Monday, 23rd September 2024

Bengaluru vs North Indians: ನಾವಿಲ್ಲದಿದ್ರೆ ಬೆಂಗಳೂರೇ ಖಾಲಿ ಎಂದಿದ್ದ ಯುವತಿ ಕೆಲಸದಿಂದ ವಜಾ

ಬೆಂಗಳೂರು: ಉತ್ತರ ಭಾರತೀಯರೆಲ್ಲ ಬೆಂಗಳೂರು (Bengaluru vs north indians) ಬಿಟ್ಟರೆ ನಗರ ಖಾಲಿ ಖಾಲಿಯಾಗುತ್ತದೆ ಎಂದು ಹೇಳಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ (Instagram influencer) ಸುಗಂಧ್ ಶರ್ಮಾ ಕೆಲಸದಿಂದ ವಜಾಗೊಂಡಿದ್ದಾಳೆ. ಈಕೆಯ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದರಿಂದ ಬೆಂಗಳೂರಿನ ಕಂಪನಿಯು ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದೆ.

ಮಹಿಳೆ ವಿಡಿಯೊಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ಎಚ್ಚೆತ್ತುಕೊಂಡ ಬೆಂಗಳೂರಿನ ಫ್ರೀಡಂ ಕಂಪನಿ, ಸುಗಂಧ್ ಶರ್ಮಳನ್ನು ಕೆಲಸದಿಂದ ತೆಗೆದುಹಾಕಿದೆ. ಉತ್ತರ ಭಾರತೀಯರು ಬೆಂಗಳೂರು ತೊರೆದರೆ, ನಗರ ಖಾಲಿಯಾಗುತ್ತದೆ. ಎಲ್ಲ ಪಿಜಿಗಳು ಖಾಲಿಯಾಗುತ್ತವೆ. ಕೋರಮಂಗಲದ ಎಲ್ಲ ಪಬ್‌ಗಳು, ಅಲ್ಲಿ ಕುಣಿಯುವ ಹುಡುಗಿಯರು ಎಲ್ಲರೂ ಹೋಗುತ್ತಾರೆ ಎಂದು ಈಕೆ ಮಾತನಾಡಿದ್ದ ವಿಡಿಯೊ ವೈರಲ್‌ ಆಗಿದ್ದರಿಂದ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು.

ʼನೀವು ಹೋದರೆ ಏನೂ ಸಮಸ್ಯೆಯಿಲ್ಲ. ತೊಲಗಿʼ ಎಂದು ಕನ್ನಡಿಗರು ಟ್ರೋಲ್‌ ಮಾಡಿದ್ದರು. ಇನ್ನು ಕರವೇ ಅಧ್ಯಕ್ಷ ನಾರಾಯಣ ಗೌಡ (Narayana Gowda) , ರ‍್ಯಾಪರ್‌ ಚಂದನ್‌ ಶೆಟ್ಟಿ (Chandan Shetty) ಸೇರಿದಂತೆ ಕನ್ನಡಿಗ ಸೆಲೆಬ್ರಿಟಿಗಳು ಕೂಡ ʼಗಂಟು ಮೂಟೆ ಕಟ್ಟಿಕೊಂಡು ಹೊರಡಿʼ ಎಂದಿದ್ದರು.

ಮಹಿಳೆಯ ವಿಡಿಯೊನಲ್ಲಿ ಏನಿದೆ?

ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಚಿತ್ರೀಕರಿಸಿದ್ದ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಇನ್‌ಸ್ಟಗ್ರಾಂ ಇನ್‌ಪ್ಲುಯೆನ್ಸರ್‌ ಸುಗಂಧ್ ಶರ್ಮಾ ಎಂಬಾಕೆ, ಉತ್ತರ ಭಾರತೀಯರು ಬೆಂಗಳೂರು ತೊರೆದರೆ, ನಗರ ಖಾಲಿಯಾಗುತ್ತದೆ. ಎಲ್ಲ ಪಿಜಿಗಳು ಖಾಲಿಯಾಗುತ್ತವೆ. ಕೋರಮಂಗಲದ ಎಲ್ಲ ಪಬ್‌ಗಳು, ಅಲ್ಲಿ ಕುಣಿಯುವ ಹುಡುಗಿಯರು ಎಲ್ಲರೂ ಹೋಗುತ್ತಾರೆ ಎಂದು ಹೇಳಿದ್ದರು.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸೆಲೆಬ್ರಿಟಿಗಳಿಂದ ಸಾಮಾನ್ಯ ನಾಗರಿಕರವರೆಗೂ ಅನೇಕ ಕನ್ನಡಿಗರು ಈ ಹೇಳಿಕೆಯನ್ನು ʼವಿಭಜನಕಾರಿʼ ಮತ್ತು ʼಬೆಂಗಳೂರಿಗೆ ಅಗೌರವಕಾರಿʼ ಎಂದು ಖಂಡಿಸಿದ್ದಾರೆ. ನಟ ಮತ್ತು ರ್ಯಾಪರ್ ಚಂದನ್ ಶೆಟ್ಟಿ, ನಟಿಯರಾದ ಚೈತ್ರಾ ಆಚಾರ್ ಮತ್ತು ಅನುಪಮಾ ಗೌಡ ಮತ್ತು ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ ಮತ್ತು ಧನರಾಜ್ ಸೇರಿದಂತೆ ಗಣ್ಯರು ಶರ್ಮಾ ಅವರ ಟೀಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಚಂದನ್‌ ಶೆಟ್ಟಿ, ಈ ವಿಡಿಯೊವನ್ನು ಪ್ರಚಾರದ ಸ್ಟಂಟ್ ಎಂದು ಟೀಕಿಸಿದ್ದರು. “ನಿಜವಾಗಿಯೂ ನೀವು ಹೊರಟು ನೋಡಿ. ಬೆಂಗಳೂರು ಹೇಗೆ ಖಾಲಿಯಾಗುತ್ತದೆ ನೋಡೋಣ. ನಾವು ಆ ಖಾಲಿತನದಲ್ಲಿ ಮತ್ತು ಡ್ಯಾನ್ಸರ್‌ಗಳನ್ನು ಬಿಟ್ಟು ಬದುಕಲು ಸಿದ್ಧರಿದ್ದೇವೆ. ನಾವು ಅದರೊಂದಿಗೇ ಬದುಕಬಹುದು. ಉಳಿದೆಲ್ಲ ಉತ್ತರ ಭಾರತೀಯರನ್ನು ಮರೆತುಬಿಡಿ. ಸದ್ಯಕ್ಕೆ ನೀವು ಈ ಊರು ಬಿಡಿ” ಎಂದು ನಟಿ ಚೈತ್ರಾ ಆಚಾರ್ ಪ್ರತಿಕ್ರಿಯಿಸಿದ್ದರು.

