Wednesday, 23rd October 2024

KHIR City: 1 ಲಕ್ಷ ಉದ್ಯೋಗ ಸೃಷ್ಟಿಸುವ ದೇಶದ ಮೊದಲ ʼಖಿರ್‌ ಸಿಟಿʼ ಯೋಜನೆಗೆ ಇಂದು ಸಿಎಂ ಚಾಲನೆ

khir city bengaluru

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ (Karnataka governnment) ಬಹುನಿರೀಕ್ಷೆಯ ‘ನಾಲೆಡ್ಜ್, ಹೆಲ್ತ್ ಆಂಡ್ ಇನ್ನೊವೇಟಿವ್ ರಿಸರ್ಚ್‌ (KHIR city) ಸಿಟಿ’ಗೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಗುರುವಾರ ಚಾಲನೆ ನೀಡಲಿದ್ದಾರೆ. ದೇಶದಲ್ಲಿ ಇಂಥ ಮೊದಲ ಸಿಟಿ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ (Kempegowda international Airport Bengaluru) ಬಳಿ ನಿರ್ಮಾಣವಾಗುತ್ತಿದೆ. ಇದು ಸುಮಾರು 1 ಲಕ್ಷ ಮಂದಿಗೆ ಉದ್ಯೋಗ ಒದಗಿಸಲಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ (MB Patil) ಹೇಳಿದ್ದಾರೆ.

ರಾಜ್ಯ ಸರ್ಕಾರದ ಮಹತ್ವದ ಯೋಜನೆಯು 2000 ಎಕರೆಯಲ್ಲಿ ಶುರುವಾಗುತ್ತಿದೆ. ಅದರಲ್ಲಿನ ಮೊದಲ ಹಂತಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಇಂದು ಸೆಪ್ಟಂಬರ್ 26ರಂದು ಬೆಳಗ್ಗೆ 11ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿದೆ. ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರದ (ಕೆಎಚ್‌ಐಆರ್ ಸಿಟಿ) ಮೊದಲ ಹಂತದ ಕಾಮಗಾರಿಯ ವಿದ್ಯುಕ್ತ ಚಾಲನೆಗೆ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದರು.

ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಮಂತ್ರಿಗಳೆಲ್ಲರೂ ಭಾಗವಹಿಸಲಿದ್ದಾರೆ. ಬೆಂಗಳೂರಿನ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಹೈಟೆಕ್ ಸಿಟಿ ಪರಿಕಲ್ಪನೆಯು ರಾಜಧಾನಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮತ್ತೊಂದು ಎತ್ತರಕ್ಕೆ ಏರಿಸುವ ವಿಶ್ವಾಸ ಇದೆ.

KHIR ಭವಿಷ್ಯದಲ್ಲಿ 5000 ಎಕರೆಗೆ ವಿಸ್ತರಣೆ ಗುರಿ

ದಾಬಸ್‌ಪೇಟೆ- ದೊಡ್ಡಬಳ್ಳಾಪುರ ನಡುವೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಗೆ ಹೊಂದಿಕೊಂಡೇ ಇರುವ, ಮೊದಲ ಹಂತದಲ್ಲಿ 500 ಎಕರೆಯಲ್ಲಿ ಈ ಕೆಎಚ್‌ಐಆರ್ ವಿನೂತನ ಸಿಟಿ/ನಗರ ತಲೆ ಎತ್ತಲಿದೆ. ಸದ್ಯ ಮೊದಲ ಹಂತದಲ್ಲಿ ಕಾಮಗಾರಿ ಆರಂಭಿಸಿದ್ದೇವೆ. ಭವಿಷ್ಯ ಅಗತ್ಯತೆ ನೋಡಿಕೊಂಡು ಈ ನಗರದ ವಿಶಾಲತೆಯನ್ನು 5000 ಎಕರೆಗೆ ವಿಸ್ತರಣೆ ಮಾಡುವ ಚಿಂತನೆ ಇದೆ.

ಈ ಹೊಸ ನಗರದಲ್ಲಿ ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಗಳಿಗೆ ಆದ್ಯತೆ ನೀಡಲಾಗುತ್ತದೆ. ಅನೇಕ ಕಂಪನಿಗಳು ಸ್ಥಾಪನೆ ಆಗಲಿವೆ. ಜಾಗತಿಕವಾಗಿ ಹೆಸರು ಮಾಡಿರುವ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್, ಅವುಗಳೊಂದಿಗೆ ಸಹಭಾಗಿತ್ವ, ವೈದ್ಯಕೀಯ ಸಂಸ್ಥೆಗಳು ಮತ್ತು ಆರೋಗ್ಯ ಸೇವೆಗಳು, ಸಂಶೋಧನೆ ಮತ್ತು ನಾವೀನ್ಯತೆ ಇವೆಲ್ಲವೂ ಬೆಂಗಳೂರಿನ ಸಮೀಪವೇ ನೆಲೆಗೊಳ್ಳಲಿವೆ ಎಂದು ತಿಳಿಸಿವೆ.

ಸದ್ಯ ಈ ಕೆಎಚ್‌ಐಆರ್ ಸಿಟಿ ನಿರ್ಮಾಣಕ್ಕೆ ಒಟ್ಟು 40,000 ಕೋಟಿ ರೂ. ಹೂಡಿಕೆಗೆ ಆಗಬೇಕಿದೆ. ಈಗಾಗಲೇ ಒಂದಷ್ಟು ಹಣ ಹರಿದು ಬಂದಿದೆ. ಈ ಸಿಟಿ ಕರ್ನಾಟಕದ ಪಾಲಿನ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಲಿದೆ ಎಂದು ತಿಳಿಸಿದರು.

ಸಿಟಿಯಲ್ಲಿ ಒಂದು ಲಕ್ಷ ಉದ್ಯೋಗ

ಭವಿಷ್ಯದಲ್ಲಿ ನಿರ್ಣಾಯಕವಾದ ಹೊಸ ಉದ್ಯಮಗಳು, ಜೀವ ವಿಜ್ಞಾನಗಳು, ಸೆಮಿಕಂಡಕ್ಟರ್ ತರಹದ ವಲಯಗಳಿಗೆ ಸಿಟಿಯಲ್ಲಿ ಒತ್ತು ನೀಡಲಾಗುವುದು. ಇಲ್ಲಿ ಒಟ್ಟು ಒಂದು ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಸದ್ಯ ಈ ಹೊಸ ನಗರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಉದ್ಘಾಟನೆ ಹೊತ್ತಿಗೆ ಸಿಟಿಗೆ ಹೊಸ ಹೆಸರು ನಾಮಕರಣ ಮಾಡಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪ್ರತ್ಯೇಕ ರಾಜ್ಯದ ಬೇಡಿಕೆಯಲ್ಲಿ ತಪ್ಪೇನಿಲ್ಲ: ನೀಫಿಯು ರಿಯೋ