ನ್ಯೂನ ಕಾನೂನು
ತಿಮ್ಮಣ್ಣ ಭಾಗ್ವತ್
(ಭಾಗ – ೧)
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಬಗ್ಗೆ ಇರುವ ಗೌರವ ಮತ್ತು ಆದರ ವಿಶೇಷವಾದದ್ದು. ವಿವಾಹದ ಸಮಯದಲ್ಲಿ ಗಂಡನು ಹೆಂಡತಿಗೆ ಅಗ್ನಿಸಾಕ್ಷಿಯಾಗಿ ‘ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ’ ಎಂಬ ವಚನ ನೀಡಬೇಕೆಂಬ ಪದ್ಧತಿಯಿದ್ದು, ಪುರುಷ-ಮಹಿಳೆಯರ ನಡುವಿನ ಸಮಾನತೆಯು ಸನಾತನ ಧರ್ಮದಲ್ಲಿ ಶಾಸ್ತ್ರ ವಿಧಿತ ಎಂಬುದನ್ನು ಇದು ಸೂಚಿಸುತ್ತದೆ. ಆದರೆ, ವಾಸ್ತವದಲ್ಲಿ ನಮ್ಮದು ಪುರುಷ ಪ್ರಧಾನ ಸಮಾಜ. ಆದ್ದರಿಂದ ಮಹಿಳೆಯರು ಕುಟುಂಬದ ಒಳಗೆ ಮತ್ತು ಹೊರಗೆ ಎರಡನೇ ದರ್ಜೆಯ ನಾಗರಿಕರಾಗಿದ್ದಾರೆ ಎಂಬ ಭಾವನೆ ಬಹಳ ಕಡೆ ಇದೆ ಮತ್ತು ಈ ಕಾರಣಕ್ಕೆ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂಬುದು ಬಹಳ ಸಲ ವಾಸ್ತವ ಕೂಡ.
ಮಹಿಳೆಯರ ಅದರಲ್ಲೂ ವಿವಾಹಿತೆಯರ ಮೇಲೆ ನಡೆಯುವ ದೌರ್ಜನ್ಯದ ಇತಿಹಾಸವು ಸತಿ ಪದ್ಧತಿ, ವೈಧವ್ಯದ
ಆಚರಣೆಯಂಥ ಮೌಢ್ಯಗಳಿಂದ ಮೊದಲ್ಗೊಂಡು ವರದಕ್ಷಿಣೆ, ದುಡಿಯುವ ಮಹಿಳೆಯ ಸಂಬಳದ ವಿಷಯ, ಸಂತಾನವಾಗಲು ವಿಳಂಬ, ಗಂಡು ಮಕ್ಕಳಾಗದಿರುವುದು ಮುಂತಾದ ಅನೇಕ ಕಾರಣಗಳಿಗೆ ವ್ಯಾಪಿಸುತ್ತದೆ. ‘ವಧು ದಹನ’ದಂಥ ಕ್ರೂರ ಪ್ರಕರಣಗಳು ಇನ್ನೂ ನಡೆಯುತ್ತಿವೆ ಎಂದರೆ ಅದು ನಾಗರಿಕ ಸಮಾಜವು ನಾಚಿಕೆಯಿಂದ ತಲೆ ತಗ್ಗಿಸುವ ವಿಚಾರ.
ಕೌಟುಂಬಿಕ ಹಿಂಸೆಯು ಒಂದು ಜಾಗತಿಕ ಸಮಸ್ಯೆ. ಜಗತ್ತಿನ ವಿವಿಧ ದೇಶಗಳಲ್ಲಿ 19ನೇ ಶತಮಾನದ ಆರಂಭದ ವರೆಗೂ, ‘ಹೆಂಡತಿಯನ್ನು ಹೊಡೆಯುವುದು ಗಂಡನ ಕಾಯ್ದೆಬದ್ಧ ಹಕ್ಕು’ ಎಂದೇ ಪರಿಗಣಿಸಲಾಗುತ್ತಿತ್ತು. 16ನೇ ಶತಮಾನದಲ್ಲಿ ಇಂಗ್ಲಿಷ್ ಕಾಯ್ದೆಯಲ್ಲಿ ಅದನ್ನು ಸಮಾಜದ ಶಾಂತಿ ಕದಡುವ ಸಮಸ್ಯೆ ಎಂದು ಪರಿಗಣಿಸಲಾಗು ತ್ತಿತ್ತು. 20ನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ಅಂಥ ಪ್ರಕರಣಗಳಲ್ಲಿ ಪೊಲೀಸರು ಬರುತ್ತಿದ್ದರಾದರೂ, ಆಪಾದಿತರನ್ನು ಸಾಮಾನ್ಯವಾಗಿ ಬಂಧಿಸಲಾಗುತ್ತಿರಲಿಲ್ಲ. 1980ರ ನಂತರವಷ್ಟೇ ಕೌಟುಂಬಿಕ ದೌರ್ಜನ್ಯಕ್ಕೆ ಕಾಯ್ದೆ ಮೂಲಕ ಶಿಕ್ಷೆ ನೀಡುವ ಮತ್ತು ಹಕ್ಕುಗಳ ರಕ್ಷಣೆಯ ವ್ಯವಸ್ಥೆ ಜಾರಿಗೆ ಬಂತು.
