Sunday, 15th December 2024

Surendra Pai Column: ನೀರಿನ ನಿಯಮದ ಇನ್ನಾದರೂ ಕಲಿಯೋಣು ಬಾರಾ

ಜಲಸೂಕ್ತ

ಸುರೇಂದ್ರ ಪೈ

ಇತ್ತೀಚೆಗೆ ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು ಗೊತ್ತಿರು ವಂಥದ್ದೇ. ಮನುಷ್ಯನ ಆಕ್ರಮಣಶೀಲತೆ, ಅವೈಜ್ಞಾನಿಕ ಕಾಮಗಾರಿಗಳು ಮತ್ತು ಪರಿಸರ ವ್ಯವಸ್ಥೆಯ ಬಗೆಗಿನ ಅರಿವುಗೇಡಿತನಗಳೇ ಈ ದುರಂತಗಳಿಗೆ ಕಾರಣ. ಶರಾವತಿ ನದಿಯಿಂದ ನೀರನ್ನು ಕೊಳವೆ ಮಾರ್ಗದ ಮೂಲಕ ಬೆಂಗಳೂರಿಗೆ ಒಯ್ಯುವ ಯೋಜನೆಯು ಮತ್ತೆ ಮುನ್ನೆಲೆಗೆ ಬಂದ ಸಂದರ್ಭದಲ್ಲಿ, ‘ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ನದಿಯ ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುತ್ತೇವೆ’ ಎಂಬ ಬಾಲಿಶ ಸಮಜಾಯಿಷಿಯು ತಂತ್ರಜ್ಞರಿಂದ ಹೊಮ್ಮಿತು.

ಇದು, ಪರಿಸರ ಜೀವವ್ಯವಸ್ಥೆ (ಇಕಾಲಜಿ) ಬಗ್ಗೆ ನಮ್ಮವರಿಗೆ ಅರಿವು ಕಮ್ಮಿ ಎಂಬುದನ್ನು ಸಾಬೀತು ಮಾಡಿತು. ಕಾರಣ, ಪರಿಸರ ಜೀವವ್ಯವಸ್ಥೆಯಲ್ಲಿ ‘ವ್ಯರ್ಥ’ ಅಥವಾ ‘ನಿರುಪಯುಕ್ತ’ ಎಂಬುದಿಲ್ಲ, ಪ್ರತಿಯೊಂದಕ್ಕೂ ಅಂತರ್
ಸಂಬಂಧವಿದೆ. ಹೀಗಾಗಿ ಎಲ್ಲವೂ ಉಪಯುಕ್ತವೇ. ಭೂಮಂಡಲದ 3 ಭಾಗವನ್ನಾವರಿಸಿರುವ ಉಪ್ಪು ನೀರಿನ ಸಾಗರವು ಒಂದು ವೇಳೆ ನಿರುಪಯುಕ್ತವಾಗಿದ್ದಿದ್ದರೆ, ಅದು ಪರಿಸರ ವ್ಯವಸ್ಥೆಯ ಭಾಗವಾಗಲು ಸಾಧ್ಯವಿರುತ್ತಿರಲಿಲ್ಲ.
ಪರಿಸರ ವಿಜ್ಞಾನದಲ್ಲಿ ‘ಆಹಾರ ಸರಪಳಿ’ ಎಂಬ ಪರಿಕಲ್ಪನೆ ಇರುವಂತೆಯೇ, ‘ಜಲಚಕ್ರ’ ಎಂಬ ವ್ಯವಸ್ಥೆಯೂ ಇದೆ.
ಮಳೆನೀರು ಹರಿದು ನದಿಗಳಿಗೆ ಸೇರಿ, ಅಲ್ಲಿಂದ ಸಮುದ್ರಕ್ಕೆ ಸ್ವಾಭಾವಿಕವಾಗಿ ಹರಿಯುವುದು ಜಲಚಕ್ರದ ನಿಯಮ.

