ತುಮಕೂರು: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶವಾಗಿದೆ, ಪ್ರತಿಭಾನ್ವೇಷಣೆಗಿದು ಉತ್ತಮ ವೇದಿಕೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಬ್ಬೀರ್ ಅಹಮದ್ ತಿಳಿಸಿದರು.
ನಗರದ ಗುಂಚಿವೃತ್ತದಲ್ಲಿರುವ ಮೌಲಾನಾ ಆಜಾದ್ ಸರ್ಕಾರಿ ಪದವಿ ಪೂರ್ವ ಕಾಲೀಜಿನ ಆವರಣದಲ್ಲಿ ನಡೆದ ಗುಂಚಿಚೌಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, `ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಾಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯ ವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆ’ ಎಂದು ಹೇಳಿದರು.
ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಷನ್ ಮತ್ತು ಅಕಾಡೆಮಿಯ ಅಧ್ಯಕ್ಷ ನಿಸಾರ್ ಅಹಮದ್ (ಆರಿಫ್) ಮಾತನಾಡಿ, `ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ, ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಹರೀಶ್ ಎಸ್.ಎಂ., ಸಂಪನ್ಮೂಲ ವ್ಯಕ್ತಿ ಅಫ್ಷಾನ್ ಕೌಸರ್, ಮುಖಂಡರುಗಳಾದ ತಾಜುದ್ದೀನ್, ಶರೀಫ್, ಉರೂಜ್ ಪಾಷ, ಅಫ್ಜಲ್ ಖಾನ್, ಅಲಿ ಐಎಎಸ್ ಅಕಾಡೆಮಿ ಪ್ರಾಂಶುಪಾಲ ಹ್ಯಾರಿಸ್ ಇದ್ದರು.
ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಷನ್ ಮತ್ತು ಅಕಾಡೆಮಿಯ ವತಿಯಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
.ಮೌಲಾನಾ ಆಜಾದ್ ಸರ್ಕಾರಿ ಪದವಿ ಪೂರ್ವ ಕಾಲೀಜಿನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Tumkur News: ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಪೊಲೀಸರ ನಡೆ