Monday, 23rd September 2024

Kiran Upadhyay Column: ಅರ್ಧ ದೇಶಕ್ಕೆ ರಂಗು ತುಂಬಿಸುತ್ತಿರುವವರು

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

dhyapaa@gmail.com

ಏಷ್ಯನ್ ಪೇಂಟ್ಸ್ ಆರಂಭವಾದದ್ದು ಮುಂಬೈನ ಗಿರ್ಗಾವ್ ಪ್ರದೇಶದ ಒಂದು ಪುಟ್ಟ ಗ್ಯಾರೇಜಿನಲ್ಲಿ. ಆಗ ಅದಕ್ಕೆ ತಿಂಗಳಿಗೆ 75 ರುಪಾಯಿ ಬಾಡಿಗೆ. ಅದೇ ಸಂಸ್ಥೆ ಈಗ ಏಳೂವರೆ ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ಒದಗಿಸಿ ಕೊಟ್ಟಿದೆ. ಇಂದು ಭಾರತದ ಶೇ.50ರಷ್ಟು ಕಟ್ಟಡಗಳಿಗೆ ಏಷ್ಯನ್ ಪೇಂಟ್ಸ್ ಪ್ರಮುಖ ಶೃಂಗಾರ ಸಾಧನ.

ಎಲ್ಲಿಂದ ಆರಂಭಿಸೋಣ? ನಿಜವಾಗಿ ಕತೆ ಆರಂಭವಾಗುವುದು, ಭಾರತಕ್ಕೆ ಸ್ವಾತಂತ್ರ್ಯ ಸಿಗುವ 5 ವರ್ಷಕ್ಕೂ ಮೊದಲು. ಆದರೂ, ಪೀಠಿಕೆಯಾಗಿ 4 ದಶಕ ಹಿಂದಕ್ಕೆ ಹೋಗಿ, ಅಲ್ಲಿಂದ ಆರಂಭಿಸೋಣ.

ಸ್ವಾತಂತ್ರ್ಯಕ್ಕೂ ಮೊದಲು ಭಾರತದಲ್ಲಿ ಗೋಡೆಗೆ ಬಳಿಯುವ ಬಣ್ಣ ತಯಾರಿಸುವ ಕಂಪನಿಗಳೇ ಇರಲಿಲ್ಲ. ಬಣ್ಣಗಳು ಅಮೆರಿಕ, ಬ್ರಿಟನ್ ಮತ್ತು ಈಜಿಪ್ಟ್‌ನಿಂದ ಆಮದಾಗುತ್ತಿದ್ದವು. 1902ರಲ್ಲಿ ಪಶ್ಚಿಮ ಬಂಗಾಳದ ಹೌರಾ ದಲ್ಲಿ ಬಣ್ಣ ತಯಾರಿಸುವ ಮೊದಲ ಸಂಸ್ಥೆ ಆರಂಭವಾಯಿತು. ಶಾಲಿಮಾರ್ ಪೇಂಟ್ಸ್ ಹೆಸರಿನ ಕಂಪನಿ ಆರಂಭಿ ಸಿದ್ದು ಮಾತ್ರ ಬ್ರಿಟಿಷ್ ಪ್ರಜೆಗಳಾದ ಎ.ಎನ್.ರೈಟ್ ಮತ್ತು ಎ.ಎನ್.ಟರ್ನರ್. ಕಲ್ಕತ್ತಾದ ಪ್ರತಿಷ್ಠಿತ ಹೌರಾ ಬ್ರಿಜ್ ನ ಲೋಹದಿಂದ ಹಿಡಿದು ದೆಹಲಿಯ ಸಂಸತ್ ಭವನದ ಗೋಡೆಯವರೆಗೆ ಶಾಲಿಮಾರ್ ಪೇಂಟ್ ಅನ್ನು ಬಳಸಲಾ ಗುತ್ತಿತ್ತು. ಕತೆ ತಿರುವು ಪಡೆದದ್ದು (ಬಣ್ಣ ಬದಲಾದದ್ದು!) 1942ರಲ್ಲಿ.

