Wednesday, 25th September 2024

Roopa Gururaj Column: ತಲ್ಲಣಿಸದಿರು ಕಂಡ್ಯಾ, ತಾಳು ಮನವೇ…

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಮಹಾ ಸಂತರೊಬ್ಬರಿದ್ದರು. ಸದಾ ಸತ್ಯವನ್ನೇ ನುಡಿಯುತ್ತಾ, ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ, ಪ್ರಚೋ ದಿಸಿ ಪ್ರವಚನ ನೀಡುತ್ತಿದ್ದರು. ಅವರಿಗೆ ಅಪಾರ ಸಂಖ್ಯೆಯಲ್ಲಿ ಶಿಷ್ಯರಿದ್ದರು. ಇವರನ್ನು ಕಂಡರೆ ಸಹಿಸದ ಕೆಲವು ಜನರೂ ಒಂದಷ್ಟಿದ್ದರು. ಏನಾದರೂ ಮಾಡಿ ಅವರಿಗೆ ತೊಂದರೆ ಮಾಡುವುದು ಇವರ ಕೆಲಸ. ಆದರೂ ಸಂತರ ಬಳಿಗೆ ಬರುವ ಭಕ್ತರ ಸಮೂಹ ಹೆಚ್ಚುತ್ತಲೇ ಹೋಯಿತು.

ಕಡೆಗೆ ಅವರ ವಿರೋಧಿಗಳು ಹೇಗಾದರೂ ಮಾಡಿ, ಈ ಸಂತರನ್ನು ಮುಗಿಸಿಯೇ ಬಿಡಬೇಕೆಂದು ತೀರ್ಮಾನಿಸಿದರು. ಅದು ಹೇಗೋ ಅವರ ಭಕ್ತನೊಬ್ಬನಿಗೆ ತಿಳಿದುಬಿಟ್ಟಿತು. ಆತ ಬಂದು, ‘ಗುರುಗಳೇ, ತಮ್ಮ ಜೀವ ತುಂಬಾ ಅಪಾಯದ
ಸ್ಥಿತಿಯಲ್ಲಿದೆ, ತಾವು ಯಾರ ಕಣ್ಣಿಗೂ ಬೀಳದಂತೆ ಸ್ವಲ್ಪ ದಿನಗಳವರೆಗೆ ಮರೆಯಾಗಿರುವುದು ವಾಸಿ. ದೇವರ ಕೃಪೆ ಯಿಂದ ತಮಗೆ ಒಳ್ಳೆಯ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೆ ಸ್ವಲ್ಪ ಕಾಲ ಹುಷಾರಾಗಿರಿ’ ಎಂದು ಕೇಳಿ ಕೊಂಡರು.

ಸಂತರಿಗೂ ಇದು ಸರಿಯೆನಿಸಿತು, ತಮ್ಮ ಜೊತೆಗೆ ಹೊರಟ ಎಲ್ಲ ಶಿಷ್ಯರನ್ನು ಅಲ್ಲಿಯೇ ಉಳಿಸಿ ಒಬ್ಬರೇ ಹೊರಟರು. ಆದರೆ ಒಬ್ಬ ಶಿಷ್ಯ ಮಾತ್ರ ಹಠ ಮಾಡಿ ಅವರ ಹಿಂದೆ ಹೊರಟೇ ಬಿಟ್ಟ. ಇಬ್ಬರೂ ತಲೆಮರೆಸಿಕೊಂಡು ರಾತ್ರೋರಾತ್ರಿ ಆಶ್ರಮವನ್ನು ಬಿಟ್ಟು, ಕಾಡಿನದಾರಿಯಲ್ಲಿ ನಡೆದರು. ಈ ವಿಷಯ, ಹೇಗೊ, ಕೊಲೆಗಡುಕರ ಕಿವಿಗೂ ಬಿತ್ತು. ತಕ್ಷಣವೇ ಅವರು, ಖಡ್ಗವನ್ನು ಹಿಡಿದುಕೊಂಡು ಇವರನ್ನು ಹುಡುಕುತ್ತಾ ಹಿಂಬಾಲಿಸಿದರು. ಕಾಲ್ನಡಿಗೆಯಲ್ಲಿ ಹೊರಟ ಗುರು ಶಿಷ್ಯರು, ಪಾಪ, ಎಷ್ಟು ವೇಗವಾಗಿ ತಾನೇ ಹೋಗಲು ಸಾಧ್ಯ? ಇವರ ಹಿಂದಿನಿಂದಲೇ ಕುದುರೆಗಳ ಕಾಲಿನ ಸದ್ದು ಕೇಳಿಸತೊಡಗಿತು. ಈಗ ಶಿಷ್ಯನಿಗೆ ತುಂಬಾ ಭಯವಾಯಿತು.

