Monday, 25th November 2024

Surendra Pai Column: ಪುರುಷತ್ವ ಸಾಬೀತುಪಡಿಸಲು ಅತ್ಯಾಚಾರ ಮಾರ್ಗವಲ್ಲ!

ತನ್ನಿಮಿತ್ತ

ಸುರೇಂದ್ರ ಪೈ

ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಪ್ರಸಂಗ ಎಲ್ಲರಿಗೂ ನೆನಪಿರಬಹುದು. ಆ ಒಂದು ಪ್ರಸಂಗ ಮಹಾ ಭಾರತದ ದಿಕ್ಕನ್ನೇ ಬದಲಾಯಿಸಿತು. ದ್ಯೂತದಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಸೋತ ಪಾಂಡವರನ್ನು ಅವಮಾನ ಗೊಳಿಸಲು ದುರ್ಯೋಧನನ ಅಣತಿಯಂತೆ ದುಶ್ಯಾಸನ ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯೆಳೆದು
ಬೆತ್ತಲಾಗಿಸಿ ತಮ್ಮ ಪೌರುಷ, ಪುರುಷತ್ವವನ್ನು ಎಲ್ಲರ ಮುಂದೆ ಪ್ರದರ್ಶಿಸಲು ಹೊರಟ ವಿಕೃತ ಮನಸ್ಥಿತಿಯನ್ನು ಯಾರು ಮರೆಯಲಾರರು. ಆದರೆ ಅಂತಹ ಮನಸ್ಥಿತಿಯ ಅಂತ್ಯ ಹೇಗಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಗಂಡು ಎನಿಸಿಕೊಂಡವನು ತನ್ನ ಪುರುಷತ್ವ, ಪೌರುಷ ಸಾಬೀತು ಪಡಿಸಲೋಸುಗ, ತನ್ನ ಕೋಪ-ತಾಪ, ಅಸಮಾ ಧಾನ, ಒತ್ತಡ ನಿವಾರಣೆ ಇತ್ಯಾದಿಗಳನ್ನು ಹೊರಹಾಕುವ ಸಾಧನವೆಂಬಂತೆ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ, ಹಿಂಸೆ, ಲೈಂಗಿಕ ಕಿರುಕುಳ, ಅತ್ಯಾಚಾರಗಳಂತಹ ಹೀನ ರಾಕ್ಷಸಿಯ ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾನೆ.

ಮಹಿಳೆಯು ಶೋಷಣೆಗೆ ಒಳಗಾಗುತ್ತಿರುವುದು ಇದೇ ಮೊದಲು ಅಲ್ಲ, ಕೊನೆಯೂ ಅಲ್ಲ. ಕಳೆದ ನೂರಾರು ವರ್ಷಗಳಿಂದಲೂ ಇದು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಆದರೆ ಶೇ.90ರಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿರಲಿಲ್ಲ, ದಾಖಲಾಗುತ್ತಿರಲಿಲ್ಲ ಹಾಗೂ ಅವುಗಳ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಅಂದೋಲನಗಳು, ಹೋರಾಟಗಳು ನಡೆದಿರಲಿಲ್ಲ. 1992 ರಲ್ಲಿ, ಅಜ್ಮೀರ್ ಅತ್ಯಾಚಾರ ಪ್ರಕರಣವು ಭಾರತದ ಅತಿದೊಡ್ಡ ಪ್ರಕರಣ ಗಳಲ್ಲಿ ಒಂದಾಗಿದೆ.