ಅಂತಾರಾಷ್ಟ್ರೀಯ ಉಪಕ್ರಮಗಳು
ವಿಶ್ವ ಆರೋಗ್ಯ ಸಂಸ್ಥೆಯ 25.03.2024ರ ವರದಿಯ ಪ್ರಕಾರ, ಮಹಿಳೆಯರ ಮೇಲಾಗುವ ಹಿಂಸೆಯು, ವಿಶೇಷವಾಗಿ ಗಂಡ ಅಥವಾ ಜತೆಗಾರನಿಂದ ನಡೆಯುವ ಲೈಂಗಿಕ ಹಿಂಸೆ, ದೈಹಿಕ ಹಿಂಸೆ ಅಥವಾ ಮಾನಸಿಕ ಹಿಂಸೆಯು ಒಂದು
ಪ್ರಮುಖ ಸಮಸ್ಯೆಯಾಗಿದೆ ಮತ್ತು ಅದು ಮಹಿಳೆಯರ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಪಶ್ಚಿಮ
ಪೆಸಿಫಿಕ್ ವಲಯದಲ್ಲಿ ಇದು 20 ಪ್ರತಿಶತ ಇದ್ದರೆ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾ ವಲಯಗಳಲ್ಲಿ 33 ಪ್ರತಿಶತ ಮಹಿಳೆಯರು ಒಂದಲ್ಲಾ ಒಂದು ರೀತಿಯಲ್ಲಿ ಅಂಥ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. ಈ ಪಿಡುಗನ್ನು ನಿವಾರಿಸುವತ್ತ ವಿಶ್ವಸಂಸ್ಥೆಯು ಅನೇಕ ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ತಾರತಮ್ಯ ನಿವಾರಣೆಗಾಗಿ, 1979ರಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದ ಘೋಷಣೆ ಮತ್ತು 1993ರಲ್ಲಿ ಇದೇ ವಿಷಯದಲ್ಲಿ ಮಾಡಲಾದ ಅಂತಾರಾಷ್ಟ್ರೀಯ ಘೋಷಣೆ ಈ ಪೈಕಿ ಪ್ರಮುಖ ವಾದಂಥವು. ವಿಶ್ವಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳು ಈ ಕುರಿತು ನಿರ್ದಿಷ್ಟ ಕಾರ್ಯಸೂಚಿಗಳನ್ನು ಅನುಷ್ಠಾನ ಮಾಡುತ್ತಿವೆ ಮತ್ತು ಅಂತಾರಾ ಷ್ಟ್ರೀಯ ಘೋಷಣೆಗಳನ್ವಯ ಸದಸ್ಯ ರಾಷ್ಟ್ರಗಳು ಕೈಗೊಂಡ ಕ್ರಮಗಳ ಕುರಿತು ನಿಗಾ ವಹಿಸುವುದು, ಕಾಲಕಾಲಕ್ಕೆ ಮಾರ್ಗದರ್ಶನ ನೀಡುವುದು ಮತ್ತು ಸಮನ್ವಯ ಸಾಧಿಸುವುದು ಮುಂತಾದ ಪರಿಣಾಮಕಾರಿ ಕ್ರಮಗಳ ಮೂಲಕ ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸ ಲಾಗುತ್ತಿದೆ.