ಆತ ನಡುಗುತ್ತಾ, ‘ಗುರುಗಳೇ, ಇವರು ನಮ್ಮನ್ನು ಇಲ್ಲಿಯೇ ಮುಗಿಸಿಬಿಡುತ್ತಾರೆ, ನಮ್ಮ ಹೆಣ, ಈ ಕಾಡಿನ ಮೃಗಗಳಿಗೆ ಆಹಾರವಾಗುತ್ತದೆ. ಇವರಿಂದ ಪಾರಾಗುವುದು ಹೇಗೆ ಗುರುಗಳೇ?’ ಎಂದು ಭಯದಿಂದಲೇ ಪ್ರಶ್ನಿಸಿದ. ಗುರುಗಳು ಶಾಂತವಾಗಿಯೇ ಇದ್ದರು, ಒಂದು ಮಾತನ್ನೂ ಆಡದೆ, ಸ್ವಲ್ಪ ದೂರದಲ್ಲಿ ಒಂದು ಗುಹೆ ಕಾಣುತ್ತಿತ್ತು. ಶಿಷ್ಯನ ಕೈಹಿಡಿದುಕೊಂಡು ಆ ಗುಹೆಯೊಳಗೆ ನಡೆದು, ಇಬ್ಬರು ಅಲ್ಲಿ ಅಡಗಿ ಕುಳಿತರು. ಸ್ವಲ್ಪ ಸಮಯದ ನಂತರ, ಕೊಲೆಗಡುಕರ ಗುಂಪು ಆ ಗುಹೆಯ ಬಾಗಿಲಲ್ಲಿ ಬಂದು ನಿಂತಿತು. ಅವರಬ್ಬ ಕೂಗಿ ಹೇಳಿದ, ಅವರು ಇಲ್ಲೇ ಅಡಗಿ ದ್ದಾರೆ, ಗುಹೆಯ ಒಳಗೆ ನುಗ್ಗಿ ಹುಡುಕಿ ಎಂದ.

‘ಈಗೇನು ಮಾಡೋಣ ಗುರುಗಳೇ? ಈಗ ನಮ್ಮಿಬ್ಬರ ಕಥೆ ಮುಗಿಯಿತು.’ಎಂದು ನಡುಗುತ್ತಾ ಶಿಷ್ಯ ಹೇಳಿದ. ಗುರು ಗಳು ಶಾಂತರಾಗಿ, ‘ಹುಷ್ ಸುಮ್ಮನಿರು, ಇಲ್ಲಿ ನಾವು ಇಬ್ಬರೇ ಅಲ್ಲ, ಮೂವರಿದ್ದೇವೆ’ ಎಂದರು. ‘ಏನು ಮೂವರೇ? ಅದು ಹೇಗೆ ಗುರುಗಳೇ?’ ಎಂದ ಶಿಷ್ಯ. ‘ಭಗವಂತನನ್ನು ಮರೆತೆಯಾ? ಅವನಿರುವಾಗ ನಿನಗೇಕೆ ಭಯ?’ ಎಂದರು ಗುರುಗಳು. ಆಗ ಒಂದು ಪವಾಡವೇ ನಡೆಯಿತು. ಇವರು ಗುಹೆಯೊಳಗೆ ಸೇರಿದ ಕ್ಷಣವೇ, ಒಂದು ದೊಡ್ಡ ಜೇಡ ಗುಹೆಯ ಬಾಗಿಲಿಗೆ ತನ್ನ ಬಲೆಯನ್ನು ಹೆಣೆದು ಬಿಟ್ಟಿತ್ತು, ಅದನ್ನು ಕಂಡ ಕೊಲೆಗಡುಕರ ಗುಂಪಿನ ನಾಯಕ ಹೇಳಿದ, ‘ಜೇಡರ ಬಲೆ ಹಾಗೆಯೇ ಇದೆ, ಅವರು ಗುಹೆಯೊಳಗೆ ಹೋಗಿರಲು ಸಾಧ್ಯವಿಲ್ಲ, ಅವರು ಬೇರೆಡೆಗೆ ಹೋಗಿರಬೇಕು, ಅವರು ಬಹಳ ದೂರ ಹೋಗುವ ಮುಂಚೆ ಅವರನ್ನು ಹುಡುಕೋಣ ಬನ್ನಿ’ ಎಂದು ಅಲ್ಲಿಂದ ಬೇರಡೆಗೆ ನಡೆದರು. ಗುರು ಶಿಷ್ಯರ ಪ್ರಾಣ ಉಳಿಯಿತು.

ಅದಕ್ಕೇ, ದಾಸರು ಹೇಳಿರುವುದು. ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕ್ಕೆ ಸಂಶಯ ಬೇಡ. ಹುಟ್ಟಿಸಿದ ಸ್ವಾಮಿ, ತಾ ಹೊಣೆಗಾರನಾಗಿರಲು, ಗಟ್ಟ್ಯಾಗಿ, ಸಲಹುವನು ಇದಕ್ಕೆ ಸಂಶಯ ಬೇಡ’ ಎಂದು. ಎಂತಹ ವಿಷಮ ಪರಿಸ್ಥಿತಿಯಲ್ಲೂ ಭಗವಂತನ ಮೇಲೆ ನಮಗಿರುವ ಅಪರಿಮಿತವಾದ ನಂಬಿಕೆ ನಮ್ಮನ್ನು ಸದಾ
ಮುಳುಗದಂತೆ ಕಾಯುತ್ತದೆ.

ಇದನ್ನೂ ಓದಿ: Roopa Gururaj Column: ಶನಿದೇವ ಹಾಗೂ ಲಕ್ಷ್ಮೀ ದೇವಿ ಯಾರು ಹೆಚ್ಚು ?