ಇದನ್ನೂ ಓದಿ: Chirag Paswan Column: ಆಹಾರ ಸುರಕ್ಷತೆ, ಭದ್ರತೆಗೆ ತಂತ್ರಜ್ಞಾನದ ಒತ್ತಾಸೆ

ಅಲ್ಲಿಂದ ಅದು ಮತ್ತೆ ಆವಿಯಾಗಿ, ಮೋಡವಾಗಿ, ಘನೀಕರಣಗೊಂಡು ಮಳೆಯಾಗುತ್ತದೆ. ಹೀಗಾಗಿ, ಪರಿಸರ ವ್ಯವಸ್ಥೆ
ಯಲ್ಲಿ ನಿರುಪಯುಕ್ತ ಎಂಬುದೇನಾದರೂ ಇದ್ದರೆ ಅದು- ‘ನಾನು ಎಂಬ ಅಹಂಕಾರದಿಂದ ಮೆರೆಯುತ್ತಿರುವ ಮನುಷ್ಯ’ ಮಾತ್ರ! ಏಕೆಂದರೆ, ಪ್ರಕೃತಿಯ ಒಡಲಿನಲ್ಲಿ ಆಶ್ರಯ ಪಡೆದಿರುವ ಕೋಟ್ಯಂತರ ಜೀವರಾಶಿಗಳಲ್ಲಿ ಮನುಷ್ಯ ನನ್ನು ಹೊರತುಪಡಿಸಿ ಬೇರಾವ ಜೀವಿಯೂ ಪ್ರಕೃತಿಯ ನಿಯಮವನ್ನು ಮುರಿದು, ಎಲ್ಲವೂ ತನ್ನ ನಿಯಂತ್ರಣದಲ್ಲಿರಬೇಕೆಂದು ಬಯಸುವುದಿಲ್ಲ. ಮನುಷ್ಯರು ಮಾತ್ರವೇ ಪರಿಸರ ವ್ಯವಸ್ಥೆಯೊಂದಿಗೆ ಹಸ್ತಕ್ಷೇಪ ಮಾಡಿ ಅದನ್ನು ಬದಲಿಸಲು ಹೊರಟಿರುವುದು. ಪರಿಸರವು ನಮಗೆ ನೀಡಿರುವ ಶುದ್ಧಗಾಳಿ, ನೀರು, ಬೆಳಕು, ಆಹಾರ ಮತ್ತು ವಾಸಸ್ಥಾನವನ್ನು ನಾವು ಕಬಳಿಸಲು ಹೊರಟು ಇವೆಲ್ಲವನ್ನೂ ಕಲುಷಿತಗೊಳಿಸಿದ್ದೇವೆ.

ಭೂಗ್ರಹದ ಮೂರು ಭಾಗ ನೀರು, ಒಂದು ಭಾಗ ಭೂಪ್ರದೇಶವಿದ್ದರೂ ಈ ಒಟ್ಟಾರೆ ಪರಿಸರ ಜೀವವ್ಯವಸ್ಥೆಯ
ಸಮತೋಲನವನ್ನು ಕಾಪಿಡುವಲ್ಲಿ ಸಾಗರ ಬಹುಮುಖ್ಯಪಾತ್ರ ವಹಿಸುತ್ತದೆ. ‘ಸಾಗರದ ನೀರು ಉಪ್ಪು, ಅದರಿಂದ
ಯಾವುದೇ ಪ್ರಯೋಜನವಿಲ್ಲ’ ಎಂಬ ತಪ್ಪುಗ್ರಹಿಕೆ ಅನೇಕರಲ್ಲಿದೆ. ಆದರೆ ಶೇ.೫೦ರಷ್ಟು ಆಮ್ಲಜನಕವು ಸಾಗರದಿಂದ
ವಾತಾವರಣಕ್ಕೆ ಬಿಡುಗಡೆಯಾಗುತ್ತದೆ ಎಂಬುದು ಇಂಥವರಿಗೆ ಗೊತ್ತಿರಲಿಕ್ಕಿಲ್ಲ. ಸಾಗರದಲ್ಲಿರುವ ಶೈವಲ ಅಥವಾ
ಪಾಚಿ (ಆಲ್ಗೆ), ಸಣ್ಣ ಪ್ಲ್ಯಾಂಕ್ಟನ್‌ಗಳು ಮತ್ತಿತರ ಸಾಗರ ಸಸ್ಯಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳು ತ್ತವೆ ಮತ್ತು ವಿಪುಲ ಪ್ರಮಾಣದ ಆಮ್ಲಜನಕವನ್ನು ಮತ್ತೆ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಇನ್ನು ನದಿಗಳು
ಸಾಗರವನ್ನು ಸೇರುವ ನೆಲೆಯಾದ, ‘ಅಳಿವೆ’ ಎನ್ನಲಾಗುವ ಸಂಗಮ ಸ್ಥಾನದಲ್ಲಿ ಜೀವಸಂತತಿಯ ಒಂದು ಪವಾಡವೇ ನಡೆದುಹೋಗುತ್ತದೆ.

