಚೀನಿ ಯಾತ್ರಿಕ ಹುಯೆನ್ ತ್ಸಾಂಗ್ ಸಹ, “ಚಾಂಡಾಲರು
ತಮ್ಮ ಕಟುಕ ವೃತ್ತಿಯನ್ನು ಬಿಟ್ಟು ಪರಿವರ್ತನೆಗೊಂಡಲ್ಲಿ ಬ್ರಾಹ್ಮಣರಾಗುವ ಮತ್ತು ಅವರನ್ನು ಪೂಜಿಸುವ ವ್ಯವಸ್ಥೆ ಇದ್ದಿತು” ಎಂದು ತನ್ನ ‘ಪಶ್ಚಿಮದ ದಸ್ತಾವೇಜುಗಳು’ ಕೃತಿಯಲ್ಲಿ ದಾಖಲಿಸಿದ್ದಾನೆ. ಅಂದರೆ ೭ನೇ ಶತಮಾನದಲ್ಲಿಯೂ ಹುಟ್ಟು ಮನುಷ್ಯನ ಜಾತಿಯನ್ನು ನಿರ್ಧರಿಸುತ್ತಿರಲಿಲ್ಲ. ಮುಂದೆ ಕ್ರಿ.ಶ. ೮ನೇ ಶತಮಾನದಲ್ಲಿ ಶಂಕರಾಚಾರ್ಯರು ಮತ್ತು ಚಾಂಡಾಲನೋರ್ವನ ನಡುವೆ ವಾರಾಣಸಿಯಲ್ಲಿ ನಡೆಯಿತೆನ್ನಲಾದ ಸಂವಾದವು ಅಸ್ಪೃಶ್ಯತೆಯ, ಅಸಮಾನತೆಯ ಪದ್ಧತಿ ಜಾರಿ ಇದ್ದಿರಬಹುದೆಂಬ ಸುಳಿವು ನೀಡುತ್ತದೆ ಎಂಬ ವಾದವಿದೆ. ಹಾಗಾಗಿ ಶಂಕರಾಚಾರ್ಯರು ಮತ್ತು ಚಾಂಡಾಲನ ನಡುವೆ ನಡೆದ ಸಂಭಾಷಣೆಯ ವಿವರಗಳನ್ನು ಗಮನಿಸೋಣ.

ಇಲ್ಲಿ ಶಂಕರರು ತಮ್ಮ ಹಾದಿಗೆ ಅಡ್ಡ ಬಂದ ಚಾಂಡಾಲನನ್ನು “ದಾರಿ ಬಿಡು, ದಾರಿ ಬಿಡು” ಎಂದಾಗ ಚಾಂಡಾಲನು “ದೈಹಿಕವಾಗಿಯೋ! ಆತ್ಮವಾಗಿಯೋ? ದೈಹಿಕವಾಗಿ ದಾರಿ ಬಿಟ್ಟೇನು. ಆದರೆ ಆತ್ಮ ಎಡೆಯೂ
ಇರುವುದರಿಂದ ಹೇಗೆ ದಾರಿ ಬಿಡಲಿ” ಎಂದನಂತೆ. ಇದರಿಂದ ಪ್ರಭಾವಿತಗೊಂಡ ಶಂಕರರಿಗೆ eನೋದಯವಾಗಿ
‘ಮನೀಷ ಪಂಚಕಮ’ ಶ್ಲೋಕವನ್ನು ರಚಿಸಿದರು ಎಂಬುದು ಈ ಕತೆಯ ಹಿನ್ನೆಲೆ. ಈ ಕತೆಯು ಅಂತರಂಗ/ಬಹಿರಂಗ
‘ಶುದ್ಧಿ’ಯ ಕುರಿತಾಗಿದೆಯೇ ಹೊರತು ಯಾವುದೇ ಹುಟ್ಟಿನಿಂದ ಜಾತಿಯ ಪುರಾವೆಯನ್ನು ನೀಡುವುದಿಲ್ಲ.