ಆಗ ಎರಡನೆಯ ವಿಶ್ವ ಮಹಾಯುದ್ಧ ನಡೆಯುತ್ತಿದುದರಿಂದ ಬಹುತೇಕ ವಸ್ತುಗಳು ವಿದೇಶದಿಂದ ಭಾರತಕ್ಕೆ ಬರುವುದು ನಿಂತಿತ್ತು. ಜತೆಗೆ, ಗಾಂಧೀಜಿ ಆರಂಭಿಸಿದ ಕ್ವಿಟ್ ಇಂಡಿಯಾ ಚಳವಳಿಯೂ ಕಾವು ಪಡೆದ ಕಾರಣ, ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ವ್ಯಾಪಾರ ದುಸ್ತರವಾಯಿತು, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಜನರನ್ನು ಪ್ರೇರೇಪಿಸಲಾಯಿತು ಎನ್ನುವುದೆಲ್ಲ ಎಲ್ಲರೂ ತಿಳಿದಿರುವ ಕತೆಯೇ. ಆ ಸಂದರ್ಭ ವನ್ನು ಹಲವರು ಸರಿಯಾಗಿ ಬಳಸಿಕೊಂಡರು. ಅಂಥ ಪ್ರಯೋಜನ ಪಡೆದವರಲ್ಲಿ ಚೋಕ್ಸಿ ಕೂಡ ಒಬ್ಬರು.

ಚೋಕ್ಸಿ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ತಲೆಮರೆಸಿಕೊಳ್ಳುವುದಕ್ಕಾಗಿ ದೇಶ ಬಿಟ್ಟು ಓಡಿಹೋದ ಮೆಹುಲ್ ಚೋಕ್ಸಿ. ಆದರೆ ಇವರು ಆ ಚೋಕ್ಸಿ ಅಲ್ಲ. ಇವರು ಇಂದು ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ‘ಏಷ್ಯನ್ ಪೇಂಟ್ಸ್’ ಸಂಸ್ಥೆಯ ಉಗಮಕ್ಕೆ ಕಾರಣರಾದ ಚಂಪಕ್‌ಲಾಲ್ ಚೋಕ್ಸಿ. ಏಷ್ಯನ್ ಪೇಂಟ್ಸ್‌ನ ಹುಟ್ಟು, ಬೆಳವಣಿಗೆ
ಎಲ್ಲವೂ ಯಾವುದೇ ಸಾಹಸಗಾಥೆಗೂ ಕಮ್ಮಿಯಿಲ್ಲ.

ಏಷ್ಯನ್ ಪೇಂಟ್ಸ್ ಎಂಬ ಬಣ್ಣದ ಕಂಪನಿ ಆರಂಭಿಸುವಾಗ ಚಂಪಕ್‌ಲಾಲ್ ಚೋಕ್ಸಿ ಅವರಿಗೆ 26 ವರ್ಷ. ಚಂಪಕ್‌ ಲಾಲ್ ತಮ್ಮ ಇತರ ಮೂವರು ಸ್ನೇಹಿತರಾದ ಚಮನ್‌ಲಾಲ್ ಚೋಕ್ಸಿ, ಸೂರ್ಯಕಾಂತ್ ದಾನಿ ಮತ್ತು ಅರವಿಂದ್ ವಕೀಲ್ ಅವರೊಂದಿಗೆ ಸೇರಿ ಪೇಂಟ್ ತಯಾರಿಸುವ ಕಂಪನಿ ಪ್ರಾರಂಭಿಸಲು ನಿರ್ಧರಿಸಿದರು. ಮೂವರು ಸ್ನೇಹಿತ ರಲ್ಲಿ ಒಬ್ಬರು ಮನೆಗೆ, ಇನ್ನೊಬ್ಬರು ವಾಹನಗಳಿಗೆ, ಮತ್ತೊಬ್ಬರು ಸೈಕಲ್‌ಗಳಿಗೆ ಬಣ್ಣ ಹಚ್ಚುವುದರಲ್ಲಿ ನಿಷ್ಣಾತ ರಾಗಿದ್ದರು.