ಮೀನುಗಳು ಈ ಅಳಿವೆಯಂಚಿಗೆ ಬಂದು, ಸಿಹಿನೀರಿನ ಹದವಾದ ವಾತಾವರಣದಲ್ಲಿ ಮೊಟ್ಟೆಯಿಟ್ಟು ಹಿಂದಿರು ಗುತ್ತವೆ. ಇದು ನಿರಂತರ ನಡೆಯುವ ಪ್ರಕ್ರಿಯೆ. ನದಿಗಳು ಸಾಗರ ಸೇರದಿದ್ದರೆ ಮೀನುಗಳ ಸಂತತಿ ಪುಷ್ಕಳವಾಗಿ ಬೆಳೆಯಲಾರದು. ಮೀನುಗಳ ಸಂಖ್ಯೆ ಕಡಿಮೆಯಾದರೆ ಮಾನವನಿಗೆ ಮತ್ತು ಕೆಲವು ಪ್ರಾಣಿಗಳಿಗೆ ಆಹಾರದ ಕೊರತೆಯಾಗುತ್ತದೆ. ಸಾಗರವು ಸುಮಾರು 3 ಶತಕೋಟಿ ಮಾನವರಿಗೆ ಪ್ರೋಟೀನ್ ಅನ್ನು ಒದಗಿಸುತ್ತದೆ. ಆಹಾರ ವಾಗಿ ಬಳಕೆಯಾಗುವ ಸೀಗಡಿ ಮೀನುಗಳು, ಕಪ್ಪೆಚಿಪ್ಪು ಹೀಗೆ ಹಲವು ಜೀವಪ್ರಭೇದಗಳು ಸಿಗುವುದು ಅಳಿವೆ ಪ್ರದೇಶದಲ್ಲೇ. ಹೀಗೆ ಸಾವಿರಾರು ಜೀವಜಾಲವನ್ನು ಪೋಷಿಸುವ ಸ್ಥಳವಾಗಿರುವ ಅಳಿವೆಯ ಉಳಿವಿಗಾಗಿ ನದಿಯ ಸಿಹಿನೀರು ಅಗತ್ಯ. ಅಷ್ಟೇ ಅಲ್ಲ, ನದಿಯ ತಪ್ಪಲಿನ ಭಾಗದಿಂದ ಸೋಸಿಕೊಂಡು ಬರುವ ಮರಳು ಇದೇ ಅಳಿವೆಯ ಹಿಂಭಾಗದಲ್ಲಿ ಶೇಖರಣೆಯಾಗುತ್ತದೆ; ಇಲ್ಲದಿದ್ದರೆ ನದಿಯ ಮರಳನ್ನು ಬಳಸಲು ಸಾಧ್ಯವಾಗುತ್ತಿರಲಿಲ್ಲ.

