ಮುಂಬಯಿ: ಮುಂದಿನ ತಿಂಗಳು ಒಂದರಿಂದ 5ರ ತನಕ ಲಕ್ನೋದಲ್ಲಿ ನಡೆಯಲಿರುವ ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ವಿರುದ್ಧದ ಇರಾನಿ ಟ್ರೋಫಿ(Irani Trophy) ಪಂದ್ಯದಲ್ಲಿ ಅಜಿಂಕ್ಯ ರಹಾನೆ(Ajinkya Rahane) ಮುಂಬಯಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಂಬಯಿ ಕ್ರಿಕೆಟ್ ಮಂಡಳಿ (ಎಂಸಿಎ) ತಿಳಿಸಿದೆ. ತಂಡದಲ್ಲಿ ಶ್ರೇಯಸ್ ಅಯ್ಯರ್(Shreyas Iyer) ಮತ್ತು ಶಾರ್ದೂಲ್ ಠಾಕೂರ್(Shardul Thakur) ಕೂಡ ಕಾಣಿಸಿಕೊಳ್ಳಲಿದ್ದಾರೆ. ರಹಾನೆ ನಾಯಕತ್ವದಲ್ಲೇ ಮುಂಬಯಿ ಕಳೆದ ಸೀಸನ್‌ನಲ್ಲಿ ರಣಜಿ ಚಾಂಪಿಯನ್ ಆಗಿ ಮೂಡಿಬಂದಿತ್ತು. ಇದೇ ಕಾರಣಕ್ಕೆ ಅವರಿಗೆ ನಾಯಕತ್ವ ನೀಡಲಾಗಿದೆ.
ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘ ಸಮಯದಿಂದ ವಿಶ್ರಾಂತಿಯಲ್ಲಿದ್ದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮತ್ತೆ ಕ್ರಿಕೆಟ್‌ಗೆ ಮರಳಲು ಸಿದ್ಧವಾಗಿದ್ದಾರೆ. ಸ್ವತಃ ಶಾರ್ದೂಲ್ ಠಾಕೂರ್ ಆಡಲು ಲಭ್ಯರಿರುವುದಾಗಿ ಎಂಸಿಎಗೆ ತಿಳಿಸಿದ್ದಾರೆ. ಇರಾನಿ ಟ್ರೋಫಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದರೆ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ವರ್ಷಾಂತ್ಯದಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯಬಹುದು. ರಹಾನೆಗೂ ಭಾರತ ತಂಡದಲ್ಲಿ ಅವಕಾಶ ಸಿಗಬಹುದು.
ಇದನ್ನೂ ಓದಿ On This Day In 2007: ಭಾರತದ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ ತುಂಬಿತು 17 ವರ್ಷ
ರಹಾನೆ ಭಾರತ ಪರ 85 ಟೆಸ್ಟ್ ಪಂದ್ಯಗಳನ್ನಾಡಿ 5077 ರನ್ ಬಾರಿಸಿದ್ದಾರೆ. 12 ಶತಕ ಬಾರಿಸಿದ್ದಾರೆ. 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 188 ರನ್ ಪೇರಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್ ಆಗಿದೆ. ಈ ಹಿಂದೆ ಆಸ್ಟ್ರೇಲಿಯ ನೆಲದಲ್ಲಿ ಭಾರತ 36 ರನ್ಗೆ ಕುಸಿದು ಮುಖಭಂಗ ಅನುಭವಿಸಿದ್ದ ಸಂದರ್ಭದಲ್ಲಿ ಹಂಗಾಮಿಯಾಗಿ ತಂಡದ ನಾಯಕತ್ವ ವಹಿಸಿದ ರಹಾನೆ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದು ಬಳಿಕ ಐತಿಹಾಸಿಕ ಸರಣಿ ಗೆಲುವು ತಂದಿತ್ತ ಖ್ಯಾತಿಯನ್ನು ಹೊಂದಿದ್ದಾರೆ. ರಹಾನೆ ಭಾರತ ಪರ ಕೊನೆಯ ಟೆಸ್ಟ್ ಪಂದ್ಯ ಆಡಿದ್ದು 2023ರ ವಿಂಡೀಸ್ ಪ್ರವಾಸದಲ್ಲಿ ಇದಾದ ಬಳಿಕ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ.
ಬಾಂಗ್ಲಾದೇಶದ ವಿರುದ್ಧ ಮೊದಲ ಹಾಗೂ ಎರಡನೇ ಟೆಸ್ಟ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಸರ್ಫರಾಜ್ ಖಾನ್, ಅವರನ್ನು ಬಿಸಿಸಿಐ ಭಾರತ ತಂಡದಿಂದ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಅವರಿಗೆ ಇರಾನಿ ಟ್ರೋಫಿ ಆಡಲು ಅವಕಾಶ ನೀಡಬಹುದು ಎನ್ನಲಾಗಿದೆ. ಮೊದಲ ಟೆಸ್ಟ್‌ಗೆ ಸರ್ಫರಾಜ್ ಖಾನ್ ತಂಡದಲ್ಲಿದ್ದರೂ ಕೂಡ ಅವರಿಗೆ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಿತ್ತು.