Monday, 25th November 2024

Tumkur News: ಹದಿಹರೆಯದವರಿಗೆ ಯೋಗ್ಯ ಮಾರ್ಗದರ್ಶನ ಅವಶ್ಯಕ

ತುಮಕೂರು: ಹದಿಹರೆಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಿಂದೆಂದಿಗಿಂತಲೂ ಇಂದು ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ ಎಂದು ಸ್ತ್ರೀರೋಗತಜ್ಞೆ ಡಾ.ಸೌಪರ್ಣಿಕಾ ಅಭಿಪ್ರಾಯಪಟ್ಟರು.

ವಿದ್ಯಾಶಂಕರ್ ಲರ್ನಿಂಗ್ ಸೆಂಟರ್ ಸಂಸ್ಥೆಯು ನಗರದ ರಾಮಕೃಷ್ಣ- ವಿವೇಕಾನಂದ ಆಶ್ರಮದ ಸಹಯೋಗ ದೊಂದಿಗೆ ಆಯೋಜಿಸಿದ್ದ ವಿದ್ಯಾರ್ಥಿ ದೇವೋಭವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾರ್ಮೋನ್ಸ್ ಅಸಮತೋಲನದಿಂದ ಯುವಕ-ಯುವತಿಯರಲ್ಲಿ ದೈಹಿಕ ಬದಲಾವಣೆಗಳ ಜತೆಗೆ ಸಣ್ಣಪುಟ್ಟ ವಿಷಯಗಳಿಗೆ ಕೋಪಗೊಳ್ಳುವುದು, ಸೌಂದರ್ಯ ಪ್ರಜ್ಞೆ ಹೆಚ್ಚುವುದು, ಭಿನ್ನ ಲಿಂಗದವರ ಜತೆ ಸ್ನೇಹ – ಸಲುಗೆ ಬೆಳೆಸುವ ಇಚ್ಛೆ, ಒಂಟಿತನ, ಖಿನ್ನತೆ, ಏಕಾಗ್ರತೆಯ ಕೊರತೆ ಇವೇ ಮೊದಲಾದ ಮಾನಸಿಕ ಏರುಪೇರುಗಳಾಗುವುದು ಸಹಜ. ಆದರೆ ಇದನ್ನು ಉಪೇಕ್ಷಿಸದೇ ಇವುಗಳ ಯೋಗ್ಯ ನಿರ್ವಹಣೆಯ ಬಗ್ಗೆ ತಿಳಿವಳಿಕೆ ನೀಡುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀ ಸ್ವಾಮೀಜಿ , ಶಿಕ್ಷಣವೆಂಬುದು ಓದು-ಬರಹಕ್ಕೆ ಸೀಮಿತವಾಗದೆ ವಿವೇಕಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಕ್ರಿಯೆ ಯಾಗಬೇಕು. ತಾಯಿ, ತಂದೆ ಮತ್ತು ಶಿಕ್ಷಕರು ಈ ದಿಸೆಯಲ್ಲಿ ನಿಷ್ಕ್ರಿಯರಾದರೆ ಮಕ್ಕಳು ಮತ್ತು ಸಮಾಜ ಅನಾಥ ವಾದಂತೆ. ಕಳೆದ ಹದಿನಾಲ್ಕು ವರ್ಷಗಳಿಂದ ತಮ್ಮ ಸಂಸ್ಥೆಯ ಮಕ್ಕಳು ಹಾಗು ಪೋಷಕರನ್ನು ಆಶ್ರಮಕ್ಕೆ ಕರೆ ತಂದು ಈ ವಿಶೇಷ ಕಾರ್ಯಕ್ರಮದ ಮೂಲಕ ಕ್ರಿಯಾಶೀಲವಾಗಿರುವ ಶಿಕ್ಷಣತಜ್ಞ ವಿದ್ಯಾಶಂಕರ್ ನಿಜಕ್ಕೂ ಅಭಿನಂದನೀಯರು ಎಂದು ನುಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಮೀಜಿಯವರು ಸಂಕೀರ್ತನೆ ಮತ್ತು ಧ್ಯಾನದ ತರಗತಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಅಮೆರಿಕಾದಿಂದ ಆಗಮಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗು ವಿದ್ಯಾಶಂಕರ್ ಆನ್ಲೈನ್ ಪ್ಲಾಟ್ ಫಾರ್ಮ್ ರೂವಾರಿ ಅರ್ಚನಾ ಸಚಿನ್, ಶ್ಯಾಮಲಾ ವಿದ್ಯಾಶಂಕರ್ ಹಾಗು ಶಿಕ್ಷಕ ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.

ಇದನ್ನೂ ಓದಿ: Tumkur News: ತುಮಕೂರು ಜಿಲ್ಲಾಡಳಿತದಿಂದ ದಸರಾ ಉತ್ಸವ ಸಮಿತಿ ಕಡೆಗಣನೆ: ಜಿ.ಎಸ್. ಬಸವರಾಜು ಆರೋಪ