ಬೆಂಗಳೂರು: ದೇಶದಲ್ಲಿ ಆಧಾರ್ (Aadhar Card)ನಷ್ಟೇ ಇನ್ನೊಂದು ಪ್ರಮುಖ ಗುರುತಿನ ಚೀಟಿ ಎಂದರೆ ಅದು ಪ್ಯಾನ್ (PAN) ಕಾರ್ಡ್. ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number) ಅನ್ನು ದೇಶದಲ್ಲಿ ಇದುವರೆಗೆ ಕಡ್ಡಾಯಗೊಳಿಸದಿದ್ದರೂ ಆರ್ಥಿಕ ವ್ಯವಹಾರಗಳಿಗೆ ಅತ್ಯಗತ್ಯ ದಾಖಲೆ ಎನಿಸಿಕೊಂಡಿದೆ. ಹಲವು ಆರ್ಥಿಕ ವ್ಯವಹಾರಗಳಿಗೆ ಪ್ಯಾನ್ ನಮೂದಿಸಲೇ ಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ, ಬ್ಯಾಂಕ್ ಖಾತೆ (Bank account), ಡಿಮ್ಯಾಟ್ ಖಾತೆ (Demat account) ತೆರೆಯುವಾಗ, ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಉದ್ಯೋಗಕ್ಕೆ ಸೇರುವಾಗ ಹೀಗೆ ವಿವಿಧ ಕಡೆಗಳಲ್ಲಿ ಪ್ಯಾನ್ ಕಾರ್ಡ್ ಪ್ರತಿ ನೀಡುವುದು ಕಡ್ಡಾಯ. ಅಲ್ಲದೆ ಬ್ಯಾಂಕಿನಲ್ಲಿ 50,000 ರೂ.ಗಿಂತ ಅಧಿಕ ಹಣ ಜಮೆ ಮಾಡಬೇಕಾದರೂ ಪ್ಯಾನ್ ನಂಬರ್ ಉಲ್ಲೇಖಿಸಲೇ ಬೇಕಾಗುತ್ತದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ನೀಡುವ ಈ 10 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ಮುಖ್ಯವಾಗುತ್ತದೆ. ಅದಾಗ್ಯೂ ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ಭಾರಿ ದಂಡ ಪಾವತಿಸಬೇಕಾಗುತ್ತದೆ. ಹಾಗಾದರೆ ಈ ಕುರಿತಾದ ನಿಯಮ ಏನು ಹೇಳುತ್ತದೆ? ಇಲ್ಲಿದೆ ವಿವರ (Money Tips).
ಪ್ಯಾನ್ ಕಾರ್ಡ್ ನಿಮ್ಮ ಹೆಸರು, ಫೋಟೊ, ಜನ್ಮ ದಿನಾಂಕ ಮತ್ತು 10 ಅಂಕಿಗಳ ವಿಶಿಷ್ಟ ಪ್ಯಾನ್ ಸಂಖ್ಯೆಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವ್ಯಕ್ತಿಯೊಬ್ಬ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದು ಅಪರಾಧ. ಪ್ರತಿ ವ್ಯಕ್ತಿ ತಮ್ಮ ಹೆಸರಿನಲ್ಲಿ ಕೇವಲ ಒಂದು ಪ್ಯಾನ್ ಕಾರ್ಡ್ ಪಡೆಯಬಹುದು. ಇದನ್ನು ಬೇರೆ ಯಾರಿಗೂ ವರ್ಗಾಯಿಸುವಂತಿಲ್ಲ.
ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದರೆ ಏನಾಗುತ್ತದೆ?
ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ ಕಾನೂನು ಪ್ರಕಾರ ಆದಾಯ ತೆರಿಗೆ ಇಲಾಖೆಗೆ ದಂಡ ವಿಧಿಸುವ ಅಧಿಕಾರವಿದೆ. ಯಾಕೆಂದರೆ ಇದನ್ನು ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದು ಆದಾಯ ತೆರಿಗೆ ದಾಖಲೆಗಳಲ್ಲಿ ಗೊಂದಲ ಮೂಡಿಸಲು, ತೆರಿಗೆ ಪಾವತಿ ಮತ್ತು ಫೈಲಿಂಗ್‌ಗಳನ್ನು ನಿಖರವಾಗಿ ಪತ್ತೆಹಚ್ಚಲು ಅಡ್ಡಿ ಉಂಟು ಮಾಡಲು ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ದಂಡ ಎಷ್ಟು?