ಜೈನ ಸಮುದಾಯದ ನಾಲ್ವರೂ ಸೇರಿ ಸಂಸ್ಥೆಯನ್ನು ಮೊದಲು ಪ್ರಾರಂಭಿಸಿದ್ದು ಒಂದು ಪುಟ್ಟ ಗ್ಯಾರೇಜಿನಲ್ಲಿ. ಅದೇನು ಪವಾಡವೋ, ಕಾಕತಾಳೀಯವೋ ಗೊತ್ತಿಲ್ಲ; ಗ್ಯಾರೇಜ್‌ನಲ್ಲಿ ಆರಂಭಗೊಂಡ ಬಹುತೇಕ ಸಂಸ್ಥೆಗಳು ಹೆಸರು ಮಾಡುತ್ತವೆ. ಅಮೆಜಾನ್, ಗೂಗಲ್, ಮೈಕ್ರೊಸಾಫ್ಟ್, ಡಿಸ್ನಿಲ್ಯಾಂಡ್‌ನ ವಾಲ್ಟ್ ಡಿಸ್ನಿ‌ ಮೊದಲಾದ ಕಂಪನಿ ಗಳಿಗೆಲ್ಲ ಗ್ಯಾರೇಜ್ ಉಗಮ ಸ್ಥಾನ, ಇರಲಿ. ಏಷ್ಯನ್ ಪೇಂಟ್ಸ್ ಆರಂಭವಾದದ್ದು ಮುಂಬೈನ ಗಿರ್ಗಾವ್ ಪ್ರದೇಶದ ಗಾಯವಾಡಿಯಲ್ಲಿರುವ ಒಂದು ಪುಟ್ಟ ಗ್ಯಾರೇಜಿನಲ್ಲಿ.

ಆಗ ಅದಕ್ಕೆ ತಿಂಗಳಿಗೆ 75 ರುಪಾಯಿ ಬಾಡಿಗೆ. ಕಂಪನಿಗೆ ಹೆಸರಿಡುವುದು ಏನೆಂದು ಹೊಳೆಯದಿದ್ದಾಗ ನಾಲ್ವರೂ
ಸೇರಿ, ಕಣ್ಣು ಮುಚ್ಚಿ ಟೆಲಿಫೋನ್ ಡೈರೆಕ್ಟರಿಯ ಒಂದು ಪುಟ ತೆರೆಯುವುದು, ಆ ಪುಟದಲ್ಲಿರುವ ಮೊದಲ ಹೆಸರನ್ನೇ ತಮ್ಮ ಕಂಪನಿಗೂ ಇಡುವುದೆಂದು ನಿರ್ಧರಿಸಿದರು. ಹಾಗೆ ತೆರೆದಾಗ ಮೊದಲು ಕಂಡದ್ದು ‘ಏಷ್ಯನ್’ ಆದ್ದರಿಂದ, ಸಂಸ್ಥೆಗೆ ಏಷ್ಯನ್ ಪೇಂಟ್ಸ್ ಎಂದು ನಾಮಕರಣ ಮಾಡಿದರು.