ಭಾರತದಲ್ಲಿ ಕಾನೂನು ಸುರಕ್ಷೆ ಭಾರತದಲ್ಲಿ ಸಹ ಈ ಸಮಸ್ಯೆ ತೀವ್ರವಾಗಿದೆ. 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ನಮ್ಮ ದೇಶದಲ್ಲಿ ಶೇ.32ರಷ್ಟು ವಿವಾಹಿತೆಯರು (18ರಿಂದ 49 ವರ್ಷ ವಯಸ್ಸಿನ ವರು) ಗಂಡನ ಕಡೆಯಿಂದ ಒಂದು ಸಲವಾದರೂ ದೈಹಿಕ, ಲೈಂಗಿಕ ಅಥವಾ ಮಾನಸಿಕ ದೌರ್ಜನ್ಯವನ್ನು ಅನುಭವಿಸಿ ದ್ದಾರೆ (ಈ ಪೈಕಿ 3.1 ಪ್ರತಿಶತ ಗರ್ಭಿಣಿಯರು). ಇನ್ನೂ ಬೇಸರದ ಸಂಗತಿಯೆಂದರೆ, ಸುಸಂಸ್ಕೃತಿಗೆ ಹೆಸರಾದ ಕರ್ನಾಟಕದಲ್ಲಿ ಈ ಪ್ರಮಾಣ ಶೇ.44.4ರಷ್ಟಿದೆ. ವಿವಾಹಿತೆಯರ ಮೇಲೆ ಗಂಡನ ಮನೆಯಲ್ಲಿ ನಡೆಯುವ ದೌರ್ಜನ್ಯ ಗಳನ್ನು ತಡೆಯುವ ಉದ್ದೇಶದಿಂದ 1983ರಲ್ಲಿ ಭಾರತೀಯ ದಂಡಸಂಹಿತೆ 1860ರ (ಹೊಸ ಭಾರತೀಯ ನ್ಯಾಯ ಸಂಹಿತೆ 2023) 498ನೇ ಕಲಮಿಗೆ ‘ಎ’ ಉಪಕಲಮನ್ನು ಸೇರಿಸಲಾಯಿತು.
ಅದರ ಪ್ರಕಾರ, “ಯಾವುದೇ ಮಹಿಳೆಯ ಗಂಡ ಅಥವಾ ಅವನ ಸಂಬಂಧಿಕರು, ಅಂಥ ಮಹಿಳೆಯನ್ನು ಕ್ರೌರ್ಯಕ್ಕೆ ಗುರಿಪಡಿಸಿದರೆ ಅಂಥವರಿಗೆ 3 ವರ್ಷದವರೆಗಿನ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗು ವುದು”. ಈ ಅಪರಾಧವು ಕಾಗ್ನಿಜೇಬಲ್ (ಗುರುತಿಸಲಾದ) ಅಪರಾಧವಾಗಿರುತ್ತಿದ್ದು ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಬಂಧನ ವಾರಂಟ್ನ ಅಗತ್ಯವಿರುವುದಿಲ್ಲ. ಇದು ಜಾಮೀನುರಹಿತ ಕೂಡ ಆಗಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ 113-ಎ ಮತ್ತು 113-ಬಿ ಕಲಮುಗಳು 1986ರಲ್ಲಿ ಸೇರಿಸಲ್ಪಟ್ಟವು. ವರದಕ್ಷಿಣೆ
ಸಾವುಗಳ ವಿಷಯದಲ್ಲಿನ ಪೂರ್ವಕಲ್ಪನೆ (mಛಿoಞ mಠಿಜಿಟ್ಞ) ಕುರಿತು ಅವು ವಿವರಿಸುತ್ತವೆ. 113-ಎ ಪ್ರಕಾರ,
ಯಾವುದೇ ವಿವಾಹಿತೆಯು ವಿವಾಹವಾದ 7 ವರ್ಷಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡರೆ ಮತ್ತು ಆಕೆಯ ಗಂಡ
ಅಥವಾ ಅವನ ಸಂಬಂಧಿ ಅವಳನ್ನು ಯಾವುದೇ ರೀತಿಯ ಕ್ರೌರ್ಯಕ್ಕೆ ಗುರಿಪಡಿಸಿದ್ದರು ಎಂಬುದು ತೋರಿಸ ಲ್ಪಟ್ಟರೆ, ಅಂಥ ಗಂಡ ಅಥವಾ ಅವನ ಸಂಬಂಧಿಯು ಆ ಮಹಿಳೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂದು ಕೋರ್ಟು ಊಹಿಸುತ್ತದೆ.
