Thursday, 24th October 2024

Vishwavani Editorial: ಅರಳುವ ಹೂವುಗಳೇ ಆಲಿಸಿರಿ..

ಸಾಕಷ್ಟು ದಿನಗಳಿಂದ ತಾನು ಪ್ರೀತಿಸುತ್ತಿದ್ದ ಯುವತಿಯ ಜತೆಗೇ ಆಪ್ತತೆಯಿಂದ ವರ್ತಿಸತೊಡಗಿದ ಎಂಬ ಕಾರಣಕ್ಕೆ ಉಡುಪಿ ಮೂಲದ ಬೆಂಗಳೂರು ನಿವಾಸಿ ಯುವಕನೊಬ್ಬ ತನ್ನ ರೂಮ್‌ಮೇಟ್‌ನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಸಂಗತಿ ವರದಿಯಾಗಿದೆ.

ಆರೋಪಿ ಹಾಗೂ ಕೊಲೆಯಾದ ವ್ಯಕ್ತಿ ಇಬ್ಬರಿಗೂ ಕೇವಲ 24ರ ಹರೆಯ. ಅಂದರೆ, ಸಾಧನೆಯ ಹಾದಿಗೆ ಅಡ್ಡ ಬರುವ ಸಂಗತಿಗಳನ್ನೆಲ್ಲಾ ನಗಣ್ಯವೆಂದು ಪರಿಗಣಿಸಿ ಬದಿಗೆ ಸರಿಸಿ, ಬದುಕಿನ ಸೌಧವನ್ನು ಕಟ್ಟಿಕೊಳ್ಳುವುದಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿಕೊಳ್ಳಬೇಕಾದ ವಯೋಮಾನವಿದು. ಆದರೆ, ಈ ಹಂತದಲ್ಲೇ ದುಡುಕಿನ ಕೈಗೆ ಬುದ್ಧಿ ಕೊಟ್ಟು ಒಬ್ಬ ಪೊಲೀಸರ ವಶವಾಗಿದ್ದರೆ, ಅವನ ಒಡನಾಡಿಯು ಇಹದ ಬದುಕಿಗೇ ಹಠಾತ್ ವಿದಾಯ ಹೇಳುವಂತಾಗಿದೆ.

ಇದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ. ಹುಡುಕಿದರೆ ಇಂಥ ಘಟನೆಗಳು ಸಾಕಷ್ಟು ಸಿಕ್ಕಾವು. ಜೀವನದಲ್ಲಿ ಹಂತ ಹಂತವಾಗಿ ದಕ್ಕಿಸಿಕೊಳ್ಳಬೇಕಾದ ಭಾಗ್ಯಗಳನ್ನು ಒಂದೇ ಗುಕ್ಕಿಗೆ ಆಪೋಶನ ತೆಗೆದುಕೊಂಡು ಬಿಡಬೇಕು ಎಂಬ ಹಪಹಪಿಯಲ್ಲಿ ಸಿಲುಕುವ ಇಂದಿನ ಕೆಲ ಯುವಜನರು, ಯಾವ ವಿಷಯಕ್ಕೆ ಆದ್ಯತೆ ನೀಡಬೇಕು, ಯಾವು ದನ್ನು ಸದ್ಯಕ್ಕೆ ಬದಿಗೆ ಸರಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಎಡವುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಜತೆಗೆ, ದುಡುಕು, ಹಠಮಾರಿತನ, ಸಹಿಷ್ಣುತೆ ಇಲ್ಲದಿರುವಿಕೆ, ತಾಳ್ಮೆಯ ಕೊರತೆ ಇತ್ಯಾದಿ ಕಾರಣಗಳಿಂದಾಗಿ ಇಂಥ ವರು ಸ್ವತಃ ತಮ್ಮ ಬದುಕಿಗೂ, ಹೆತ್ತವರ ಶಾಂತಿ-ನೆಮ್ಮದಿಗಳಿಗೂ ಕೊಳ್ಳಿ ಇಡುತ್ತಾರೆ ಎಂದರೆ ಅತಿಶಯೋಕ್ತಿ ಯಲ್ಲ.

‘ಬದುಕಿನಲ್ಲಿ ಆಗಾಗ ಹೋರಾಟಕ್ಕೆ ಒಡ್ಡಿಕೊಳ್ಳಬೇಕಿರುವ’ ಮತ್ತು ‘ಹೋರಾಟವೇ ಬದುಕಾಗಿರುವ’ ಎರಡೂ ಸ್ಥಿತಿಗಳ
ಫಲಾನುಭವಿಗಳು ನಮ್ಮ ಸಮಾಜದಲ್ಲಿ ಸಾಕಷ್ಟಿದ್ದಾರೆ. ಸವಾಲುಗಳನ್ನು ಹಂತಹಂತವಾಗಿ ಜಯಿಸಿಕೊಂಡು ವಿಜಯದ ಗುರಿ ಮುಟ್ಟುವುದರಲ್ಲೇ ಬದುಕಿನ ಸಾರ್ಥಕತೆಯಿದೆ ಎಂಬುದನ್ನು ನಮ್ಮ ಯುವಜನರು ಅರಿಯಬೇಕು. ಎಲ್ಲ ಸಮಸ್ಯೆಗಳಿಗೂ ಕೊಲೆ ಅಥವಾ ಆತ್ಮಹತ್ಯೆಗಳೇ ಪರಿಹಾರವಲ್ಲ; ಅವು ಪಲಾಯನವಾದದ ಮತ್ತೆರಡು ರೂಪ ಗಳಷ್ಟೇ. ‘ಈಸಬೇಕು, ಇದ್ದು ಜೈಸಬೇಕು’ ಎಂಬುದಾಗಿ ನಮ್ಮ ದಾರ್ಶನಿಕರು ಬಹಳ ಹಿಂದೆಯೇ ಸಾರಿದ್ದಾರೆ. ಈ ‘ಅಮೃತವಾಕ್ಕು’ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ.

ಇದನ್ನೂ ಓದಿ: Bengaluru Murder Case: ಸಹೋದ್ಯೋಗಿಯೇ ಹಂತಕ; ಮಹಾಲಕ್ಷ್ಮಿ ಕೊಲೆ ಆರೋಪಿಯ ಫೋಟೊ ರಿವೀಲ್