ಇದನ್ನೂ ಓದಿ: ಜೀವಜಗತ್ತಿಗೆ ಸವಾಲಾಗಿದೆ ಜಲಸಮಸ್ಯೆ

ನದಿಯ ನೀರು ಸಮುದ್ರವನ್ನು ಸೇರದಿದ್ದರೆ, ನೂರಾರು ಕಿಲೋಮೀಟರ್‌ಗಳವರೆಗೂ ಸಮುದ್ರದ ಉಪ್ಪುನೀರು
ಆಕ್ರಮಿಸಿಬಿಡುತ್ತದೆ. ಜತೆಗೆ ನದಿಯ ಹರಿವಿನ ದಿಕ್ಕನ್ನು ಬದಲಿಸಿದರೆ ಈ ಉಪ್ಪುನೀರು ಅಳಿವೆಯ ಒಳಕ್ಕೆ ನುಗ್ಗಿ
ಸಿಹಿನೀರನ್ನು ಉಪ್ಪಾಗಿಸುತ್ತದೆ. ಉದಾಹರಣೆಗೆ, ಪ್ರಪಂಚದ ನದಿಗಳ ಪೈಕಿ ಐದನೇ ಒಂದು ಭಾಗವನ್ನು ಪ್ರತಿನಿಧಿ ಸುವ ಅಮೆಜಾನ್ ನದಿಯ 150 ಕಿ.ಮೀ.ಗಿಂತ ಹೆಚ್ಚು ಭಾಗವನ್ನು ಈಗಾಗಲೇ ಅಟ್ಲಾಂಟಿಕ್ ಸಾಗರದ ಉಪ್ಪುನೀರು ಆವರಿಸಿ, ಆ ಪ್ರದೇಶವನ್ನು ದುರ್ಬಲವಾಗಿಸಿದೆ. ಅಷ್ಟೇಕೆ, ನಮ್ಮ ನರ್ಮದಾ ನದಿಯು ವರ್ಷದ ಹಲವು ತಿಂಗಳ ಕಾಲ ಪಶ್ಚಿಮ ಕರಾವಳಿಯ ಸಮುದ್ರವನ್ನು ತಲುಪಲಾಗದ ಕಾರಣ, ಮಣ್ಣಿನ ಅವನತಿಗೆ ಮತ್ತು ಲವಣಾಂಶದ ಹೆಚ್ಚಳಕ್ಕೆ ಅದು ಕಾರಣವಾಗುತ್ತದೆ.

ನೆಲದೊಳಗೆ ಉಪ್ಪುನೀರಿನ ನುಸುಳುವಿಕೆಯು ಆ ಪ್ರದೇಶದಲ್ಲಿನ ಕೈಗಾರಿಕೆಗಳನ್ನು ನುಂಗುತ್ತಿದೆ. ಮತ್ತೊಂದೆಡೆ, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 20 ಕಿ.ಮೀ.ವರೆಗೆ ಇಂಥ ಅತಿಕ್ರಮಣವಾಗಿದೆ. ಕೃಷ್ಣಾ ಮತ್ತು ಗೋದಾವರಿ ನದೀಮುಖಜ ಭೂಮಿಗಳಲ್ಲಿ ಪ್ರಧಾನವಾಗಿ ಸೀಗಡಿ ಮತ್ತು ಭತ್ತದ ಕೃಷಿಕಾರ್ಯ ನಡೆಯು ತ್ತಿತ್ತು; ಆದರೆ ಲವಣಾಂಶದ ಹೆಚ್ಚಳದಿಂದಾಗಿ ಅವು ಬೇರಾವುದೇ ಬೆಳೆಗಳಿಗೆ ಸೂಕ್ತವಾಗದೆ ಬಂಜರಾಗಿವೆ.
ನದಿಗಳಿಲ್ಲದೆ ಸಾಗರಗಳನ್ನು ಕಲ್ಪಿಸಿಕೊಳ್ಳಲಾಗದು.