113-ಬಿ ಪ್ರಕಾರ, ಯಾವುದೇ ಮಹಿಳೆಯ ಸಾವಿಗೆ ಮೊದಲು, ಅವಳನ್ನು ಯಾವುದೇ ವ್ಯಕ್ತಿಯು ವರದಕ್ಷಿಣೆಗಾಗಿ ಅಥವಾ ಅದಕ್ಕೆ ಸಂಬಂಧಿಸಿದ ಕ್ರೌರ್ಯ ಅಥವಾ ಕಿರುಕುಳಕ್ಕೆ ಗುರಿಪಡಿಸಿದ್ದ ಎಂಬುದು ತೋರಿಸಲ್ಪಟ್ಟರೆ, ಅಂಥ ವ್ಯಕ್ತಿಯು ಆ ಮಹಿಳೆಯನ್ನು ವರದಕ್ಷಿಣೆಗಾಗಿ ಕೊಂದಿದ್ದಾನೆ ಎಂದು ಕೋರ್ಟು ಊಹೆ ಮಾಡುತ್ತದೆ. ಈ ಕುರಿತಾದ ಇನ್ನಷ್ಟು ಕಲಮುಗಳು ಹೀಗಿವೆ- ಐಪಿಸಿ ಸೆಕ್ಷನ್ 304-ಬಿ: ಯಾವುದೇ ಮಹಿಳೆಯ ಸಾವು ಸುಟ್ಟಗಾಯಗಳಿಂದ ಅಥವಾ ಶಾರೀರಿಕ ಗಾಯಗಳಿಂದ ಆದರೆ ಮತ್ತು ಅಂಥ ಅಸಹಜ ಸಾವು ವಿವಾಹವಾದ 7 ವರ್ಷಗಳ ಒಳಗೇ ಸಂಭವಿಸಿದರೆ ಹಾಗೂ ಸಾವಿಗೆ ಮೊದಲು ಅವಳ ಗಂಡ ಅಥವಾ ಗಂಡನ ಸಂಬಂಧಿಗಳಿಂದ ಅವಳ ಮೇಲೆ ವರದಕ್ಷಿಣೆ ವಿಷಯ ದಲ್ಲಿ ಕ್ರೌರ್ಯ ಅಥವಾ ಹಿಂಸೆ ನಡೆದಿತ್ತೆಂದು ತೋರಿಸಲ್ಪಟ್ಟರೆ, ಅಂಥ ಸಾವು ‘ವರದಕ್ಷಿಣೆ ಸಾವು’ ಎಂದೂ, ಅಂಥ ಗಂಡ ಅಥವಾ ಆತನ ಸಂಬಂಧಿಗಳೇ ಆ ಸಾವಿಗೆ ಕಾರಣರು ಎಂದೂ ಪರಿಗಣಿಸಲ್ಪಡುತ್ತದೆ.
ಐಪಿಸಿ 354-ಎ: 2013ರಲ್ಲಿ ಭಾರತೀಯ ದಂಡ ಸಂಹಿತೆಯ 354ನೇ ಕಲಮಿಗೆ ‘ಎ’ ಉಪಕಲಮನ್ನು ಸೇರಿಸಿ,
ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವನ್ನು ಪರಿಭಾಷಿಸಲಾಯಿತು ಮತ್ತು ಅಂಥ ಅಪರಾಧಗಳಿಗೆ 3 ವರ್ಷ ದವರೆಗಿನ ಕಠಿಣ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ತಿದ್ದುಪಡಿಯನ್ನು ಮಾಡಲಾಯಿತು.
ಬಾಲಾಪರಾಧಿಗಳ ಸಂರಕ್ಷಣೆ ಮತ್ತು ರಕ್ಷಣೆ ಕಾಯ್ದೆ 2015: ಬಾಲಾಪರಾಧಿಗಳ ಮೇಲೆ ನಡೆಯಬಹುದಾದ
ಲೈಂಗಿಕ ದೌರ್ಜನ್ಯವನ್ನು ತಡೆಯಲು ಕಾಯ್ದೆಯಲ್ಲಿ ಸೂಕ್ತವಾಗಿ ಅನುವುಮಾಡಿಕೊಡಲಾಯಿತು. ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ 1990: ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸು ವುದು ಮತ್ತು ಕೌಟುಂಬಿಕ ಕ್ರೌರ್ಯದ ಪ್ರಕರಣಗಳನ್ನು ಅದರಡಿಯಲ್ಲಿ ತರುವುದು.