ಹಾಗಾಗಿ ಈ ಘಟನೆಯನ್ನು ಅಂದಿನ ಕಾಲಘಟ್ಟದ ಇತರೆ ಐತಿಹಾಸಿಕ ದಾಖಲೆಗಳೊಟ್ಟಿಗೆ ಪರಾಮರ್ಶಿಸಿ ನೋಡಬೇಕಾಗುತ್ತದೆ. ಶಂಕರರ ಕಾಲಘಟ್ಟದಲ್ಲಿ ಗುರ್ಜರರು (ಇಂದು ಹಿಂದುಳಿದವರು ಎನಿಸಿಕೊಳ್ಳುವರು) ಸೇರಿದಂತೆ ಅನೇಕ ಪಂಗಡಗಳು ರಾಜ್ಯಭಾರ ಮಾಡಿವೆ. ಹಾಗಾಗಿ ಹುಟ್ಟಿನಿಂದ ಜಾತಿಯ ಕಾಲ ೯ನೇ ಶತಮಾನವೂ ಅಲ್ಲ. ಅದಲ್ಲದೆ, ನಂತರದ ಕೆಲವು ಶತಮಾನಗಳವರೆಗೆ ಮಾದ್ರ (ನಾಗವಂಶಿ), ಮೀನ (ಚಂಡ), ಗೊಂಡ, ಕೋಚ, ಹೀಗೆ ದಲಿತರೆನ್ನುವ ರಾಜವಂಶಗಳಿದ್ದು, ಅವರುಗಳು ರಜಪೂತ, ಕ್ಷತ್ರಿಯ, ವೈಶ್ಯ, ಬ್ರಾಹ್ಮಣರನ್ನು ಮದುವೆಯಾದ ಇತಿಹಾಸವೇ ಇದೆ.

ಆಗಲೂ ಚಾಂಡಾಲರು ಸಂಸ್ಕಾರ ಪಡೆದು ಬ್ರಾಹ್ಮಣರಾಗ ಬಹುದಿತ್ತು, ಇತರರೊಟ್ಟಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸಬಹುದಿತ್ತು. ಅಂದರೆ ೮ನೇ ಶತಮಾನದಲ್ಲಿಯೂ ಹುಟ್ಟು ಮನುಷ್ಯನ ಜಾತಿಯನ್ನು ನಿರ್ಧರಿಸುತ್ತಿರಲಿಲ್ಲ. ಮುಂದೆ ಕ್ರಿ.ಶ. ೧೧ನೇ ಶತಮಾನದಲ್ಲಿ ಅಲ್ ಬರೂನಿ ಎಂಬ ಇರಾನಿ ಯಾತ್ರಿಕ ತನ್ನ ‘ಕಿತಾಬ್-ಅಲ-ಹಿಂದ್’ ಕೃತಿಯಲ್ಲಿ ‘ಅಂತ್ಯಜ’ ಎಂಬ ವರ್ಗದ ಕುರಿತು ದಾಖಲಿಸಿದ್ದಾನೆ.