ಹಿಂದೊಮ್ಮೆ ರಷ್ಯಾ ತನ್ನ ಎರಡು ನದಿಗಳನ್ನು ಬೇರೆಡೆಗೆ ತಿರುಗಿಸಿದ್ದರಿಂದ ಅರಲ್ ಸಮುದ್ರವೇ ಬತ್ತಿಹೋಗಿ ಕೆಸರು
ತುಂಬಿಕೊಳ್ಳುವಂತಾಯಿತು. ನದಿಗಳ ಹರಿವು ಇಲ್ಲದೆ ಜಗತ್ತಿನಾದ್ಯಂತ ಇಪ್ಪತ್ತಕ್ಕೂ ಹೆಚ್ಚು ಜಲಪ್ರದೇಶಗಳು ಬತ್ತಿ ಹೋದ, ಪರಿಸರ ವ್ಯವಸ್ಥೆಗಳು ಹಾಳಾದ ಜ್ವಲಂತ ಸಾಕ್ಷಿಗಳಿವೆ. ಪಶ್ಚಿಮ ಬಂಗಾಳದ ಹೂಗ್ಲಿ-ಗಂಗಾ ನದೀ ಮುಖಜದ ಸುಂದರಬನ್, ಛತ್ತೀಸ್‌ಗಢದ ಚಿಲಿಕಾ, ಭೀತರ್‌ಕನಿಕಾ, ಗಹೀರ್‌ಮಥಾ, ಮತ್ತು ಪಾರಾದೀಪ್‌ನ ಪರಿಸರ ವ್ಯವಸ್ಥೆಗಳಿಗೆ ಭೇಟಿ ನೀಡಿ ಅವಲೋಕಿಸಿದರೆ, ಸಾಗರಕ್ಕೆ ನದಿನೀರಿನ ಹರಿವನ್ನು ನಿಲ್ಲಿಸಿದರೆ ಸಂಬಂಧಿತ ಅಳಿವೆ ಪ್ರದೇಶದ ಸ್ಥಿತಿ ಏನಾಗುತ್ತದೆ ಎಂಬುದರ ಅರಿವಾಗುತ್ತದೆ. ಶರಾವತಿಯ ಅಳಿವೆ ಪ್ರದೇಶಕ್ಕೂ ಈ ಸಮಸ್ಯೆ ಬಂದೇ ಬರುತ್ತದೆ. ಜತೆಗೆ ಹವಾಮಾನ ಬದಲಾವಣೆಯ ಬಿಸಿ ತಟ್ಟುತ್ತದೆ, ಸಮುದ್ರದಲ್ಲಿರುವ ಜೀವಜಾಲಕ್ಕೆ ತೊಂದರೆ ಯಾಗುತ್ತದೆ.

ಅದರ ಪ್ರಭಾವ ಮಾನವನ ಜೀವನದ ಮೇಲಾಗುತ್ತದೆ. ಕರಾವಳಿ ಪ್ರದೇಶದ ಆರೋಗ್ಯಕ್ಕಾಗಿ ನದಿಗಳು ಸಿಹಿನೀರನ್ನು ಸಮುದ್ರಕ್ಕೆ ಕೊಂಡೊಯ್ಯಬೇಕು. ಅಂಥ ಶುದ್ಧನೀರಿನ ಹರಿವಿನ ಅನುಪಸ್ಥಿತಿಯು ಕರಾವಳಿ ಪರಿಸರ ವ್ಯವಸ್ಥೆಗಳ ಮೇಲೆ, ವಿಶೇಷವಾಗಿ ಮ್ಯಾಂಗ್ರೋವ್ ಸಸ್ಯವರ್ಗ ಹಾಗೂ ಮಣ್ಣಿನ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸಾಗರಕ್ಕೆ ಸಿಹಿನೀರಿನ ನಿರಂತರ ಸ್ಪರ್ಶದ ಅಗತ್ಯವಿದೆ.