ಬಾಲ್ಯವಿವಾಹ ನಿಷೇಧ ಕಾಯ್ದೆ ೨೦೦೬: ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ
ಬಾಲಕಿಯರು ವಿವಾಹದ ನಂತರದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವುದನ್ನು ತಡೆಯುವುದು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆ 2005: ಕುಟುಂಬದೊಳಗೆ ಯಾವುದೇ ರೀತಿಯ ಹಿಂಸೆಗೆ ತುತ್ತಾದ ಮಹಿಳೆಯರ ಸಂವಿಧಾನದತ್ತ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂರಕ್ಷಿಸುವ ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಕುರಿತಾದ ಸಮಗ್ರ ಮತ್ತು ಪ್ರಗತಿಪರ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿತು. ಒಂದೇ ಮನೆಯಲ್ಲಿ ವಾಸಿಸುವ ಹೆಂಡತಿ, ಜತೆಗಾರ್ತಿ, ಸಹೋದರಿ, ತಾಯಿ, ಹೆಣ್ಣು ಮಗು ಮುಂತಾದ ಎಲ್ಲಾ ಮಹಿಳೆಯರೂ ಈ ಕಾಯ್ದೆಯಡಿಯಲ್ಲಿ ರಕ್ಷಣೆಗೆ ಅರ್ಹರಿರುತ್ತಾರೆ. ಈ ಕಾಯ್ದೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಪರಿಹಾರ ಗಳು ಇವೆಯಾದರೂ, ಕ್ಷಿಪ್ರವಾಗಿ ಸಿವಿಲ್ ಪರಿಹಾರವನ್ನು ದೊರಕಿಸುವುದು ಇಲ್ಲಿನ ಮುಖ್ಯ ಉದ್ದೇಶ.
ಅಲ್ಲದೆ, ಕೇವಲ ಗಂಡನನ್ನಲ್ಲದೆ ಗಂಡನ ಇತರ ಸಂಬಂಧಿಗಳನ್ನೂ ಪ್ರತಿವಾದಿಗಳಾಗಿ ದಾವೆಯಲ್ಲಿ ಹೆಸರಿಸ ಬಹುದು. ವಿವಾಹಿತೆಯು ತನ್ನ ಪತಿಗೃಹದಲ್ಲಿ ಹಿಂಸೆರಹಿತ ವಾತಾವರಣದಲ್ಲಿ ಬದುಕುವ ಹಕ್ಕನ್ನು ಈ ಕಾಯ್ದೆಯು ರಕ್ಷಿಸುತ್ತದೆ. ಆರ್ಥಿಕ ದೌರ್ಜನ್ಯದ ವಿರುದ್ಧ ರಕ್ಷಣೆ, ಮೌಖಿಕ ಮತ್ತು ಮಾನಸಿಕ ಹಿಂಸೆಯಿಂದ ರಕ್ಷಣೆ, ಮಗುವಿನ ಪಾಲನೆಯ ತಾತ್ಕಾಲಿಕ ವ್ಯವಸ್ಥೆ, ಮನೆಯಲ್ಲಿ ವಾಸಿಸುವ ಹಕ್ಕು, ಆರ್ಥಿಕ ಪರಿಹಾರ ಮುಂತಾದ ಸೌಲಭ್ಯಗಳನ್ನು ಈ ಕಾಯ್ದೆಯಡಿ ನೀಡಲಾಗಿದೆ. ಅಲ್ಲದೆ, ನ್ಯಾಯಾಲಯದಿಂದ ರಕ್ಷಣಾ ಆದೇಶ ನೀಡಲಾಗುತ್ತದೆ. ಸರಕಾರವು ರಕ್ಷಣಾ ಅಧಿಕಾರಿಗಳನ್ನು ಮತ್ತು ಸೇವೆ ಒದಗಿಸುವವರನ್ನು ನೇಮಿಸಬೇಕೆಂಬ ನಿಯ ಕೂಡ ಈ ಕಾಯ್ದೆಯಲ್ಲಿದೆ. ಕಾಯ್ದೆ ರೀತ್ಯಾ ಮದುವೆ ಯಾಗದಿದ್ದರೂ, ಸಂಬಂಧದಲ್ಲಿ ಪತಿ-ಪತ್ನಿಯರಂತೆ ಒಂದೇ ಮನೆಯಲ್ಲಿ ವಾಸಿಸುವ (Live-in relationship) ಮಹಿಳೆ ಕೂಡ ಈ ಕಾಯ್ದೆಯನ್ವಯ ರಕ್ಷಣೆಗೆ ಅರ್ಹಳಾಗಿರುತ್ತಾಳೆ. ಇಷ್ಟೆಲ್ಲ ಕಾಯ್ದೆಗಳ ರಕ್ಷಣೆಯು ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ನೈಜ ಆರೋಪಗಳ ಪ್ರಕರಣಗಳಲ್ಲಿ ಅವಶ್ಯಕ ಮತ್ತು ಅನಿವಾರ್ಯ ಕೂಡ)
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್ನ ನಿವೃತ್ತ ಎಜಿಎಂ)
ಇದನ್ನೂ ಓದಿ: Ragini Dwivedi: ಸ್ವಿಮ್ ಸೂಟ್ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ ರಾಗಿಣಿ ದ್ವಿವೇದಿ