ಆರಂಭದಲ್ಲಿ ವ್ಯಾಪಾರ ಸುಲಭವಾಗಿರಲಿಲ್ಲ. ಶಾಲಿಮಾರ್ ಮತ್ತು ಇತರ ಕಂಪನಿಗಳು ತಮ್ಮ ವಿತರಕರಿಗೆ ಹೆಚ್ಚಿನ ಲಾಭಾಂಶ ನೀಡುತ್ತಿದ್ದುದರ ಜತೆಗೆ, ಹೊಸ ಕಂಪನಿಯ ಮೇಲೆ ಭರವಸೆಯೂ ಮೂಡುತ್ತಿರಲಿಲ್ಲವಾದ್ದರಿಂದ ಸ್ವಾಭಾವಿಕವಾಗಿಯೇ ವಿತರಕರು ಹಳೆಯ ಸರಕನ್ನೇ ಹೆಚ್ಚು ಪ್ರೋತ್ಸಾಹಿಸುತ್ತಿದ್ದರು. ಅದನ್ನು ಅರಿತ ಚಂಪಕ್‌ ಲಾಲ್ ಹಳ್ಳಿಗಳಿಗೆ ಹೋಗಿ, ದೊಡ್ಡ ಕಂಪನಿಯ ಸಣ್ಣ ವಿತರಕರನ್ನು ಸಂಪರ್ಕಿಸಿದರು. ಕೆಲವು ಕಡೆ ಹೊಸ ವಿತರಕ ರನ್ನು ನಿಯೋಜಿಸಿದರು. ಮಧ್ಯವರ್ತಿಗಳಿಲ್ಲದೆ, ಕಂಪನಿಯೊಂದಿಗೆ ನೇರ ಸಂಪರ್ಕ ಏರ್ಪಟ್ಟಿದ್ದು ಅವರಿಗೂ
ಖುಷಿಯ ವಿಚಾರವಾಗಿತ್ತು. ಅದರೊಂದಿಗೆ ಚಂಪಕ್‌ಲಾಲ್ ಇನ್ನೂ ಒಂದು ಉಡುಗೊರೆ ಕೊಟ್ಟಿದ್ದರು.

ಹಳ್ಳಿಗಳಲ್ಲಿ ತಮ್ಮ ಬಣ್ಣ ಮಾರಲು ನಿರ್ಣಯಿಸಿ ಚಂಪಕ್‌ಲಾಲ್ ಮೊದಲು ಹೋದದ್ದು ಸತಾರಾ ಪ್ರದೇಶದ ಸಾಂಗ್ಲಿಗೆ. ಭಾರತೀಯರ ಭಾವನೆಗೆ ಬಿರುಸಾದ ಬಾಂಧವ್ಯ ಬೆಸೆಯುವ ವಿಷಯಗಳಲ್ಲಿ ಮನೆ ಮತ್ತು ಹಬ್ಬ ಹರಿದಿನ ಗಳೂ ಒಂದು. ಆ ದಿನಗಳಲ್ಲಿ, ಸಾಂಗ್ಲಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಅದರ ಪ್ರಯುಕ್ತ ರೈತರು ಗೋವುಗಳ, ವಿಶೇಷವಾಗಿ ಎತ್ತುಗಳ ಕೋಡಿಗೆ ಬಣ್ಣ ಹಚ್ಚುತ್ತಿದ್ದರು (ಆ ಪ್ರದೇಶದಲ್ಲಿ ಅದು ಇಂದಿಗೂ ಚಾಲ್ತಿಯಲ್ಲಿದೆ). ಅದನ್ನು ನೋಡಿದ ಚಂಪಕ್‌ಲಾಲ್ ಕೋಡಿಗೆ ಹಚ್ಚಲು ಬೇಕಾಗುವಷ್ಟು ಬಣ್ಣವನ್ನು ಉಚಿತವಾಗಿ ನೀಡಿದರು. ಇದನ್ನು ದೇಶದ ಇತರ ಕಡೆಗಳಿಗೂ ವಿಸ್ತರಿಸಿದರು.

ಅಂತೆಯೇ, ದಕ್ಷಿಣ ಭಾರತದಲ್ಲಿ ಜನರು ತಮ್ಮ ಮನೆಯ ಹೊಸ್ತಿಲು, ಪ್ರಧಾನ ಬಾಗಿಲಿನ ಚೌಕಟ್ಟುಗಳಿಗೂ ಬಣ್ಣಗಳಿಂದ ಶೃಂಗರಿಸುತ್ತಿದ್ದುದನ್ನು ಕಂಡು, ಅವರಿಗೂ ಉಚಿತವಾಗಿ ಬಣ್ಣ ಹಂಚಿದರು. ಇದರಿಂದ ಏಷ್ಯನ್ ಪೇಂಟ್ಸ್ ಜನರಿಗೆ ಬೇಗ ಆಪ್ತವಾಯಿತು. ಜನರಿಂದಲೇ ಬೇಡಿಕೆ ಬರಲು ಆರಂಭವಾದ್ದರಿಂದ ಮೊದಲು ಏಷ್ಯನ್ ಪೇಂಟ್ಸ್ ಅನ್ನು ತಿರಸ್ಕರಿಸಿದ್ದ ವಿತರಕರು ಅವರಾಗಿಯೇ ಕೇಳಿಕೊಂಡು ಬರುವಂತಾಯಿತು. ಇಂದು ದೇಶಾದ್ಯಂತ
ಸುಮಾರು 70000 ಏಷ್ಯನ್ ಪೇಂಟ್ಸ್ ವಿತರಕರಿದ್ದಾರೆ!