ಇದರಲ್ಲಿ 11 ರಿಂದ 20 ವರ್ಷ ವಯಸ್ಸಿನ ಶಾಲಾ/ಕಾಲೇಜುಗಳಲ್ಲಿನ 250 ವಿದ್ಯಾರ್ಥಿನಿಯರು ಬಲಿಯಾಗಿದ್ದರು. ಆದರೆ ಮೊಟ್ಟಮೊದಲ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಜನರೆಲ್ಲರೂ ಬೀದಿಗಿಳಿದು ಹೋರಾಟ ನಡೆಸಿದ್ದು 2012 ಡಿಸೆಂಬರ್ 16 ರಂದು ದೆಹಲಿ ಯಲ್ಲಿ 23 ವರ್ಷದ ’ನಿರ್ಭಯಾ’ ಎಂಬ 23 ವರ್ಷದ ಫಿಸಿಯೋಥೆರಪಿ ಇಂಟರ್ನ್ ಮೇಲೆ ಆರು ಮಂದಿ ಅತ್ಯಾಚಾರ ಮತ್ತು ಹಲ್ಲೆ ನಡೆಸಿ ಚಲಿಸುವ ಬಸ್ ನಿಂದ ಹೊರಗೆ ಎಸೆಯಲ್ಪಟ್ಟಾಗ. ಅದಾದ ನಂತರ ನವೆಂಬರ್ ೨೦೧೯ರಲ್ಲಿ, ಹೈದರಾಬಾದ್ ಬಳಿಯ ಶಂಶಾಬಾದ್‌ನಲ್ಲಿ ನಾಲ್ಕು ಜನರಿಂದ 26 ವರ್ಷದ ಪಶುವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಅನಂತರ 2020 ನವೆಂಬರ್ ೧೪ ರಂದು ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ೧೯ ವರ್ಷದ ದಲಿತ ಯುವತಿಯ ಮೇಲೆ ಮೇಲ್ಜಾತಿ ನಾಲ್ಕು ಪುರುಷರು ಸಾಮೂಹಿಕ ಅತ್ಯಾಚಾರವೆಸಗಿದರು. ಆದಾದ ನಂತರ ಇತ್ತೀಚೆಗೆ ನಡೆದ ಕೋಲ್ಕತಾ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿ ಐದಾರು ಇಂತಹ ಪ್ರಮುಖ ಅತ್ಯಾಚಾರ,ಕೊಲೆ ಪ್ರಕರಣಗಳು ಮಾತ್ರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಪ್ರಮುಖ ಹೋರಾಟಗಳಾಗಿವೆ.

ಇನ್ನೂ ಲೆಕ್ಕವಿಲ್ಲದಷ್ಟು ಪ್ರಕರಣಕ್ಕೆ ಯಾವುದೇ ಹೋರಾಟವಿರಲಿ, ಅದು ಸುದ್ದಿಯಾಗುವ ಮೊದಲೇ ಮುಚ್ಚಿ ಹೋಗುತ್ತಿವೆ. ಅತ್ಯಾಚಾರಕ್ಕೆ ಮಹಿಳೆ ಹೊಂದಿರುವ ಪ್ರೀತಿ-ಪ್ರೇಮ ಸಲುಗೆಯೇ ಕಾರಣವೆಂದು ಮಹಿಳೆಯನ್ನು ದೂಷಿಸುವವರಿಗೆ ಪ್ರೀತಿ-ಪ್ರೇಮದ ವಿಸ್ತಾರತೆಯ ಕುರಿತಾಗಿ eನವಿದ್ದಂತೆ ಕಾಣುವುದಿಲ್ಲ. ಮೊದಲನೆಯದಾಗಿ ಪ್ರೀತಿ ಎಂಬುದು ವಿಶಾಲಾರ್ಥವನ್ನು ಹೊಂದಿದ್ದು, ನಾವು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೇವೆ ಎಂದರೆ ಆಕೆ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದಂತೇ ಎಂದು ಭಾವಿಸುವುದೇ ಮೂರ್ಖತನ. ಮನಸ್ಸಿಗೂ, ದೇಹಕ್ಕೂ ಸಂಬಂಧ ಗೊತ್ತಿರದ ಮೇಲೆ ಎಲ್ಲವನ್ನೂ ತನ್ನಿಷ್ಟದಂತೆ ಭಾವಿಸಿ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ.