ರಭಸದಿಂದ ಬೀಳುವ ಮಳೆಯು ಎಲ್ಲಾ ಕಡೆಯ ರಾಡಿಯನ್ನು, ಕಶ್ಮಲಗಳನ್ನು ಹೊತ್ತು ಸಮುದ್ರದತ್ತ ಮುಖ ಮಾಡುತ್ತದೆ. ಆದರೆ, ನಮಗೆ ರಾಡಿ ಎನಿಸಿದ್ದು ಸಮುದ್ರದ ಜೀವಜಾಲಕ್ಕೆ ಆಹಾರವೆಂಬುದು ಬಹುತೇಕರಿಗೆ ಗೊತ್ತಿಲ್ಲ. ನದಿಯು ಸಮುದ್ರವನ್ನು ಸೇರಿದರೆ ಮಾತ್ರವೇ ಸಮುದ್ರವು ಕೆಸರು ಮತ್ತು ಹೂಳಿನಿಂದ ಸ್ವಲ್ಪವಾದರೂ ಮುಕ್ತವಾಗು ವುದು. ಮನುಷ್ಯನಿಗೆ ಬೇಕಾದ ಅಹಾರದ ಗಣನೀಯ ಭಾಗವನ್ನು ಸಾಗರ ಪೂರೈಸುತ್ತದೆ; ಒಂದೊಮ್ಮೆ ಸಮುದ್ರ ಸೇರುವ ಎಲ್ಲ ನದಿಗಳನ್ನೂ ನಿರ್ಬಂಧಿಸಿದರೆ, ಹಸಿವು, ಬರ, ರೋಗ-ರುಜಿನ ತಾಂಡವವಾಡುತ್ತವೆ.

ಜೀವಪ್ರಭೇದಗಳ ತವರು ಮತ್ತು ಸಂಪನ್ಮೂಲಗಳ ಭಂಡಾರವಾಗಿರುವ ಸಾಗರವು, ಭೂಗ್ರಹದ ವಾತಾವರಣವನ್ನು
ನಿಯಂತ್ರಿಸುತ್ತದೆ. ವಿಶ್ವದ ಅರ್ಥವ್ಯವಸ್ಥೆ, ವ್ಯಾಪಾರ, ಪ್ರವಾಸೋದ್ಯಮಕ್ಕೆ ಸಮುದ್ರವೇ ಮೂಲಾಧಾರ. ಒಂದೊಮ್ಮೆ
ಸಾಗರಕ್ಕೆ ಆರೋಗ್ಯಕರ ಅಸ್ತಿತ್ವವಿಲ್ಲದಿದ್ದರೆ, ಅದಕ್ಕೆ ಹೊಂದಿಕೊಂಡಂತಿರುವ ಪ್ರದೇಶಗಳ ಸೌಂದರ್ಯ, ಪ್ರಾಕೃತಿಕ
ರಮ್ಯತೆ ಮತ್ತು ಸಾಂಸ್ಕೃತಿಕ ಮೌಲ್ಯಗಳು ಕಳೆದುಹೋಗುತ್ತವೆ. ಹೀಗಾಗಿ ಸಾಗರವಿಲ್ಲದ ಜಗತ್ತನ್ನು ಊಹಿಸಿ ಕೊಳ್ಳಲೂ ಸಾಧ್ಯವಿಲ್ಲ.

ನದಿಗಳ ಶೋಷಣೆಯು ಅವ್ಯಾಹತವಾಗಿ ಮುಂದುವರಿದರೆ ಅವು ಎಷ್ಟು ಕಾಲ ಉಳಿಯುತ್ತವೆ ಮತ್ತು ಅವಕ್ಕೆ ಸಂಬಂಧಿಸಿದ ಪರಿಸರ ವ್ಯವಸ್ಥೆಗಳು ಏನಾಗುತ್ತವೆ? ಎಂಬುದು ನದಿಗಳ ಅಧ್ಯಯನದಲ್ಲಿ ತೊಡಗಿರುವ ಪರಿಸರ ವಾದಿಗಳನ್ನು ಕಾಡುತ್ತಿರುವ ಪ್ರಶ್ನೆ. ಅಣೆಕಟ್ಟು ನಿರ್ಮಾಣದ ಪೂರ್ವದಲ್ಲಿ ಎಲ್ಲಿಯೂ ನೀರಿನ ಅಭವ ಎದುರಾಗಿರ ಲಿಲ್ಲ, ನದಿಗಳು ಸದಾ ನೀರಿನಿಂದ ಸಮೃದ್ಧವಾಗಿರುತ್ತಿದ್ದವು. ಅದಕ್ಕೆ ಪೂರಕವಾಗಿ, ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ಜನರ ಮನಸ್ಥಿತಿಯಿಂದಾಗಿ ವನಸಿರಿ ಕಂಗೊಳಿಸುತ್ತಿತ್ತು, ಕಾಲಕಾಲಕ್ಕೆ ಮಳೆಯಾಗುತ್ತಿತ್ತು.