ಚಂಪಕ್‌ಲಾಲ್ ಮಹಾಮೇಧಾವಿ. ಮಾರುಕಟ್ಟೆಯನ್ನು ಚೆನ್ನಾಗಿ ಅಭ್ಯಾಸ ಮಾಡುವ ಬುದ್ಧಿವಂತ. ಆ ಕಾಲದಲ್ಲಿ ಎರಡು ಬಗೆಯ ಬಣ್ಣ ತಯಾರಾಗುತ್ತಿತ್ತು. ಒಂದು, ಕಾರ್ಖಾನೆಗಳಿಗೆ ಬಳಸುವ ಕಮ್ಮಿ ದರದ ಬಣ್ಣ. ಇನ್ನೊಂದು ಮನೆಗಳು, ವಾಣಿಜ್ಯ ಮಳಿಗೆಗಳಿಗೆ ಬಳಸುವ ಉತ್ತಮ ಗುಣಮಟ್ಟದ ಬಣ್ಣ. ಚಂಪಕ್‌ಲಾಲ್‌ಗೆ ಮೊದಲನೆಯದರ ಕಡೆ ಆಸಕ್ತಿ ಇರಲಿಲ್ಲ. ಮೊದಲಿಂದಲೂ ಗ್ರಾಹಕರ ಬೇಡಿಕೆಯ ಉತ್ಪನ್ನದ ಕಡೆಗೇ ಲಕ್ಷ್ಯ ಹರಿಸಿದರು. ಹೆಚ್ಚು ಬಳಕೆಯಾಗುತ್ತಿದ್ದುದು, ಖರ್ಚಾಗುತ್ತಿದ್ದುದು ಅದೇ. ಆದ್ದರಿಂದ, ಅದರಲ್ಲಿಯೇ ಹಣ ಹೆಚ್ಚು ಎಂದು ಅವರು ಅರಿತಿದ್ದರು. ಆದರೆ, ಆಗ ಎರಡು ಬಗೆಯ ಪೇಂಟ್ ತಯಾರಾಗುತ್ತಿತ್ತು.

ಒಂದು ಡ್ರೈ ಡಿಸ್ಟೆಂಪರ್, ಇನ್ನೊಂದು ಪ್ಲಾಸ್ಟಿಕ್ ಎಮುಲ್ಶನ್. ಡಿಸ್ಟೆಂಪರ್ ಬೆಲೆ ಕಡಿಮೆ. ಆದರೆ ಬಣ್ಣ ಕಿತ್ತು ಬರುವುದು, ಬಟ್ಟೆಗೆ ಅಂಟಿಕೊಳ್ಳುವುದು, ವಾಸನೆ ಬರುವುದು, ಇತ್ಯಾದಿ ಕೆಲವು ಅನಾನುಕೂಲತೆಗಳಿದ್ದವು.
ಪ್ಲಾಸ್ಟಿಕ್ ಎಮಲ್ಶನ್‌ನಲ್ಲಿ ಇದ್ಯಾವುದೂ ಇರಲಿಲ್ಲ. ಆದರೆ ಬೆಲೆ ಐದು ಪಟ್ಟು ಹೆಚ್ಚಾಗಿತ್ತು. ಚಂಪಕ್ ಲಾಲ್ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಣಯಿಸಿದರು. ಆಗ ಹುಟ್ಟಿಕೊಂಡದ್ದೇ, ಭಾರತದ ಬಣ್ಣದ ಜಗತ್ತಿನಲ್ಲಿ ಕ್ರಾಂತಿ ಹುಟ್ಟಿಸಿದ, ಎಮಲ್ಶನ್‌ನ ಎಲ್ಲ ಗುಣಗಳನ್ನೂ ಹೊಂದಿರುವ, ಬೆಲೆಯೂ ಕಮ್ಮಿ ಇರುವ ವಾಶೆಬಲ್ ಡಿಸ್ಟೆಂಪರ್. ಇದನ್ನು ಜನರು ಅಪ್ಪಿಕೊಂಡರು. ಇದರಿಂದಾಗಿ ತಿಂಗಳಿಗೆ 75 ರುಪಾಯಿ ಬಾಡಿಗೆಯ ಗ್ಯಾರೇಜಿನಲ್ಲಿ ಆರಂಭವಾದ ಸಂಸ್ಥೆ ಹತ್ತು ವರ್ಷದ ಅವಧಿಯಲ್ಲಿ ವಾರ್ಷಿಕ 23 ಕೋಟಿ ರುಪಾಯಿಯ ವಹಿವಾಟು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು.