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದು ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಆದಾಯ ತೆರಿಗೆ ಇಲಾಖೆಯು ಐಟಿ ಕಾಯ್ದೆ1961ರ ಸೆಕ್ಷನ್ 272 ಬಿ ಅಡಿಯಲ್ಲಿ10,000 ರೂ.ಗಳವರಗೆ ದಂಡ ವಿಧಿಸುತ್ತದೆ. ಆದ್ದರಿಂದ ನೀವು ನಿಮ್ಮ ಹೆಸರಿನಲ್ಲಿ ಒಂದೇ ಪ್ಯಾನ್ ಕಾರ್ಡ್ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಏನು ಮಾಡಬೇಕು?
ಒಂದುವೇಳೆ ನಿಮ್ಮ ಹೆಸರಿನಲ್ಲಿ 2 ಪ್ಯಾನ್ ಕಾರ್ಡ್ ಕಂಡುಬಂದರೆ ಅದನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಬೇಕು. ಎರಡೂ ಕಾರ್ಡ್‌ಗಳು ವ್ಯತ್ಯಸ್ತ ಸಂಖ್ಯೆ ಹೊಂದಿದ್ದರೂ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದುವಂತಿಲ್ಲ. ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ ಅಥವಾ ಆನ್ ಲೈನ್ ಮೂಲಕ ಒಪ್ಪಿಸಲು ಅವಕಾಶವಿದೆ. ಆನ್‌ಲೈನ್ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
2 ಕಾರ್ಡ್ ಹೊಂದುವುದು ಹೇಗೆ?
ಕೆಲವು ಕಾರಣಗಳಿಂದ ನಿಮ್ಮ ಹೆಸರಿನಲ್ಲಿ ಎರಡೆರಡು ಪ್ಯಾನ್ ಕಾರ್ಡ್ ಬರುತ್ತವೆ. ನೀವು ಪ್ಯಾನ್‌ಗಾಗಿ ಅರ್ಜಿ ಸಲ್ಲಿಸಿ ಹಲವು ದಿನವಾದರೂ ಬರದಿದ್ದರೆ ನೀವು ಮತ್ತೆ ಅರ್ಜಿ ಸಲ್ಲಿಸುತ್ತೀರಿ ಎಂದಿಟ್ಟುಕೊಳ್ಳೋಣ. ಕೆಲವು ಸಮಯದ ಬಳಿಕ ಎರಡೆರಡು ಪಾನ್ ಕಾರ್ಡ್ ಬರುತ್ತವೆ. ಕೆಲವೊಮ್ಮೆ ಪ್ಯಾನ್ ಕಾರ್ಡ್‌ನಲ್ಲಿ ತಪ್ಪಿದ್ದರೆ ಅದನ್ನು ಸರಿಪಡಿಸುವ ಬದಲು ಹೊಸದಾಗಿ ಅರ್ಜಿ ಸಲ್ಲಿಸಿದರೂ ಹೊಸದು ನಿಮ್ಮ ಕೈ ಸೇರುತ್ತದೆ. ಮದುವೆ ಬಳಿಕ ಮಹಿಳೆಯರು ತಮ್ಮ ಬದಲಾದ ಹೆಸರಿನಲ್ಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾರೆ. ಆಗಲೂ 2 ಕಾರ್ಡ್ ಹೊಂದುತ್ತಾರೆ.
ಈ ಸುದ್ದಿಯನ್ನೂ ಓದಿ: Money Tips: ಆಧಾರ್ ಸಹಾಯದಿಂದ ಇ-ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡಬೇಕೆ? ಈ ವಿಧಾನ ಫಾಲೋ ಮಾಡಿ