ಕ್ರಮೇಣ ನಾಗರಿಕ ಸಮಾಜ ಬೆಳೆಯುತ್ತಾ ಹೋದಂತೆ ಹೊಸ ಹೊಸ ಆವಿಷ್ಕಾರಗಳಾದವು. ಮಾನವನ ಇಂಥ ಬಹುತೇಕ ಆವಿಷ್ಕಾರಗಳು ಪರಿಸರ ವ್ಯವಸ್ಥೆಯ ನಿಯಮವನ್ನು ಭೇದಿಸಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ಮನುಷ್ಯರು ‘ಅಣೆಕಟ್ಟಿನಲ್ಲಿ ನೀರನ್ನು ಶೇಖರಿಸಿ ಬರಗಾಲವನ್ನು ಹಿಮ್ಮೆಟ್ಟಿಸುತ್ತೇವೆ. ವಿದ್ಯುತ್ ಉತ್ಪಾದಿಸುತ್ತೇವೆ’ ಎನ್ನುತ್ತಾ ಪರಿಸರ ವ್ಯವಸ್ಥೆಯ ಬುಡಕ್ಕೇ ಕೊಡಲಿಯೇಟು ಹಾಕಿ ಅದನ್ನು ಬುಡಮೇಲು ಮಾಡಿಬಿಟ್ಟರು. ಆದರೂ ಪ್ರಕೃತಿ ಸುಮ್ಮನಿತ್ತು. ದಿನಗಳೆದಂತೆ ಮಾನವನ ಆಸೆ ಅತಿರೇಕಕ್ಕೇರಿತು. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎಂಬಂತೆ, ‘ಪರಿಸರ ವ್ಯವಸ್ಥೆಯೇ ಸರಿಯಿಲ್ಲ, ನದಿನೀರು ಸಮುದ್ರಕ್ಕೆ ಸೇರುತ್ತಿರುವುದರಿಂದ ಸಿಹಿನೀರು ಪೋಲಾಗುತ್ತಿದೆ’ ಎಂದು ಆತ ಸಾರತೊಡಗಿದ.

ಒಂದು ಕಾಲದಲ್ಲಿ ಭಾರಿ ಪ್ರಮಾಣದ ನೀರನ್ನು ಸಮುದ್ರಕ್ಕೆ ಕೊಂಡೊಯ್ಯುತ್ತಿದ್ದ ನದಿಗಳು ಈಗ ತಮ್ಮ ಸ್ವಾಭಾವಿಕ ಹರಿವನ್ನು ಪೂರ್ಣಗೊಳಿಸಲು ಮತ್ತು ಸಮುದ್ರದಲ್ಲಿ ಕೊನೆಗೊಳ್ಳಲು ಬಹುತೇಕ ಹೆಣಗುತ್ತಿವೆ. ನದಿಗಳ ನಿರ್ಬಂಧಿತ ಹರಿವಿನಿಂದಾಗಿ ನದಿಯ ಕೊನೆಯ ಭಾಗವು ಸತ್ತರೆ, ‘ಸತ್ತನದಿ’ಯ ನಕಾರಾತ್ಮಕ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಊಹಿಸಲೂ ಸಾಧ್ಯವಿಲ್ಲ” ಎನ್ನುತ್ತಾರೆ ಜಲಸಂಪನ್ಮೂಲ ತಜ್ಞರು.