ಅಷ್ಟೇ ಅಲ್ಲ, ಆರಂಭಗೊಂಡ 25 ವರ್ಷದ ಅವಧಿಯಲ್ಲಿ ದೇಶದ ಪೇಂಟ್ ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ
ಮೊದಲನೆಯ ಸ್ಥಾನಕ್ಕೇರಿತು. ಅಂದಿನಿಂದ ಇಂದಿನವರೆಗೂ, ಅಂದರೆ ಸುಮಾರು 57 ವರ್ಷದಿಂದ ಏಷ್ಯನ್ ಪೇಂಟ್ಸ್ ಈ ಸ್ಥಾನವನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ. ಸಂಸ್ಥೆ ಇಂದು ಏಷ್ಯಾದ ಪೇಂಟ್ ತಯಾರಿಸುವ ಸಂಸ್ಥೆಗಳ ಪಟ್ಟಿ ಯಲ್ಲಿ ಎರಡನೆಯ ಸ್ಥಾನದಲ್ಲಿದೆ, ವಿಶ್ವದ ಉತ್ಪಾದಕರ ಪಟ್ಟಿಯಲ್ಲಿ ಮೊದಲ ಐದರ ಸ್ಥಾನದಲ್ಲಿದೆ. ಭಾರತ ದಲ್ಲಿ ಹತ್ತು, ಶ್ರೀಲಂಕಾ ಮತ್ತು ನೇಪಾಳದಲ್ಲಿ ತಲಾ ಎರಡು, ಇಥಿಯೋಪಿಯಾದಲ್ಲಿ ಮೂರು, ಯುಎಇ, ಬಹ್ರೈನ್, ಒಮಾನ್, ಬಾಂಗ್ಲಾದೇಶ, ಫಿಜಿ ಮುಂತಾದ ದೇಶಗಳಲ್ಲಿ ತಲಾ ಒಂದರಂತೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ೨೫ಕ್ಕೂ ಹೆಚ್ಚು ಉತ್ಪಾದನಾ ಘಟಕ ಹೊಂದಿದೆ. ಸಂಸ್ಥೆಯ ಆಮದನಿಯ ಶೇ.45ಕ್ಕೂ ಹೆಚ್ಚು ಭಾಗ ವಿದೇಶಗಳಿಂದ ಬರುತ್ತಿದೆ.