“ಇದು ಕೂಲ್ ವಿಚಾರ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮಗೇ ಬೆಂಗಳೂರು ಬೇಕಿದೆ. ನೀವು ಬೆಂಗಳೂರು ತೊರೆಯುವುದರಿಂದ ನಮ್ಮ ಊರಿಗೆ ಯಾವುದೇ ವ್ಯತ್ಯಾಸವಿಲ್ಲ. ನಾವೆಲ್ಲ ಬೆಂಗಳೂರನ್ನು ತೊರೆಯಲು ಸಾಧ್ಯವಿಲ್ಲ” ಎಂದು ಅನುಪಮಾ ಗೌಡ ಪ್ರತಿಕ್ರಿಯಿಸಿದ್ದರು.

ಉತ್ತರ ಭಾರತೀಯರು ಬೆಂಗಳೂರು ತೊರೆದರೆ ನಗರ ಖಾಲಿಯಾಗಲಿದೆ ಎಂದ ಮಹಿಳೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ. “ನೀವು ಹೋದರೆ ಕರ್ನಾಟಕ ಖಾಲಿ ಖಾಲಿ ಆಗೋದಿಲ್ಲ, ಬದಲಾಗಿ ಕ್ಲೀನ್ ಆಗುತ್ತದೆ. ಇರುವುದಾದರೆ ಸುಮ್ಮನಿರಿ, ಇಲ್ಲವಾದರೆ ಗಂಟು ಮೂಟೆ ಕಟ್ಟಿಕೊಂಡು ಹೊರಡಿ” ಎಂದು ನಾರಾಯಣ ಗೌಡ ಎಚ್ಚರಿಕೆ ಕೊಟ್ಟಿದ್ದರು.

ಇದನ್ನೂ ಓದಿ: Viral Video: ʼಬೆಂಗಳೂರು ನಡೆಯುತ್ತಿರುವುದೇ ಉತ್ತರದವರಿಂದʼ ಎಂದು ಪೊಗರು ತೋರಿಸಿದ ಮಹಿಳೆಗೆ ʼನಡಿಯಾಚೆʼ ಎಂದ ಕನ್ನಡಿಗರು!

ಆಕ್ರೋಶದ ಬಳಿಕ ಐ ಲವ್‌ ಬೆಂಗಳೂರು ಎಂದ ಮಹಿಳೆ!

ತನ್ನ ವಿಡಿಯೊಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ಕೊನೆಗೂ ಸುಗಂದ್ ಶರ್ಮ ಉಲ್ಟಾ ಹೊಡೆದಿದ್ದಾಳೆ. ನಾನು ಬೆಂಗಳೂರನ್ನು ಪ್ರಿತಿಸುತ್ತೇನೆ ಎಂದು ಕನ್ನಡದಲ್ಲಿ ಮಾತನಾಡಿದ್ದಾಳೆ. ಐ ಲವ್‌ ಬೆಂಗಳೂರು ಎಂದು ರೀಲ್ ಮಾಡಿರುವ ಮಹಿಳೆ, ನಾನು ಒಬ್ಬ ಟ್ರಾವೆಲರ್, ನಾನು ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿರುತ್ತೇನೆ. ಅಲ್ಲಿರುವ ಸಂಸ್ಕೃತಿ ಕಲಿಯಲು ಇಷ್ಟ ಪಡುತ್ತೇನೆ. ಕನ್ನಡ ಭಾಷೆ ಕೂಡ ಕಲಿಯುವ ಪ್ರಯತ್ನ ಮಾಡುವೆ ಎಂದು ಮಹಿಳೆ ವಿಡಿಯೊದಲ್ಲಿ ಹೇಳಿದ್ದಾಳೆ.