Wednesday, 25th September 2024

Police Firing: ಬದ್ಲಾಪುರ್ ಅತ್ಯಾಚಾರ ಆರೋಪಿಯ ಹತ್ಯೆ; ಯಾರಿವರು ಎನ್‌‌ಕೌಂಟರ್ ಸ್ಪೆಷಲಿಸ್ಟ್ ಸಂಜಯ್ ಶಿಂಧೆ?

Police Firing

ಬದ್ಲಾಪುರ್(ಮಹಾರಾಷ್ಟ್ರ): ಶಾಲಾ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ( Badlapur sexual assault case) ಬಂಧಿಸಲ್ಪಟ್ಟಿದ್ದ ಬದ್ಲಾಪುರ್ ಶಾಲೆಯ ಅಟೆಂಡರ್ ಅಕ್ಷಯ್ ಶಿಂಧೆ (Akshay Shinde) ಮೇಲೆ ಪೊಲೀಸರು ಸೋಮವಾರ ಗುಂಡಿನ ದಾಳಿ (Police Firing) ನಡೆಸಿದ್ದು, ಇದರಿಂದ ಗಂಭೀರ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ. ಈ ಪ್ರಕರಣ ಭಾರೀ ಸದ್ದು ಮಾಡುತ್ತಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ (Maharashtra Chief Minister) ಏಕನಾಥ್ ಶಿಂಧೆ ( Eknath Shinde ) ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Deputy Minister Devendra Fadnavis) ಪ್ರಕಾರ, ಆರೋಪಿ ಅಕ್ಷಯ್ ಶಿಂಧೆ ಪೊಲೀಸ್ ವಾಹನದೊಳಗೆ ಇದ್ದಾಗ ಪೋಲೀಸರ ಬಂದೂಕು ಕಸಿದುಕೊಂಡು ಸಹಾಯಕ ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿದ್ದ. ಇದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಅಕ್ಷಯ್ ಶಿಂಧೆ ಮೇಲೆ ಗುಂಡು ಹರಿಸಿದ್ದಾರೆ. ಆಗ ಆತ ಮೃತಪಟ್ಟಿದ್ದಾನೆ.

ಎನ್‌‌ಕೌಂಟರ್‌‌ಗೆ ಹೆಸರುವಾಸಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಶಿಂಧೆ ಅವರು ಅಕ್ಷಯ್‌ ಶಿಂಧೆ ಮೇಲೆ ಗುಂಡು ಹರಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಸಂಜಯ್ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ನೀಲೇಶ್ ಮೋರೆ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ಸ್‌ಪೆಕ್ಟರ್ ಸಂಜಯ್ ಶಿಂಧೆ ಯಾರು?

ಬದ್ಲಾಪುರ್ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಗೆ ಸೇರುವ ಮೊದಲು ಸಂಜಯ್ ಅವರು ಥಾಣೆ ಪೊಲೀಸ್ ಕ್ರೈಂ ಬ್ರಾಂಚ್‌ನ ಸುಲಿಗೆ ವಿರೋಧಿ ಸೆಲ್‌ನಲ್ಲಿ ಕೆಲಸ ಮಾಡಿದ್ದರು. ಮುಂಬಯಿ ಪೊಲೀಸ್ ವಿಭಾಗದಲ್ಲೂ ಅವರು ಕಾರ್ಯ ನಿರ್ವಹಿಸಿದ್ದರು.

ಭೂಗತ ದೊರೆ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಬಂಧಿಸಿದ ತಂಡದಲ್ಲಿ ಸಂಜಯ್ ಶಿಂಧೆ ಕೂಡ ಇದ್ದರು. ಕಸ್ಕರ್‌ಗೆ ಸಂಬಂಧಿಸಿರುವ ಅನೇಕ ಆಸ್ತಿಗಳ ಮೇಲೆ ದಾಳಿ ನಡೆಸಿದ ಅನಂತರ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಫೆಬ್ರವರಿ 2022ರಲ್ಲಿ ಆತನನ್ನು ಬಂಧಿಸಲಾಗಿತ್ತು.

