Saturday, 23rd November 2024

L P Kulkarni Column: ಮೊದಲ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ

ಎಲ್.ಪಿ.ಕುಲಕರ್ಣಿ

ಎಕ್ಸ್ ರೇ ಹಾಯಿಸಿ, ದೇಹದ ಒಳಭಾಗವನ್ನು ನೋಡಿ, ವೈದ್ಯಕೀಯ ಚಿಕಿತ್ಸೆ ಇಂದು ಸಾಮಾನ್ಯ. ಅಂತಹ ಎಕ್ಸ್‌ರೇ ಕಿರಣಗಳನ್ನು ಕಂಡು ಹಿಡಿದ ವಿಜ್ಞಾನಿಗೆ ಮೊದಲ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರಕಿದ್ದು 1901ರಲ್ಲಿ.

ಇನ್ನೇನು ಅಕ್ಟೋಬರ್ ಬಂದೇ ಬಿಟ್ಟಿತು. ಅಕ್ಟೋಬರ್ ತಿಂಗಳ ಮೊದಲ ವಾರದಿಂದಲೇ ಆ ವರ್ಷದ ನೊಬೆಲ್ ಪ್ರಶಸ್ತಿ ವಿಜೇತರ ಹೆಸರುಗಳನ್ನು ಘೋಷಿಸಲಾಗುತ್ತದೆ. 123 ವರ್ಷಗಳ ಇತಿಹಾಸವಿರುವ ಈ ಪ್ರತಿಷ್ಠಿತ ಪ್ರಶಸ್ತಿ ಗಳನ್ನು ಪಡೆಯುವುದೇ ಆ ವ್ಯಕ್ತಿಯ ಜೀವನದ ಸರ್ವಶ್ರೇಷ್ಠ, ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು.

ಭೌತಶಾಸ್ತ್ರ, ರಾಸಾಯನಶಾಸ್ತ್ರ, ವೈದ್ಯಕೀಯ ಹಾಗೂ ಔಷಧ ವಿಜ್ಞಾನ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ
ಸೇರಿದಂತೆ ಒಟ್ಟು ಆರು ಪ್ರಮುಖ ಕ್ಷೇತ್ರಗಳಲ್ಲಿ ಕೊಡಮಾಡುವ ನೊಬೆಲ್ ಪ್ರಶಸ್ತಿ ಜಗತ್ತಿನ ಸರ್ವಶ್ರೇಷ್ಠ ಪ್ರಶಸ್ತಿ ಗಳಲ್ಲೊಂದು. ನಮಗೆ ಅಪಘಾತವಾದಾಗ, ಕೈಯ್ಯೊ, ಕಾಲೋ ಉಳುಕಿರುತ್ತದೆ, ಇಲ್ಲವೇ ಅಲ್ಲಿನ ಮೂಳೆಗಳು ಮುರಿದಿರುತ್ತವೆ.

ಎಷ್ಟು ಪ್ರಮಾಣದಲ್ಲಿ ಮೂಳೆಗಳು ಮುರಿದಿವೆ ಎನ್ನುವುದನ್ನು ಪತ್ತೆಹಚ್ಚುವುದು, ಕಾಣುವುದು ಆಗಿನ ಕಾಲದಲ್ಲಿ ಒಂದು ಚಾಂಲೆಂಜ್ ಆಗಿತ್ತು. ಅಚಾನಕ್ಕಾಗಿ ಪತ್ತೆಯಾದ ಈ ಕ್ಷ-ಕಿರಣಗಳ ಹಿಂದೆ ಸರ್ ವಿಲ್ಹೆಲ್ಮ್ ಕಾರ್ನಾಡ್ ರಾಂಟ್ಜೆನ್ ಅವರ ಪರಿಶ್ರಮವಿದೆ. ಅವರ ಈ ಅದ್ಭುತ ಆವಿಷ್ಕಾರವನ್ನು ಗುರುತಿಸಿ, 1901ರಲ್ಲಿ ಭೌತಶಾಸ್ತ್ರ ವಿಭಾಗ ದಲ್ಲಿ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ಕ್ಷ-ಕಿರಣಗಳ ವಿಭಾಗದಲ್ಲಿ ಅವರು ಸಲ್ಲಿಸಿದ ಅಸಾಧಾರಣ ಸೇವೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು
ನೀಡಲಾಯಿತು. ವಿಶೇಷವೆಂದರೆ, ನೊಬೆಲ್ ಪ್ರಶಸ್ತಿ ಆರಂಭಗೊಂಡದ್ದು 1901ರಲ್ಲಿ, ಹೊಸ ಶತಮಾನದ ಸಂಭ್ರಮದ ಭಾಗವಾಗಿ! ವಿಲ್ಹೆಲ್ಮ್ ಕಾನ್ರಾಡ್ ರೊಂಟ್ಜೆನ್, ಜರ್ಮನ್ ದೇಶದ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಭೌತಶಾಸ್ತ್ರಜ್ಞ.