ಏಷ್ಯನ್ ಪೇಂಟ್ಸ್‌ನ ಸಾಹಸ ಅಲ್ಲಿಗೇ ನಿಲ್ಲಲಿಲ್ಲ. 1970ರಲ್ಲಿ, ಅಂದರೆ ಮುಂಬೈನ ಐಐಟಿ ಮತ್ತು ಇಸ್ರೋ ಸಂಸ್ಥೆ ಗಿಂತಲೂ ಹತ್ತು ವರ್ಷ ಮೊದಲೇ ಸಂಸ್ಥೆಯು 8 ಕೋಟಿ ರುಪಾಯಿ ಬೆಲೆ ಬಾಳುವ ಸೂಪರ್ ಕಂಪ್ಯೂಟರ್ ಅನ್ನು ಖರೀದಿಸಿತ್ತು. 1999 ರಲ್ಲಿ ಸರಕು ಪೂರೈಕೆ ಮತ್ತು ನಿರ್ವಹಣೆಯಲ್ಲಿ ಬಳಸುವ ಅಮೆರಿಕದ ತಂತ್ರಜ್ಞಾನ ವನ್ನು ಭಾರತಕ್ಕೆ ಪರಿಚಯಿಸಿದ್ದೂ ಇದೇ ಸಂಸ್ಥೆ. 2010ರಿಂದ 2015ರ ವೇಳೆಗೆ ತನ್ನ ಸರಕು ಸಾಗಿಸುವ ಎಲ್ಲಾ ವಾಹನ ಗಳಲ್ಲೂ ಜಿಪಿಎಸ್ ಅನ್ನು ಸಂಸ್ಥೆ ಅಳವಡಿಸಿತು.

ಐಐಎಂ, ಐಐಟಿಯಲ್ಲಿ ಓದಿದವರನ್ನು ಕೆಲಸಕ್ಕೆ ಸೇರಿಸಿಕೊಂಡು ತಂತ್ರeನಕ್ಕೆ ಒತ್ತುಕೊಟ್ಟಿತು. ಇದರಿಂದಾಗಿ ಮನುಷ್ಯರಿಗಿಂತ ಯಂತ್ರಗಳನ್ನು ಹೆಚ್ಚು ಬಳಸಿ ಪೇಂಟ್ ತಯಾರಿಸಲು ಅನುಕೂಲವಾಯಿತು. 1980ರಲ್ಲಿ ಮುಂಬೈನ ಭಾಂಡುಪ್‌ನಲ್ಲಿ ಆರಂಭಿಸಿದ ಕಾರ್ಖಾನೆಯಲ್ಲಿ ಒಂದೂವರೆ ಸಾವಿರ ಜನರು ಕೆಲಸ ಮಾಡುತ್ತಿದ್ದರು. ಇಂದು ಅದೇ ಪ್ರಮಾಣದ, ಹೊಸ ಕಾರ್ಖಾನೆಗಳನ್ನು ಸಂಸ್ಥೆ ನೂರು ಜನರಿಂದ ಆರಂಭಿಸುವ ಮಟ್ಟಕ್ಕೆ ಬಂದು
ನಿಂತಿದೆ. ಆದಾಗ್ಯೂ ಸಂಸ್ಥೆ ಏಳೂವರೆ ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ಒದಗಿಸಿಕೊಟ್ಟಿದೆ.

ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಸಂಶೋಧನೆಯಲ್ಲಿ ತೊಡಗಿಸಿದೆ. ಇದೆಲ್ಲದರ ಜತೆಗೆ ಸಂಸ್ಥೆ ಇನ್ನೂ
ಒಂದು ಹೆಜ್ಜೆ ಮುಂದೆ ಹೋಗಿತ್ತು. ಅದುವರೆಗೆ ವಿತರಕರು ಎಲ್ಲಾ ಬಣ್ಣದ ಪೇಂಟ್‌ಗಳನ್ನು ತಮ್ಮ ಬಳಿ ದಾಸ್ತಾನು ಇಟ್ಟುಕೊಳ್ಳಬೇಕಾಗಿತ್ತು. ಅದಕ್ಕೆ ವರವಾಗಿ ಬಂದದ್ದು ಪೇಂಟ್ ಟಿಂಟಿಂಗ್ ಮಷಿನ್. ಅದು ಎರಡು ಬಗೆಯ ಬಣ್ಣ ವನ್ನು ಸೇರಿಸಿ ಇನ್ನೊಂದು ಬಣ್ಣವನ್ನಾಗಿ ಮಾರ್ಪಡಿಸುವ ವಿಧಾನ ಅಥವಾ ಸಾಧನ. ಉದಾಹರಣೆಗೆ, ಕೆಂಪು ಮತ್ತು ಹಳದಿ ಸೇರಿಸಿ ಕೇಸರಿ ಬಣ್ಣ ತಯಾರಿಸಿದಂತೆ.

