Wednesday, 25th September 2024

World pharmacist day 2024: ವಿಶ್ವ ಫಾರ್ಮಸಿಸ್ಟ್‌ ದಿನ: ಔಷಧಕಾರರ ಮಹತ್ವವೇನು ಗೊತ್ತೇ?

world pharmacist day 2024

ನವದೆಹಲಿ: ಫಾರ್ಮಸಿ ಅಥವಾ ಔಷಧಶಾಸ್ತ್ರಕ್ಕೆ ದೀರ್ಘ ಕಾಲದ ಇತಿಹಾಸವಿದೆ. ಹಾಗಿದ್ದೂ ಔಷಧಕಾರರು ಅಥವಾ ಫಾರ್ಮಸಿಸ್ಟ್‌ಗಳ ಬಗ್ಗೆ ಅಥವಾ ಆ ವೃತ್ತಿಯ ಬಗ್ಗೆ ನಮ್ಮ ಗಮನ ಅಷ್ಟಾಗಿ ಹೋಗುವುದಿಲ್ಲ. ಆದರೆ ಈ ವೃತ್ತಿ ಮತ್ತು ವೃತ್ತಿಪರರ ಅಗತ್ಯ ಹಾಗೂ ಮಹತ್ವವನ್ನು ಜಗತ್ತಿಗೆ ಮನವರಿಕೆ ಮಾಡುವ ಉದ್ದೇಶದಿಂದ, ಸೆಪ್ಟೆಂಬರ್‌ ತಿಂಗಳ 25ನೇ ದಿನವನ್ನು ವಿಶ್ವ ಫಾರ್ಮಸಿಸ್ಟ್‌ ದಿನ(World pharmacist day 2024) ಎಂದು ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ- “ಫಾರ್ಮಸಿಸ್ಟ್‌: ಜಾಗತಿಕ ಆರೋಗ್ಯ ಅಗತ್ಯಗಳನ್ನು ಒದಗಿಸುವವರು.

ಇಂದೇ ಏಕೆ?

ವಿಶ್ವ ಫಾರ್ಮಸಿಸ್ಟ್‌ ದಿನವನ್ನು ಆಚರಿಸುವುದಕ್ಕೆ ಸೆಪ್ಟೆಂಬರ್‌ 25ನೇ ದಿನವೇ ಏಕೆ ಬೇಕು? ಇದಕ್ಕೆ ಕಾರಣವಿದೆ. ಅಂತಾರಾಷ್ಟ್ರೀಯ ಫಾರ್ಮಸಿಟಿಕಲ್‌ ಒಕ್ಕೂಟ ಜನ್ಮ ತಾಳಿದ್ದು ಇದೇ ದಿನ. 1912ರಲ್ಲಿ. ಅದರ ನೆನಪಿಗಾಗಿ, 2009ರಲ್ಲಿ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಒಕ್ಕೂಟದ ಸಮ್ಮೇಳನದಲ್ಲಿ ಈ ದಿನವನ್ನು ವಿಶ್ವ ಫಾರ್ಮಸಿಸ್ಟ್‌ ದಿನವೆಂದು ಘೋಷಿಸಲಾಯಿತು. ಸಾಮಾನ್ಯರ ಆರೋಗ್ಯ ಸುಧಾರಣೆ ಮತ್ತು ರೋಗಿಗಳ ಆರೈಕೆಯಲ್ಲಿ ಅವರು ವಹಿಸುವ ಪಾತ್ರವನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವುದು ಇದರ ಮೂಲ ಉದ್ದೇಶ.

ಕೋವಿಡ್‌ ಮಹಾಮಾರಿಯ ನಂತರದ ಸಮಯವೆಂಬುದು ಜಾಗತಿಕವಾಗಿ ಹಲವು ರೀತಿಯ ಆರೋಗ್ಯ ಸಂಬಂಧಿ ಸಂಕಷ್ಟಗಳನ್ನು ತಂದಿಡುತ್ತಿದೆ. ಮಹಾಮಾರಿಯ ಹೊಡೆತ ತಗ್ಗಿದ್ದರೂ, ಆರೋಗ್ಯ ತುರ್ತು ಪರಿಸ್ಥಿತಿ ಎನ್ನುವಂಥ ದಿನಗಳು ಮರೆಯಾಗಿಲ್ಲ. ಇಂಥ ಸನ್ನಿವೇಶದಲ್ಲಿ ಜಗತ್ತಿನ ಎಲ್ಲರಿಗೂ ಸುಸ್ಥಿರವಾದ ಆರೋಗ್ಯ ಸೇವೆಯನ್ನು ಒದಗಿಸಬೇಕು, ಈ ಮೂಲಕ ಸಾವುನೋವುಗಳನ್ನು ಕಡಿಮೆ ಮಾಡಬೇಕು ಎಂಬುದು ಆರೋಗ್ಯ ಕ್ಷೇತ್ರದ ಮುಂಚೂಣಿಯಲ್ಲಿರುವ ಶಕ್ತಿಗಳೆಲ್ಲ ಯತ್ನಿಸುತ್ತಿವೆ. ವರ್ತಮಾನದ ಸನ್ನಿವೇಶ ಮಾತ್ರವಲ್ಲ, ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಂಕಟಗಳನ್ನೂ ಎದುರಿಸಲು ಅಗತ್ಯವಾಗಿ ಬೇಕಾಗಿರುವ ಸೇವೆಗಳಲ್ಲಿ ಫಾರ್ಮಸಿಸ್ಟ್‌ಗಳ ಅವಿರತ ಶ್ರಮವೂ ಒಂದು.

