Thursday, 24th October 2024

Vishwavani Editorial: ಸುಪ್ರೀಂ ಅಭಿಪ್ರಾಯ ಮನನೀಯ

ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಬಾಯ್ತಪ್ಪಿ ಆಡಿದ ಮಾತಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳ ಬೇಷರತ್ ಕ್ಷಮೆಯಾಚನೆ ಬಳಿಕ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ನ್ಯಾಯಪೀಠ. “ಇನ್ನು ಮುಂದೆ ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಬಾರದು. ಇಂಥ ಹೇಳಿಕೆ ದೇಶದ ಸಮಗ್ರತೆಗೆ ವಿರುದ್ಧವಾದುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ನಿರ್ದಿಷ್ಟ ಜನಾಂಗವೊಂದು ಹೆಚ್ಚಿರುವ ಭಾಗಕ್ಕೆ ‘ಮಿನಿ ಪಾಕಿಸ್ತಾನ’ ಎಂದು ನಮ್ಮ ರಾಜಕೀಯ ನಾಯಕರು ಆಗಾಗ ನೀಡುತ್ತಿದ್ದ ಬಿಡುಬೀಸು ಹೇಳಿಕೆಯನ್ನು ಈ ಹಿಂದೆಯೂ ಕೇಳಿದ್ದೇವೆ. ಆದರೆ ಯಾರೂ ಈ ಹೇಳಿಕೆಯನ್ನು ಗಂಭೀರ ವಾಗಿ ಪರಿಗಣಿಸಿರಲಿಲ್ಲ. ತಮ್ಮ ವಿದ್ವತ್ತು ಮತ್ತು ನ್ಯಾಯ ತತ್ಪರತೆಗೆ ಹೆಸರಾದ ನ್ಯಾ.ಶ್ರೀಶಾನಂದ ಅವರು ತುಂಬಿದ ನ್ಯಾಯಾಲಯದಲ್ಲಿ ಇಂಥದ್ದೇ ಹೇಳಿಕೆಯೊಂದನ್ನು ನೀಡಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.

ಯಾವುದೇ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದ್ದರೆ, ಸೂಕ್ತಕ್ರಮ ಕೈಗೊಳ್ಳುವಂತೆ ಸರಕಾರ ಅಥವಾ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಬಹುದು. ಆದರೆ ಅಲ್ಲಿ ವಾಸ್ತವ್ಯ ಹೂಡಿರುವ ಎಲ್ಲ ಜನರನ್ನು ಸಾರಾಸಗಟಾಗಿ ಹೊಣೆ ಮಾಡುವುದು ನಮ್ಮ ಸಾಮಾನ್ಯ ನ್ಯಾಯವಿವೇಚನೆಗೆ ವಿರುದ್ಧವಾದುದು. ನ್ಯಾಯದಾನ ವಲ್ಲದೆ ಅನೇಕ ವಿಷಯಗಳಲ್ಲಿ ತಮ್ಮ ಅನುಭವವನ್ನು ಬಹಿರಂಗ ನ್ಯಾಯಾಲಯದಲ್ಲಿ ಹಂಚಿಕೊಂಡಿರುವ
ನ್ಯಾ.ಶ್ರೀಶಾನಂದ ಅವರು ಈ ಕಾರಣಕ್ಕಾಗಿ ಜನಾದರಕ್ಕೂ ಪಾತ್ರರಾದವರು. ಆದರೆ ತುಟಿಮೀರಿದ ಮಾತಿಗೆ ಅವರೇ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿ ತಮ್ಮ ಉದ್ದೇಶ ಅದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂಕೋರ್ಟ್ ಕೂಡ ಪ್ರಕರಣವನ್ನು ಇಲ್ಲಿಗೇ ಅಂತ್ಯಗೊಳಿಸಿರುವುದು ಸ್ವಾಗತಾರ್ಹ. ಆದರೆ ಈ ವೇಳೆ ಅದು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ನಾವು ಮನನ ಮಾಡಿಕೊಳ್ಳಬೇಕಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರು ವವರು, ತಮ್ಮ ಮಾತು, ಈ ನೆಲದ ಕಾನೂನು ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಿಲ್ಲದಂತೆ ಎಚ್ಚರಿಕೆ ವಹಿಸಬೇಕಿದೆ. ಅದರಲ್ಲೂ ನಿರ್ದಿಷ್ಟ ಭಾಷೆ, ಜನಾಂಗ, ಪ್ರದೇಶ, ಲಿಂಗದ ಬಗ್ಗೆ ತಪ್ಪಿಯೂ ಅನುಚಿತ ಮಾತು ಗಳನ್ನು ಆಡಬಾರದು. ಭಾರತದ ಯಾವುದೇ ಭಾಗವನ್ನು ‘ಪಾಕಿಸ್ತಾನ’ ಎಂದು ಕರೆಯುವುದು ನಮ್ಮ ದೇಶದ ಸಮಗ್ರತೆ ಮತ್ತು ಏಕತೆಗೆ ನಾವೇ ಧಕ್ಕೆ ತಂದಂತೆ. ಈ ಪ್ರಕರಣದಲ್ಲಿ ಸವೋಚ್ಚ ನ್ಯಾಯಲಯದ ಮಾತುಗಳು ಮನನೀಯ.

ಇದನ್ನೂ ಓದಿ: Sabarimala Temple Open Date: ವಿಶ್ವ ವಿಖ್ಯಾತ ಶಬರಿಮಲೆ ದೇಗುಲ ನಾಳೆ ಓಪನ್‌; ಭಕ್ತರಿಗೆ ದಿವ್ಯ ಅವಕಾಶ