Monday, 25th November 2024

Muda Scam: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್‌ ಪ್ರಶ್ನಿಸಿ ಅರ್ಜಿ; ನಾಳೆ ಹೈಕೋರ್ಟ್ ತೀರ್ಪು ಪ್ರಕಟ

Muda Scam

ಬೆಂಗಳೂರು: ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (Muda Scam) ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ನಾಳೆ (ಸೆ. 24) ಹೈಕೋರ್ಟ್​ ಅಂತಿಮ ತೀರ್ಪು ಪ್ರಕಟವಾಗಲಿದೆ. ಈಗಾಗಲೇ ಎರಡು ಕಡೆಯವರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಮುಕ್ತಾಯಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ತೀರ್ಪು ಕಾಯ್ದಿರಿಸಿದೆ.

ಸಿಎಂ ಸಿದ್ದರಾಮಯ್ಯ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಸೇರಿ ಹಲವು ವಕೀಲರು ವಾದ ಮಂಡಿಸಿದ್ದಾರೆ. ಇನ್ನು ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ಅಲ್ಲದೇ ದೂರುದಾರರಾದ ಟಿಜೆ ಅಬ್ರಾಹಂ ಮತ್ತು ಸ್ನೇಹಮಯಿ ಕೃಷ್ಣ ಪರ ವಕೀಲರು ಸಹ ತಮ್ಮ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರು ಆದೇಶವನ್ನು ಕಾಯ್ದಿರಿಸಿದ್ದರು.

ಏನಿದು ಮುಡಾ ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎನ್ನಲಾಗಿದೆ. ಬಡಾವಣೆಗ ಅಭಿವೃದ್ಧಿಗಾಗಿ ಭೂಮಿ ನೀಡಿದವರಿಗೆ ಶೇ.50 ನಿವೇಶನ ಅಥವಾ ಪರ್ಯಾಯ ನಿವೇಶನ ನೀಡಲು ಮುಡಾ ಯೋಜನೆ ರೂಪಿಸಿತ್ತು. ಆದರೆ ಪರಿಹಾರ ನೀಡುವ ವೇಳೆ ಅರ್ಹತೆಗಿಂತ ಹೆಚ್ಚು ಮೌಲ್ಯದ ನಿವೇಶನ ನೀಡಲಾಗಿದೆ. ಈ ರೀತಿ ಸುಮಾರು 5 ಸಾವಿರ ನಿವೇಶನಗಳು ಅಕ್ರಮವಾಗಿ ಮುಂಜೂರಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಹಂಚಿಕೆಯಾಗಿರುವ ನಿವೇಶನಗಳ ಮೌಲ್ಯವು, ಅವರಿಂದ ಸ್ವಾಧೀನ ಮಾಡಿಕೊಂಡ ಭೂಮಿಗಿಂತ ಹೆಚ್ಚಾಗಿದೆ ಎಂಬುವುದು ಪ್ರಮುಖ ಆರೋಪವಾಗಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಪರಿಹಾರ ಪಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಿಜೆಪಿ ಕಾಲದಲ್ಲಿಯೇ ತಮ್ಮ ಕುಟುಂಬಕ್ಕೆ ನಿವೇಶನ ಹಂಚಿಕೆಯಾಗಿದೆ, ಕಾನೂನು ಪ್ರಕಾರವೇ ತಮಗೆ ನಿವೇಶನಗಳನ್ನು ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಸಿಎಂ ವಿರುದ್ಧ ಕೇಳಿಬಂದಿರೋ ಆರೋಪವೇನು?
ಮೈಸೂರು ತಾಲೂಕಿನ ಕೆಸರೆ ಗ್ರಾಮದಲ್ಲಿ ಸಿಎಂ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ 3.16 ಎಕರೆ ಭೂಮಿಯನ್ನು ದೇವನೂರು ಬಡಾವಣೆ ಅಭಿವೃದ್ಧಿಗೆ ಮುಡಾ ಸ್ವಾಧೀನಪಡಿಸಿಕೊಂಡಿತ್ತು. ನಂತರ ಅದಕ್ಕೆ ಪರಿಹಾರವಾಗಿ 50:50 ಅನುಪಾತದಲ್ಲಿ ನಿವೇಶನ ಮಂಜೂರು ಮಾಡಿತ್ತು. ಸಿಎಂ ಪತ್ನಿಗೆ ಪರಿಹಾರವಾಗಿ ಪ್ರತಿಷ್ಠಿತ ವಿಜಯ ನಗರ ಬಡಾವಣೆಯಲ್ಲಿ 38,284 ಚದರ ಅಡಿ ಅಳತೆಯ ನಿವೇಶನವನ್ನು ಮುಡಾ ನೀಡಿತ್ತು. ಎರಡು ನಿವೇಶನಗಳು ಪರಿಹಾರ ಪಡೆಯುವ ಬದಲು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿವೆ. ಇನ್ನು ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.