1901ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ. ರೊಂಟ್ಜೆನ್ ನವೆಂಬರ್ 8, 1895 ರಂದು ಕ್ಷ-ಕಿರಣಗಳೆಂಬ ವಿದ್ಯುತ್ಕಾಂತೀಯ ವಿಕಿರಣಗಳನ್ನು ಪತ್ತೆ ಹಚ್ಚಿ ಒಂದು ಅದ್ಭುತವಾದ ಆವಿಷ್ಕಾರವನ್ನು
ಮಾಡಿದರು. ಅವರ ಗಮನಾರ್ಹ ಸಾಧನೆ ವೈದ್ಯಕೀಯ ರೋಗನಿರ್ಣಯದ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು, ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಸೇರಿದಂತೆ ವ್ಯಾಪಕವಾದ ಮನ್ನಣೆ ಮತ್ತು ಗೌರವಗಳನ್ನು ಗಳಿಸಿತು.
ರೋಂಟ್‌ಜೆನ್ ಮಾರ್ಚ್ 27, 1845ರಂದು ಜರ್ಮನಿಯ ರೆಮ್ ಶೀಡ್-ಲೆನೆಪ್‌ನಲ್ಲಿ ಜನಿಸಿದರು. ಇವರು ಮೂರು ವರ್ಷದ ಬಾಲಕರಾಗಿದ್ದಾಗ ಅವರ ಕುಟುಂಬ ನೆದಲ್ಯಾಂಡ್ಸ್ ಗೆ ಸ್ಥಳಾಂತರಗೊಂಡಿತ; ಅಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಪ್ರೌಢಶಾಲೆಯಿಂದ ಅನ್ಯಾಯವಾಗಿ ಹೊರಹಾಕಲ್ಪಟ್ಟರೂ, ಅವರು ತಮ್ಮ ಅಧ್ಯಯನವನ್ನು ಮುಂದು ವರಿಸಿದರು. ೧೮೬೫ ರಲ್ಲಿ, ಅವರು ಜ್ಯೂರಿಚ್‌ನಲ್ಲಿರುವ ಫೆಡರಲ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ಗೆ ಹಾಜರಾಗಲು ಪ್ರವೇಶ ಪಡೆದು, ೧೮೬೯ ರಲ್ಲಿ ಪಿಎಚ್‌ಡಿ ಕೂಡ ಪಡೆದರು.

ರೋಂಟ್ಜೆನ್ 1874 ರಲ್ಲಿ ಸ್ಟ್ರಾಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ತಮ್ಮ ಶೈಕ್ಷಣಿಕ ವೃತ್ತಿಜೀವನ ವನ್ನು ಪ್ರಾರಂಭಿಸಿದರು. ನಂತರ ವೂರ್ಜ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಮ್ಯೂನಿಚ್ ವಿಶ್ವವಿದ್ಯಾಲಯಗಳಲ್ಲಿ ಭೌತ ಶಾಸ್ತ್ರದ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು. ನುರಿತ ಭೌತವಿಜ್ಞಾನಿ ಯಾಗಿ ಅವರ ಖ್ಯಾತಿಯು ಬೆಳೆಯುತ್ತಲೇ ಇತ್ತು ಮತ್ತು ಅಂತಿಮವಾಗಿ ಅವರನ್ನು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಲಾಯಿತು. ಆದರೆ, ಪ್ರಥಮ ವಿಶ್ವ ಯುದ್ಧದ ಕಾರಣ ಏಕಾಏಕಿಯಾಗಿ ಜರ್ಮನಿ ಯಲ್ಲೇ ಉಳಿಯಬೇಕಾಯಿತು.