ಥಾಣೆ ಪೊಲೀಸ್ ಕ್ರೈಂ ಬ್ರಾಂಚ್‌ನೊಂದಿಗೆ ಇನ್ಸ್‌ಪೆಕ್ಟರ್ ಸಂಜಯ್ ಶಿಂಧೆ ಅವರ ಸಾಕಷ್ಟು ಸಮಯದಿಂದ ಕೆಲಸ ಮಾಡುತ್ತಿದ್ದರು. ಸುಲಿಗೆ ವಿರೋಧಿ ಸೆಲ್ ನ ನೇತೃತ್ವವನ್ನು ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಪ್ರದೀಪ್ ಶರ್ಮಾ ವಹಿಸಿದ್ದರು. ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಗ್ಯಾಂಗ್‌ನ ಹಲವಾರು ಸದಸ್ಯರು 1990ರ ದಶಕದಲ್ಲಿ ಶರ್ಮಾ ಅವರಿಂದ ಹತರಾಗಿದ್ದರು.

ಸೋಮವಾರ ಘಟನೆ ನಡೆದಾಗ ತಲೋಜಾ ಜೈಲಿನಿಂದ ಬದ್ಲಾಪುರಕ್ಕೆ ಅಕ್ಷಯ್‌ ಶಿಂಧೆಗೆ ನಿಯೋಜಿಸಲಾಗಿದ್ದ ತಂಡದಲ್ಲಿ ಇನ್‌ಸ್ಪೆಕ್ಟರ್ ಸಂಜಯ್ ಶಿಂಧೆ ಅವರೂ ಇದ್ದರು.

Police Firing

ಯಾರು ಅಕ್ಷಯ್ ಶಿಂಧೆ?

ಬದ್ಲಾಪುರ ಶಾಲೆಯಲ್ಲಿ ಅಟೆಂಡರ್ ಆಗಿ 24 ವರ್ಷದ ಅಕ್ಷಯ್ ಶಿಂಧೆ ಕೆಲಸ ಮಾಡುತ್ತಿದ್ದ. ಈತ ಶಾಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು. ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು.

ಆತನ ಮಾಜಿ ಪತ್ನಿ ಕೂಡ ಆತನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಪೊಲೀಸರು ಈ ಆರೋಪಗಳಿಗೆ ಸಂಬಂಧಿಸಿ ಆತನನ್ನು ತನಿಖೆಗಾಗಿ ಕರೆದೊಯ್ಯುತ್ತಿದ್ದಾಗ ಆತ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ. ಕೂಡಲೇ ಪೊಲೀಸ್ ಅಧಿಕಾರಿಗಳು ಆತನ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಆತನನ್ನು ಕೂಡಲೇ ಕಲ್ವಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಕ್ಷಯ್ ಶಿಂಧೆಯ ಪೋಷಕರು ತಲೋಜಾ ಜೈಲಿನಲ್ಲಿ ಮಧ್ಯಾಹ್ನ ಆತನನ್ನು ಭೇಟಿಯಾಗಿದ್ದರು. ಬಳಿಕ ಈ ಘಟನೆ ನಡೆದಿದೆ.

Murder Case: ಮಹಿಳೆಯ ಕೊಂದು 29 ತುಂಡು ಮಾಡಿ ಎಸೆದಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ವಿರೋಧ ಪಕ್ಷಗಳಿಂದ ಖಂಡನೆ

ಘಟನೆಗೆ ಸಂಬಂಧಿಸಿ ವಿರೋಧ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ. ಇದು ಸಾಕ್ಷ್ಯವನ್ನು ನಾಶಪಡಿಸುವ ಕ್ರಮ ಎಂದು ಆರೋಪಿಸಿದೆ. ಕರೆದುಕೊಂಡು ಹೋಗುವಾಗ ಅಕ್ಷಯ್ ಶಿಂಧೆ ಕೈಗಳನ್ನು ಪೊಲೀಸರು ಕಟ್ಟಲಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಒತ್ತಾಯಿಸಲಾಗುವುದು ಎಂದು ಪ್ರತಿಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದಾರೆ. ಕೋರ್ಟ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ.