Monday, 25th November 2024

Ebrahim Raisi: ಇರಾನ್‌ ಮಾಜಿ ಅಧ್ಯಕ್ಷ ರೈಸಿ ಸಾವಿನ ರಹಸ್ಯ ಬಯಲು; ಹೆಲಿಕಾಪ್ಟರ್‌ ಪತನಕ್ಕೂ ಮುನ್ನ ನಡೆದಿತ್ತಾ ಪೇಜರ್‌ ಬ್ಲಾಸ್ಟ್‌?

Ebrahim raisi

ಜೆರುಸಲೇಂ: ಕೆಲವು ದಿನಗಳ ಹಿಂದೆ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್‌ ನಡೆಸಿರುವ ಪೇಜರ್‌ ಮತ್ತು ವಾಕಿಟಾಕಿ ಸ್ಫೋಟಗಳ ಬೆನ್ನಲ್ಲೇ ದುರಂತ ಸಾವನ್ನಪ್ಪಿದ ಇರಾನ್‌ ಮಾಜಿ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಸಾವಿನ ಹಿಂದಿನ ಸಂಚು ಕೂಡ ಬಯಲಾಗಿದೆ. ಕೆಲವು ತಿಂಗಳುಗಳ ಹಿಂದೆ ಹೆಲಿಕಾಪ್ಟರ್‌ ಪತನಗೊಂಡು (Helicopter Crash) ದುರಂತ ಸಾವನ್ನಪ್ಪಿದ ಇಬ್ರಾಹಿಂ ರೈಸಿಯ ಕೈಯಲ್ಲಿದ್ದ ಪೇಜರ್‌ ಸ್ಫೋಟಗೊಂಡ ಪರಿಣಾಮ ಹೆಲಿಕಾಪ್ಟರ್‌ ಪತನಗೊಂಡಿತ್ತು ಎಂಬ ಶಾಕಿಂಗ್‌ ಸಂಗತಿಯೊಂದು ಬಯಲಾಗಿದೆ.

ಇರಾನ್‌ ಸಂಸತ್‌ ಸದಸ್ಯ ಅಹ್ಮದ್ ಬಕ್ಷಯೇಶ್ ಅರ್ಡೆಸ್ತಾನಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಲೆಬನಾನ್‌ನಲ್ಲಿ ಹಿಜ್ಬುಲ್ಲಾವನ್ನು ಗುರಿಯಾಗಿಸಲು ಬಳಸಿದಂತ ಪೇಜರ್ ಇರಾನ್‌ನ ಮಾಜಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಚಾಪರ್‌ನಲ್ಲಿ ಸ್ಫೋಟಗೊಂಡಿತು ಎಂದು ಹೇಳಿದ್ದಾರೆ. ರೈಸಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪೇಜರ್‌ ಸ್ಫೋಟಗೊಂಡಿದ್ದು, ಪರಿಣಾಮವಾಗಿ ಹೆಲಿಕಾಪ್ಟರ್‌ ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ದುರಂತಕ್ಕೂ ಮುನ್ನ ರೈಸಿ ತಮ್ಮ ಕೈಯಲ್ಲಿ ಪೇಜರ್‌ ಹಿಡಿದಿದ್ದ ಫೋಟೋವೊಂದು ವೈರಲ್‌ ಆಗಿತ್ತು. ಹೀಗಾಗಿ ಪೇಜರ್‌ ಸ್ಫೋಟದಿಂದಾಗಿಯೇ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಫೋಟೋದಲ್ಲಿ, ಪೇಜರ್ ಅನ್ನು ಮೇಜಿನ ಮೇಲೆ ಇರಿಸಿರುವುದನ್ನು ಕಾಣಬಹುದು. ಇದು ಹೆಜ್ಬುಲ್ಲಾ ಉಗ್ರಗಾಮಿಗಳು ಬಳಸುತ್ತಿದ್ದ ಅದೇ ಪೇಜರ್ ಬ್ರಾಂಡ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ಮೇಯಲ್ಲಿ ಹೆಲಿಕಾಪ್ಟರ್‌ ದುರಂತದಲ್ಲಿ ರೈಸಿ ಮೃತಪಟ್ಟಿದ್ದರು. ಹೆಲಿಕಾಪ್ಟರ್‌ನಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ, ಪೂರ್ವ ಅಜರ್‌ಬೈಜಾನ್‌ ಗವರ್ನರ್‌ ಮಲೇಕ್‌ ರಹಮತಿ ಹಾಗೂ ಪೂರ್ವ ಅಜರ್‌ಬೈಜಾನ್‌ನಲ್ಲಿರುವ ಇರಾನ್‌ ಸುಪ್ರೀಂ ಲೀಡರ್‌ನ ಪ್ರತಿನಿಧಿ ಅಯೊತೊಲ್ಲಾ ಮೊಹಮ್ಮದ್‌ ಅಲಿ ಅಲೆ-ಹಶೇಮ್‌ ಕೂಡ ಇದ್ದರು. ಮಂಜು ಕವಿದ ವಾತಾವರಣದ ಕಾರಣ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಮುಂದಾಗಿದ್ದರು. ಆದರೆ ಲ್ಯಾಂಡಿಂಗ್ ವೇಳೆಯೇ ಹೆಲಿಕಾಪ್ಟರ್ ಅಪಘಾತವಾಗಿದೆ ಎಂದು ಇರಾನ್ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಮತ್ತು ಇತರ ಗಣ್ಯರು ಅಜರ್‌ಬೈಜಾನ್‌ಗೆ ತೆರಳಿದ್ದರು. ಈ ವೇಳೇ ಈ ದುರಂತ ಸಂಭವಿಸಿತ್ತು.