ಆಕೆಯ ಸಮ್ಮತಿಗೆ ವಿರುದ್ಧವಾಗಿ ಲೈಂಗಿಕವಾಗಿ ಸಂಭೋಗ ಹೊಂದಿದರೆ ಅದು ಅತ್ಯಾಚಾರವೆಂದು ಕರೆಯಿಸಿ ಕೊಳ್ಳುತ್ತದೆ. ಇದು ಆಕೆಯ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ನಡೆಯುವ ಕ್ರಿಯೆ. ಒಬ್ಬರನ್ನೊಬ್ಬರು ಮಾನಸಿಕವಾಗಿ ಪ್ರೀತಿಸುತ್ತಿzರೆ ಎಂದರೆ ಆಕೆ ತನ್ನ ದೇಹದ ಮೇಲೂ ಒಪ್ಪಿಗೆ ನೀಡಿರುವಳು ಎಂದರ್ಥವಲ್ಲ, ಅದು ಆಕೆಗೆ ಬಿಟ್ಟ ವಿಚಾರ. ಇದರಲ್ಲಿ ಆಕೆಯ ಅನುಮತಿ ಅಥವಾ ಸಹಮತಿ ಪಡೆಯಲೇ ಬೇಕಾದದ್ದು ಪುರುಷನ ಕರ್ತವ್ಯ. ಇದು ಮಹಿಳೆಗೂ ಸಹ ಅನ್ವಯಿಸುತ್ತದೆ ಎಂಬುದನ್ನು ಆಕೆಯೂ ತಿಳಿದಿರಬೇಕು.

ಎರಡನೆಯದಾಗಿ ಒಮ್ಮೆ ಆಕೆ ಲೈಂಗಿಕ ಕ್ರಿಯೆಗೆ ಅನುಮತಿ ನೀಡಿದ ಬಳಿಕ, ಒಂದೊಮ್ಮೆ ಆಕೆಗೆ ಮತ್ತೆ ದೈಹಿಕವಾಗಿ
ಸೇರುವುದು ಇಷ್ಟವಿಲ್ಲವೆಂದಾದರೆ ಆಕೆ ಅದನ್ನು ವಿರೋಧಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ. ಅದು ಮದುವೆ ಯಾದ ಗಂಡ/ ಹೆಂಡತಿ, ಪ್ರೀಯಕರ ಇನ್ಯಾರೇ ಆಗಿರಬಹುದು. ಒಮ್ಮೆ ಅನುಮತಿ ನೀಡಿದ್ದಾಳೆ/ನೆ ಎಂದು ಇನ್ನು ಮುಂದೆಯೂ ಅವಳ/ನ ಒಪ್ಪಿಗೆ ಇದ್ದೇ ಇರುತ್ತದೆ ಎಂಬ ನಿರ್ಧಾರಕ್ಕೆ ಬರುವುದು ತಪ್ಪು.

ಇನ್ನು ಈ ಒಪ್ಪಿಗೆಯ ವಿಷಯದಲ್ಲಿ 18 ವರ್ಷದೊಳಗಿನ ಯುವತಿ ಒಪ್ಪಿಗೆ ಸೂಚಿಸಿದರೂ ಸಹ ಅದು ಒಪ್ಪಿಗೆ ಎಂದು ಎನಿಸಿಕೊಳ್ಳದು, 2012 ರ ಪೋಕ್ಸೋ ಕಾಯ್ದೆಯ ಅಡಿಯಲ್ಲಿ 18 ವಯಸ್ಸಿನವರೆಗೂ ‘ಅಪ್ರಾಪ್ತೆ’ ಎಂದು ಗುರುತಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕಾನೂನುಗಳಿದ್ದು, ಅದೆಷ್ಟೋ ಪ್ರತಿಷ್ಠಿತ ವ್ಯಕ್ತಿಗಳು ಈ ಅಪರಾಧದಡಿಯಲ್ಲಿ ಜೈಲು ಸೇರಿದ್ದಾರೆ.

ಮೂರನೇಯದಾಗಿ ಮಹಿಳೆ ರಾತ್ರಿಯ ವೇಳೆ ಮನೆಯಿಂದ ಹೊರಗಿರುವುದರಿಂದಲೇ ಆಕೆ ಮೇಲೆ ಅತ್ಯಾಚಾರ ವಾಗುತ್ತಿದೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಹೆಣ್ಣು ಮಕ್ಕಳು ತಡರಾತ್ರಿಯಲ್ಲಿ ಹೊರಗೆ ಉಳಿಯಲು ಪೋಷಕರನ್ನು ದೂಷಿಸಿ, ಅಷ್ಟು ರಾತ್ರಿ ಏಕೆ ಅವರು ಹೊರಗಡೆ ತಿರುಗಬೇಕು ಎಂದು ಪಾಲಕರನ್ನು ಪ್ರಶ್ನಿಸುವ ಹೇಳಿಕೆಗಳು ಎಲ್ಲರಿಂದಲೂ ಕೇಳಿ ಬರುತ್ತವೆ. ನಿರ್ಭಯಾ ಪ್ರಕರಣದ ಅರೋಪಿ ಮುಖೇಶ್ ಸಹ ಇಂತ ಹದ್ದೇ ಆಲೋಚನೆ ಹೊಂದಿದ್ದರು ಎಂಬುದನ್ನು ನಾವಿಲ್ಲಿ ಮರೆಯಬಾರದು. ಈ ವಿಷಯಕ್ಕೆ ಸಂಬಂಧಿಸಿ ದಂತೆ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ ೯೦ರಷ್ಟು ಆರೋಪಿಯು ಸಂತ್ರಸ್ತೆಯ ಪರಿಚಿತನಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಎನ್‌ಸಿಆರ್‌ಬಿ ವರದಿ ಮಾಡಿದೆ.