ಬದಲಾಗುತ್ತಿರುವ ಹವಾಮಾನ, ಹೆಚ್ಚುತ್ತಿರುವ ವೈರಸ್‌ಗಳ ದಾಳಿ, ತೀವ್ರವಾಗುತ್ತಿರುವ ಮಾಲಿನ್ಯದ ಮಟ್ಟ, ಅತಿಯಾದ ಪ್ರತಿಜೈವಿಕ ಸೇವನೆಯಿಂದ ಜನರಲ್ಲಿ ಉಂಟಾಗುತ್ತಿರುವ ಔಷಧಿಗಳ ಪ್ರತಿರೋಧ, ವೈದ್ಯಕೀಯ ಸಿಬ್ಬಂದಿಯ ಕೊರತೆ- ಹೀಗೆ ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಬೆಟ್ಟದಷ್ಟು ದೊಡ್ಡವು. ಇವೆಲ್ಲವುಗಳ ನಡುವೆ ಔಷಧಕಾರರು ಕೆಲಸ ಮಾಡುವುದು ಒತ್ತಡದ ನಡುವೆಯೆ. ಬಹಳಷ್ಟು ದೇಶಗಳಲ್ಲಿ ಫಾರ್ಮಸಿಸ್ಟ್‌ಗಳೇ ಆರೋಗ್ಯ ಸೇವೆಯ ಮೊದಲ ಕೊಂಡಿ. ಹಾಗಿದ್ದ ಮೇಲೆ ಅವರಿದೊಂದು ಕೃತಜ್ಞತೆಯನ್ನು ಸಲ್ಲಿಸುವುದು ಸೂಕ್ತವಲ್ಲವೇ?

ಈ ಫಾರ್ಮಸಿ ಕ್ಷೇತ್ರದ ಕುರಿತಾದ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುವುದಾದರೆ:

  • ಗ್ರೀಕ್‌ ದೇಶದ ವೈದ್ಯ ಗ್ಯಾಲೆನ್‌ ಎಂಬಾತನನ್ನು ಈ ಕ್ಷೇತ್ರದ ಜನಕ ಎಂದು ಗುರುತಿಸಲಾಗುತ್ತದೆ.
  • ಔಷಧ ಕ್ಷೇತ್ರದಲ್ಲಿನ ಪ್ರಾಚೀನ ದಾಖಲೆ ನಮಗೆ ಲಭ್ಯವಾಗುವುದು ಕ್ರಿ.ಪೂ. 2900ರಲ್ಲಿ ಈಜಿಪ್ತ್‌ನಲ್ಲಿ.
  • ಅಲೆಕ್ಸಾಂಡರ್‌ ಫ್ಲೆಮಿಂಗ್‌ ಎಂಬಾತ ಪೆನಿಸಿಲಿನ್‌ ಕಂಡು ಹಿಡಿದ ಮೇಲೆ. ಜಾಗತಿಕ ಔಷಧಿ ಶಾಸ್ತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆಳು ಪ್ರಾರಂಭವಾದವು
  • ವಿಶ್ವದೆಲ್ಲೆಡೆ ಸುಮಾರು 40 ಲಕ್ಷ ಅರ್ಹತೆ ಹೊಂದಿದ ವೃತ್ತಿಪರರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
  • ಅದರಲ್ಲಿ ಶೇ 78ರಷ್ಟು ಔಷಧೀಯ ತಂತ್ರಜ್ಞರು ಮಹಿಳೆಯರು
  • ಈ ಕ್ಷೇತ್ರದ ಜಾಗತಿಕ ಆದಾಯ ವರ್ಷಕ್ಕೆ 1205 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೀರುತ್ತದೆ.

ಈ ಸುದ್ದಿಯನ್ನೂ ಓದಿ: Muda Case: ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