ದಟ್ಟ ಮಂಜು ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳು ಪ್ರಾಥಮಿಕವಾಗಿ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಂತಿದ್ದರೂ ಪ್ರಪಂಚಾದ್ಯಂತ ಇರಾನ್‌ನ ಬದ್ಧ ವೈರಿ ರಾಷ್ಟ್ರವಾಗಿರುವ ಇಸ್ರೇಲ್‌(Israel)ನ ಕುಕೃತ್ಯ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ ಈ ಎಲ್ಲಾ ಅನುಮಾನಗಳಿಗೆ ಇಸ್ರೇಲ್‌ ತೆರೆ ಎಳೆಯುವ ಪ್ರಯತ್ನ ಮಾಡಿತ್ತು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್‌ ಈ ದುರಂತಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿಯ ನಂತರ ರೈಸಿ ಹತ್ಯೆ ಹಿಂದೆಯೂ ಇಸ್ರೇಲ್‌ ಅಂತಹದ್ದೇ ಸಂಚು ರೂಪಿಸಿತ್ತು ಎಂದು ಇರಾನ್‌ ಶಂಕಿಸಿದೆ.

ಸೆಪ್ಟೆಂಬರ್ 16 ಮತ್ತು ಸೆಪ್ಟೆಂಬರ್ 17 ರಂದು ಎರಡು ದಿನಗಳ ದಾಳಿಯಲ್ಲಿ ಹೆಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ಪೇಜರ್‌ಗಳು ಮತ್ತು ವಾಕಿ-ಟಾಕಿಗಳು ಸ್ಫೋಟಗೊಂಡವು. ಆ ದಾಳಿಯಲ್ಲಿ ಒಟ್ಟು ಸಾವಿನ ಸಂಖ್ಯೆ 39 ಕ್ಕೆ ಏರಿದೆ ಮತ್ತು 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಗಳನ್ನು ಇಸ್ರೇಲ್ ನಡೆಸಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ, ಅದು ತನ್ನ ಕೃತ್ಯ ಎಂದು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ.

ಈ ಸುದ್ದಿಯನ್ನೂ ಓದಿ: Lebanon Pager Explosions: ಪೇಜರ್‌, ವಾಕಿಟಾಕಿ ಸ್ಫೋಟ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; ಶೀಘ್ರವೇ ಇಸ್ರೇಲ್‌ -ಲೆಬನಾನ್‌ ಯುದ್ಧ?