ಮನುಷ್ಯನ ಎಲ್ಲಾ ಅಭಿವೃದ್ಧಿಗೆ ಹೇತುವಾದ ಆವಿಷ್ಕಾರಗಳು ಒಂದು ನಿರ್ದಿಷ್ಟ ಹಂತವನ್ನು ಮೀರಿದಾಗ ಒಂದಿ
ಲ್ಲೊಂದು ರೀತಿಯಲ್ಲಿ ಪರಿಸರ-ವಿರೋಧಿ ಆಗುತ್ತವೆ. ವಿದ್ಯುತ್ ಪೂರೈಕೆಯಲ್ಲಿನ ಕೊರತೆಗೆ ಹಾಗೂ ನೀರಿನ ಅಭಾವಕ್ಕೆ, ನದಿಯ ಹರಿವನ್ನು ತಿರುಗಿಸುವುದು ಮತ್ತು ಅಣೆಕಟ್ಟುಗಳ ಮೂಲಕ ನದಿನೀರನ್ನು ತಡೆಹಿಡಿಯುವುದು
ಪರಿಹಾರವಲ್ಲ. ಬದಲಾಗಿ ಪರಿಸರ-ಸ್ನೇಹಿ ಮಾರ್ಗಗಳು ಸಾಕಷ್ಟಿವೆ, ಅವನ್ನು ಅತಿಕಡಿಮೆ ಖರ್ಚಿನಲ್ಲೂ ಸಾಧಿಸ ಬಹುದಾಗಿದೆ. ಇಂಥ ಕ್ರಮಗಳ ಕುರಿತಾಗಿ ಗಮನಹರಿಸುವುದನ್ನು ಬಿಟ್ಟು, ಪರಿಸರ ವ್ಯವಸ್ಥೆಯನ್ನು ಅರಿಯದೆಯೇ, ‘ನದಿನೀರು ಸಮುದ್ರಕ್ಕೆ ಸೇರುವುದು ವ್ಯರ್ಥ’ ಎಂದು ಅವೈಜ್ಞಾನಿಕವಾಗಿ ಮಾತನಾಡುವುದನ್ನು ಮೊದಲು ಬಿಡಬೇಕು.

ದೇಶದ ಯಾವುದೇ ನದಿಗೆ ಸಂಬಂಧಿಸಿ ‘ನದೀತಿರುವು’ ಯೋಜನೆ ಸಲ್ಲ. ನಮ್ಮಲ್ಲಿ, ರಸ್ತೆ ಅಗಲೀಕರಣದ ವೇಳೆ ಎಷ್ಟು ಡಿಗ್ರಿಯಲ್ಲಿ ಗುಡ್ಡವನ್ನು ಕತ್ತರಿಸಬೇಕೆಂಬ ಅರಿವಿಲ್ಲದ ಎಂಜಿನಿಯರ್‌ಗಳು ಒಂದೆಡೆಯಾದರೆ, ಪರಿಸರ ಜೀವವ್ಯವಸ್ಥೆ ಮತ್ತು ಜಲಚಕ್ರ ನಿಯಮಗಳ ಬಗ್ಗೆ ಪರಿಜ್ಞಾನವಿಲ್ಲದ ಅಧಿಕಾರಿಗಳು ಮತ್ತೊಂದೆಡೆ! ನದಿ ಮತ್ತು ಸಮುದ್ರದ ನಡುವಿನ ನಂಟಿನ ಬಗ್ಗೆ, ಒಂದು ಪ್ರದೇಶದ ಪ್ರಾಕೃತಿಕ, ಭೌಗೋಳಿಕ ಲಕ್ಷಣಗಳು, ಜೀವಜಾಲದ ವ್ಯವಸ್ಥೆ ಮತ್ತು ಮಣ್ಣಿನ ಗುಣಧರ್ಮದ ಬಗ್ಗೆ ಅರಿವಿಲ್ಲದ ಇಂಥವರಿಂದಲೇ ಪಶ್ಚಿಮ ಘಟ್ಟಗಳು ಬೋಳಾಗುತ್ತಿವೆ ಎಂಬುದು ಬೇಸರದ ಸಂಗತಿ.

(ಲೇಖಕರು ಶಿಕ್ಷಕರು)