2015ರಲ್ಲಿ ಇದು ಇದರ ಪ್ರಮಾಣ 95ರಷ್ಟು, 2017ರಲ್ಲಿ 93.1ರಷ್ಟು, 2021ರಲ್ಲಿ 96.08 ರಷ್ಟು ಜನ ಪರಿಚಿತರಿಂದಲೇ ಅತ್ಯಾಚಾರವಾಗಿದ್ದು ಬಯಲಾಗಿದೆ. ಇದು ಅಮೆರಿಕದಂತಹ ದೇಶದಲ್ಲೂ ಕಂಡುಬಂದಿದೆ. ಅಂದರೆ ಆರೋಪಿಯು ಮನೆಯವರ ಸ್ನೇಹಿತ, ಸಂಬಂಧಿಕ, ಸಹೋದ್ಯೋಗಿ, ಪಕ್ಕದ ಮನೆಯವರು, ಶಿಕ್ಷಕರು, ಬಸ್-ಆಟೋ ಚಾಲಕರು, ವೈದ್ಯರು ಹೀಗೆ ಕುಟುಂಬಕ್ಕೆ ಅಥವಾ ಸಂತ್ರಸ್ತೆಗೆ ಹತ್ತಿರವಿರುವ ಜನರೇ ಕಾರಣವೆಂದಾಯಿತಲ್ಲ, ಇನ್ನೂ ಮಹಿಳೆ ಗಿಂತಲೂ ತಡರಾತ್ರಿ ತನಕ ಅತ್ಯಾಚಾರಿಗಳು ಹೊರಗಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಏಕೆ ಹೇಳುತ್ತಿಲ್ಲ.

ನಾಲ್ಕನೇಯದಾಗಿ ಮಹಿಳೆಯು ತನ್ನ ಸ್ನೇಹಿತರೊಂದಿಗೆ ಅತ್ಯಂತ ಆಪ್ತವಾಗಿರುವಿಕೆ, ಒಟ್ಟಿಗೆ ಮದ್ಯ ಸೇವಿಸುವಿಕೆ ಇತ್ಯಾದಿ ಪರೋಕ್ಷವಾಗಿ ಪ್ರಚೋದನೆ ನೀಡಿದಂತೆ ಎಂಬ ಆರೋಪ. ಮದ್ಯಸೇವನೆ ಮಾಡಿದರೆ ಲೈಂಗಿಕ ಕ್ರಿಯೆಗೆ ಸಿದ್ಧ ಅಥವಾ ಅನುಮತಿ ನೀಡಿದ್ದಾಳೆ ಎಂದು ಯಾವ ಗ್ರಂಥದಲ್ಲಿ ಬರೆದಿದೆಯೋ ಕಾಣೆ. ಇದೆಲ್ಲವೂ ಅತ್ಯಾಚಾರ ಕ್ಕಾಗಿ ಪೌರುಷವುಳ್ಳ ಪುರುಷರು ಹಾಗೂ ಕಾಮಾಲೆ ಕಣ್ಣಿನ ಜನರು ನೀಡುವ ವ್ಯರ್ಥ ಕಾರಣ. ಬಿಎನ್‌ಎಸ್ ತಿದ್ದುಪಡಿ 63ರಲ್ಲಿ ಮಾದಕತೆಯ ಸಮಯದಲ್ಲಿ ನಡೆದ ಲೈಂಗಿಕ ಕ್ರಿಯೆಯ ವಿರುದ್ಧವು ಅತ್ಯಾಚಾರ ಪ್ರಕರಣ ದಾಖಲಿಸುವು ದಾಗಿ ತಿಳಿಸಿದೆ.