ಕ್ಷ-ಕಿರಣಗಳ ಆವಿಷ್ಕಾರ
1895 ರಲ್ಲಿ ಕ್ಯಾಥೋಡ್ ಕಿರಣಗಳೊಂದಿಗೆ ನಡೆಸಿದ ಪ್ರಯೋಗವು ವಿಕಿರಣಶಾಸ್ತ್ರದ ಅಧ್ಯಯನಕ್ಕೆ ದಾರಿ ಮಾಡಿ ಕೊಟ್ಟಿತು. ರೊಂಟ್ಜೆನ್ ತೆಗೆದ ಮೊದಲ ಎಕ್ಸ್-ರೇ ಚಿತ್ರವು ಅವರ ಹೆಂಡತಿಯಾದ ಅನ್ನಾ ಬರ್ತಾ ಲುಡ್ವಿಗ್ ರ ಕೈಯಾಗಿದ್ದು, ಅವಳ ಕೈ ಮೂಳೆಗಳ ರಚನೆಯನ್ನು ತೋರಿಸಿತು.

ಅವರ ಅದ್ಭುತ ಆವಿಷ್ಕಾರವನ್ನು ಗುರುತಿಸಿ, ರಾಂಟ್‌ಜೆನ್ ಅವರಿಗೆ 1901 ರಲ್ಲಿ ಭೌತಶಾಸ್ತ್ರದಲ್ಲಿ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ರಾಂಟ್‌ಜೆನ್ ತನ್ನ ಅನ್ವೇಷಣೆಗೆ ಪೇಟೆಂಟ್ ಪಡೆಯಲು ನಿರಾಕರಿಸಿದರು. ಕಾರಣ ಅದು ಮನುಕುಲಕ್ಕೆ ಮುಕ್ತವಾಗಿ ಸಿಗಲಿ ಎಂದು ನಂಬಿದ್ದರು. ರೇಡಿಯೋ ಆಕ್ಟಿವಿಟಿ ಕ್ಷೇತ್ರದಲ್ಲಿ ಅಪಾರ
ಸಂಶೋಧನೆ ಮಾಡಿದ ಕ್ಯೂರಿ ದಂಪತಿ ಸಹ ಪೇಟೆಂಟ್ ಪಡೆಯದೇ, ತಮ್ಮ ಸಂಶೋಧನೆಯನ್ನು ಮನುಕುಲದ ಒಳಿತಿಗಾಗಿ ದಾನ ಮಾಡಿದರು. ಎಕ್ಸ್-ಕಿರಣಗಳ ಅನ್ವೇಷಣೆಗಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಇವರು, ನಿವೃತ್ತಿಯಾಗುವವರೆಗೂ ಪ್ರಾಧ್ಯಾಪಕರಾಗಿ‌ ಮುಂದುವರೆದರು.

ಅವರು ಪ್ರಥಮ ವಿಶ್ವ ಸಮರದ ಸಮಯದಲ್ಲಿ ಜರ್ಮನಿಯಲ್ಲೆ ಉಳಿದರು. ನಂತರದ ವರ್ಷಗಳಲ್ಲಿ ಆರ್ಥಿಕ
ತೊಂದರೆಗಳನ್ನು ಎದುರಿಸಿದರು. ಫೆಬ್ರವರಿ 10, 1923 ರಂದು ರೊಂಟ್ಜನ್ ಕ್ಯಾನ್ಸರ್ ಕಾಯಿಲೆಯ ಕಾರಣದಿಂದ ನಿಧನರಾದರು. ರೊಂಟ್‌ಜೆನ್ ಅವರು ಹಾಕಿಕೊಟ್ಟ ಪರಂಪರೆಯು ಹಲವಾರು ಗೌರವಗಳ ಮೂಲಕ ಉಳಿದು ಕೊಂಡಿದೆ. ಅವರಿಗೆ ಗೌರವಾರ್ಥ, ಒಂದು ಮೂಲವಸ್ತುವಿಗೆ ರೋಂಟ್ಜೆನಿಯಮ್ ಎಂದು ಹೆಸರಿಸಲಾಗಿದೆ.
ಅವರ ಆವಿಷ್ಕಾರವು ಆಧುನಿಕ ವೈದ್ಯಕೀಯಕ್ಕೆ ಅಡಿಪಾಯ ಹಾಕಿಕೊಟ್ಟಿದೆ.

ಇದನ್ನೂ ಓದಿ: Gururaj Kulkarni: ಅರ್ಧ ದಿನದ ಗಣಪ