Monday, 25th November 2024

Pralhad Joshi: ಮೋದಿಯತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ, ಸುಮ್ಮನೆ ರಾಜೀನಾಮೆ ನೀಡಿ ಎಂದ ಜೋಶಿ

Pralhad Joshi

ನವದೆಹಲಿ: ಶುದ್ಧ ಹಸ್ತ, ಶ್ರಮಜೀವಿ ಆಗಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರತ್ತ ಬೆರಳು ತೋರುವ ಯಾವುದೇ ನೈತಿಕತೆ ಸಿದ್ದರಾಮಯ್ಯ (CM Siddaramaiah) ಅವರಿಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸಿಎಂಗೆ ತಿರುಗೇಟು ನೀಡಿದ್ದಾರೆ. “ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು 2500 ಕೋಟಿ ರೂಪಾಯಿಗೆ ಬಿಜೆಪಿ ಮಾರಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕಿಲ್ಲ” ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಜೋಶಿ ಸಹ ಖಡಕ್ ಆಗಿಯೇ ಟ್ವೀಟ್ ವಾರ್ ನಡೆಸಿದ್ದಾರೆ.

ಮುಡಾ ಹಗರಣದ ಚಕ್ರವ್ಯೂಹದಲ್ಲಿ ಸಿಲುಕಿ ಹತಾಶರಾಗಿರುವ ಸಿಎಂ ಸಿದ್ದರಾಮಯ್ಯ ಅವರು ವಿವೇಚನಾ ರಹಿತರಾಗಿ ಏನೇನೋ ಬಡಬಡಿಸುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Basavaraja Bommai: ಗೌರವ ಉಳಿಯಬೇಕೆಂದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಬಸವರಾಜ ಬೊಮ್ಮಾಯಿ ಆಗ್ರಹ

ತಮ್ಮ ಅಧಿನಾಯಕರೇ ಬೇಲ್ ಮೇಲಿರೋದು

ತಮ್ಮ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯೇ ಭ್ರಷ್ಟಾಚಾರ ಪ್ರಕರಣದಲ್ಲೇ ಬೇಲ್ ಮೇಲೆ ಹೊರಗಿರೋದು ಎಂದು ಪ್ರಲ್ಹಾದ್‌ ಜೋಶಿ ತಿರುಗೇಟು ಕೊಟ್ಟಿದ್ದಾರೆ. ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಹಗಲಿರುಳು ಭ್ರಷ್ಟಾಚಾರ ತಡೆ ಹಾಗೂ ದೇಶದ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡಿ ಶ್ರಮಿಸುತ್ತಿದ್ದಾರೆ. ಇಂಥವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ತಮಗೇ ಇಲ್ಲ ಎಂದು ಹೇಳಿದ್ದಾರೆ.

ಸಿಎಂ ಇಷ್ಟಕ್ಕೇ ಹತಾಶರಾದರೆ ಹೇಗೆ?

ಕೇವಲ ತಮ್ಮ ಕುಟುಂಬದ ಹಗರಣವನ್ನು ತನಿಖೆಗೆ ಒಳಪಡಿಸಿದ್ದಕ್ಕೇ ಇಷ್ಟು ಹತಾಶರಾದರೆ ಹೇಗೆ? ನಿಮ್ಮ ಹುಬ್ಲೋಟ್ ವಾಚ್ ಕಥೆ ಮುಗಿದ ಅಧ್ಯಾಯವಲ್ಲ. ಇದರ ಸಾಕಷ್ಟು ವಿಚಾರಗಳು ಇನ್ನೂ ಹೊರ ಬರಬೇಕಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸಿಎಂ ವಿರುದ್ಧ ಸಮರ ಸಾರಿದ್ದಾರೆ.

ಈ ಸುದ್ದಿಯನ್ನೂ ಓದಿ | Droupadi Murmu : ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಬೇಸ್‌ಕ್ಯಾಂಪ್‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಸಾಬೀತಾಗಬಹುದು ಎಂಬ ಕಳವಳದಿಂದಲೇ ಲೋಕಾಯುಕ್ತ ಅಧಿಕಾರ ಕಸಿದು ಎಸಿಬಿ ಸ್ಥಾಪಿಸಿದ್ರಿ. ಇನ್ನು ಎಸ್‌ಐಟಿಯನ್ನು “Siddaramayya In Trouble” ಎಂದೇ ರಾಜ್ಯದ ಜನ ವ್ಯಾಖ್ಯಾನಿಸುತ್ತಿದ್ದಾರೆ ಎಂದು ಸಚಿವ ಜೋಶಿ, ಸಿಎಂಗೆ ಚಾಟಿ ಬೀಸಿದ್ದಾರೆ.

ಅರ್ಕಾವತಿ ಲೇಔಟ್ ವಿಚಾರವಾಗಿ ನ್ಯಾಯಾಧೀಶ ಕೆಂಪಣ್ಣನವರು ನೀಡಿದ ವರದಿ ಆಧಾರವಾಗಿ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

ವಾಲ್ಮೀಕಿ ನಿಗಮ ಹಣ ನುಂಗಿದ್ದು ನಿಮ್ಮವರೇ ಅಲ್ಲವೇ?

ಇನ್ನು ವಾಲ್ಮೀಕಿ ಸಮುದಾಯದ ಅಭಿವೃದ್ದಿಗೆಂದು ಇಟ್ಟಿದ್ದ ನೂರಾರು ಕೋಟಿ ರೂಪಾಯಿ ಹಣವನ್ನು ಗುಳುಂ ಮಾಡಿ ಸಿಕ್ಕಿ ಬಿದ್ದಿರುವುದು ತಮ್ಮ ಆಪ್ತ ಮಂತ್ರಿಯೇ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿರುವುದನ್ನು ರಾಜ್ಯದ ಜನ ಕ್ಷಮಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Hassan News: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಇತ್ತ ಮುಡಾ, ವಾಲ್ಮೀಕಿ ಹೀಗೆ ಸಾಲು ಸಾಲು ಹಗರಣಗಳ ಚಕ್ರವ್ಯೂಹದಲ್ಲಿ ಸಿಲುಕಿದ್ದೀರಿ. ಪರಿಸ್ಥಿತಿ ಹೀಗಿರುವಾಗ ಹತಾಶೆಯಲ್ಲಿ ವಿನಾಕಾರಣ ಏನೇನೊ ಮಾತನಾಡಲು ಹೋಗಿ ನಗೆಪಾಟಲಿಗೆ ಗುರಿಯಾಗಬೇಡಿ. ಬದಲಿಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾನೂನಿಗೆ ತಲೆ ಬಾಗಿ ತನಿಖೆಗೆ ಸಹಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.