Tuesday, 26th November 2024

Dr Murali Mohan Chuntharu Column: ಸ್ವಾಸ್ಥ್ಯ ಸಂರಕ್ಷಕರಿಗೆ ನಮನ

ತನ್ನಿಮಿತ್ತ

ಡಾ.ಮುರಲೀ ಮೋಹನ್‌ ಚೂಂತಾರು

ಪ್ರತಿ ವರ್ಷದ ಸೆಪ್ಟೆಂಬರ್ 25ರಂದು ‘ವಿಶ್ವ ಫಾರ್ಮಸಿಸ್ಟರ ದಿನ’ವನ್ನು ಆಚರಿಸಲಾಗುತ್ತದೆ. 2009ರಲ್ಲಿ ‘ಇಂಟರ್‌ ನ್ಯಾಷನಲ್ ಫಾರ್ಮಾಸ್ಯೂಟಿಕಲ್ ಫೆಡರೇಷನ್’ನ ಆದೇಶದಂತೆ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾದ ‘ಫಾರ್ಮಸಿ’ ಅಥವಾ ‘ಔಷಧಾಲಯ’ ವಿಭಾಗದ ತಜ್ಞರು ತಮ್ಮ ವೃತ್ತಿ ಜೀವನದ ಏಳು-ಬೀಳುಗಳನ್ನು ವಿಮರ್ಶಿಸಿ, ಕುಂದುಕೊರತೆಗಳನ್ನು ಪರಾಮರ್ಶಿಸಿ, ಮಗದೊಮ್ಮೆ ವೃತ್ತಿಗೆ ತಮ್ಮನ್ನು ಸಮರ್ಪಿಸಿಕೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸುದಿನವಿದು. ‘ಫಾರ್ಮಸಿಸ್ಟರು ನಿಮ್ಮ ಆರೋಗ್ಯದ ಒಡನಾಡಿ’ ಎಂಬುದು 2024ರ ವರ್ಷದ ಈ ದಿನಾಚರಣೆಯ ತಿರುಳು.

ಜನರಲ್ಲಿ ಮತ್ತು ವೃತ್ತಿ ಬಾಂಧವರಲ್ಲಿ ಔಷಧಿಗಳ ಬಗ್ಗೆ ಹೆಚ್ಚಿನ ಅರಿವು-ಜಾಗೃತಿ-ಕಾಳಜಿ ಮೂಡಿಸುವ ಉದ್ದೇಶ ಈ ದಿನಾಚರಣೆಯದ್ದು. ಆರೋಗ್ಯಕ್ಷೇತ್ರ ಮತ್ತು ಫಾರ್ಮಸಿ ಒಂದೇ ನಾಣ್ಯದ ಎರಡು ಮುಖ ಫಾರ್ಮಸಿಸ್ಟರ ಅಸ್ತಿತ್ವ ಇದ್ದೇ ಇರುತ್ತದೆ. ಗುಣಮಟ್ಟದ/ಪರಿಣಾಮಕಾರಿ ಔಷಧಿಯ ತಯಾರಿಕೆ, ಸಂಸ್ಕರಣೆ, ಶೇಖರಣೆ ಮತ್ತು ಸಂಶೋಧನೆ
ಎಲ್ಲವೂ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಅನಿವಾರ್ಯವೆನಿಸಿವೆ.

ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿರುವ ಕಾಲಘಟ್ಟವಿದು, ಔಷಧಿ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ದಿನಕ್ಕೊಂದ ರಂತೆ ಹೊಸ ಹೊಸ ಅಣುಜೀವಿಗಳು/ಬ್ಯಾಕ್ಟೀರಿಯಾಗಳು, ವೈರಸ್‌ಗಳು ಹುಟ್ಟಿಕೊಳ್ಳುತ್ತಿವೆ. ಅಂತೆಯೇ ಹೊಸ ಔಷಧಿಗಳೂ ಸೃಷ್ಟಿಯಾಗುತ್ತಿವೆ. ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬದುಕಬಲ್ಲೆ, ಆದರೆ ಔಷಧವಿಲ್ಲದೆ ಬದುಕಲಾರೆ’
ಎಂಬ ಅನಿವಾರ್ಯತೆಗೆ ಮನುಷ್ಯ ತಲುಪಿದ್ದಾನೆ. ಹಲವಾರು ರೋಗಗಳನ್ನು ಔಷಧಿಗಳ ಬಳಕೆಯಿಲ್ಲದೆ ಆಹಾರ ನಿಯಂತ್ರಣ, ನಿಯತ ವ್ಯಾಯಾಮ, ಶುದ್ಧ ಗಾಳಿ-ನೀರು-ಆಹಾರದ ಸೇವನೆಗಳಿಂದ ತಡೆಗಟ್ಟಬಹುದು ಎಂಬುದು ತಿಳಿದಿದ್ದರೂ, ನಾವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಔಷಧಿಗಳಿಗೆ ದಾಸರಾಗುತ್ತಿದ್ದೇವೆ ಎಂಬುದೇ ವಿಪರ್ಯಾಸ.

ಔಷಧಿಗಳ ಸದ್ಬಳಕೆಗಿಂತ ದುರ್ಬಳಕೆಯಾಗುತ್ತಿರುವುದೇ ದೊಡ್ಡ ದುರಂತ. ಔಷಧಿಯೊಂದು ಮಾರುಕಟ್ಟೆಗೆ ಬರುವ ಮೊದಲು, ಸಾಕಷ್ಟು ಸಂಶೋಧನೆ ನಡೆದು, ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿ, ಪ್ರಯೋಗಕ್ಕೆ ಒಡ್ಡಿ ಕೊಳ್ಳುವ ಪ್ರಾಣಿ ಮತ್ತು ಮನುಷ್ಯರ ಮೇಲೆ ಅವನ್ನು ಪ್ರಯೋಗಿಸಿ, ‘ಸುರಕ್ಷಿತವಾಗಿದೆ’ ಎಂದು ಸಾಬೀತಾದಲ್ಲಿ ಮಾತ್ರವೇ ವ್ಯಾಪಕ ಮಾನವ ಬಳಕೆಗೆ ಅನುಮತಿಸಲಾಗುತ್ತದೆ. ಹೀಗಾಗಿ, ಔಷಧಿಯೊಂದು ಕಾರ್ಖಾನೆಯಲ್ಲಿ ತಯಾರಾಗಿ, ಮೆಡಿಕಲ್ ಸ್ಟೋರ್‌ಗಳ ಮುಖಾಂತರ ಗ್ರಾಹಕರ ಕೈಸೇರುವವರೆಗೆ, ವಿಜ್ಞಾನಿಗಳು, ವೈದ್ಯರು, ಸಂಶೋಧಕರು ಮತ್ತು ಫಾರ್ಮಸಿಸ್ಟ್‌ಗಳು ವಹಿಸುವ ಪಾತ್ರಗಳು ಗಣನೀಯವಾಗಿರುತ್ತವೆ, ಪವಿತ್ರವಾಗಿರುತ್ತವೆ.

ಆದ್ದರಿಂದ, ರೋಗಿಗಳ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಈ ಎಲ್ಲರ ಹೊಣೆಗಾರಿಕೆ ಗುರುತರವಾಗಿರುತ್ತದೆ ಎನ್ನಲಡ್ಡಿ ಯಿಲ್ಲ. ಈ ಎಲ್ಲರೂ ತಂತಮ್ಮ ಹೊಣೆಗಾರಿಕೆಯನ್ನು ಅರಿತು ಸಮರ್ಥವಾಗಿ ನಿಭಾಯಿಸಿದಲ್ಲಿ ಮಾತ್ರವೇ ಔಷಧಿಗಳ ದುರ್ಬಳಕೆಯನ್ನು ತಡೆಗಟ್ಟಬಹುದು. ಇಲ್ಲವಾದಲ್ಲಿ ಮುಂದೊಂದು ದಿನ ಅಣುಜೀವಿಗಳು, ಬ್ಯಾಕ್ಟೀರಿಯಾಗಳು, ವೈರಸ್‌ಗಳು ಮನುಕುಲವನ್ನು ನುಂಗಿ ನೀರುಕುಡಿಯಲೂಬಹುದು.