ಇದು ಚಾತುರ್ವರ್ಣದ ಹೊರಗೆ ಆಗಷ್ಟೇ ಸೃಷ್ಟಿಯಾದ ವರ್ಗ! ಏಕೆಂದರೆ ಇಸ್ಲಾಂ ದಾಳಿಯ ನಂತರ ಹುಟ್ಟಿನಿಂದ
ಜಾತಿಯನ್ನು ಸೃಷ್ಟಿಸಿಕೊಂಡ ಹಿಂದೂ ಧರ್ಮ, ಅದನ್ನು ಒಂದು ಕಟ್ಟುನಿಟ್ಟಿನ ನಿಯಮವಾಗಿಸಲು ಯಾರಾದರೂ
ತಮ್ಮ ವರ್ಗಗಳ ಹೊರಗೆ ವಿವಾಹ ಸಂಬಂಧಗಳನ್ನೋ, ವಿವಾಹೇತರ ಸಂಬಂಧಗಳನ್ನೋ ಹೊಂದಿ ಮಕ್ಕಳನ್ನು ಪಡೆದರೆ ಆ ಮಕ್ಕಳನ್ನು ಅಂತ್ಯಜರೆನ್ನುವ, ವರ್ಣಗಳ ಹೊರಗಿನವರೆಂದು ವರ್ಗೀಕರಿಸಿ ಅಂಥವರು ಮೋಕ್ಷಕ್ಕೆ ಅರ್ಹರಲ್ಲವೆನ್ನುವ ನೀತಿಯನ್ನು ಅಳವಡಿಸಿಕೊಂಡಿತ್ತು. ಇದನ್ನೇ ಅಲ್ ಬರೂನಿ ತನ್ನ ‘ಕಿತಾಬ-ಅಲ್-ಹಿಂದ್’ ಕೃತಿಯಲ್ಲಿ ಅಂತ್ಯಜರ ಕುರಿತಾಗಿ ವಿವರಿಸಿರುವುದು. ಹಿಂದೂಗಳ ಇಂಥ ಹೊಸ ತಿದ್ದುಪಡಿಗಳನ್ನು ಗಮನಿಸಿಯೇ ಅಲ್ ಬರೂನಿಯು ‘ಹಿಂದೂಗಳು‌ ತಮ್ಮ ಇತಿಹಾಸವನ್ನು ಯಾವ ಎಗ್ಗಿಲ್ಲದೇ ಉತ್ಪ್ರೇಕ್ಷೆ, ಉಡಾಫೆಗಳಿಂದ ತಿದ್ದುವರು’ ಎಂದು ಈ ಕೃತಿಯಲ್ಲಿ ಹೀಗಳೆದಿದ್ದಾನೆ.

ಆದರೆ ಇಲ್ಲಿನ ತಿದ್ದುಪಡಿಗಳು ಒಂದು ಸಮಾಜವನ್ನು ಆಳುವ ಸಾಂವಿಧಾನಿಕ ತಿದ್ದುಪಡಿಗಳು ಎಂದು ಅಲ್ ಬರೂ
ನಿಗೆ ಎನ್ನಿಸುವುದಿಲ್ಲ. ಏಕೆಂದರೆ ಮುಸಲ್ಮಾನನಾದ ಅವನಿಗೆ ಧಾರ್ಮಿಕ ಗ್ರಂಥಗಳು ತಿದ್ದಬಾರದ ಗ್ರಂಥ ಎನಿಸಿದ್ದರೆ,
ಇಲ್ಲಿನ ಹಿಂದೂಗಳಿಗೆ ಅದು ಆಡಳಿತದ ಸಂವಿಧಾನ ಎನಿಸಿತ್ತು. ಹಾಗಾಗಿ ಅವರು ಬದಲಾದ ಸಾಮಾಜಿಕ ಸನ್ನಿವೇಶಕ್ಕೆ ತಕ್ಕನಾಗಿ ಮಾಡುವ ಈ ತಿದ್ದುಪಡಿಗಳ ಕುರಿತು ಯಾವ ಅಳುಕನ್ನೂ ಹೊಂದಿರಲಿಲ್ಲ. ಆದರೆ ಈ ಅಳುಕನ್ನು ಆಳ್ವಿಕೆಯ ಸಂವಿಧಾನಕ್ಕಲ್ಲದೆ ಐತಿಹಾಸಿಕ ದಾಖಲೆಗಳಿಗೂ ಅವರು ಅನ್ವಯಿಸಿಕೊಂಡದ್ದು ಮಾತ್ರ ಭಾರತದ ಇತಿಹಾಸದ ದಾಖಲಾತಿಯ ದುರಂತ!