ಐದನೇಯದಾಗಿ ಮಹಿಳೆಯು ಚಿಕ್ಕ ಚಿಕ್ಕ ತುಂಡು ಉಡುಗೆಯನ್ನು ತೊಟ್ಟಿದ್ದು ಪ್ರಚೋದನೆ ನೀಡುತ್ತದೆ ಎಂಬ
ಆರೋಪ ಬೇರೆ. ಅದುವೇ ನಿಜವಾಗಿದ್ದರೆ ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯು ದೇಹ ಪೂರ್ತಿ ಉಡುಗೆ ತೊಟ್ಟಿರುತ್ತಾಳೆ ಆದರೂ ಸಹ ಉತ್ತರ ಪ್ರದೇಶವು ಅತ್ಯಾಚಾರ ಪ್ರಕರಣದಲ್ಲಿ ಏಕೆ ಮುಂದಿದೆ. ಇನ್ನು ಚಿಕ್ಕ ಮಕ್ಕಳು, ಮಾನಸಿಕ ಅಸ್ವಸ್ಥ ಮಕ್ಕಳು, ವಯಸ್ಕರು, ಬುರ್ಖಾ, ಸೀರೆ ಉಟ್ಟ ಹೆಂಗಸಿನ ಮೇಲೆ ಯಾವ ಕಾರಣಕ್ಕಾಗಿ ಅತ್ಯಾಚಾರವಾಗುತ್ತದೆ. ಬಟ್ಟೆಯೆಂಬುದು ಒಂದು ಕುಂಟು ನೆಪವಷ್ಟೇ. ಆದರೂ ಬಹುತೇಕ ಮಹಿಳೆಯರು ಸೇರಿ ದಂತೆ ಎಲ್ಲರ ಮನಸ್ಸಿನಲ್ಲೂ ಮಹಿಳೆ ತೊಡುವ ಉಡುಗೆಯೇ ಕಾರಣ ಎಂಬ ಅಲೋಚನೆ ಇನ್ನು ಜಾಗೃತ ವಾಗಿದೆ ಎಂಬುದೇ ದುಃಖಕರ ವಿಷಯ. ಇಂತಹ ಪೂರ್ವಾಗ್ರಹ ಪೀಡಿತ ಯೋಚನೆಗಳು ಬಹುತೇಕ ಜನರಲ್ಲಿ ಆಳವಾಗಿ ಬೇರೂರಿದೆ. ಅದಕ್ಕಾಗಿಯೇ ಮಹಿಳೆಯ ನಡೆಯೇ ಅತ್ಯಾಚಾರಕ್ಕೆ ಮೂಲ ಎಂಬ ವಾದ ಮೊದಲಾಗುತ್ತದೆ.

ನಮಗೆಲ್ಲ ತಿಳಿದಿರುವ ಹಾಗೇ ಪುರುಷರು ತಮ್ಮ ದೈಹಿಕ ವಾಂಛೆ(ಕಾಮನೆ-ತೀಟೆ)ಯನ್ನು ಪೂರೈಸಿಕೊಳ್ಳಲು ಮಾತ್ರ ಈ ರೀತಿ ಅತ್ಯಾಚಾರದಂತಹ ಅಮಾನವೀಯ ಕೃತ್ಯ ಮಾಡುತ್ತಾರೆ ಎಂಬ ಭಾವನೆಯಿದೆ. ಆದರೆ ಅತ್ಯಾಚಾರದ ಹಿಂದಿರುವ ವಾಸ್ತವಿಕ ಕಾರಣಗಳ ಬಗ್ಗೆ ವಿಶ್ವದಾದ್ಯಂತ ನಡೆದ ವಿವಿಧ ಅಧ್ಯಯನಗಳ ಪ್ರಕಾರ ‘ಅಧಿಕಾರ, ಸಿಟ್ಟು ಹಾಗೂ ಸ್ಯಾಡಿ’ ಎಂಬ ಪ್ರಮುಖ ಮೂರು ಕಾರಣ ಗುರುತಿಸಲಾಗಿದೆ.