‘ಅತಿಯಾದರೆ ಅಮೃತವೂ ವಿಷವಾಗಬಲ್ಲದು’ ಎಂದಿದ್ದಾರೆ ನಮ್ಮ ಹಿರಿಯರು. ಇದು ಔಷಧಿಗಳಿಗೂ ಅನ್ವಯಿಸುವ
ಮಾತು. ಔಷಧಿಗಳ ವಿಷಯದಲ್ಲೂ ನಾವು ಜಾಗೃತರಾಗಬೇಕಾದ ಅನಿವಾರ್ಯ ಸನ್ನಿವೇಶ ಬಂದೊದಗಿದೆ. ಏಕೆಂದರೆ, ಹಲವಾರು ಔಷಧಿಗಳು ನಿರ್ದಿಷ್ಟ ರೋಗವನ್ನು ಗುಣಪಡಿಸುವುದರ ಜತೆಗೆ, ಇನ್ನಿತರ ರೋಗಗಳಿಗೆ ರಹದಾರಿ ಮಾಡಿ ಕೊಡುತ್ತವೆ.

ಆದ್ದರಿಂದ, ಅತ್ಯಗತ್ಯವಿದ್ದರೆ ಮಾತ್ರವೇ ಔಷಧಿಗಳಿಗೆ ಮೊರೆ ಹೋಗಬೇಕು. ಔಷಧಿಗಳಿಗೆ ದಾಸರಾದಲ್ಲಿ, ಜೀವನ ಪರ್ಯಂತ ಔಷಧಿಯಿಲ್ಲದೆ ಬದುಕಲಾರದಂಥ ಸನ್ನಿವೇಶಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಆದ್ದರಿಂದ, ವೈದ್ಯರಿಗೆ ಮತ್ತು ಫಾರ್ಮಸಿಸ್ಟರಿಗೆ ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆಯಿದೆ. ಇವರು ತಮ್ಮ ವೃತ್ತಿಧರ್ಮವನ್ನು ಬಲಿಗೊಡದೆ,
ವೃತ್ತಿಯ ಘನತೆ-ಗಾಂಭೀರ್ಯಗಳನ್ನು ಎತ್ತಿಹಿಡಿದು, ಮೌಲ್ಯಾಧಾರಿತ ಧ್ಯೇಯದಿಂದ ಕಾರ್ಯನಿರ್ವಹಿಸಿದಲ್ಲಿ ಜನರ ಸ್ವಾಸ್ಥ್ಯ ವೃದ್ಧಿಸುವುದರಲ್ಲಿ ಸಂಶಯವಿಲ್ಲ.

ಹಾಗಾದಲ್ಲಿ ಮಾತ್ರವೇ ಈ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬಂದೀತು. ಅದರಲ್ಲಿಯೇ ಮನುಕುಲದ ಹಿತ ಮತ್ತು ಉನ್ನತಿ ಅಡಗಿದೆ. ಈ ಶುಭಸಂದರ್ಭದಲ್ಲಿ ಎಲ್ಲಾ ವೃತ್ತಿ ಬಾಂಧವರಿಗೆ ಮತ್ತು ಫಾರ್ಮಸಿಸ್ಟ್‌ಗಳಿಗೆ ಶುಭವಾಗಲಿ.

(ಲೇಖಕರು ವೈದ್ಯರು)

ಇದನ್ನೂ ಓದಿ: ರಾಜ್ಯದಲ್ಲೂ ಮರುಕಳಿಸುವುದೇ ಮೋದಿ-ಶಾ ಮೋಡಿ ?