ಭಾರತದಲ್ಲಿ ನೆಲೆ ನಿಲ್ಲದ ಮುಸ್ಲಿಂ ದಾಳಿ ’ಹುಟ್ಟಿನಿಂದ ಜಾತಿ’ಯ ಸೃಷ್ಟಿಗೆ ಕಾರಣವಾಗಿ ’ಧಾರ್ಮಿಕ ಅಸಮಾನತೆ’ ಯನ್ನು ಸೃಷ್ಟಿಸಿದರೆ, ಇಲ್ಲಿಯೇ ನೆಲೆ ನಿಂತ (ಮೊಘಲ) ಮುಸ್ಲಿಂ ಆಡಳಿತ ’ಸಾಮಾಜಿಕ ಅಸಮಾನತೆ’ಯನ್ನು ಸೃಷ್ಟಿಸಿತು. ಹಾಗೆಂದು ಸಾಮಾಜಿಕ ಅಸಮಾನತೆ ಮುಸ್ಲಿಂ ಆಡಳಿತಗಾರರಿಗಿಂತ ಮುಂಚಿತವಾಗಿ ಭಾರತದಲ್ಲಿ ಇರಲೇ ಇಲ್ಲವೆಂದಲ್ಲ. ಅದು ಪ್ರಭುತ್ವ- ಪಂಥಗಳ ಉನ್ನತ ವರ್ಗಗಳ ಓಲೈಕೆಯ ಮಟ್ಟಿಗಿದ್ದಿತೇ ಹೊರತು ಸಾಮಾನ್ಯ ವರ್ಗಗಳ ಮಟ್ಟಿಗೆ ಅದರ ಬಿಸಿ ತಟ್ಟಿರಲಿಲ್ಲ. ಈ ‘ಹುಟ್ಟಿನಿಂದ ಜಾತಿ’ ನಿಯಮಕ್ಕೆ ಬಾಹಿರವಾಗಿ ಅಂತರ್ಜಾತಿ ವಿವಾಹವಾದವರನ್ನು ಮತ್ತವರ ಸಂತತಿಯನ್ನು ‘ಅಂತ್ಯಜ’ ಎಂದು ವರ್ಗೀಕರಿಸಿ ಬಹಿಷ್ಕಾರ ಹಾಕಿ ಊರಿನಿಂದ ಹೊರಗಿರಿಸಲಾಗಿ ಅವರಿಗೆ ಕೇವಲ ಹೀನ ಎನ್ನಿಸುವಂಥ ಉದ್ಯೋಗಗಳು ಮಾತ್ರ ಸಿಗುವಂತಾಯಿತು. ಈ ಮೊದಲು ಅಂಥ ಕೆಳವರ್ಗದ ವೃತ್ತಿಯಲ್ಲಿದ್ದರೂ ಕಲಿತು ಬ್ರಾಹ್ಮಣರಾಗಬಹುದಿತ್ತು. ಆದರೆ ’ಹುಟ್ಟಿನಿಂದ ಜಾತಿ’ ಆ ಅವಕಾಶವನ್ನು ಇಲ್ಲವಾಗಿಸಿಬಿಟ್ಟಿತು.

ನೆಲೆ ನಿಂತ ಮುಸ್ಲಿಂ ಆಡಳಿತದಲ್ಲಿ ಉಂಟಾದ ಈ ಸಾಮಾಜಿಕ ಅಸಮಾನತೆಯ ಕಾರಣವಾಗಿಯೇ ದಿಢೀರನೆ
ಭಕ್ತಿಪಂಥಗಳು ದೇಶದ ಉದ್ದಗಲಕ್ಕೂ ಈ ಕಾಲಘಟ್ಟದಲ್ಲಿ ಉದ್ಭವಿಸಿ ಭಜನೆ, ಕೀರ್ತನೆ, ದೋಹಾ, ಅಭಂಗ,
ವಚನಗಳನ್ನು ಸೃಷ್ಟಿಸಿದ್ದು. ಇದ್ದ ಸನಾತನ ಚಿಂತನೆಗೆ ಹೊಸ ಮೆರುಗು ನೀಡಿ ಭಕ್ತಿನೆಪದಲ್ಲಿ ಜನರನ್ನು ಸೇರಿಸಿ ಸಾಮಾಜಿಕ ಅಸಮಾನತೆಯನ್ನು ನೀಗಲು ಪ್ರಯತ್ನಿಸಿದ್ದೇ ಈ ಎಲ್ಲಾ ಭಕ್ತಿಪಂಥಗಳ ಒಳತಿರುಳು.

(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)

ಇದನ್ನೂ ಓದಿ: CT Ravi: ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ; ಸಿ.ಟಿ. ರವಿ ಆರೋಪ