ಇವುಗಳಲ್ಲಿ ಕೊನೆಯ ಎರಡು ಪ್ರಕಾರಗಳು ಕೊಲೆ ಮಾಡಲು ಸಹ ಹಿಂಜರಿಯದ ಮನಸ್ಥಿತಿಯಳ್ಳದ್ದಾಗಿರುತ್ತವೆ. ಇದಕ್ಕೆಲ್ಲ ಸಮಾಜದಲ್ಲಿ ತನ್ನ ಸ್ವ ಮೌಲ್ಯಗಳ ಕುಸಿತವಾಗುತ್ತಿದೆ ಎಂದು ಭಾವಿಸುವಿಕೆ, ತನ್ನ ಅತಿಯಾದ ಕೋಪ, ಬೈಗುಳವನ್ನು ನಿಗ್ರಹಿಸಲು, ಹಾಗೂ ಇನ್ನೊಬ್ಬರ ನೋವನ್ನು, ಒದ್ದಾಟವನ್ನು ಆಸ್ವಾದಿಸುವ ಮನಸ್ಥಿತಿಯೇ ಹಿನ್ನೆಲೆಯಾಗಿದೆ.

ಮೆಡಿಕಲ್ ಲೈಬ್ರರಿಸೈನಲ್ಲಿ ಪ್ರಕಟಿತವಾದ ಒಂದು ಸಂಶೋಧನಾ ವರದಿಯು ಅತ್ಯಾಚಾರಿಗಳ ಜೊತೆ ಬಾಲ್ಯದಲ್ಲಿ
ನಡೆದ ಲೈಂಗಿಕ ಘಟನೆಗಳು, ಹತ್ತು ವರ್ಷಕ್ಕೂ ಮುನ್ನ ಅಶ್ಲೀಲ ಚಿತ್ರಗಳ ವೀಕ್ಷಣೆ, ದೈಹಿಕ ನಿಂದನೆ, ಪೋಷಕರಿಂದ ಹಿಂಸೆ, ಭಾವನಾತ್ಮಕ ನಿಂದನೆ, ಪ್ರಾಣಿಗಳ ಜೊತೆ ಕ್ರೌರ್ಯತೆ, ಬಾಲ್ಯದ ಹಿಂಸಾತ್ಮಕ ಚಿತ್ರಗಳ ವೀಕ್ಷಣೆ ಹಾಗೂ ಸಾಮಾಜಿಕ ಜಾಲತಾಣ ಗೀಳಿಗೆ ಒಳಗಾಗುವಿಕೆ, ಅವಿಭಕ್ತ ಕುಟುಂಬದ ಕಣ್ಮರೆ, ನೈತಿಕ ಶಿಕ್ಷಣದ ಕೊರತೆ, ಆರ್ಥಿಕ ಅಸಮಾನತೆ, ನಿರುದೋಗ್ಯದ ಒತ್ತಡ, ಜಾತಿನಿಂದನೆ, ಹೆಣ್ಣಿನ ಪ್ರತಿಯಾಗಿ ಬಿಂಬಿಸಲಾದ ಪೂರ್ವಾಗ್ರಹ ಚಿಂತನೆ, ಪುರುಷ ಪ್ರಧಾನ ವ್ಯವಸ್ಥೆಯ ವೈಭವೀಕರಣ ಹೀಗೆ ಅನೇಕ ಕಾರಣಗಳನ್ನು ಪಟ್ಟಿಮಾಡಲಾಯಿತು. ಇವೆಲ್ಲಕ್ಕೂ ಮಿಗಿಲಾಗಿ ಅತ್ಯಾಚಾರವನ್ನು ಪ್ರಚೋದಿಸುವ ಚಲನಚಿತ್ರ ದೃಶ್ಯಗಳು, ಸಂಗೀತದಲ್ಲಿ ಬಳಸಲಾಗುವ ಸಾಹಿತ್ಯ, ದಿನನಿತ್ಯ ನಾವು ಬಳಸುತ್ತಿರುವ ‘ನಿಮ್ಮ ಅಕ್ಕ, ನಿಮ್ಮ ಅವ್ವ’ ಎಂಬ ತಿರಸ್ಕಾರಯುತ ಕೀಳು ಭಾಷೆಯೇ ‘ಅತ್ಯಾಚಾರ ’ಎಂಬ ಸಂಪ್ರದಾಯವನ್ನು ಬೆಳೆಸುತ್ತಿದೆ.