ಇದರಿಂದ ವಿತರಕರು ಕೆಲವೇ ಬಣ್ಣ ಇಟ್ಟುಕೊಂಡು, ಗ್ರಾಹಕರಿಗೆ ನೂರಾರು ಬಣ್ಣ ತಯಾರಿಸಿಕೊಡಲು ದಾರಿ ಮಾಡಿಕೊಟ್ಟಿತು. ಆ ಒಂದು ಸಾಧನವನ್ನು ಇಟ್ಟುಕೊಂಡು ಗ್ರಾಹಕರ ಕಣ್ಣೆದುರಿಗೇ ಅವರಿಗೆ ಬೇಕಾದ ಬಣ್ಣ ತಯಾರಿಸುವಂತಾಯಿತು. ಇಂದು ಏಷ್ಯನ್ ಪೇಂಟ್ಸ್‌ನ ಐವತ್ತು ಸಾವಿರಕ್ಕೂ ಹೆಚ್ಚು ಇಂಥ ಸಾಧನಗಳು ವಿತರಕರ ಬಳಿ ಇವೆ. ದೇಶದ ಎರಡನೆಯ ಮತ್ತು ಮೂರನೆಯ ಸ್ಥಾನದಲ್ಲಿರುವ ಬರ್ಜರ್ ಮತ್ತು ನೆರೊಲ್ಯಾಕ್ ಪೇಂಟ್ ಎರಡನ್ನು ಸೇರಿಸಿದರೂ 45 ಸಾವಿರದ ಗಡಿ ದಾಟುವುದಿಲ್ಲ.

ವ್ಯಾಪಾರದಲ್ಲಿಯೂ ಅಷ್ಟೇ, ಏಷ್ಯನ್ ಪೇಂಟ್ಸ್ ಇಂದು 25 ಸಾವಿರ ಕೋಟಿ ರುಪಾಯಿಗಳ ವಹಿವಾಟು ನಡೆಸಿದರೆ, ಬರ್ಜರ್ ಮತ್ತು ನೆರೊಲ್ಯಾಕ್ ಎರಡರ ವಹಿವಾಟು ಸೇರಿಸಿದರೂ 13 ಸಾವಿರ ಕೋಟಿಯ ಒಳಗೇ ನಿಲ್ಲುತ್ತದೆ.
ನೀವು ಕುಳಿತ ಕೋಣೆಯ ಗೋಡೆಯನ್ನೊಮ್ಮೆ ನೋಡಿ. ಅದೂ ಏಷ್ಯನ್ ಪೇಂಟ್ಸ್ ತಯಾರಿಸಿದ ಬಣ್ಣ ಹೊತ್ತಿರುವ ಸಾಧ್ಯತೆ ಇದೆ. ಏಕೆಂದರೆ ಇಂದು ಭಾರತದ ಶೇ.50ರಷ್ಟು ಕಟ್ಟಡಗಳಿಗೆ ಏಷ್ಯನ್ ಪೇಂಟ್ಸ್ ಪ್ರಮುಖ ಶೃಂಗಾರ ಸಾಧನ. ಉಳಿದ ಎಲ್ಲ ಸಂಸ್ಥೆಗಳು ಸೇರಿ ತಯಾರಿಸುವುದು ಉಳಿದ 50 ಭಾಗವನ್ನು. ಬದ್ಧತೆ, ಮುಂದಾಲೋಚನೆ, ಕೌಶಲ ಅಳವಡಿಸಿಕೊಂಡರೆ ಮಾರುಕಟ್ಟೆಯಲ್ಲಿ ಹೇಗೆ ಸಾರ್ವಭೌಮತ್ವ ಸಾಧಿಸಬಹುದು ಎನ್ನುವುದಕ್ಕೆ ಏಷ್ಯನ್ ಪೇಂಟ್ಸ್ ಉತ್ತಮ ಉದಾಹರಣೆ.

ಇದನ್ನೂ ಓದಿ: Kiran Upadhyay Column: ಬಗೆಬಗೆಯ ಬಯಕೆ ಸಿರಿಯ ಕಂಡು…