Friday, 22nd November 2024

Vishwavani Editorial: ಅಮೆರಿಕದ ಇಬ್ಬಂದಿತನ

ಅಮೆರಿಕದ ಡೆಲ್‌ವೇರ್‌ನಲ್ಲಿ ನಡೆದ ಕ್ವಾಡ್ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಜೋ ಬೈಡೆನ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಭಾರತದಲ್ಲಿ ಸ್ಥಾಪನೆಯಾಗುವ ಸೆಮಿ ಕಂಡಕ್ಟರ್ ಘಟಕ ಉಭಯ ದೇಶಗಳ ರಕ್ಷಣಾ ಪಡೆಗಳಿಗೆ ಅಗತ್ಯವಿರುವ ಚಿಪ್‌ಗಳನ್ನು ತಯಾರಿಸಲಿದೆ.

ಇವೆಲ್ಲವೂ ಎರಡೂ ದೇಶಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಆದರೆ ಪ್ರಧಾನಿ ಭೇಟಿಗೂ ಮುನ್ನ ಅಮೆರಿಕ ತೋರಿಸಿದ ನಡೆ ಎರಡೂ ದೇಶಗಳ ನಡುವಣ ಸಂಬಂಧ ಅಷ್ಟೇನು ಸೌಹಾರ್ದವಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮೋದಿ ಭೇಟಿಗೆ ಕೆಲವೇ ಗಂಟೆಗಳ ಮೊದಲು ಸ್ವತಂತ್ರ ಸಿಖ್ ರಾಜ್ಯವನ್ನು ಪ್ರತಿಪಾದಿಸುವ ಖಲಿಸ್ತಾನಿ ಪ್ರತ್ಯೇಕತಾವಾದಿ ಗಳನ್ನು ಶ್ವೇತಭವನ ಮಾತುಕತೆಗೆ ಆಹ್ವಾನಿಸಿತ್ತು. ಈ ಸಭೆಯಲ್ಲಿ ಅಮೆರಿಕನ್ ಸಿಖ್ ಕಾಕಸ್ ಸಮಿತಿಯ ಪ್ರೀತ್‌ ಪಾಲ್ ಸಿಂಗ್ ಮತ್ತು ಸಿಖ್ ಒಕ್ಕೂಟ ಮತ್ತು ಸಿಖ್ ಅಮೆರಿಕನ್ ಕಾನೂನು ರಕ್ಷಣಾ ಮತ್ತು ಶಿಕ್ಷಣ ನಿಧಿಯ ಪ್ರತಿನಿಧಿ ಗಳು ಭಾಗವಹಿಸಿದ್ದರು.

ಭಾರತದ ಅವಿಭಾಜ್ಯ ಅಂಗವಾಗಿರುವ ಪಂಜಾಬಿನ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸುವ ಜರೂರತ್ತು ಅಮೆರಿಕಕ್ಕೆ ಏನಿತ್ತು ಎನ್ನುವುದು ಕೇಳಲೇಬೇಕಾದ ಪ್ರಶ್ನೆ. ಖಲಿಸ್ತಾನ್ ಪ್ರತ್ಯೇಕತಾವಾದಿ ಚಳವಳಿಗೆ ಬೆಂಬಲವಾಗಿ
ನಿಂತಿರುವ ಈ ಗುಂಪುಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಈ ಸಂಘಟನೆಗಳು ಮೂರ‍್ನಾಲ್ಕು ದಶಕಗಳ ಹಿಂದೆ ನಡೆಸಿದ ಭಯೋತ್ಪಾದಕ ಚಟುವಟಿಕೆಗಳು ಪಂಜಾಬಿಗರ ಮನಸ್ಸಿನಿಂದ ಇನ್ನೂ ಮಾಸಿಲ್ಲ.

ಇದು ಸಾಲದೆಂಬಂತೆ ಖಲಿಸ್ತಾನ್ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಸಲ್ಲಿಸಿದ ಅರ್ಜಿಯ ಮೇರೆಗೆ ಅಮೆರಿಕ ನ್ಯಾಯಾಲಯ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌, ರಾ ಸಂಸ್ಥೆಯ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ, ರಾ ಏಜೆಂಟ್ ವಿಕ್ರಮ್ ಯಾದವ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಹಲವು ಭಯೋ ತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿ ಬೇಕಾಗಿರುವ ಪನ್ನು ಘೋಷಿಸಿ ಅಪರಾಧಿ ಎಂದು ಭಾರತ ಸಾರಿದೆ. ಮಿತ್ರ ರಾಷ್ಟ್ರ ಭಯೋತ್ಪಾದಕ ಎಂದು ಘೋಷಿಸಿದ ವ್ಯಕ್ತಿಯನ್ನು ಆದರಿಸುವ ಔಚಿತ್ಯ ಜೋ ಬಿಡೆನ್ ಸರಕಾರಕ್ಕೆ ಏನಿದೆ ಎಂದು ಸಹಜವಾಗಿ ಮೂಡಿ ಬರುವ ಪ್ರಶ್ನೆ.

ಸಿಖ್ಖರ ವೋಟ್ ಬ್ಯಾಂಕನ್ನು ನೆಚ್ಚಿಕೊಂಡಿರುವ ಕೆಲವು ರಾಜಕೀಯ ನಾಯಕರು ಅಮೆರಿಕ ಮತ್ತು ಕೆನಡಾದಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿರುವುದು ನಮಗೆ ತಿಳಿದ ವಿಚಾರ. ಭಾರತ ಇಂಥಹ ಗೊಡ್ಡು ಬೆದರಿಕೆಗಳಿಗೆ ಮಣಿಯಬಾರದು.

ಇದನ್ನೂ ಓದಿ: Modi US visit: ಮತ್ತೆ ಮೋದಿ- ಝೆಲೆನ್‌ಸ್ಕಿ ಭೇಟಿ, ಉಕ್ರೇನ್-‌ ರಷ್ಯ ಬಿಕ್ಕಟ್ಟು ಪರಿಹಾರಕ್ಕೆ ಪ್ರಯತ್ನ