ಇದರ ಕುರಿತಂತೆ 1975ರಲ್ಲಿ ಪ್ರಕಟವಾದ ಸುಸಾನ್ ಬ್ರೌನ್ಮಿಲ್ಲರ್ ಅವರ ‘Against Our Will : Men, women and Rape’’ ಪುಸ್ತಕವು ಈ ಕುರಿತಾದ ಸಾಕಷ್ಟು ಅಧ್ಯಯನವನ್ನು ವಿವರಿಸುತ್ತದೆ. ಕೊನೆಯದಾಗಿ ಹಲವಾರು ಶತಮಾನ ಗಳ ಹಿಂದೆ ಸಮಾಜದಲ್ಲಿ ಮಹಿಳೆಯರ ವಿಷಯದಲ್ಲಿ ನಡೆಯುತ್ತಿದ್ದ ಅಸಮಾನತೆ, ಅನಿಷ್ಟ ಪದ್ಧತಿ, ಕೆಟ್ಟ ಆಚರಣೆಯನ್ನು ತೊಡೆದುಹಾಕುವಲ್ಲಿ ನಮ್ಮ ಸಮಾಜ ಸುಧಾರಕರು ಬಹಳಷ್ಟು ಶ್ರಮವಹಿಸಿ ನಾವು ಆಕೆಯ ಜೊತೆ ಎಷ್ಣು ಗೌರವಯುತವಾಗಿ ನಡೆದುಕೊಳ್ಳಬೇಕೆಂದು ಅರಿವು ಮಾಡಿಸಲು ದೊಡ್ಡ ಹೋರಾಟವನ್ನೇ ಮಾಡಿ ಸಮಾನ ತೆಯ ಸಂದೇಶವನ್ನು ಸಾರಿದ್ದಾರೆ.

ಇದುವೇ ಗಾಂಧೀಜಿಯವರ ಆಶಯವಾಗಿತ್ತು. ಮಹಿಳೆಯನ್ನು ಒಂದು ವಸ್ತುವನ್ನಾಗಿ ನೋಡುವ ಬದಲಾಗಿ ಆಕೆಯೂ ಸಹ ನಮ್ನ ಹಾಗೇ ಒಬ್ಬ ಜೀವ, ಆಕೆಗೂ ಮನಸ್ಸಿದೆ ಎಂಬ ಸತ್ಯ ಒಪ್ಪಿಕೊಳ್ಳೋಣ. ಇನ್ನು ಮಹಿಳೆಯರು ಸಹ ತಾನು ಕಲಿತಿದ್ದೇನೆ, ದುಡಿಯುತ್ತೇನೆ, ತನ್ನ ಜೀವನವನ್ನು ನಾನೇ ನೋಡಿಕೊಳ್ಳುವ ಸಾಮರ್ಥ್ಯವಿದೆ, ನನಗೆ ಯಾರ ಹಂಗು ಬೇಡ, ಎಲ್ಲಾ ಪುರುಷರು ಒಂದೇ, ನನಗೆ ಪುರುಷರ ಒಡನಾಟದ ಅಗತ್ಯವಿಲ್ಲ, ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ತನ್ನನ್ನು ತಾನು ನಿಭಾಯಿಸಿಕೊಳ್ಳಬ ಎಂಬ ಉದ್ದಟತನ ಅಹಂಕಾರ ಬೇಡ.

ಈ ಪ್ರಕೃತಿಯ ನಿಯಮದಂತೆ ಗಂಡು-ಹೆಣ್ಣು ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಹಾಗಾಗಿ ಗಂಡಾಗಲಿ, ಹೆಣ್ಣಾಗಲಿ ಒಬ್ಬರನ್ನೊಬ್ಬರು ಗೌರವಿಸುತ್ತಾ, ಅರಿತು ಬಾಳುವುದೇ ಲೇಸು.

(ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Surendra Pai Column: ನೀರಿನ ನಿಯಮದ ಇನ್ನಾದರೂ ಕಲಿಯೋಣು ಬಾರಾ